CM's Medal recipient CPI Sharanabasappa Kodla suspended: ಅಕ್ಕಿ ಕಳ್ಳರ ಜತೆ ಪೊಲೀಸರ ‘ಡೀಲ್’: ಮುಖ್ಯಮಂತ್ರಿ ಪದಕ ವಿಜೇತ ಸಿಪಿಐ ಸೇರಿ ನಾಲ್ವರು ಅಮಾನತು
ಮುಖ್ಯಮಂತ್ರಿ ಪದಕ ಪಡೆದಿದ್ದ ಸಿಪಿಐ ಶರಣಬಸಪ್ಪ ಕೋಡ್ಲಾ ಅವರ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿ ಬಂದು ಅಮಾನತು ಕ್ರಮಕ್ಕೆ ಒಳಗಾಗಿರುವುದು ಪೊಲೀಸ್ ಇಲಾಖೆಯಲ್ಲಿ ಗಮನ ಸೆಳೆದಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರ ತವರು ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಇಲಾಖೆಯ ಕಾರ್ಯವೈಖರಿ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮುಖ್ಯಮಂತ್ರಿ ಪದಕ ವಿಜೇತ ಸಿಪಿಐ ಶರಣಬಸಪ್ಪ ಕೋಡ್ಲಾ -
ಆಳಂದ ಪೊಲೀಸರ ವಿರುದ್ಧ ಗಂಭೀರ ಆರೋಪ
₹1 ಲಕ್ಷಕ್ಕೆ ಪ್ರಕರಣ ಮುಚ್ಚಿ ವಾಹನ ಬಿಟ್ಟ ಆರೋಪ
ಕಲಬುರಗಿ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ ಬಳಿಕ, ಪ್ರಕರಣ ದಾಖಲಿಸದೆ ಹಣ ಪಡೆದು ವಾಹನವನ್ನು ಬಿಟ್ಟು ಕಳುಹಿಸಿದ ಆರೋಪ ಆಳಂದ ಪೊಲೀಸರ ವಿರುದ್ಧ ಕೇಳಿಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪದಕ ವಿಜೇತ ಸಿಪಿಐ ಶರಣಬಸಪ್ಪ ಕೋಡ್ಲಾ(Chief Minister's Medal recipient CPI Sharanabasappa Kodla) ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ.
ಸಿಪಿಐ ಶರಣಬಸಪ್ಪ ಕೋಡ್ಲಾ, ಪೇದೆಗಳಾದ ಹಣಮಂತ, ಮಲ್ಲಿಕಾರ್ಜುನ ಹಾಗೂ ಸಾಯಬಣ್ಣ ಅಮಾನತುಗೊಂಡವರು.
ಇದನ್ನೂ ಓದಿ: Kalaburagi News: ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಜಪ್ತಿ: ಗೃಹ ಸಚಿವರ ತವರಿನಲ್ಲಿಯೇ ಪೊಲೀಸರಿಂದ ಕಳ್ಳ ಪೊಲೀಸ್ ಆಟ?
ಕಳೆದ ಸೋಮವಾರ ಮಧ್ಯರಾತ್ರಿ 112ಕ್ಕೆ ಬಂದ ಮಾಹಿತಿ ಆಧರಿಸಿ ಆಳಂದ ಪೊಲೀಸರು(Alanda Police) ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ್ದರು. ವಾಹನವನ್ನು ಠಾಣೆಗೆ ತಂದ ಬಳಿಕ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಬದಲು ₹1 ಲಕ್ಷಕ್ಕೆ ‘ಡೀಲ್’ ನಡೆಸಿ ವಾಹನವನ್ನು ಬಿಟ್ಟು ಕಳುಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಕುರಿತು ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳು ಪ್ರಕಟವಾದ ಬೆನ್ನಲ್ಲೇ ಗೃಹ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿದೆ. ತನಿಖೆಯಲ್ಲಿ ಕರ್ತವ್ಯ ಲೋಪ ಹಾಗೂ ಪ್ರಕರಣದ ನಿರ್ವಹಣೆಯಲ್ಲಿ ನಿಯಮಬಾಹಿರ ನಡೆ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಿಪಿಐ ಸೇರಿದಂತೆ ನಾಲ್ವರು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.
ಮುಖ್ಯಮಂತ್ರಿ ಪದಕ ಪಡೆದಿದ್ದ ಸಿಪಿಐ ಶರಣಬಸಪ್ಪ ಕೋಡ್ಲಾ ಅವರ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿ ಬಂದು ಅಮಾನತು ಕ್ರಮಕ್ಕೆ ಒಳಗಾಗಿರುವುದು ಪೊಲೀಸ್ ಇಲಾಖೆಯಲ್ಲಿ ಗಮನ ಸೆಳೆದಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರ ತವರು ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಇಲಾಖೆಯ ಕಾರ್ಯವೈಖರಿ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿ ಜಪ್ತಿ ಮಾಡಿದ ಬಳಿಕ ನಡೆದಿರುವ ಬೆಳವಣಿಗೆ, ವಾಹನ ಬಿಟ್ಟುಕಳುಹಿಸಿದ ಆರೋಪ ಹಾಗೂ ಹಣದ ವ್ಯವಹಾರದ ಕುರಿತು ಇಲಾಖಾ ತನಿಖೆಯ ಮುಂದಿನ ಕ್ರಮದತ್ತ ಇದೀಗ ಗಮನ ನೆಟ್ಟಿದೆ.