ಅಪ್ರಾಪ್ತ ಬಾಲಕಿಯನ್ನು ಹಾಸಿಗೆಯೊಳಗೆ ಬಚ್ಚಿಟ್ಟ ಅಮ್ರಿನ್ ಅಖ್ತರ್ ಲಸ್ಕರ್; ಸತತ 6 ವರ್ಷಗಳಿಂದ ದೌರ್ಜನ್ಯ: ಘಟನೆ ಬೆಳಕಿಗೆ ಬಂದಿದ್ದು ಹೇಗೆ?
Child labour: ಅಪ್ರಾಪ್ತ ಬಾಲಕಿಯನ್ನು ಕಾರ್ಮಿಕಳಂತೆ ದುಡಿಸಿಕೊಂಡು, ಹಾಸಿಗೆಯೊಳಗೆ ಬಚ್ಚಿಟ್ಟ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಬಾಲಕಿಯನ್ನು ರಕ್ಷಿಸುವ ಕಾರ್ಯಾಚರಣೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಮಕ್ಕಳ ಕಳ್ಳಸಾಗಣೆಯ ಪ್ರಕರಣವಿರಬಹುದು ಎಂದು ಶಂಕಿಸಲಾಗಿದೆ.
ಸಾಂದರ್ಭಿಕ ಚಿತ್ರ -
ದಿಸ್‌ಪುರ, ಫೆ. 4: ಅಸ್ಸಾಂನ ಗುವಾಹಟಿಯಲ್ಲಿ ಮಕ್ಕಳ ಕಳ್ಳಸಾಗಣೆ ಮತ್ತು ದೌರ್ಜನ್ಯದ ಶಂಕಿತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಫೆಬ್ರವರಿ 1ರಂದು ನಗರದ ಪಂಜಾಬರಿ ಪ್ರದೇಶದಲ್ಲಿ ಜಿಲ್ಲಾ ಕಾರ್ಮಿಕ ಕಾರ್ಯಪಡೆ ನಡೆಸಿದ ದಾಳಿಯಲ್ಲಿ ಬೆಡ್‍ನೊಳಗೆ ಬಚ್ಚಿಡಲಾಗಿದ್ದ 13 ವರ್ಷದ ಬಾಲಕಿಯನ್ನು ರಕ್ಷಿಸಲಾಗಿದೆ (child labour). ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (viral video) ಆಗಿದೆ.
ಅಧಿಕಾರಿಗಳ ಪ್ರಕಾರ, ಬಾಲಕಿಯನ್ನು ಏಳನೇ ವಯಸ್ಸಿನಲ್ಲಿ ಕಳ್ಳ ಸಾಗಣೆ ಮಾಡಿ ಬಲವಂತವಾಗಿ ಮನೆಕೆಲಸಕ್ಕೆ ಒಳಪಡಿಸಲಾಗಿತ್ತು. ಆಕೆ ಸತತ ಆರು ವರ್ಷಗಳಿಂದ ದೌರ್ಜನ್ಯಕ್ಕೆ ಒಳಗಾಗಿದ್ದಳು ಎಂದು ವರದಿಯಾಗಿದೆ. ಅಮ್ರಿನ್ ಅಖ್ತರ್ ಲಸ್ಕರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯ ವಿರುದ್ಧ ಮಾನವ ಕಳ್ಳ ಸಾಗಣೆ ಮತ್ತು ಬಾಲ ಕಾರ್ಮಿಕ ಪದ್ಧತಿಯ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
Guwahati horror 13yo girl trafficked into domestic slavery at 7, beaten for 6 yrs, then hidden in a bed box to dodge raid.
— aree_shuklajii (@th_anonymouse) February 3, 2026
What’s 7yr child is capable of doing for herself ?
This is gendered violence normalized in our homes. Women & girls as invisible, disposable labour.… pic.twitter.com/q6L1khuh9z
ಹಾಸಿಗೆಯೊಳಗೆ ಬೆಡ್‌ಶೀಟ್ ಇಡುವ ಜಾಗದಲ್ಲಿ ಬಾಲಕಿಯನ್ನು ಅಡಗಿಸಿ ಇಟ್ಟಿದ್ದನ್ನು ಅಧಿಕಾರಿಗಳು ಪತ್ತೆಹಚ್ಚುವ ಕ್ಷಣವನ್ನು ವಿಡಿಯೊ ಸೆರೆಹಿಡಿದಿದೆ. ಅಧಿಕಾರಿಗಳು ಹಾಸಿಗೆಯನ್ನು ಪಕ್ಕಕ್ಕೆ ಎಳೆದು ಮಂಚದ ಬಾಕ್ಸ್ ಅನ್ನು ಎತ್ತುವುದನ್ನು ದೃಶ್ಯದಲ್ಲಿ ನೋಡಬಹುದು. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಕಂಪಾರ್ಟ್‌ಮೆಂಟ್ ತೆರೆಯುವಾಗ, ಬಾಲಕಿಯು ಇಕ್ಕಟ್ಟಾದ, ಕತ್ತಲೆಯ ಜಾಗದಲ್ಲಿ ಹಾಸಿಗೆ ಮತ್ತು ಬಟ್ಟೆಗಳಿಂದ ಸುತ್ತುವರಿದಿರುವುದು ಕಂಡುಬಂದಿದೆ. ಅಲ್ಲಿದ್ದ ಮಂದಿ ಬಾಲಕಿಯನ್ನು ಎಚ್ಚರಿಕೆಯಿಂದ ಕಂಪಾರ್ಟ್‌ಮೆಂಟ್‌ನಿಂದ ಹೊರಗೆ ಬರಲು ಸಹಾಯ ಮಾಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಅವಳನ್ನು ಹೊರಗೆ ಕರೆತಂದು ಕೋಣೆಯ ಸುರಕ್ಷಿತ ಭಾಗದಲ್ಲಿ ಕೂರಿಸಲು ಸಹಾಯ ಮಾಡುವಾಗ ಅವಳು ದಿಗ್ಭ್ರಮೆಗೊಂಡಂತೆ, ಭಯಭೀತಳಾಗಿ ಮತ್ತು ದುಃಖಿತಳಾಗಿ ಕಾಣಿಸಿಕೊಂಡಿದ್ದಾಳೆ.
ಅಧಿಕಾರಿಗಳು ಅವಳ ಹತ್ತಿರದಲ್ಲೇ ಇದ್ದು, ಮಾತನಾಡುತ್ತ ಸ್ವಲ್ಪ ಹೊತ್ತು ಸಾಂತ್ವನ ಹೇಳಿದ್ದಾರೆ. ಕಳ್ಳ ಸಾಗಣೆ ಜಾಲದ ಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ತನಿಖೆಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಮೂವರು ಅಮಾಯಕ ಮಕ್ಕಳ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳ ತಾಯಿ ಮೊದಲು ಅವರನ್ನು ಕೊಂದು ನಂತರ ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ. ಪ್ರಸ್ತುತ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ಈ ಘಟನೆ ಭಾನುವಾರ (ಫೆಬ್ರವರಿ 1) ಬೆಳಗ್ಗೆ 10ರಿಂದ ಮಧ್ಯಾಹ್ನ 1:30ರ ನಡುವೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಮೊದಲು ತನ್ನ ಮಕ್ಕಳನ್ನು ನೇಣು ಹಾಕಿಕೊಂಡು ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಆಕೆಯನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.