Bhima river Tragedy: ಕಣ್ಣೆದುರೇ ಭೀಮಾ ನದಿಯಲ್ಲಿ ಮುಳುಗಿದ ತಂದೆ; ವಿಡಿಯೊ ಮಾಡುತ್ತಾ ಅಸಹಾಯಕನಾಗಿ ನಿಂತ ಮಗ!
Kalaburagi News: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದಲ್ಲಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಎಮ್ಮೆಯನ್ನು ವಾಪಸ್ ಕರೆತರಲು ಭೀಮಾ ನದಿಗೆ ಇಳಿದ ವೇಳೆ ಈಜಲು ಬಾರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಗ ದಡದಲ್ಲೇ ನಿಂತಿದ್ದರೂ ರಕ್ಷಿಸಲು ಸಾಧ್ಯವಾಗಿಲ್ಲ.
ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ನದಿಯಲ್ಲಿ ಮುಳುಗಿದ ವ್ಯಕ್ತಿ. -
ಕಲಬುರಗಿ: ಮಗನ ಕಣ್ಣೆದುರೇ ತಂದೆ, ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ (Bhima river Tragedy) ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದಲ್ಲಿ ನಡೆದಿದೆ. ವಿಜಯ್ ರಾಜು ಎಂಬುವವರು ಎಮ್ಮೆಯನ್ನು ವಾಪಸ್ ಕರೆತರಲು ನದಿಗೆ ಇಳಿದಿದ್ದರು. ಆದರೆ, ಈಜಲು ಬಾರದಿರುವ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ವಿಜಯ್ ರಾಜು ನದಿ ದಾಟಲು ನೀರಿಗೆ ಇಳಿದಿದ್ದಾರೆ. ಈಜು ಬಾರದ ಕಾರಣ ನೀರಿನ ಸೆಳೆತಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಂಡು ಮುಳುಗಲು ಪ್ರಾರಂಭಿಸಿದ್ದಾರೆ. ನದಿಯ ಮಧ್ಯಭಾಗದಿಂದ “ಕಾಪಾಡಿ, ಕಾಪಾಡಿ” ಎಂದು ಕೂಗಿದರೂ, ದಡದ ಮೇಲೆ ಇದ್ದ ಮಗನಿಗೆ ಏನು ಮಾಡಬೇಕೆಂದು ತೋಚದೆ ಅಸಹಾಯಕನಾಗಿ ನಿಲ್ಲಬೇಕಾಯಿತು.
ದುರದೃಷ್ಟವಶಾತ್, ತಂದೆ ಪ್ರಾಣ ಬಿಡುವ ಅಂತಿಮ ಭೀಕರ ಕ್ಷಣಗಳು ಮಗನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಗನ ಕಣ್ಣೆದುರೇ ತಂದೆ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಸಾವನ್ನಪ್ಪಿದ ದೃಶ್ಯ ಮನಕಲಕುವಂತಿದೆ.
ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲು
ಬಳ್ಳಾರಿ: ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿದ್ದ ಘಟನೆ ಶನಿವಾರ ಸಂಜೆ ನಡೆದಿತ್ತು. ಹೈದರಾಬಾದ್ ಮೂಲದ ಯುವನ ಚಂದ್ರ(5), ಸತೀಶ್(35), ಮಂತ್ರಾಲಯ ಗ್ರಾಮದ ರಾಘವೇಂದ್ರ(25), ಧನುಷ್(23) ಉರವಕೊಂಡದ ಸಂಧ್ಯಾ(22) ಮೃತರು. ಮತ್ತೋರ್ವ ಯುವತಿ ಅಪರ್ಣಾ (Mantralaya) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರು ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದರು.
ನದಿಯ ನೀರಿನ ಆಳ ತಿಳಿಯದೆ ಈಜಲು ಹೋಗಿ ಐವರು ಜಲ ಸಮಾಧಿಯಾಗಿದ್ದಾರೆ. ಸ್ಥಳಕ್ಕೆ ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.