ಕೇಂದ್ರ ಸರ್ಕಾರದ ಸೀಮಾ ನಿರ್ಣಯ ಮಸೂದೆಗೆ ಶರದ್ ಪವಾರ್ ಬಣದ ಬೆಂಬಲ?
ಕೇಂದ್ರ ಸರ್ಕಾರದ ಸೀಮಾ ನಿರ್ಣಯ ಮಸೂದೆಯನ್ನು ಬೆಂಬಲಿಸಲು ಶರದ್ ಪವಾರ್ ನೇತೃತ್ವದ ಅವರ ಎನ್ ಸಿಪಿ ಪಕ್ಷ ಬೆಂಬಲಿಸಲು ಸಿದ್ಧವಾಗಿದೆ. ಒಂದು ವೇಳೆ ಹೀಗಾದರೆ ವಿರೋಧ ಪಕ್ಷದ ಮೈತ್ರಿಕೂಟದಲ್ಲಿ ದೊಡ್ಡ ಸಂಚಲವನ್ನೇ ಉಂಟು ಮಾಡಬಹುದು. ಇತ್ತೀಚೆಗೆ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿದ್ದು ಮಿತ್ರ ಪಕ್ಷಗಳ ನಾಯಕರು ಕೆರಳುವಂತೆ ಮಾಡಿತ್ತು.
ಸಂಗ್ರಹ ಚಿತ್ರ -
ಮಹಾರಾಷ್ಟ್ರ: ರಾಜ್ಯಸಭಾ ನಾಯಕ ಶರದ್ ಪವಾರ್ (Rajya Sabha leader Sharad Pawar) ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು (Nationalist Congress Party) ಕೇಂದ್ರ ಸರ್ಕಾರದ ಸೀಮಾ ನಿರ್ಣಯ ಮಸೂದೆಯನ್ನು (Constitution 131st Amendment Bill, 2026) ಬೆಂಬಲಿಸಲು ಸಿದ್ಧವಾಗಿದೆ. ಒಂದು ವೇಳೆ ಇದು ನಡೆದರೆ ಅಘಾಡಿ ಮೈತ್ರಿಕೂಟದಲ್ಲಿ (Aghadi alliance) ದೊಡ್ಡ ಬಿರುಗಾಳಿಯೇ ಏಳಲಿದೆ. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಎಲ್ಲಾ ರಾಜ್ಯಗಳಿಗೆ ಶೇಕಾಡ 50ರಷ್ಟು ಸ್ಥಾನವನ್ನು ಖಚಿತ ಪಡಿಸುವ ಸೀಮಾ ನಿರ್ಣಯ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ಶರದ್ ಪವಾರ್ ಬೆಂಬಲಿಸಲಿದ್ದಾರೆ ಎನ್ನುವ ಊಹಾಪೋಹಗಳು ಎದ್ದಿವೆ.
ಇತ್ತೀಚೆಗೆ ಶರದ್ ಪವಾರ್ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದು ಮಿತ್ರ ಪಕ್ಷಗಳನ್ನು ಕೆರಳಿಸಿತ್ತು. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ನಡೆದ ಸಭೆಯ ಬಳಿಕ ಶಿಂಧೆ ಮತ್ತು ಪವಾರ್ ಭೇಟಿ ಮಾಡಿದ್ದರು. ಆದರೆ ಇದೊಂದು ಸಣ್ಣ ಸೌಜನ್ಯದ ಭೇಟಿಯಾಗಿದೆ. ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಲೆ ಹೇಳಿದ್ದರು. ಇದರ ಬಳಿಕ ಈಗ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಬಣ ಮುಂದಿನ ಸೀಮಾ ನಿರ್ಣಯ ಮಸೂದೆಯನ್ನು ಬೆಂಬಲಿಸಲು ಸಜ್ಜಾಗಿದೆ ಎನ್ನಲಾಗುತ್ತಿದೆ.
ಶರದ್ ಪವಾರ್-ಏಕನಾಥ್ ಶಿಂಧೆ ಭೇಟಿ: ಸಂಜಯ್ ರಾವತ್ ಆಕ್ರೋಶಕ್ಕೆ ಸುಪ್ರಿಯಾ ಸುಲೆ ಹೇಳಿದ್ದೇನು?
ಈ ಮಸೂದೆಯ ವಿರುದ್ಧ ಕಳೆದ ಸಂಸತ್ತಿನ ಅಧಿವೇಶನದಲ್ಲಿ ಪಕ್ಷಗಳು ಒಟ್ಟಾಗಿ ಮತ ಚಲಾಯಿಸಿದ್ದವು. ಆದರೆ ಇದೀಗ ಶರದ್ ಪವರ್ ಅವರ ಬಣ ಮಸೂದೆಗೆ ಬೆಂಬಲ ನೀಡಿದರೆ ವಿರೋಧ ಪಕ್ಷದ ಒಗ್ಗಟ್ಟಿನಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಎನ್ ಸಿಪಿಯ ಎರಡು ಬಣಗಳಾದ ಶರದ್ ಪವಾರ್ ಬಣ ಮತ್ತು ಅವರ ಸೋದರಳಿಯ ದಿವಂಗತ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ನೇತೃತ್ವದ ಬಣಗಳ ಹಿರಿಯ ನಾಯಕರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ತಡರಾತ್ರಿ ಸಭೆ ನಡೆಸಿದ್ದರು. ಇದರ ಬಳಿಕ ಎನ್‌ಸಿಪಿ ಮತ್ತು ಎನ್‌ಡಿಎ ಮತ್ತೆ ಒಂದಾಗುವ ಉಹಾಪೋಹವೆದ್ದಿದೆ.
ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೀಮಾ ನಿರ್ಣಯ ಮಸೂದೆಯ ಕುರಿತು ಬಣದ ನಿಲುವು ಅದರ ಅಂತಿಮ ರೂಪ ಮತ್ತು ಸ್ವರೂಪವನ್ನು ಅವಲಂಬಿಸಿರುತ್ತದೆ. ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಶೇ. 50 ರಷ್ಟು ಸ್ಥಾನಗಳ ಹೆಚ್ಚಳಕ್ಕೆ ಅವಕಾಶ ನೀಡಿದರೆ ಮತ್ತು ಅದರ ಅನುಷ್ಠಾನವನ್ನು ಸ್ಪಷ್ಟವಾಗಿ ವಿವರಿಸಿದರೆ ನಾವು ಅದನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದರು.
ಲೋಕಸಭೆಯ ಬಲವನ್ನು 850 ಸ್ಥಾನಗಳಿಗೆ ಹೆಚ್ಚಿಸಲು ಮತ್ತು ಮಹಿಳಾ ಮೀಸಲಾತಿಯನ್ನು ಕಾರ್ಯಗತಗೊಳಿಸಲು ಪರಿಚಯಿಸಲಾದ ಸಂವಿಧಾನ 131ನೇ ತಿದ್ದುಪಡಿ ಸೀಮಾ ನಿರ್ಣಯ ಮಸೂದೆ 2026 ಏಪ್ರಿಲ್ 17 ರಂದು ಲೋಕಸಭೆಯಲ್ಲಿ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿತ್ತು.
ಈ ಕುರಿತು ಮಂಗಳವಾರ ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಪ್ರಸ್ತಾವಿತ ಸಂವಿಧಾನ 131ನೇ ತಿದ್ದುಪಡಿ ಮಸೂದೆಗೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಮತ್ತು ಡಿಎಂಕೆ ಬೆಂಬಲವನ್ನು ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದನ್ನು ಎರಡು ಪ್ರಾದೇಶಿಕ ಪಕ್ಷಗಳು ಬೆಂಬಲಿಸಬಾರದು. ಈ ಮಸೂದೆಯು ರಾಷ್ಟ್ರೀಯ ಜನಸಂಖ್ಯಾ ನೀತಿಗೆ ಅನುಗುಣವಾಗಿ ಜನಸಂಖ್ಯಾ ಬೆಳವಣಿಗೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ರಾಜ್ಯಗಳಿಗೆ ಅನ್ಯಾಯವಾಗಿ ಅನಾನುಕೂಲವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
"ಬೆಂಗಳೂರಿಗರ ಆತ್ಮೀಯತೆಗೆ ಕೊನೆಯಿಲ್ಲ": ಆಟೋ ಚಾಲಕನ ಸೌಹಾರ್ದಯುತ ಮಾತಿಗೆ ಫಿದಾ ಆದ ಅಮೆರಿಕನ್ ಪ್ರವಾಸಿ!
ಸಂಸತ್ತಿನ ಮಳೆಗಾಲದ ಅಧಿವೇಶನ ಜುಲೈ 20 ರಿಂದ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಮತ್ತೆ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.