ಬೆದರಿಕೆಗೆ ಅಂಜಿ ಗಂಡ ಆತ್ಮಹತ್ಯೆ; ಆರೋಪಿಗಳನ್ನು ಬಂಧಿಸದ ಪೊಲೀಸರ ವಿರುದ್ಧ ನೊಂದ ಪತ್ನಿ ಆಕ್ರೋಶ
ಹಾವೇರಿ ತಾಲೂಕಿನ ವೆಂಕಟಾಪೂರ ಗ್ರಾಮದ ದಾದಾಪೀರ್ ಎಂಬ ವ್ಯಕ್ತಿ ಕೊಲೆ ಬೆದರಿಕೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಪ್ರಕರಣದಲ್ಲಿ ಬೆದರಿಕೆ ಹಾಕಿದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸದೆ, ನಮ್ಮ ಮೇಲೆಯೇ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ನೊಂದ ಪತ್ನಿ ಸೀಮಾ ಬಾನು ಆರೋಪಿಸಿದ್ದಾರೆ.
ಮೃತ ದಾದಾಪೀರ್ ಪತ್ನಿ ಸೀಮಾ ಬಾನು. -
ಹಾವೇರಿ: ಕಳೆದ ಎರಡು ತಿಂಗಳ ಹಿಂದೆ ಹಾವೇರಿ (Haveri) ತಾಲೂಕಿನ ವೆಂಕಟಾಪೂರ ಗ್ರಾಮದ ದಾದಾಪೀರ್ ಎಂಬ ವ್ಯಕ್ತಿ ಕೊಲೆ ಬೆದರಿಕೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸದೆ, ಅನ್ಯಾಯಕ್ಕೊಳಗಾದವರನ್ನೇ ಹೆದರಿಸಿ ಆರೋಪಿಗಳ ಪರ ನಿಂತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಮೃತ ದಾದಾಪೀರ್ ಖಾಸಿಂಸಾಬ್ ವರ್ದಿ ಪತ್ನಿ ಸೀಮಾ ಬಾನು ಮಾತನಾಡಿದ್ದಾರೆ. ಗುತ್ತಲ ಗ್ರಾಮದ ಒಂಬತ್ತಕ್ಕೂ ಹೆಚ್ಚು ಜನ ಬೆದರಿಕೆ ಹಾಕಿದ್ದರಿಂದ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಗೆ ನುಗ್ಗಿ ಹಲ್ಲೆ ಮಾಡಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರಿಂದ 9ಕ್ಕೂ ಹೆಚ್ಚಿನ ಆರೋಪಿಗಳ ವಿರುದ್ಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವುದು ಬಿಟ್ಟರೆ, ಉಳಿದ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ.
ಈ ಕೇಸ್‌ನಲ್ಲಿ ಎ2 ಕಲಂದರ್ ಮುಲ್ಲಾ, ಎ8 ಆರೋಪಿ ಸಾಜೀದ್ ಮುಲ್ಲಾ ಎಂಬುವರನ್ನು ಮಾತ್ರ ಬಂಧಿಸಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಕೃತ್ಯ ಎಸಗಿದ ಪ್ರಮುಖ ಆರೋಪಿಗಳಾದ ಎ1 ನೂರಬೀಬಿ, ಎ3 ಕುತೇಜಾ ಕಲಂದರ್ ಮುಲ್ಲಾ, ಎ4ಸುಹಾನಾ ಮುಲ್ಲಾ, ಎ5 ಮುಸ್ಕಾನ್ ಮುಲ್ಲಾ, ಎ 6 ದಾವಲ್ಲಬಿ, ಮಾಹೇ ಜಬೀನ್, ಸೈರಾ, ಎ7 ಬಹಮೂಬಸಾಬ್ ಮುಲ್ಲಾ, ಅಲ್ಲಾಭಕ್ಷ ಬಾಲೇಬಾಯಿ, ದಾದಾಪೀರ್ ಮೆನಸಿನಕಾಯಿ ಇನ್ನಿತರರನ್ನು ಪೊಲೀಸ್‌ನವರು ಬಂಧಿಸದೆ ಅನ್ಯಾಯಕ್ಕೊಳಗಾದವರನ್ನೆ ಹೆದರಿಸಿ ಆರೋಪಿಗಳ ಪರ ನಿಂತು ಸಪೋರ್ಟ್ ಮಾಡುತ್ತಿದ್ದಾರೆ.
ಆರೋಪಿಗಳ ಪರ ಬೆಂಬಲಕ್ಕೆ ನಿಂತಿರುವ ಪೊಲೀಸ್ ಅಧಿಕಾರಿಗಳಾದ ಹಾವೇರಿ ಗ್ರಾಮೀಣ ಠಾಣೆಯ ಸಿಪಿಐ ಸಿದ್ದಾರೂಢ ಬಡಿಗೇರ, ಪಿಎಸ್ಐ ರವಿಕುಮಾರ ಆರೋಪಿ ಗಳನ್ನು ಬಂಧಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆರೋಪಿಗಳು ಬೇಲ್ ಕೂಡ ಪಡೆದಿಲ್ಲ. ಪೊಲೀಸ್ ಇಲಾಖೆ ಆರೋಪಿಗಳ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಿಯಕರನೊಂದಿಗೆ ಸೇರಿ ಮಾವನ ಕತ್ತು ಸೀಳಿ ಕೊಲೆಗೈದ ಸೊಸೆ; ಭೀಕರ ದೃಶ್ಯವನ್ನು ರೆಕಾರ್ಡ್ ಮಾಡಿದ ಪಾಪಿಗಳು
ಕೂಡಲೇ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಅಲ್ಲದೇ ಆರೋಪಿಗಳ ಪರ ಮಾತನಾಡುವ ಹಾವೇರಿ ಗ್ರಾಮೀಣ ಠಾಣೆಯ ಸಿಪಿಐ ಬಡಿಗೇರ, ಪಿಎಸ್ಐ ರವಿಕುಮಾರ ಮೇಲೆ ಮೇಲಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು. ಬಂಧನವಾಗದೇ ಮನೆಯಲ್ಲಿರುವ ಆರೋಪಿಗಳು ನನಗೆ, ಮಗಳಿಗೆ ಹಾಗೂ ನನ್ನ ಕುಟುಂಬದವರಿಗೆ ಪದೇಪದೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ನೊಂದ ಮಹಿಳೆ, ದೂರುದಾರೆ ಸೀಮಾ ಬಾನು ದಾದಾಪೀರ್ ವರ್ದಿ ಒತ್ತಾಯ ಮಾಡಿದ್ದಾರೆ.