ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟೌನ್‌ಶಿಪ್‌ ಯೋಜನೆ ಆರಂಭಿಸಿದ್ದೇ ಕುಮಾರಸ್ವಾಮಿ; ಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು

ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ವಿರೋಧಿಸುತ್ತಿರುವ ಕೇದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ʼʼಕುಮಾರಸ್ವಾಮಿ ಅಣ್ಣನವರು ಟೌನ್‌ಶಿಪ್‌ ಯೋಜನೆ ಮಾಡಿದ್ರು. 2006ರಲ್ಲಿ ಅವರು ಈ ತೀರ್ಮಾನ ತೆಗೆದುಕೊಂಡಿದ್ದರು. ನಿಮ್ಮ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆʼʼ ಎಂದಿದ್ದಾರೆ.

ಟೌನ್‌ಶಿಪ್‌ ಯೋಜನೆ ಆರಂಭಿಸಿದ್ದೇ ಕುಮಾರಸ್ವಾಮಿ ಎಂದ ಸಿಎಂ

ಡಿ.ಕೆ. ಶಿವಕುಮಾರ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jul 15, 2026 2:33 PM

ಬೆಂಗಳೂರು, ಜು. 15: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (CM DK Shivakumar) ಅವರ ಕನಸಿನ ಕೂಸು ಬಿಡದಿ ಟೌನ್‌ಶಿಪ್‌ ಯೋಜನೆಗೆ ಕೇಂದ್ರ ಸಚಿವ, ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರಸ್ವಾಮಿ (HD Kumarawamy) ಹಿಂದಿನಿಂದಲೇ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಯಾವುದೇ ಕಾರಣಕ್ಕೂ ರೈತರ ಜಮೀನಿನಲ್ಲಿ ಈ ಯೋಜನೆ ಜಾರಿ ಮಾಡಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಈ ಮಧ್ಯೆ ಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿ, ಈ ಯೋಜನೆಯನ್ನು ಆರಂಭಿಸಿದ್ದೇ ಕುಮಾರಸ್ವಾಮಿ ಎಂದು ಚೆಕ್‌ಮೆಟ್‌ ನೀಡಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ʼʼಕುಮಾರಸ್ವಾಮಿ ಅಣ್ಣನವರು ಟೌನ್‌ಶಿಪ್‌ ಯೋಜನೆ ಮಾಡಿದ್ರು. 2006ರಲ್ಲಿ ಅವರು ಈ ತೀರ್ಮಾನ ತೆಗೆದುಕೊಂಡಿದ್ದರು. ನಿಮ್ಮ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ರೆಡ್‌ ಝೋನ್‌ ಮಾಡಿ ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದೀರಿ. ಇಲ್ಲಿ ನೀವು 30 ಎಕ್ರೆ ಜಮೀನು ಖರೀದಿಸಿಲ್ಲವೆ? ನಿಮ್ಮ ರಾಮನಗರವನ್ನು ಅಭಿವೃದ್ಧಿ ಮಾಡ್ತೀನಿ. ಹೊಡೆಯುದಾದ್ರೆ ನನಗೆ ಪೊರಕೆ ಏಟು ಕೊಡಿʼʼ ಎಂದು ಹೇಳಿದ್ದಾರೆ.

ಬಿಡದಿ ಯೋಜನೆ ಬಗ್ಗೆ ಡಿಕೆಶಿ ಮಾತು:



ಡಿಕೆಶಿ ಹೇಳಿದ್ದೆನು?

ʼʼನಾನು ಮುಖ್ಯಮಂತ್ರಿಯಾಗಿದ್ದನ್ನು ಈಗಲೂ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅವತ್ತು ಸಂಚು ರೂಪಿಸಿ ನನ್ನನ್ನು ಜೈಲಿಗೆ ಕಳುಹಿಸಲಾಯಿತು. ಡಿಕೆಶಿ ಜೈಲಿಗೆ ಹೋಗುತ್ತಾರೆ ಎಚ್‌.ಡಿ. ಕುಮಾರಸ್ವಾಮಿ ಹೇಳುತ್ತಿರುತ್ತಾರೆ. ನಿಮ್ಮ ಆಸೆ ನೆರವೇರಲಿ. ಜೈಲು ನನಗೆ ಹೊಸದೇನು ಅಲ್ಲ. ಬಿಡದಿ ನನ್ನ ಕನಸಿನ ಯೋಜನೆಯಲ್ಲ. ಇನ್ನು ನನ್ನ ಯೋಜನೆ ಎಂದು ನಾನು ಹೇಳಿಕೊಳ್ಳುತ್ತಿಲ್ಲ. ನಾನು ನಿಮ್ಮ ಜಮೀನನ್ನು ಕಸಿದುಕೊಳ್ಳುತ್ತಿಲ್ಲ. ಕುಮಾರಸ್ವಾಮಿ ಮತ್ತು ಬಿ.ಎಸ್‌. ಯಡಿಯೂರಪ್ಪ ಆರಂಭಿಸಿದ ಯೋಜನೆಯ ಮುಂದುವರಿದ ಭಾಗ ಇದು. ನೋಟಿಫಿಕೇಷನ್‌ ಹೊರಡಿಸಲಾಗಿದೆ. ಯಾರು ತಮ್ಮ ಜಮೀನನನ್ನು ಮಾರಾಟ ಮಾಡಬೇಕಂದುಕೊಂಡಿದ್ದಾರೋ ಅವರು ಮಾರಾಟ ಮಾಡಿ ಹಣ ತೆಗೆದುಕೊಳ್ಳಲಿ. ಯಾರಿಗೆ ಇಷ್ಟವಿಲ್ಲವೋ ಅವರು ಜಮೀನು ನೀಡೋದು ಬೇಡʼʼ ಎಂದು ಡಿಕೆಶಿ ತಿಳಿಸಿದ್ದಾರೆ.

ಬಿಡದಿ ರೈತ ಮಹಿಳೆಯರ ಪೊರಕೆ ಸೇವೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

"ಬಿಡದಿ ಟೌನ್‌ಶಿಪ್‌ ಯೋಜನೆಗೆ ಎಚ್.ಡಿ. ಕುಮಾರಸ್ವಾಮಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸಿದ್ದರು. ಅವರು ಯೋಜನೆಯನ್ನು ಡಿ.ಎಲ್.ಎಫ್.ಗೆ ನೀಡಲು ಬಯಸಿದ್ದರು. ಆದ್ದರಿಂದ ಡಿ.ಎಲ್.ಎಫ್. ಸುಮಾರು 400 ಕೋಟಿ ರುಪಾಯಿ ನೀಡಿತು. ನಂತರ ಆ ಕಂಪನಿ ಹಣವನ್ನು ಹಿಂಪಡೆಯಿತು. ಈ ಯೋಜನೆ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿಗೆ ಸೇರಿದ್ದು. ಇಲ್ಲಿ 9,000 ಎಕ್ರೆ ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದರು. ಅವರು ಎಕರೆಗೆ 25 ಲಕ್ಷ ರುಪಾಯಿ ನಿಗದಿಪಡಿಸಿದ್ದರು. ನಾನು ಇದನ್ನು ಮುಂದುವರಿಸಿದ್ದೇನೆ. ನಾನು ಡಿನೋಟಿಫೈ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆʼʼ ಎಂದು ಹೇಳಿದ್ದಾರೆ.

ʼʼನಾನು ಯಾವುದೇ ರೈತರನ್ನು ತಮ್ಮ ಭೂಮಿ ನೀಡಬೇಕೆಂದು ಬಯಸುವುದಿಲ್ಲ. ನಾವು ಕುಮಾರಸ್ವಾಮಿ ಅವರ ಆದೇಶಗಳೊಂದಿಗೆ ಮುಂದುವರಿಯುತ್ತೇವೆ. ನಾನು ರೈತರಿಗೆ ತೊಂದರೆ ನೀಡಲು ಬಯಸುವುದಿಲ್ಲ. ಕುಮಾರಸ್ವಾಮಿ ಗ್ರಾಮಗಳನ್ನು ಸ್ಥಳಾಂತರಿಸಬೇಕೆಂದು ಆದೇಶಿಸಿದ್ದರೂ ಯಾವುದೇ ಹಳ್ಳಿಗಳನ್ನು ಸ್ಥಳಾಂತರಿಸಬಾರದು ಎಂದು ನಾನು ಆದೇಶ ಹೊರಡಿಸಿದ್ದೇನೆ. ನಾನು ಈ ಬಗ್ಗೆ ಸಮಿತಿಯನ್ನು ರಚಿಸಲು ಬಯಸುತ್ತೇನೆʼʼ ಎಂದು ತಿಳಿಸಿದ್ದಾರೆ.

2ನೇ ಹಂತದ ಭೂ ಸ್ವಾಧೀನಕ್ಕೆ ಅಧಿಸೂಚನೆ

ಈ ಮಧ್ಯೆ 3 ಗ್ರಾಮಗಳ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಕೆ.ಜಿ. ಗೊಲ್ಲರಪಾಳ್ಯ, ಬನ್ನಿಗಿರಿ ಮತ್ತು ಅರಳಾಳುಸಂದ್ರದ ಭೂ ಸ್ವಾಧೀನಕ್ಕೆ 2ನೇ ಹಂತದ ಅಧಿಸೂಚನೆ ಹೊರಡಿಸಲಾಗಿದೆ.

ಬಿಡದಿ ಟೌನ್‌ಶಿಪ್‌ ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆದು ಕಳಿಸಿದ ರೈತ ಮಹಿಳೆಯರು!

ಯೋಜನೆ ಕೈ ಬಿಡದಿದ್ದರೆ ಸತ್ಯಾಗ್ರಹ ಎಂದ ದೇವೇಗೌಡ

ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ರದ್ದು ಪಡಿಸದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ ಮಾಡುವುದಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಹೈಕಮಾಂಡ್‌ಗೆ ಕೊಟ್ಟ ಮಾತಿಗಾಗಿ ಯೋಜನೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ. ಯೊಜನೆಯಿಂದ ಬಿಡದಿ ಸುತ್ತಮುತ್ತ ರೈತರಿಗೆ ಆಗುವ ತೊಂದರೆಗಳೇನು ಎಂಬುದನ್ನು ವಿವರಿಸಿ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ರೈತರು ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಯತ್ನವನ್ನು ತಕ್ಷಣ ಕೈಬಿಡುವಂತೆ ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.