Corona Virus: ಕರ್ನಾಟಕದಲ್ಲಿ ಹೊಸ ಕೊರೊನಾ 16 ಪ್ರಕರಣ ಪತ್ತೆ, ಮುನ್ನೆಚ್ಚರಿಕೆ ಸೂಚನೆ
ದೇಶಾದ್ಯಂತ 257 ಕೊರೊನಾ ಸೋಂಕಿತರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕರ್ನಾಟಕದಲ್ಲಿ 16 ಕೇಸ್ ಪತ್ತೆಯಾಗಿವೆ. ಕೇರಳದಲ್ಲಿ 69, ಮಹಾರಾಷ್ಟ್ರ 44, ತಮಿಳುನಾಡು 34, ಗುಜರಾತ್, ದೆಹಲಿ, ಹರಿಯಾಣದಲ್ಲಿ ಕೂಡ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.


ಬೆಂಗಳೂರು: ರಾಜ್ಯದಲ್ಲಿ (Karnataka) ಹಾಗೂ ದೇಶದಲ್ಲಿ ಕೊರೊನಾದ (Corona Virus) ಕರಾಳ ಛಾಯೆ ಮತ್ತೆ ವ್ಯಾಪಿಸಲು ಆರಂಭಿಸಿದೆ. ಕೇರಳ ಹಾಗೂ ಮಹಾರಾಷ್ಟ್ರ ಸೇರಿ ಇಬ್ಬರು ಕೊರೊನಾ ಪಾಸಿಟಿವ್ (Covid Positive) ಅನಾರೋಗ್ಯ ಪೀಡಿತರು ಮೃತಪಟ್ಟಿದ್ದಾರೆ. ಸಿಂಗಾಪುರದಲ್ಲಿ ಸೋಂಕು ಹೆಚ್ಚಳದ ಬೆನ್ನಿಗೇ ದೇಶಾದ್ಯಂತ 257 ಕೊರೊನಾ ಸೋಂಕಿತರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕರ್ನಾಟಕದಲ್ಲಿ 16 ಕೇಸ್ ಪತ್ತೆಯಾಗಿವೆ.
ಎಲ್ಲಿ ಎಷ್ಟು ಪ್ರಕರಣ?
ಕೇರಳದಲ್ಲಿ 69, ಮಹಾರಾಷ್ಟ್ರ 44, ತಮಿಳುನಾಡು 34, ಗುಜರಾತ್, ದೆಹಲಿ, ಹರಿಯಾಣದಲ್ಲಿ ಕೂಡ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಆತಂಕ ಹಾಗೂ ನಿರ್ಲಕ್ಷ್ಯ ಬೇಡ, ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಸಾಕು ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (ಎನ್‌ಸಿಡಿಸಿ) ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದು ಸೋಂಕು ಹೆಚ್ಚಳದ ಬಗ್ಗೆ ನಿಗಾ ಇರಿಸಲು ನಿರ್ಧರಿಸಿದ್ದಾರೆ.
ಕೊರೊನಾ ವೈರಾಣುವಿನ ಓಮಿಕ್ರಾನ್ ರೂಪಾಂತರಿಯ 'ಜೆನ್.1' ಉಪತಳಿಯಿಂದ ಏಷ್ಯಾದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ ಎಂದು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ಮೆಡಿಸಿನ್ ತಿಳಿಸಿದೆ. ಇದಲ್ಲದೇ ಎಲ್‌ಎಫ್.7 ಹಾಗೂ ಎನ್‌ಬಿ.1.8 ರೂಪಾಂತರಿಗಳಿಂದಲೂ ಹಾಂಗ್‌ಕಾಂಗ್ ಹಾಗೂ ಸಿಂಗಾಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ ಎಂದು ವರದಿಯಾಗಿದೆ.
ದೇಶದಲ್ಲಿ ಕೊರೊನಾ ಆರ್ಭಟ ಜೋರಿದ್ದಾಗ ಜನರು ವಹಿಸುತ್ತಿದ್ದ ಮುನ್ನೆಚ್ಚರಿಕೆ ಕ್ರಮಗಳು, ಆರೋಗ್ಯ ರಕ್ಷಣೆ ಕ್ರಮಗಳನ್ನು ಈಗ ಮತ್ತೆ ಕೈಗೊಳ್ಳಲು ಆರಂಭಿಸಬೇಕಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ. ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಈ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
1) ಕೈಗಳನ್ನು ನಿಯಮಿತವಾಗಿ ಸ್ಯಾನಿಟೈಸರ್ ಅಥವಾ ಸಾಬೂನ್ ಬಳಸಿ ತೊಳೆಯಬೇಕು. ಸದ್ಯಕ್ಕೆ ಆತಂಕ ಹಾಗೂ ನಿರ್ಲಕ್ಷ್ಯ ಎರಡೂ ಬೇಡ ಎಂದಿರುವ ಆರೋಗ್ಯ ಇಲಾಖೆ ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಸಾಕು ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಹೀಗಾಗಿ ಕೈ ಸ್ವಚ್ಛವಿಲ್ಲದಾಗ ಮುಖ, ಕಣ್ಣು, ಮೂಗು ಸ್ಪರ್ಶಿಸುವುದನ್ನು ತಡೆಯಬೇಕು.
2) ಜ್ವರ, ಕೆಮ್ಮು, ಗಂಟಲಿನಲ್ಲಿ ನೋವು, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣಗಳಿದ್ದರೆ ತಕ್ಷಣವೇ ವೈದ್ಯರ ಬಳಿ ಪರೀಕ್ಷಿಸಬೇಕು ಮತ್ತು ಆದಷ್ಟು ಹೋಮ್ ಐಸೋಲೇಶನ್ ಪಾಲಿಸಬೇಕು, ಅಂದರೆ ಮನೆಯಲ್ಲಿಯೇ ಇರಬೇಕು.
3) ಒಂದುವೇಳೆ ಜನದಟ್ಟಣೆ ಭಾರಿ ಇರುವ ಪ್ರದೇಶವಾದರೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಸುರಕ್ಷಿತ. ಹತ್ತಿರದವರ ಜೊತೆ ಹೆಚ್ಚು ಕಾಲ ಇರುವ ಸಂದರ್ಭಗಳಲ್ಲಿ ಅಥವಾ ಮುಚ್ಚಿದ ಪರಿಸರದಲ್ಲಿ ಮಾಸ್ಕ್ ಬಳಕೆ ಮಾಡುವುದು ಸೂಕ್ತ.
4) ಬಹಿರಂಗ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
5) ಯಾರು ಕೊರೊನಾ ಪಾಸಿಟಿವ್ ಆಗಿದ್ದಾರೆಂದು ಗೊತ್ತಾದರೆ ಅವರಿಂದ ಅಂತರ ಕಾಪಾಡಬೇಕು.
6) ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳಂತಹ ರೋಗನಿರೋಧಕ ಶಕ್ತಿಯು ಕಡಿಮೆ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು.
7) ಅಂತಿಮವಾಗಿ, ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಾವಶ್ಯಕ. ಇದು ನಮ್ಮ ಆರೋಗ್ಯವನ್ನು ಕಾಪಾಡುವ ಜೊತೆಗೆ ಸಮುದಾಯವನ್ನು ಸುರಕ್ಷಿತವಾಗಿರಿಸಲು ಸಹಕಾರಿಯಾಗಿದೆ.
ಇದನ್ನೂ ಓದಿ: ಕೊರೊನಾ ವೈರಸ್ ನಿಯಂತ್ರಣ ಸಂಸ್ಥೆಯ ಮುಖ್ಯಸ್ಥರಿಗೆ ಕೊರೊನಾ ಸೋಂಕು