ರಾಜ್ಯ ಸರ್ಕಾರದಿಂದ ಗ್ರಾಹಕರಿಗೆ ಮತ್ತೊಂದು ಶಾಕ್; ನಂದಿನಿ ಹಾಲಿನ ಬೆನ್ನಲ್ಲೇ ಮೊಸರಿನ ಬೆಲೆಯಲ್ಲೂ ಭಾರಿ ಏರಿಕೆ
Nandini Curd Rate: ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿ ಇದೀಗ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಆದೇಶ ಹೊರಡಿಸಿದೆ. ಅದರಂತೆ ಲೀಟರ್ಗೆ 14 ರೂಪಾಯಿ ಹೆಚ್ಚಿಸಲಾಗಿದ್ದು, ಈ ಹೊಸ ದರ ನಾಳೆ ಅಂದರೆ ನವೆಂಬರ್ 1ರಿಂದಲೇ ಜಾರಿಗೆ ಬರಲಿವೆ. ಆ ಮೂಲಕ ನಾಳೆಯಿಂದ ನಂದಿನಿ ಹಾಲಿನ ಜತೆಗೆ ಮೊಸರೂ ದುಬಾರಿಯಾಗಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಅ. 31: ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ರಾಜ್ಯ ಸರ್ಕಾರ ಹೊಡೆತದ ಮೇಲೆ ಹೊಡೆತ ನೀಡುತ್ತಿದೆ. ಇತ್ತೀಚೆಗಷ್ಟೇ ನಂದಿನಿ ಹಾಲಿನ ಬೆಲೆ ಲೀಟರ್ಗೆ 8 ರೂಪಾಯಿ ಏರಿಸುವ ತೀರ್ಮಾನ ಪ್ರಕಟಿಸಿದ್ದ ಸರ್ಕಾರ ಮೊಸರಿನ ದರವನ್ನೂ (Nandini Curd Rate) ಹೆಚ್ಚಿಸಿದೆ. ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿ ಇದೀಗ ಕರ್ನಾಟಕ ಹಾಲು ಮಹಾಮಂಡಳಿ (KMF) ಆದೇಶ ಹೊರಡಿಸಿದೆ. ಅದರಂತೆ ಲೀಟರ್ಗೆ 14 ರೂಪಾಯಿ ಹೆಚ್ಚಿಸಲಾಗಿದ್ದು, ಈ ಹೊಸ ದರ ನಾಳೆ ಅಂದರೆ ನವೆಂಬರ್ 1ರಿಂದಲೇ ಜಾರಿಗೆ ಬರಲಿವೆ.
ಹಾಲಿನ ಜತೆಗೆ ಮೊಸರಿನ ಪರಿಷ್ಕೃತ ದರ ನವೆಂಬರ್ 1ರಿಂದ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಹೊಸ ದರದ ಪ್ರಕಾರ, ಅರ್ಧ ಲೀಟರ್ ಮೊಸರಿನ ಬೆಲೆ 28 ರೂಪಾಯಿಂದ 34 ರೂಪಾಯಿಗೆ ಏರಿಕೆಯಾಗಿದ್ದರೆ, 1 ಲೀಟರ್ ಮೊಸರಿನ ದರ 54 ರೂಪಾಯಿಯಿಂದ 68 ರೂಪಾಯಿಗೆ ಹೆಚ್ಚಳವಾಗಿದೆ. ನಾಳೆಯಿಂದ ನೀವು ಅರ್ಧ ಲೀಟರ್ ಮೊಸರಿಗೆ 6 ರೂಪಾಯಿ ಹಾಗೂ 1 ಲೀಟರ್ ಮೊಸರಿಗೆ 14 ರೂಪಾಯಿ ಹೆಚ್ಚುವರಿಯಾಗಿ ಹಣ ಪಾವತಿಸಬೇಕಾಗುತ್ತದೆ.
ನಂದಿನಿ ಹಾಲನ್ನು ಆದಾಯಕ್ಕೆ ದಾರಿ ಮಾಡಿಕೊಂಡ ಕಾಂಗ್ರೆಸ್: ಪ್ರಲ್ಹಾದ್ ಜೋಶಿ ಟೀಕೆ
ಹಾಲಿನ ದರ ಹೆಚ್ಚಿಸಿ ಆದೇಶ ಹೊರಡಿಸಿದ್ದ ಸರ್ಕಾರ
ಕೆಎಂಎಫ್ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಿಸಿ ಗುರುವಾರ (ಅಕ್ಟೋಬರ್ 29) ಆದೇಶ ಹೊರಡಿಸಲಾಗಿತ್ತು. ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹಾಲಿನ ದರ ಹೆಚ್ಚಳಕ್ಕೆ ಹಲವು ತಿಂಗಗಳಿಂದ ಹಾಲು ಒಕ್ಕೂಟಗಳು ಸರ್ಕಾರವನ್ನು ಆಗ್ರಹಿಸಿದ್ದವು. ಈ ಬಗ್ಗೆ ಕೆಎಂಎಫ್ ಕೂಡ ಸರ್ಕಾರಕ್ಕೆ ಕಳೆದ ತಿಂಗಳೇ ಪ್ರಸ್ತಾವನೆ ಸಲ್ಲಿಸಿತ್ತು.
ದರ ಏರಿಕೆಯ 8 ರೂಪಾಯಿಯಲ್ಲಿ 7 ರೂಪಾಯಿಯನ್ನು ರೈತರಿಗೆ ಸಹಾಯಧನವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ರೈತರಿಗೆ ಬಮುಲ್ ವ್ಯಾಪ್ತಿಯಲ್ಲಿ ಸದ್ಯ ಪ್ರತಿ ಲೀಟರ್ಗೆ 33 ರೂಪಾಯಿಯಿಂದ 35 ರೂಪಾಯಿ ನೀಡಲಾಗುತ್ತಿದ್ದು, ಆ ಮೊತ್ತ 40ರಿಂದ 42 ರೂಪಾಯಿಗೆ ಹೆಚ್ಚಳವಾಗಲಿದೆ. ಹೆಚ್ಚುವರಿ 1 ರೂಪಾಯಿಯನ್ನು ಹಾಲು ಒಕ್ಕೂಟಗಳಿಗೆ ನೀಡಲಾಗುತ್ತದೆ.
ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜೊತೆ ಒಪ್ಪಂದ
ಯಾವ ಹಾಲಿನ ದರ ಎಷ್ಟು ಏರಿಕೆ?
- ಟೋನ್ಡ್ ಹಾಲು (1 ಲೀ.) (ನೀಲಿ ಪ್ಯಾಕೆಟ್): 46ರಿಂದ 54 ರೂಪಾಯಿ
- ಹೋಮೋಜಿನೈಸ್ಡ್ ಟೋನ್ಡ್ ಹಾಲು (ಹಸಿರು ಪ್ಯಾಕೆಟ್) : 47ರಿಂದ 55 ರೂಪಾಯಿ
- ಹೋಮೋಜಿನೈಸ್ಡ್ ಹಸುವಿನ ಹಾಲು: 50ರಿಂದ 58 ರೂಪಾಯಿ
- ಶುಭಂ ಹಾಲು (ಕಿತ್ತಳೆ ಪ್ಯಾಕೆಟ್): 52 ರಿಂದ 60 ರೂಪಾಯಿ
- ಸಮೃದ್ಧಿ ಹಾಲು (ನೇರಳೆ ಪ್ಯಾಕೆಟ್) : 55ರಿಂದ 64 ರೂಪಾಯಿ
- ಸ್ಪೆಷಲ್ ಹಾಲು: 52ರಿಂದ 60 ರೂಪಾಯಿ
- ಡಬಲ್ ಟೋನ್ಡ್ ಹಾಲು: 43 ರಿಂದ 51 ರೂಪಾಯಿ
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.