Kalaburagi crime news: ತಿಪ್ಪೆಗುಂಡಿಯಲ್ಲಿ ಆಸ್ಫೋಟ, ಪಿಸ್ತೂಲ್, ಗುಂಡುಗಳು ಪತ್ತೆ
Crime news: ಮಾಳಪ್ಪ ಎಂಬ ವ್ಯಕ್ತಿ ತಮ್ಮ ಟೈಲರ್ ಅಂಗಡಿಯಲ್ಲಿದ್ದ ವೇಸ್ಟ್ ಬಟ್ಟೆಗಳನ್ನು ತಿಪ್ಪೆಗುಂಡಿಗೆ ಹಾಕಿದ್ದರು. ಬಟ್ಟೆಗೆ ಬೆಂಕಿ ಹಚ್ಚಿದ ಕೆಲ ಸಮಯದ ಬಳಿಕ ಭಾರಿ ಸ್ಫೋಟದ ಶಬ್ದ ಕೇಳಿಸಿದೆ. ನಂತರ ತಿಪ್ಪೆಗುಂಡಿ ಪರಿಶೀಲಿಸಿದಾಗ ಪಿಸ್ತೂಲು ಹಾಗೂ ಮೂರು ಗುಂಡು ಪತ್ತೆಯಾಗಿವೆ.

-

ಕಲಬುರಗಿ : ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ (ಹೆಚ್) ಗ್ರಾಮದಲ್ಲಿರುವ (Kalaburagi crime news) ತಿಪ್ಪೆಗುಂಡಿಯಲ್ಲಿ ಒಂದು ನಾಡಪಿಸ್ತೂಲ್ (pistol) ಹಾಗೂ ಮೂರು ಗುಂಡುಗಳು (bullets) ಪತ್ತೆಯಾಗಿವೆ. ತಿಪ್ಪೆಗುಂಡಿಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಅದೇನು ಎಂದು ಪರಿಶೀಲಿಸಿದಾಗ ಇವು ಪತ್ತೆಯಾಗಿವೆ. ಬಹುಶಃ ತಿಪ್ಪೆಗುಂಡಿಗೆ ಹಾಕಿದ ಬೆಂಕಿಯಿಂದ ಒಂದು ಗುಂಡು ಆಸ್ಫೋಟಿಸಿರಬಹುದು ಎಂದು ಶಂಕಿಸಲಾಗಿದೆ.
ಟೈಲರ್ ಅಂಗಡಿಯ ಮಾಲೀಕರಾದ ಮಾಳಪ್ಪ ಅಂಬಣ್ಣ ಹೂಗೊಂಡ ಎಂಬವರು ದೈನಂದಿನಂತೆ ತಮ್ಮ ಅಂಗಡಿಯ ಬಲಭಾಗದ ಕಸದ ರಾಶಿಗೆ ಬೆಂಕಿ ಹಚ್ಚುತ್ತಿದ್ದಾಗ ಭಾರೀ ಸ್ಪೋಟದ ಶಬ್ದ ಕೇಳಿಬಂದಿದೆ. ಈ ಶಬ್ದದಿಂದಾಗಿ ಸುತ್ತಮುತ್ತಲಿನ ಜನ ಆತಂಕಗೊಂಡರು. ಸ್ಥಳೀಯರು ಕಸದ ರಾಶಿಯನ್ನು ಪರಿಶೀಲಿಸಿದಾಗ, ಶಂಕಾಸ್ಪದ ಲೋಹದ ವಸ್ತುವೊಂದು ಪತ್ತೆಯಾಗಿದೆ. ಕೂಲಂಕಷವಾಗಿ ಗಮನಿಸಿದಾಗ, ಒಂದು ನಾಡಪಿಸ್ತೂಲ್ ಮತ್ತು ಎರಡು ನಿಷ್ಕ್ರಿಯ ಗುಂಡುಗಳು ಇರುವುದು ದೃಢಪಟ್ಟಿದೆ. ತಕ್ಷಣವೇ ಮಾಳಪ್ಪ ಅವರು ಕಾಳಗಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ, ಪೊಲೀಸರು ಸ್ಥಳಕ್ಕೆ ಧಾವಿಸಿ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪಿಸ್ತೂಲ್ ಯಾರದ್ದು, ಮತ್ತು ಅದು ಹೇಗೆ ಕಸದ ರಾಶಿಗೆ ಬಂತು ಎಂಬುದರ ಕುರಿತು ಶೋಧ ನಡೆಸಲಾಗುತ್ತಿದೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಬೆರಳಚ್ಚು ತಜ್ಞರ ತಂಡ ಮತ್ತು ಶ್ವಾನದಳದೊಂದಿಗೆ ಶೋಧ ಕಾರ್ಯಾಚರಣೆಯನ್ನು ನಡೆಸಿದೆ. ಈ ಸಂಬಂಧ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರಿಮಂಜೇಶ್ವರ ಸಮುದ್ರದಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲು
ಉಡುಪಿ: ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕಡಲ ಕಿನಾರೆಯಲ್ಲಿ (Kirimanjeshwara beach) ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು (Students drowned) ನೀರುಪಾಲಾಗಿದ್ದಾರೆ. ಕಿರಿಮಂಜೇಶ್ವರ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ 15 ವರ್ಷ ವಯಸ್ಸಿನ ಆಶಿಶ್ ದೇವಾಡಿಗ, ಕಿರಿ ಮಂಜೇಶ್ವರ ಹೈಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿದ್ದ 16 ವರ್ಷ ವಯಸ್ಸಿನ ಸೂರಜ್ ಪೂಜಾರಿ ಹಾಗೂ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ 18 ವರ್ಷ ವಯಸ್ಸಿನ ಸಂಕೇತ ದೇವಾಡಿಗ ಮೃತ ಬಾಲಕರು.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಅನಂತ್‌ನಾಗ್‌ನ ದಟ್ಟ ಕಾಡಿನಲ್ಲಿ ಇಬ್ಬರು ಸೈನಿಕರು ನಾಪತ್ತೆ; ಭಯೋತ್ಪಾದಕರ ಕೈವಾಡ?
ಕೊಡೇರಿಯ ಹೊಸಹಿತ್ಲು ಕಡಲ ತೀರದಲ್ಲಿ ನಡೆದಿರುವ ಈ ದುರಂತ, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ನೀರುಪಾಲಾದವರೆಲ್ಲರೂ ವಿದ್ಯಾಭ್ಯಾಸ ಮಾಡುತ್ತಿರುವ ಪುಟ್ಟ ಮಕ್ಕಳು. ನಾಲ್ಕು ಮಂದಿ ಮಕ್ಕಳು ಸಂಜೆ ವಾಲಿಬಾಲ್ ಆಟವಾಡಿ, ನಂತರ ಗಾಳ ಹಾಕಲೆಂದು ಕಡಲ ತೀರಕ್ಕೆ ಹೋಗಿದ್ದರು. ನೀರಿನ ಬಗ್ಗೆ ಅಂದಾಜು ಸಿಗದೆ ಮುಂದೆ ಹೋದ ಕಾರಣ, ಮುಳುಗಡೆಯಾಗಿದ್ದಾರೆ. ಈ ಪೈಕಿ ಈಜಿಕೊಂಡು ಬಚಾವಾಗಿ ಬಂದ ಬಾಲಕ ಸ್ಥಳದಲ್ಲಿ ಇದ್ದ ಮೀನುಗಾರರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಕಡಲಿಗೆ ಹಾರಿ ಮೂವರು ಮಕ್ಕಳನ್ನು ಬಚಾವ್ ಮಾಡಲು ಮೀನುಗಾರರು ಪ್ರಯತ್ನಿಸಿದ್ದಾರೆ. ಕಡಲ ಮಕ್ಕಳ ಈ ಸಾಹಸ ಫಲ ನೀಡಲಿಲ್ಲ. ಅಷ್ಟರಲ್ಲಿಯೇ ಕಡಲ ಅಲೆಗಳಲ್ಲಿ ಮೂವರು ಮಕ್ಕಳು ಉಸಿರು ಚೆಲ್ಲಿದ್ದಾರೆ. ತಕ್ಷಣವೇ ಶವಗಳನ್ನು ಮೇಲಕ್ಕೆತ್ತಲಾಗಿದೆ.