ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಲಕಾಯಲಬೆಟ್ಟ ಲಕ್ಷ್ಮೀವೆಂಕಟೇಶ್ವರಸ್ವಾಮಿಯ ಬ್ರಹ್ಮರಥೋತ್ಸವ : ಮೀನಾಕ್ಷಿ ಫೌಂಡೇಶನ್ ಸೇವಾಕಾರ್ಯದಲ್ಲಿನ ಕೆ.ಹೆಚ್.ಭಾಗಿ ರಾಜಕೀಯದ ಲೇಪನ

ಸಮಾಜ ಸೇವಕ ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ನಡೆದ ಅನ್ನದಾನ ಕಾರ್ಯಕ್ರಮಕ್ಕೆ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಭಾಗವಹಿಸಿ, ಭಕ್ತಾದಿಗಳಿಗೆ ಒಟ್ಟಾಗಿ ಅನ್ನದಾನಕ್ಕೆ ಚಾಲನೆ ನೀಡಿರುವುದು ಕ್ಷೇತ್ರದ ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ತಲಕಾಯಲಬೆಟ್ಟ ಲಕ್ಷ್ಮೀವೆಂಕಟೇಶ್ವರಸ್ವಾಮಿಯ ಬ್ರಹ್ಮರಥೋತ್ಸವ

-

Ashok Nayak
Ashok Nayak Feb 4, 2026 10:14 PM

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲ ಬೆಟ್ಟದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮರಥೋತ್ಸವದ ಅಂಗವಾಗಿ ಮೀನಾಕ್ಷಿ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಅನ್ನದಾನ ಕಾರ್ಯಕ್ರಮ ಇದೀಗ ಧಾರ್ಮಿಕ ಸೇವೆಗಿಂತ ಹೆಚ್ಚು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಸಮಾಜ ಸೇವಕ ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ನಡೆದ ಅನ್ನದಾನ ಕಾರ್ಯಕ್ರಮಕ್ಕೆ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಭಾಗವಹಿಸಿ, ಭಕ್ತಾದಿಗಳಿಗೆ ಒಟ್ಟಾಗಿ ಅನ್ನದಾನಕ್ಕೆ ಚಾಲನೆ ನೀಡಿರುವುದು ಕ್ಷೇತ್ರದ ರಾಜಕೀಯ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ಕಾರ್ಯಕ್ರಮದ ವೇದಿಕೆಯಲ್ಲೇ ನರಸಿಂಹಮೂರ್ತಿ ಅವರು “ಕೆ.ಎಚ್.ಮುನಿಯಪ್ಪ ನಮ್ಮ ಗುರುಗಳು” ಎಂದು ಹೇಳಿಕೊಂಡಿರುವುದು, ಧರ್ಮ ಮತ್ತು ಸಮಾಜ ಸೇವೆಯ ಪವಿತ್ರ ವೇದಿಕೆ ಯನ್ನು ರಾಜಕೀಯ ಸಂದೇಶಕ್ಕಾಗಿ ಬಳಸಲಾಗಿದೆ ಎಂಬ ಟೀಕೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ಕೇವಲ ಗೌರವ ಸೂಚಕದ ಮಾತೇ? ಅಥವಾ ಮುಂದಿನ ರಾಜಕೀಯ ಪ್ರವೇಶದ ಹೆಜ್ಜೆಗೆ ಬೆಂಬಲದ ಘೋಷಣೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಇದನ್ನೂ ಓದಿ: Chikkaballapur News: ಹೆಣ್ಣು ಮಕ್ಕಳಿಗೆ ಅವಕಾಶ ನೀಡಿದಾಗಲೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ : ಟಿ.ಜಿ.ಶಿವಶಂಕರೇಗೌಡ

ಇದಕ್ಕೆ ಇನ್ನಷ್ಟು ಬಲ ನೀಡುವಂತೆ, ನರಸಿಂಹಮೂರ್ತಿ ಅವರು ತಮ್ಮ ಕುಟುಂಬದ ಹಿನ್ನೆಲೆ ಯನ್ನೂ ಕಾರ್ಯಕ್ರಮದಲ್ಲೇ ಪ್ರಸ್ತಾಪಿಸಿದ್ದು ಯಾಕೆ ಎಂದು ಕೇಳುವಂತಾಗಿದೆ. ನರಸಿಂಹಮೂರ್ತಿ ಮಾತನಾಡಿ “ಕೆ.ಎಚ್. ಮುನಿಯಪ್ಪ ಅವರು ನಮ್ಮ ತಂದೆಯ ಆತ್ಮೀಯ ಸ್ನೇಹಿತರು. 1970–78ರ ಅವಧಿಯಲ್ಲಿ ನಮ್ಮ ತಂದೆಯವರು ರಾಜಕೀಯವಾಗಿ ಸಕ್ರಿಯರಾಗಿದ್ದ ಸಂದರ್ಭದಲ್ಲಿ ಮುನಿಯಪ್ಪ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು” ಎಂದು ಅವರು ಹೇಳಿದ್ದಾರೆ. ಇದು ಕೇವಲ ವೈಯಕ್ತಿಕ ಸ್ನೇಹದ ನೆನಪೇ? ಅಥವಾ ರಾಜಕೀಯ ವಂಶಾವಳಿಯನ್ನು ಜನ ಮುಂದೆ ಇಡುವ ಪ್ರಯತ್ನವೇ? ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ.

ಇನ್ನೂ, ಇಬ್ಬರೂ ನಾಯಕರು ಒಟ್ಟಾಗಿ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ‘ಆಶೀರ್ವಾದದ ರಾಜಕಾರಣ’ದ ಸ್ಪಷ್ಟ ಸಂಕೇತ ಎಂದು ಕ್ಷೇತ್ರದ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಮಾಜ ಸೇವೆಯ ಮುಖವಾಡದೊಳಗೆ ರಾಜಕೀಯ ಪ್ರವೇಶಕ್ಕೆ ನೆಲಹಾಸುವ ಪ್ರಯತ್ನ ಇದಾಗಿದೆಯೇ ಎಂಬ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ.

ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಹಿರಿಯ ನಾಯಕರು ಹಾಗೂ ನಿಷ್ಠಾವಂತ ಕಾರ್ಯಕರ್ತರು ಇದ್ದರೂ, ಧಾರ್ಮಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಈ ರೀತಿಯ ರಾಜಕೀಯ ಸಂದೇಶಗಳು ಹೊರಬೀಳುತ್ತಿರುವುದು ಅಸಮಾಧಾನಕ್ಕೂ ಕಾರಣವಾಗಿದೆ. ಒಟ್ಟಿನಲ್ಲಿ, ಅನ್ನದಾನದ ಪವಿತ್ರತೆಯ ನಡುವೆ ರಾಜಕೀಯ ಲೆಕ್ಕಾಚಾರಗಳ ವಾಸನೆ ಮೂಡಿರುವುದು ಶಿಡ್ಲಘಟ್ಟ ಕ್ಷೇತ್ರ ರಾಜಕೀಯದಲ್ಲಿ ಹೊಸ ಚರ್ಚೆಗೆ ಇಂಧನ ನೀಡಿದೆ.