ನನ್ನ ಹೆಸರಲ್ಲಿ ದುಡ್ಡು ಮಾಡ್ತೀರಿ, ನನಗೂ ಪಾಲು ಕೊಡಿ; ಜೇವರ್ಗಿ ತಹಸೀಲ್ದಾರ್ ಹಫ್ತಾ ವಸೂಲಿ?
Jewargi Tahasildar: ಸರ್ಕಾರಿ ಕಚೇರಿಯಲ್ಲೇ ಬಹಿರಂಗವಾಗಿ ಹಫ್ತಾ ವಸೂಲಿಗೆ ಇಳಿದಿರುವ ತಹಸೀಲ್ದಾರ್, ಸಭೆಯಲ್ಲೇ ಬಿಂದಾಸ್ ಆಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೇವರ್ಗಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಕ್ರಮಕ್ಕೆ ಆಗ್ರಹಿಸಿ ಮೇಲಧಿಕಾರಿಗೆ ಸಿಬ್ಬಂದಿಯೊಬ್ಬರು ದೂರು ಸಲ್ಲಿಸಿದ್ದಾರೆ.
ಜೇವರ್ಗಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ. -
ಕಲಬುರಗಿ: ಸರ್ಕಾರಿ ನೌಕರರಿಂದಲೇ ಹಫ್ತಾ ವಸೂಲಿ ಮಾಡುತ್ತಿರುವ ಗಂಭೀರ ಆರೋಪ ಜಿಲ್ಲೆಯ ಜೇವರ್ಗಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ (Jewargi Tahsildar Mallanna Yalagod) ಅವರ ವಿರುದ್ಧ ಕೇಳಿಬಂದಿದೆ. ನನ್ನ ಹೆಸರಿನಲ್ಲಿ ನೀವೆಲ್ಲಾ ದುಡ್ಡು ಮಾಡುತ್ತೀರಿ, ನನಗೂ ಪಾಲು ಕೊಡಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ತನಿಖೆ ಮಾಡಿಸುತ್ತೇನೆ" ಎಂದು ಅಧೀನ ಸಿಬ್ಬಂದಿಗೆ ತಹಸೀಲ್ದಾರ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಅವರ ಕಿರುಕುಳ ತಾಳಲಾರದೆ ಸಿಬ್ಬಂದಿ ಇದೀಗ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಚೇರಿ ಸಭೆಯಲ್ಲೇ ಹಣಕ್ಕೆ ಬೇಡಿಕೆ!
ಸರ್ಕಾರಿ ಕಚೇರಿಯಲ್ಲೇ ಬಹಿರಂಗವಾಗಿ ಹಫ್ತಾ ವಸೂಲಿಗೆ ಇಳಿದಿರುವ ತಹಸೀಲ್ದಾರ್, ಸಭೆಯಲ್ಲೇ ಬಿಂದಾಸ್ ಆಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಸರ್ಕಾರಿ ಜಯಂತಿಗಳು ಬರುತ್ತವೆ, ಶಾಸಕರು ಕೆಲಸ ಹೇಳುತ್ತಾರೆ. ಅದಕ್ಕೆಲ್ಲಾ ನಾನು ಎಲ್ಲಿಂದ ಹಣ ತರಲಿ? ನೀವು ಪ್ರತಿ ತಿಂಗಳು 5 ರಿಂದ 10 ಸಾವಿರ ರೂಪಾಯಿ ಕೊಡಬೇಕು. ಎಲ್ಲಾ ಇಲಾಖೆಯವರು ಹಣ ಹಾಕುತ್ತಾರೆ, ನೀವು ಕೂಡ ಸಮಾನವಾಗಿ ಷೇರ್ ಹಾಕಬೇಕು ಎಂದು ಸಿಬ್ಬಂದಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
‘ನನಗೆ ಆರ್.ಐ ಜವಾಬ್ದಾರಿಯೇ ಬೇಡ’
ತಹಸೀಲ್ದಾರರ ಈ ವಸೂಲಿ ಕಾಟಕ್ಕೆ ಬೇಸತ್ತ ಕಂದಾಯ ನಿರೀಕ್ಷಕರೊಬ್ಬರು (RI), "ಸರ್, ನನಗೆ ಈ ಜವಾಬ್ದಾರಿಯೇ ಬೇಡ. ನನ್ನನ್ನು ಆಫೀಸ್ ಕೆಲಸಕ್ಕೆ ಹಾಕಿ, ನನ್ನಿಂದ ಹಣ ಕೊಡಲು ಸಾಧ್ಯವಿಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತಹಸೀಲ್ದಾರರು, "ಬೇರೆಯವರ ಕಡೆಯಿಂದ ದುಡ್ಡು ಇಸ್ಕೊಂಡು ಕೊಡಲು ನಿಮಗೇನು ತ್ರಾಸ್ ಆಗುತ್ತೆ? ನೀವೇನು ನಿಮ್ಮ ಜೇಬಿಂದ ಕೊಡಲ್ವಲ್ಲ ಎಂದು ಸಿಬ್ಬಂದಿಯನ್ನು ಲೇವಡಿ ಮಾಡಿದ್ದಾರೆ ಎನ್ನಲಾಗಿದೆ.
2 ವರ್ಷದಲ್ಲಿ 50 ಸಾವಿರ ರೂ. ವಸೂಲಿ?:
ಸಿಬ್ಬಂದಿಯೊಬ್ಬರು ಅಳಲು ತೋಡಿಕೊಳ್ಳುತ್ತಾ, ನೀವು ಕೇಳಿದಾಗಲೆಲ್ಲಾ ಹಣ ಕೊಟ್ಟಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 50 ಸಾವಿರ ರೂಪಾಯಿಗೂ ಹೆಚ್ಚು ಹಣ ನೀಡಿದ್ದೇನೆ. ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ 10 ಸಾವಿರ ಕೇಳಿದಾಗಲೂ ಕೊಟ್ಟಿದ್ದೇವೆ. ಆದರೂ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದೀರಿ ಎಂದು ಸಭೆಯಲ್ಲಿಯೇ ಆಕ್ರೋಶ ಹೊರಹಾಕಿದ್ದಾರೆ.
ತನಿಖೆಯ ಬೆದರಿಕೆ:
ಹಣ ಕೊಡಲು ನಿರಾಕರಿಸುವ ಸಿಬ್ಬಂದಿಗಳಿಗೆ "ನಿಮ್ಮ ವಿರುದ್ಧ ತನಿಖೆ ಮಾಡಿಸುತ್ತೇನೆ" ಎಂದು ಅಧಿಕಾರ ದುರುಪಯೋಗ ಪಡಿಸಿಕೊಂಡು ಬೆದರಿಕೆ ಹಾಕುತ್ತಿರುವುದು ಸಿಬ್ಬಂದಿಗಳ ನಿದ್ದೆಗೆಡಿಸಿದೆ. ಈ ಕುರಿತು ಸಿಬ್ಬಂದಿಗಳು ಸಂಘಟಿತರಾಗಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು, ತನಿಖೆಯ ನಂತರ ಸತ್ಯಾಂಶ ಹೊರಬರಬೇಕಿದೆ.