ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ಆಚೆಗೂ ಕೈಗಾರಿಕಾ ಅಭಿವೃದ್ಧಿ ವಿಸ್ತರಣೆಗಾಗಿ ‘ಬಿಯಾಂಡ್ ಬೆಂಗಳೂರುʼ ನೀತಿ: ಡಿಸಿಎಂ ಡಾ.ಜಿ. ಪರಮೇಶ್ವರ್‌

DCM Dr G Parameshwar: ಹೂಡಿಕೆಯ ಯಶಸ್ಸನ್ನು ಕೇವಲ ಒಪ್ಪಂದಗಳ ಮೊತ್ತದಿಂದ ಅಳೆಯಬಾರದು. ಎಷ್ಟು ಕೈಗಾರಿಕೆಗಳು ಸ್ಥಾಪನೆಯಾದವು, ಎಷ್ಟು ಉದ್ಯೋಗಗಳು ಸೃಷ್ಟಿಯಾದವು, ಎಷ್ಟು ಕುಟುಂಬಗಳ ಬದುಕು ಸುಧಾರಿಸಿತು ಎಂಬುದು ಮುಖ್ಯ. ರಾಜ್ಯದ ಪ್ರತಿಯೊಂದು ಜಿಲ್ಲೆಯೂ ಅಭಿವೃದ್ಧಿಯ ಭಾಗವಾಗಬೇಕು, ಅದರ ಪ್ರಯೋಜನ ಸಾಮಾನ್ಯ ಜನರಿಗೂ ತಲುಪಬೇಕು ಎಂಬುದೇ ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್‌ (DCM Dr G Parameshwar) ತಿಳಿಸಿದ್ದಾರೆ.

ಬೆಂಗಳೂರಿನ ಆಚೆಗೂ ಕೈಗಾರಿಕಾ ಅಭಿವೃದ್ಧಿಗಾಗಿ ‘ಬಿಯಾಂಡ್ ಬೆಂಗಳೂರುʼ ನೀತಿ

-

Profile
Siddalinga Swamy Nov 13, 2026 8:55 PM

ಬೆಂಗಳೂರು, ನ.13: ಕರ್ನಾಟಕದ ಕೈಗಾರಿಕಾ ಅಭಿವೃದ್ಧಿ ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದ ಪ್ರತಿಯೊಂದು ಪ್ರದೇಶಕ್ಕೂ ವಿಸ್ತರಿಸಬೇಕು. ಬಂಡವಾಳ ಹೂಡಿಕೆ, ಕೈಗಾರಿಕೆಗಳು ಹಾಗೂ ಉದ್ಯೋಗಾವಕಾಶಗಳು ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ‘ಬಿಯಾಂಡ್ ಬೆಂಗಳೂರುʼ ನೀತಿಯನ್ನು ರೂಪಿಸಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್‌‌ (DCM Dr G Parameshwar) ತಿಳಿಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಇನ್ವೆಸ್ಟ್ ಕರ್ನಾಟಕ 'ಜಾಗತಿಕ ಹೂಡಿಕೆದಾರರ ಸಮಾವೇಶ 2027' ಪೂರ್ವಭಾವಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಇದೇ ರೀತಿಯಲ್ಲಿ ರಾಜ್ಯದ ಇತರ ನಗರಗಳೂ ಕೈಗಾರಿಕಾ ಕ್ಷೇತ್ರದಲ್ಲಿ ಬೆಳೆಯಬೇಕು. ನಮ್ಮ ಯುವಜನರು ಉದ್ಯೋಗಕ್ಕಾಗಿ ತಮ್ಮ ಊರು, ಕುಟುಂಬವನ್ನು ಬಿಟ್ಟು ದೂರದ ನಗರಗಳಿಗೆ ಹೋಗುವ ಅನಿವಾರ್ಯತೆ ಇರಬಾರದು. ತಮ್ಮ ಪ್ರದೇಶದಲ್ಲಿಯೇ ಉತ್ತಮ ಉದ್ಯೋಗಗಳನ್ನು ಪಡೆದು, ಬದುಕು ಕಟ್ಟಿಕೊಳ್ಳುವಂತಹ ಅವಕಾಶಗಳು ಸೃಷ್ಟಿಯಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.

ವಿಶೇಷವಾಗಿ ತುಮಕೂರು ಪ್ರಮುಖ ಕೈಗಾರಿಕಾ ಮತ್ತು ಉತ್ಪಾದನಾ ಕೇಂದ್ರವಾಗಿ ಬೆಳೆಯುವ ಅಪಾರ ಸಾಮರ್ಥ್ಯ ಹೊಂದಿದೆ. ಬೆಂಗಳೂರಿಗೆ ಸಾಮೀಪ್ಯ, ಉತ್ತಮ ರಸ್ತೆ ಸಂಪರ್ಕ, ಕೈಗಾರಿಕಾ ಪ್ರದೇಶಗಳು ಹಾಗೂ ಮೂಲಸೌಕರ್ಯಗಳ ಅನುಕೂಲವನ್ನು ಬಳಸಿಕೊಂಡು ತುಮಕೂರನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕಿದೆ. ಬೆಂಗಳೂರು ಹೊಸ ಆಲೋಚನೆಗಳು ಮತ್ತು ತಂತ್ರಜ್ಞಾನದ ಕೇಂದ್ರವಾಗಿದ್ದರೆ, ಆ ಆಲೋಚನೆಗಳನ್ನು ವಿಶ್ವ ಮಾರುಕಟ್ಟೆಗೆ ಅಗತ್ಯವಾದ ಉತ್ಪನ್ನಗಳನ್ನಾಗಿ ರೂಪಿಸುವ ಕೇಂದ್ರವಾಗಿ ತುಮಕೂರು ಬೆಳೆಯಬೇಕು ಎಂಬುದು ನನ್ನ ಕನಸಾಗಿದೆ ಎಂದು ತಿಳಿಸಿದರು.

ಕೈಗಾರಿಕೆಗಳ ಬೆಳವಣಿಗೆಯ ಜತೆಗೆ ಸ್ಥಳೀಯ ಉದ್ಯಮಗಳೂ ಅಭಿವೃದ್ಧಿಯಾಗಬೇಕು. ಹೊಸದಾಗಿ ಉದ್ಯಮ ಆರಂಭಿಸುವ ಯುವಜನರಿಗೆ ಪ್ರೋತ್ಸಾಹ ದೊರೆಯಬೇಕು. ಈಗಾಗಲೇ ಉದ್ಯಮಗಳನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕೈಗಾರಿಕಾ ಅಭಿವೃದ್ಧಿ ನೆರವಾಗಬೇಕು. ಪ್ರತಿಯೊಂದು ಬೃಹತ್ ಹೂಡಿಕೆಯೂ ಸ್ಥಳೀಯ ಜನರ ಬದುಕಿನಲ್ಲಿ ಒಳ್ಳೆಯ ಬದಲಾವಣೆ ತರಬೇಕು ಎಂದು ಹೇಳಿದರು.

ಕರ್ನಾಟಕಕ್ಕೆ ಬರ ಪರಿಹಾರ, ತೆರಿಗೆ ಹಣ ಸರಿಯಾಗಿ ನೀಡಿ; ಮೋದಿಗೆ ಸಿಎಂ ಡಿಕೆಶಿ ವಿಶೇಷ ಮನವಿ

ಹೂಡಿಕೆಯ ಯಶಸ್ಸನ್ನು ಕೇವಲ ಒಪ್ಪಂದಗಳ ಮೊತ್ತದಿಂದ ಅಳೆಯಬಾರದು. ಎಷ್ಟು ಕೈಗಾರಿಕೆಗಳು ಸ್ಥಾಪನೆಯಾದವು, ಎಷ್ಟು ಉದ್ಯೋಗಗಳು ಸೃಷ್ಟಿಯಾದವು, ಎಷ್ಟು ಕುಟುಂಬಗಳ ಬದುಕು ಸುಧಾರಿಸಿತು ಎಂಬುದು ಮುಖ್ಯ. ರಾಜ್ಯದ ಪ್ರತಿಯೊಂದು ಜಿಲ್ಲೆಯೂ ಅಭಿವೃದ್ಧಿಯ ಭಾಗವಾಗಬೇಕು, ಅದರ ಪ್ರಯೋಜನ ಸಾಮಾನ್ಯ ಜನರಿಗೂ ತಲುಪಬೇಕು ಎಂಬುದೇ ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.