Lakkundi Gold Treasure: ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯಲ್ಲಿ ಒಂದು ಪಾಲು ಕುಟುಂಬಕ್ಕೆ! ನಮಗೆ ಆ ಜಾಗ ಬೇಡ ಎಂದು ಕುಟುಂಬ!
ರಿತ್ತಿ ಕುಟುಂಬದ ಸದಸ್ಯರಿಗೆ, ನಿಧಿ ಪತ್ತೆಯಾದ ಬಳಿಕ ಆ ಜಾಗದಲ್ಲಿ ಅನಾಹುತಗಳು ಸಂಭವಿಸುವ ಭಯ ಕಾಡುತ್ತಿದೆ. “ಆ ಜಾಗದಿಂದ ದೊಡ್ಡ ಸರ್ಪ ಎದ್ದಿದೆ. ಒಂದಲ್ಲ ಒಂದು ದಿನ ಕಚ್ಚಬಹುದು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ನಮಗೆ ಒಬ್ಬನೇ ಮಗ ಇದ್ದಾನೆ. ಅವನ ಭವಿಷ್ಯ ನಮಗೆ ಮುಖ್ಯ. ಹೀಗಾಗಿ ಆ ಜಾಗ ನಮಗೆ ಬೇಡ” ಎಂದು ಕುಟುಂಬಸ್ಥರು ಹೇಳಿದ್ದಾರೆ.
ಲಕ್ಕುಂಡಿಯಲ್ಲಿ ನಿಧಿ ಪತ್ತೆ ಪ್ರಕರಣ -
ಗದಗ, ಜ.13: ಜಿಲ್ಲೆಯ (Gadag news) ಲಕ್ಕುಂಡಿಯಲ್ಲಿ ನಿಧಿ ಪತ್ತೆ (Lakkundi Gold Treasure) ಪ್ರಕರಣದಲ್ಲಿ ಜಮೀನು, ಮನೆ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದ ರಿತ್ತಿ ಕುಟುಂಬಕ್ಕೆ ಕೊನೆಗೂ ಪರಿಹಾರದ ಭರವಸೆ ಸಿಕ್ಕಿದೆ. ಕುಟುಂಬಕ್ಕೆ ನಿಧಿಯ ಐದನೇ ಒಂದು ಭಾಗ ಹಾಗೂ ಮಾಲೀಕರ ಮಗನಿಗೆ ದ್ವಿತೀಯ ಪಿಯುವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಲಾಗಿದೆ. ಈ ನಡುವೆ, ನಮಗೆ ಆ ಪಶಕುನದ ಜಾಗ ಬೇಡ ಎಂದು ರಿತ್ತಿ ಕುಟುಂಬ ಹೇಳಿದೆ.
ಸೋಮವಾರ (ಜ.12) ಲಕ್ಕುಂಡಿಯ ನಿಧಿ ಸಿಕ್ಕ ಸ್ಥಳಕ್ಕೆ ಹಂಪಿ ಪುರಾತತ್ವ ಇಲಾಖೆ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಧಿ ಕಾಯ್ದೆ ಪ್ರಕಾರ ಕುಟುಂಬಕ್ಕೆ ಸಿಗಬೇಕಾದ ಪಾಲಿನ ಬಗ್ಗೆ ಮಾಹಿತಿ ನೀಡಿದ ಪುರಾತತ್ವ ಇಲಾಖೆ ನಿರ್ದೇಶಕ ಶೈಜೇಶ್ವರ್ ಅವರು, ನಿಧಿಯ ಐದನೇ ಒಂದು ಭಾಗವನ್ನು ಕುಟುಂಬಕ್ಕೆ ನೀಡುವುದಾಗಿ ಭರವಸೆ ನೀಡಿದ್ದಾರೆ. ನಿಧಿಯ ಐದನೇ ಒಂದು ಭಾಗವನ್ನು ನಗದು ರೂಪದಲ್ಲಿ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ರಿತ್ತಿ ಕುಟುಂಬದ ಬಾಲಕ ಪ್ರಜ್ವಲ್ ರಿತ್ತಿ ಸದ್ಯ ಎಂಟನೇ ತರಗತಿಯಲ್ಲಿ ಓದುತ್ತಿದ್ದು, ದ್ವಿತೀಯ ಪಿಯುವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಲಕ್ಕುಂಡಿ ಬಿ.ಹೆಚ್ ಪಾಟೀಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಸಿದ್ದು ಪಾಟೀಲ ಘೋಷಿಸಿದ್ದಾರೆ. ಅಧಿಕಾರಿಗಳ ಈ ನಿರ್ಧಾರ ಕುಟುಂಬದಲ್ಲಿ ಸಂತಸ ಮೂಡಿಸಿದೆ.
ʼನಮಗೆ ಆ ಜಾಗ ಬೇಡʼ
ಲಕ್ಷ್ಮೀ ದೇವಾಲಯದ ಹಿಂಭಾಗದಲ್ಲಿರುವ ರಿತ್ತಿ ಕುಟುಂಬದ ಜಾಗದಲ್ಲಿ ಚಿನ್ನದ ನಿಧಿ ಪತ್ತೆಯಾಗಿರುವುದರಿಂದ ಈ ಪ್ರದೇಶ ರಾಜ್ಯಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ, ನಿಧಿ ಸಿಕ್ಕಿರುವ ಜಾಗವನ್ನು ತಮ್ಮ ವಶದಲ್ಲಿಡಲು ಕುಟುಂಬ ನಿರಾಕರಿಸಿದ್ದು, ಅದನ್ನು ‘ಅಪಶಕುನದ ಜಾಗ’ ಎಂದು ಪರಿಗಣಿಸಿ, ಅಲ್ಲಿ ದೇವಸ್ಥಾನ ನಿರ್ಮಿಸಬೇಕು ಎಂಬ ಹೊಸ ಬೇಡಿಕೆಯನ್ನು ಮುಂದಿಟ್ಟಿದೆ.
ರಿತ್ತಿ ಕುಟುಂಬದ ಸದಸ್ಯರ ಹೇಳಿಕೆಯಂತೆ, ನಿಧಿ ಪತ್ತೆಯಾದ ಬಳಿಕ ಆ ಜಾಗದಲ್ಲಿ ಅನಾಹುತಗಳು ಸಂಭವಿಸುವ ಭಯ ಕಾಡುತ್ತಿದೆ. “ಆ ಜಾಗದಿಂದ ದೊಡ್ಡ ಸರ್ಪ ಎದ್ದಿದೆ. ಒಂದಲ್ಲ ಒಂದು ದಿನ ಕಚ್ಚಬಹುದು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ನಮಗೆ ಒಬ್ಬನೇ ಮಗ ಇದ್ದಾನೆ. ಅವನ ಭವಿಷ್ಯ ನಮಗೆ ಮುಖ್ಯ. ಹೀಗಾಗಿ ಆ ಜಾಗ ನಮಗೆ ಬೇಡ” ಎಂದು ಕುಟುಂಬಸ್ಥರು ಹೇಳಿದ್ದಾರೆ. "ಆ ಬೆಂಕಿ ದೇವರಿಗೆ ಇರಲಿ. ನಮಗೆ ಬೇರೆ ಕಡೆ ಜೀವನ ನಡೆಸಲು ದಾರಿ ಮಾಡಿಕೊಡಿ. ಆ ದಾರಿಯಲ್ಲಿ ಬೆಂಕಿ ಕಟ್ಟಿಕೊಂಡು ಮುಂದೆ ಹೋದ್ರೆ ಚರ್ಮ ಸುಡುತ್ತೆ. ಹೀಗಾಗಿ ತಾಯಿ ಮತ್ತು ಮಗನಿಗೆ ಸುರಕ್ಷಿತ ಸ್ಥಳದಲ್ಲಿ ಮನೆ ಕಟ್ಟಿಸಿಕೊಡಬೇಕು” ಎಂದು ಅವರು ಮನವಿ ಮಾಡಿದ್ದಾರೆ.
ನಿಧಿ ಆಸೆಗಾಗಿ ದತ್ತು ಮಗು ಬಲಿ ಕೊಡಲು ಸಿದ್ಧರಾಗಿದ್ರಾ ಮುಸ್ಲಿಂ ದಂಪತಿ? 8 ತಿಂಗಳ ಕಂದಮ್ಮನ ರಕ್ಷಣೆ
ಸ್ಥಳೀಯರ ಬೇಡಿಕೆ
ಅಧಿಕಾರಿಗಳು ಭೇಟಿ ನೀಡಿದ ವೇಳೆ ಸ್ಥಳೀಯರು ಒಂದಿಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ನಿಧಿ ಸಿಕ್ಕ ಸ್ಥಳದಲ್ಲಿ ಲಕ್ಷ್ಮೀದೇವಿ ಗುಡಿ ಇದ್ದು ದೇವಸ್ಥಾನದ ಅಭಿವೃದ್ಧಿ ಮಾಡಬೇಕು. ದೇವಿಗೆ ಬಂಗಾರದ ತಾಳಿ, ಕಿರೀಟ ತಯಾರಿಸಿ ಕೊಡಬೇಕು. ಕುಟುಂಬಸ್ಥರಿಗೆ ಮನೆ ಕಟ್ಟಿ ಪರಿಹಾರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಗದಗ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ್ ಪ್ರತಿಕ್ರಿಯೆ ನೀಡಿ, ಭೂಮಿಯೊಳಗೆ ಯಾವುದೇ ಮೌಲ್ಯಯುತ ವಸ್ತು ಸಿಕ್ಕರೆ ಸರ್ಕಾರಕ್ಕೆ ಸೇರಿದ್ದು, ಜಿಲ್ಲಾಡಳಿತ ಬಂಗಾರವನ್ನು ಸೇಫಾಗಿ ಇಟ್ಟಿದೆ. ಕುಟುಂಬದ ಪ್ರಾಮಾಣಿಕತೆಯನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಡಿಸಿ ಕೂಡ ಕಾನೂನಿನಲ್ಲಿರುವ ಅವಕಾಶದಂತೆ ಕುಟುಂಬಕ್ಕೆ ನೆರವು ಕೊಡುವುದಾಗಿ ಹೇಳಿದ್ದಾರೆ.