Ganesh Chaturthi 2026: ಹಾವೇರಿ ಜಿಲ್ಲೆಯಲ್ಲಿ 2,315 ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಡಿಜೆ ಸೌಂಡ್ ನಿಷೇಧ, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್
ಹಾವೇರಿ ಜಿಲ್ಲೆಯಲ್ಲಿ ಗಣೇಶೋತ್ಸವದ ಬಂದೋಬಸ್ತ್ ಕರ್ತವ್ಯಕ್ಕಾಗಿ ಒಬ್ಬರು ಎಸ್‌ಪಿ, ಒಬ್ಬರು ಹೆಚ್ಚುವರಿ ಎಸ್‌ಪಿ, ಐವರು ಡಿಎಸ್‌ಪಿ, 15 ಸಿಪಿಐ/ಪಿಐ, 45 ಪಿಎಸ್‌ಐ, 50 ಎಎಸ್‌ಐ, 500 ಎಚ್‌ಸಿ/ಪಿಸಿ, 400 ಗೃಹರಕ್ಷಕ ಸಿಬ್ಬಂದಿ ಸೇರಿದಂತೆ ಡಿಎಆರ್, ಕೆಎಸ್‌ಆರ್‌ಪಿ ಹಾಗೂ ಕ್ಯೂಆರ್‌ಟಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
-
ಹಾವೇರಿ: ಸೆಪ್ಟೆಂಬರ್ 14ರಿಂದ ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬ (Ganesh Chaturthi 2026) ಆಚರಣೆ ನಡೆಯಲಿದ್ದು, ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ (Haveri District Police) ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲೆಯಲ್ಲಿ ಸುಮಾರು 2,315 ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದ್ದು, ಸುಮಾರು ಒಂದು ತಿಂಗಳವರೆಗೆ ವಿವಿಧ ದಿನಾಂಕಗಳಲ್ಲಿ ಗಣೇಶ ವಿಸರ್ಜನೆ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗಣೇಶೋತ್ಸವ ಆಯೋಜಕರು ಹಾಗೂ ವಿವಿಧ ಕೋಮಿನ ಮುಖಂಡರನ್ನು ಒಳಗೊಂಡ ಸೌಹಾರ್ದ ಸಭೆಗಳನ್ನು ನಡೆಸಲಾಗಿದೆ.
ಗಣೇಶೋತ್ಸವದ ಬಂದೋಬಸ್ತ್ ಕರ್ತವ್ಯಕ್ಕಾಗಿ ಒಬ್ಬರು ಎಸ್‌ಪಿ, ಒಬ್ಬರು ಹೆಚ್ಚುವರಿ ಎಸ್‌ಪಿ, ಐವರು ಡಿಎಸ್‌ಪಿ, 15 ಸಿಪಿಐ/ಪಿಐ, 45 ಪಿಎಸ್‌ಐ, 50 ಎಎಸ್‌ಐ, 500 ಎಚ್‌ಸಿ/ಪಿಸಿ, 400 ಗೃಹರಕ್ಷಕ ಸಿಬ್ಬಂದಿ ಸೇರಿದಂತೆ ಡಿಎಆರ್, ಕೆಎಸ್‌ಆರ್‌ಪಿ ಹಾಗೂ ಕ್ಯೂಆರ್‌ಟಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹಬ್ಬದ ಅವಧಿಯಲ್ಲಿ ಡಿಜೆ ಸೌಂಡ್ ಹಾಗೂ ಹೆಚ್ಚಿನ ಶಬ್ದ ಹೊರಸೂಸುವ ಸಾಧನಗಳ ಬಳಕೆಯನ್ನು ನಿಷೇಧಿಸಲಾಗಿದೆ. ಗಣೇಶ ಮೂರ್ತಿಗಳ ಮೆರವಣಿಗೆ ನಡೆಯುವ ದಿನಗಳಲ್ಲಿ ಸಂಬಂಧಪಟ್ಟ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೂ ನಿಷೇಧ ವಿಧಿಸಲಾಗಿದೆ.
ಗಣೇಶ ವಿಸರ್ಜನಾ ಸ್ಥಳಗಳಲ್ಲಿ ಸ್ವಚ್ಛತೆ, ಲೈಟಿಂಗ್ ವ್ಯವಸ್ಥೆ ಹಾಗೂ ಸಿಸಿಟಿವಿ ಅಳವಡಿಕೆಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ, ವಾಚ್ ಟವರ್, ಪಿಎ ಸಿಸ್ಟಮ್ ಹಾಗೂ ಹೆಚ್ಚುವರಿ ಲೈಟಿಂಗ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಅಲ್ಲದೆ, ವಿದ್ಯುತ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಕೋರಲಾಗಿದ್ದು, ಜಿಲ್ಲೆಯ ಎಲ್ಲ ಕಂದಾಯ ಅಧಿಕಾರಿಗಳು ಸ್ಥಳೀಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಹಾಗೂ ಸುಳ್ಳು ಸಂದೇಶಗಳನ್ನು ಹರಡುವವರ ಮೇಲೆ ವಿಶೇಷ ನಿಗಾವಹಿಸಲಾಗುತ್ತಿದೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯಶೋಧಾ ವಂಟಗೋಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.