'ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು'-ಕುಲ್ದೀಪ್ ಯಾದವ್ಗೆ ಗಂಭೀರ್ ಎಚ್ಚರಿಕೆ!
ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಎಂಟು ಓವರ್ಗಳಲ್ಲಿ 73 ರನ್ ನೀಡಿ ವಿಕೆಟ್ ಪಡೆಯಲಿಲ್ಲ. ರವಿಶಾಸ್ತ್ರಿ ಮತ್ತು ದಿನೇಶ್ ಕಾರ್ತಿಕ್ ಸ್ಪಿನ್ನರ್ಗೆ ಬೆಂಬಲ ನೀಡಿದರೆ, ಗೌತಮ್ ಗಂಭೀರ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಖಡಕ್ ಸಂದೇಶ ನೀಡಿದ್ದಾರೆ.
ಕುಲ್ದೀಪ್ ಯಾದವ್ಗೆ ಎಚ್ಚರಿಕೆ ನೀಡಿದ ಗೌತಮ್ ಗಂಭೀರ್. -
ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ(IND vs NZ) ಭಾರತದ ಸ್ಪಿನ್ನರ್ ಕುಲ್ದೀಪ್ ಯಾದವ್ ದುಬಾರಿ ಬೌಲಿಂಗ್ ಪ್ರದರ್ಶನ ನೀಡಿದ ಬಳಿಕ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಸ್ಪಿನ್ನರ್ ಬೆಂಬಲಕ್ಕೆ ನಿಲ್ಲದೆ, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಖಡಕ್ ಸಂದೇಶ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಆಡುವ ಅವಕಾಶ ಪಡೆದಾಗ ಅವರಿಂದ ಸಾಕಷ್ಟು ನಿರೀಕ್ಷೆಗಳಿದ್ದವು. ಮೊಹಮ್ಮದ್ ಸಿರಾಜ್ಗಿಂತ ಮೊದಲು ಅನ್ಶುಲ್ ಕಾಂಬೋಜ್ ಅವರ ಸ್ಥಾನದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಕುಲ್ದೀಪ್, ಬೇ ಓವಲ್ ಮೈದಾನದಲ್ಲಿ ಭಾರತದ ಪರ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು.
ಆದರೆ, ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಕುಲ್ದೀಪ್ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಎಂಟು ಓವರ್ಗಳಲ್ಲಿ 73 ರನ್ ಬಿಟ್ಟುಕೊಟ್ಟ ಅವರು ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಬ್ಯಾಟರ್ಗಳಾದ ವಿಲ್ ಯಂಗ್ ಮತ್ತು ಫಿನ್ ಆಲೆನ್, ಕುಲ್ದೀಪ್ ಅವರ ಬೌಲಿಂಗ್ ಮೇಲೆ ಸವಾರಿ ಮಾಡಿದರು. ಪರಿಣಾಮವಾಗಿ ನ್ಯೂಜಿಲೆಂಡ್ 50 ಓವರ್ಗಳಲ್ಲಿ 333 ರನ್ ಗಳಿಸಿತು.
IND vs NZ: ಗೋಲ್ಡನ್ ಡಕ್ಔಟ್ ಆಗಿ ಅನಗತ್ಯ ದಾಖಲೆ ಬರೆದ ರೋಹಿತ್ ಶರ್ಮಾ!
ಕುಲ್ದೀಪ್ ಯಾದವ್ಗೆ ಗೌತಮ್ ಗಂಭೀರ್ ಎಚ್ಚರಿಕೆ
ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಸೋಲಿನ ಬಳಿಕ ಮಾತನಾಡಿದ ಗಂಭೀರ್, ಆಟಗಾರನಿಗೆ ಸಿಗುವ ಪ್ರತಿಯೊಂದು ಅವಕಾಶವನ್ನೂ ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
“ನೋಡಿ, ವಿದೇಶಿ ಪ್ರವಾಸಗಳಲ್ಲಿ ಸ್ಪಿನ್ನರ್ಗಳಿಗೆ ಪಂದ್ಯ ಆಡುವ ಅವಕಾಶಗಳು ಯಾವಾಗಲೂ ಸೀಮಿತವಾಗಿರುತ್ತವೆ. ಆದರೆ ನಿಮಗೆ ಯಾವ ಅವಕಾಶ ಸಿಗುತ್ತದೆಯೋ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ರಯತ್ನಿಸಬೇಕು. ಕುಲ್ದೀಪ್ಗೆ ಸಾಕಷ್ಟು ಪಂದ್ಯಾವಕಾಶ ಸಿಕ್ಕಿಲ್ಲ ಎನ್ನುವುದು ಸರಿಯಲ್ಲ. ಅಕ್ಟೋಬರ್ನಲ್ಲಿ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ."
"ನ್ಯೂಜಿಲೆಂಡ್ನಂತಹ ದೇಶಕ್ಕೆ ಪ್ರವಾಸ ಕೈಗೊಂಡಾಗ ಅಲ್ಲಿನ ಮೈದಾನಗಳ ಆಯಾಮಗಳು ಮತ್ತು ಪರಿಸ್ಥಿತಿಗಳ ಬಗ್ಗೆ ನಿಮಗೆ ತಿಳಿದಿರುತ್ತದೆ. ಕೆಲವೊಮ್ಮೆ ಮೂರು ವೇಗದ ಬೌಲರ್ಗಳೊಂದಿಗೆ ಆಡುತ್ತೇವೆ, ಮತ್ತೆ ಕೆಲವೊಮ್ಮೆ ನಾಲ್ಕು ವೇಗದ ಬೌಲರ್ಗಳೊಂದಿಗೆ ಕಣಕ್ಕಿಳಿಯುತ್ತೇವೆ. ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ನಾವು ಮಾಡಿದ್ದೂ ಅದನ್ನೇ,” ಎಂದು ಗಂಭೀರ್ ಹೇಳಿದ್ದಾರೆ.
IND vs NZ: ʻಮೊಹಮ್ಮದ್ ಸಿರಾಜ್ಗೆ ಅನ್ಯಾಯʼ-ಭಾರತ ತಂಡವನ್ನು ಟೀಕಿಸಿದ ಅಂಜುಮ್ ಚೋಪ್ರಾ!
“ಪಂದ್ಯಾವಕಾಶ ಕಡಿಮೆ ಸಿಗುತ್ತಿದೆ, ಲಯ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಚರ್ಚೆ ಸರಿಯಲ್ಲ. ನೀವು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವಾಗ ಹೆಚ್ಚಿನ ಸಮಯ ಉತ್ತಮ ಲಯದಲ್ಲಿರಲು ಪ್ರಯತ್ನಿಸಬೇಕು. ನಿಮಗೆ ಯಾವ ಅವಕಾಶ ಸಿಗುತ್ತದೆಯೋ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದೇ ಮಾತು ಬ್ಯಾಟರ್ಗಳಿಗೂ ಅನ್ವಯಿಸುತ್ತದೆ. ಆಟಗಾರನಿಗೆ ಸಾಕಷ್ಟು ಅವಕಾಶ ಸಿಕ್ಕಿಲ್ಲ ಎಂದು ಪದೇಪದೇ ಹೇಳುತ್ತಾ ಇರಲು ಸಾಧ್ಯವಿಲ್ಲ,” ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ.
ಕುಲ್ದೀಪ್ಗೆ ರವಿಶಾಸ್ತ್ರಿ ಬೆಂಬಲ
ಪಂದ್ಯದ ನಡುವೆ ಮಾತನಾಡಿದ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ, ದೀರ್ಘ ಸಮಯದ ಬಳಿಕ ತಂಡಕ್ಕೆ ಮರಳಿದ ಕುಲ್ದೀಪ್ ಮೇಲೆ ಒತ್ತಡವಿತ್ತು ಎಂದು ಅಭಿಪ್ರಾಯಪಟ್ಟರು.
“ನೀವು ಒಂದು ಪಂದ್ಯ ಆಡುತ್ತೀರಿ, ನಂತರ ಐದು ಪಂದ್ಯಗಳ ಕಾಲ ಹೊರಗುಳಿಯುತ್ತೀರಿ. ಆಮೇಲೆ ಮತ್ತೆ ತಂಡಕ್ಕೆ ಮರಳುತ್ತೀರಿ. ನೀವು ಎಷ್ಟು ವಿಕೆಟ್ ಪಡೆದಿದ್ದರೂ ಒತ್ತಡ ಇದ್ದೇ ಇರುತ್ತದೆ. ಆ ಒತ್ತಡದ ಪರಿಣಾಮ ಕುಲ್ದೀಪ್ ಮೇಲೆ ಕಾಣಿಸುತ್ತಿತ್ತು ಎಂದು ನನಗೆ ಅನಿಸಿತು. ಕೆಲವೊಮ್ಮೆ ಆತ್ಮವಿಶ್ವಾಸ ಕಡಿಮೆಯಾಗಿರುತ್ತದೆ. ಆದರೆ ಆಟಗಾರನಿಗೆ ಬೌಲಿಂಗ್ನಲ್ಲಿ ಲಯ ಕಂಡುಕೊಳ್ಳುವ ಅಗತ್ಯವಿರುತ್ತದೆ. ಆದರೆ ನ್ಯೂಜಿಲೆಂಡ್ ತಂಡ ಕುಲ್ದೀಪ್ಗೆ ಆ ಲಯ ಕಂಡುಕೊಳ್ಳಲು ಅವಕಾಶ ನೀಡಲಿಲ್ಲ,” ಎಂದು ರವಿಶಾಸ್ತ್ರಿ ಕಾಮೆಂಟರಿ ವೇಳೆ ಹೇಳಿದ್ದಾರೆ.