ʻನೀವು ಆರ್‌ಸಿಬಿ ಡ್ರೆಸ್ಸಿಂಗ್ ರೂಂನ ಹೃದಯ ಬಡಿತʼ: ವಿರಾಟ್ ಕೊಹ್ಲಿಗೆ ಆಂಡಿ ಫ್ಲವರ್ ಮೆಚ್ಚುಗೆ!
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ ಆರ್‌ಸಿಬಿ ಹೆಡ್ ಕೋಚ್ ಆಂಡಿ ಫ್ಲವರ್ ಅವರು, ವಿರಾಟ್ ಕೊಹ್ಲಿ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕೊಹ್ಲಿ ಆರ್‌ಸಿಬಿ ಡ್ರೆಸ್ಸಿಂಗ್ ರೂಂನ ಹೃದಯ ಬಡಿತ ಎಂದು ಬಣ್ಣಿಸಿದ್ದಾರೆ.
ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ ಆಂಡಿ ಫ್ಲವರ್. -
ನವದೆಹಲಿ: ಗುಜರಾತ್ ಟೈಟನ್ಸ್ ಎದುರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಪಡೆದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆ ಮೂಲಕ ಸತತ ಎರಡನೇ ಬಾರಿ ಐಪಿಎಲ್ ಗೆದ್ದ ಮೂರನೇ ತಂಡ ಎನಿಸಿಕೊಂಡಿತು. ಅಹಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ನೀಡಿದ್ದ 156 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ವಿರಾಟ್ ಕೊಹ್ಲಿ ಅವರ (75* ರನ್) ಅವರ ಬ್ಯಾಟಿಂಗ್ ಬಲದಿಂದ ಗೆದ್ದು ಬೀಗಿತ್ತು. ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಆರ್‌ಸಿಬಿ ಕೋಚ್ ಆಂಡಿ ಫ್ಲವರ್, ವಿರಾಟ್ ಕೊಹ್ಲಿಯನ್ನು (Virat Kohli) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಆಂಡಿ ಫ್ಲವರ್, "ವಿರಾಟ್, ನಿನಗೆ ಸಾಕಷ್ಟು ಗಮನ ಮತ್ತು ಪ್ರಶಂಸೆ ಸಿಗುತ್ತದೆ ಎಂಬುದು ನನಗೆ ಗೊತ್ತು. ಅದಕ್ಕೂ ನೀನು ಸಂಪೂರ್ಣವಾಗಿ ಅರ್ಹ. ಆದರೆ ಅದನ್ನು ಕಡಿಮೆ ಮಾಡಿ ಹೇಳಲು ನಾನು ಬಯಸುವುದಿಲ್ಲ, ಏಕೆಂದರೆ ಈ ಡ್ರೆಸ್ಸಿಂಗ್ ರೂಮ್‌ನ ಹೃದಯಬಡಿತವೇ ನೀವು. ಮೈದಾನಕ್ಕಿಳಿದು ನಿರಂತರವಾಗಿ ಧೈರ್ಯ ಪ್ರದರ್ಶಿಸುವುದು, ನಿಮ್ಮನ್ನೇ ಪಣಕ್ಕಿಟ್ಟು ಬಲಿಷ್ಠ ಎದುರಾಳಿಗಳ ವಿರುದ್ಧ ಹೋರಾಡುವುದು ನಮ್ಮೆಲ್ಲರಿಗೂ ಅತ್ಯುತ್ತಮ ಮಾದರಿಯಾಗಿದೆ," ಎಂದು ಹೇಳಿದ್ದಾರೆ.
ʻಇನ್ನೂ ನಮ್ಮ ಕೆಲಸ ಮುಗಿದಿಲ್ಲ, ಹ್ಯಾಟ್ರಿಕ್ ಗೆಲುವು ನಮ್ಮ ಗುರಿʼ: ರಜತ್ ಪಾಟಿದಾರ್ ಮತ್ತೊಂದು ಶಪಥ!
"ಈ ಋತುವಿನ ಬಗ್ಗೆ ಯೋಚಿಸಿದಾಗ, ವಿಶೇಷವಾಗಿ ಪ್ಲೇಆಫ್ಸ್‌ನ ಕೊನೆಯ ಎರಡು ಪಂದ್ಯಗಳನ್ನು ನೆನಪಿಸಿಕೊಂಡಾಗ, ನನ್ನ ಗಮನ ಸೆಳೆಯುವ ಪ್ರಮುಖ ಅಂಶವೆಂದರೆ ಮೈದಾನದ ಮಧ್ಯೆ ನೀವು ತೋರಿದ ಧೈರ್ಯ. ಅದರ ಅನೇಕ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಆದರೆ ಉನ್ನತ ಮಟ್ಟದ ಕ್ರಿಕೆಟ್‌ನಲ್ಲಿ, ಅದು ಟೆಸ್ಟ್ ಕ್ರಿಕೆಟ್ ಆಗಿರಲಿ, ವಿಶ್ವಕಪ್ ಆಗಿರಲಿ ಅಥವಾ ಐಪಿಎಲ್ ಆಗಿರಲಿ, ಕೇವಲ ಕೌಶಲವಿದ್ದರೆ ಸಾಕಾಗುವುದಿಲ್ಲ. ಆಟದ ಬಗ್ಗೆ ಉತ್ತಮ ಅರಿವು ಇರಬೇಕು. ಅದಕ್ಕಿಂತಲೂ ಮುಖ್ಯವಾಗಿ ಹೃದಯವಂತಿಕೆ ಮತ್ತು ಹೋರಾಟದ ಮನೋಭಾವ ಇರಬೇಕು. ಈ ವರ್ಷ ನಮ್ಮ ತಂಡದಲ್ಲಿ ಅದು ಹೇರಳವಾಗಿ ಕಂಡುಬಂದಿದೆ," ಎಂದು ಅವರು ತಿಳಿಸಿದ್ದಾರೆ.
2008 ರಿಂದ ಆರ್‌ಸಿಬಿ ಪರ ಆಡುತ್ತಿರುವ ಕೊಹ್ಲಿ
ವಿರಾಟ್ ಕೊಹ್ಲಿ ಅವರು 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಪ್ರತಿಯೊಂದು ಋತುವಿನಲ್ಲೂ ಒಂದೇ ತಂಡವನ್ನು ಪ್ರತಿನಿಧಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
IPL 2026: ಎರಡನೇ ಟ್ರೋಫಿ ಗೆದ್ದ ಆರ್‌ಸಿಬಿಗೆ ಆಘಾತ, 2027ರ ಐಪಿಎಲ್ ಮೊದಲನೇ ಪಂದ್ಯಕ್ಕೆ ಟಿಮ್ ಡೇವಿಡ್ ಬ್ಯಾನ್!
ಕೊಹ್ಲಿಯಲ್ಲಿದ್ದ ಭವಿಷ್ಯದ ಸೂಪರ್‌ಸ್ಟಾರ್ ಪ್ರತಿಭೆಯನ್ನು ಮೊದಲೇ ಗುರುತಿಸಿದ್ದ ಆರ್‌ಸಿಬಿ, 2011ರ ಮೆಗಾ ಹರಾಜಿಗೆ ಮುನ್ನ ಅವರನ್ನು ಮಾತ್ರ ಉಳಿಸಿಕೊಂಡಿತ್ತು. 2013ರಲ್ಲಿ ಕೊಹ್ಲಿ ಅವರನ್ನು ತಂಡದ ಪೂರ್ಣಾವಧಿ ನಾಯಕರಾಗಿ ನೇಮಿಸಲಾಯಿತು. ಆದರೆ ಅವರ ನಾಯಕತ್ವದಲ್ಲಿ ಆರ್‌ಸಿಬಿ ನಿರೀಕ್ಷಿತ ಯಶಸ್ಸು ಸಾಧಿಸಲು ವಿಫಲವಾಗಿದ್ದು, ಕೇವಲ ಒಂದು ಬಾರಿ ಮಾತ್ರ ಐಪಿಎಲ್ ಫೈನಲ್ ಪ್ರವೇಶಿಸಿತ್ತು. 2021ರ ಐಪಿಎಲ್ ಬಳಿಕ ನಾಯಕತ್ವಕ್ಕೆ ವಿದಾಯ ಹೇಳಿದ ಕೊಹ್ಲಿ, ಪ್ರಸ್ತುತ ರಜತ್ ಪಾಟಿದಾರ್ ನಾಯಕತ್ವದಲ್ಲಿ ಆಡುತ್ತಿದ್ದಾರೆ. 2022ರಿಂದ 2024ರವರೆಗೆ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದರು.