Pahalgam Terror Attack: ರಸ್ತೆ ಮೇಲೆ ಪಾಕಿಸ್ತಾನದ ಧ್ವಜ ಅಂಟಿಸಿ ಆಕ್ರೋಶ; ಕಲಬುರಗಿಯಲ್ಲಿ ಬಜರಂಗ ದಳ ಕಾರ್ಯಕರ್ತರು ವಶಕ್ಕೆ
Pahalgam Terror Attack: ಕಲಬುರಗಿಯಲ್ಲಿ ಬಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಯಾವುದೇ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗಿದೆ ಎಂದು ಬಜರಂಗ ದಳದ ಕಾರ್ಯಕರ್ತರನ್ನು ಬ್ರಹ್ಮಪುರ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.


ಕಲಬುರಗಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ (Pahalgam Terror Attack) ಖಂಡಿಸಿ ನಗರದಲ್ಲಿ ಬಜರಂಗ ದಳದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ನಾನಾ ಕಡೆ ಪಾಕಿಸ್ತಾನದ ಧ್ವಜವನ್ನು ರಸ್ತೆ ಮೇಲೆ ಅಂಟಿಸುವ ಮೂಲಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಜಗತ್ ವೃತ್ತ, ಆಳಂದ ನಾಕಾ, ಮಾರ್ಕೆಟ್ ಚೌಕ್, ಸಾತ್ ಗುಂಬಜ್ ಸೇರಿ 20ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಪಾಕ್ ಧ್ವಜ ಅಂಟಿಸಿ, ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ.
ಆದರೆ, ಪೊಲೀಸರಿಂದ ಯಾವುದೇ ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗಿದೆ ಎಂದು ಬಜರಂಗ ದಳದ ಕಾರ್ಯಕರ್ತರನ್ನು ಬ್ರಹ್ಮಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಕಮಿಷನರ್ ಶರಣಪ್ಪ ಎಸ್. ಡಿ ಪ್ರತಿಕ್ರಿಯಿಸಿ, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಪ್ರತಿಭಟನಾರ್ಥವಾಗಿ ಪಾಕ್ ಧ್ವಜಗಳನ್ನು ನಗರದಲ್ಲಿ ಅಂಟಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಜರಂಗ ದಳದವರು ಇದನ್ನು ಮಾಡಿದ್ದಾರೆ. ಈ ಸಂಬಂಧ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉಗ್ರರ ದಾಳಿ ಖಂಡನೀಯ. ಅದರ ವಿರುದ್ಧದ ಪ್ರತಿಭಟನೆಯನ್ನು ಕಾನೂನಿನ ಚೌಕಟ್ಟಿನಲ್ಲಿ ನಡೆಸಬೇಕು. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ಸಮರ್ಥನೆ ಮಾಡಿ ಪೋಸ್ಟ್; ಕಿಡಿಗೇಡಿ ವಿರುದ್ಧ ಕೇಸ್

ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯನ್ನು (Pahalgam terror attack) ಸಮರ್ಥಿಸಿಕೊಂಡು ಕಿಡಿಗೇಡಿಯೊಬ್ಬ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವುದು ಮಂಗಳೂರಿನಲ್ಲಿ ನಡೆದಿದೆ. ನಿಚ್ಚು ಮಂಗಳೂರು ಫೇಸ್‍ಬುಕ್ ಪೇಜ್‍ನಲ್ಲಿ, ಉಗ್ರರ ಕೃತ್ಯಕ್ಕೆ ಬೇರೆಯೇ ವ್ಯಾಖ್ಯಾನ ಮಾಡಲಾಗಿದೆ. ಹೀಗಾಗಿ ಉಳ್ಳಾಲದ ಸತೀಶ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಾಗಿದೆ.
2023ರಲ್ಲಿ ಮಹಾರಾಷ್ಟದ ಪಾಲ್ಗರ್‌ನಲ್ಲಿ ಮೂವರು ಮುಸ್ಲಿಮರನ್ನು ಕೊಲ್ಲಲಾಗಿತ್ತು. ಆರೋಪಿ ಚೇತನ್ ಸಿಂಗ್ ಕುತ್ತಿಗೆಗೆ ಸಾರ್ವಜನಿಕವಾಗಿ ಹಗ್ಗ ಹಾಕಲಿಲ್ಲ. ಆ ಕಾರಣಕ್ಕೆ ಕಾಶ್ಮೀರದಲ್ಲಿ ಈ ಕೃತ್ಯ ನಡೆದಿದೆ. ಪಾಲ್ಗರ್ ಘಟನೆಯಿಂದಾಗಿ ಕಾಶ್ಮೀರದಲ್ಲಿ ಧರ್ಮ ಕೇಳಿ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾನೆ.
ಪೋಸ್ಟ್ ಹಾಕಿದ ನಿಚ್ಚು ಮಂಗಳೂರು ಫೇಸ್‍ಬುಕ್ ಪೇಜ್ ವಿರುದ್ಧ ಉಳ್ಳಾಲದ ಸತೀಶ್ ಕುಮಾರ್ ಎಂಬುವವರು ದೂರು ನೀಡಿದ್ದಾರೆ. ಈ ಸಂಬಂಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಬಿಎನ್‍ಎಸ್ ಸೆಕ್ಷನ್ 192 ಮತ್ತು 353 (1) (ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್‍ಬುಕ್ ಪೇಜ್ ಡಿಪಿಯಲ್ಲಿರುವ ವ್ಯಕ್ತಿಗಾಗಿ ಪೊಲೀಸರ ಹುಡುಕಾಟ ಆರಂಭಿಸಿದ್ದಾರೆ. ಆರೋಪಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ | Pahalgam terror Attack: ಭಾರತೀಯ ಸೇನೆಯ ಭರ್ಜರಿ ಬೇಟೆ- ಲಷ್ಕರ್ ತೊಯ್ಬಾ ಟಾಪ್ ಕಮಾಂಡರ್ ಫಿನೀಶ್!