ಹವಾಮಾನ ವೈಪರೀತ್ಯ: ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಮಾನ ದೆಹಲಿ ಬದಲು ಜೈಪುರದಲ್ಲಿ ಲ್ಯಾಂಡಿಂಗ್
Siddaramaiah: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ದೆಹಲಿಯತ್ತ ಹೊರಟಿದ್ದ ಸಿದ್ದರಾಮಯ್ಯ ಅವರಿದ್ದ ವಿಶೇಷ ವಿಮಾನ ಜೈಪುರದಲ್ಲಿ ಇಳಿದಿದೆ. ಹವಾಮಾನ ವೈಪರೀತ್ಯದ ಕಾರಣ ವಿಮಾನವನ್ನು ಜೈಪುರದಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ (ಸಂಗ್ರಹ ಚಿತ್ರ) -
ಜೈಪುರ, ಮೇ 28: ಸಿದ್ದರಾಮಯ್ಯ (Siddaramaiah) ಅವರ 3 ವರ್ಷಗಳ ಆಡಳಿತ ಅಂತ್ಯಗೊಂಡಿದ್ದು, ಹೈಕಮಾಂಡ್ ಸೂಚನೆ ಬೆನ್ನಲ್ಲೇ ರಾಜೀನಾಮೆ ಸಲ್ಲಿಸಿದ್ದಾರೆ. ಗುರುವಾರ ಲೋಕ ಭವನಕ್ಕೆ ತೆರಳಿ ಸಿದ್ದರಾಮಯ್ಯ ರಾಜೀನಾಮೆ ಪತ್ರ ನೀಡಿದ್ದಾರೆ. ಅದಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲು ದೆಹಲಿಯತ್ತ ಹೊರಟಿದ್ದಾರೆ. ಆದರೆ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಪ್ರಯಾಣಿಸುತ್ತಿದ್ದ ವಿಮಾನ ಹವಾಮಾನ ವೈಪರೀತ್ಯಕ್ಕೆ ಸಿಲುಕಿದ್ದು, ದೆಹಲಿ ಬದಲು ರಾಜಸ್ಥಾನದ ಜೈಪುರದಲ್ಲಿ ಲ್ಯಾಂಡಿಂಗ್ ಆಗಿದೆ.
ವಾತಾವರಣ ದಿಢೀರ್ ಆಗಿ ಬದಲಾಗಿದ್ದು, ದೆಹಲಿಯಲ್ಲಿ ಮಿಂಚು, ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಜತೆಗೆ ಶಕ್ತವಾಗಿ ಗಾಳಿಯೂ ಬೀಸುತ್ತಿರುವುದರಿಂದ ವಿಮಾನವನ್ನು ಅಲ್ಲಿ ಇಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪೈಲಟ್ ಸುರಕ್ಷಿತವಾಗಿ ಜೈಪುರದಲ್ಲಿ ಇಳಿಸಿದ್ದು, ವಿಮಾನದಲ್ಲಿದ್ದವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಅಹಿಂದ ನಾಯಕ, ಕರ್ನಾಟಕದ ದೀರ್ಘಾವಧಿಯ ಸಿಎಂ ಸಿದ್ದರಾಮಯ್ಯ: ನಡೆದು ಬಂದ ಹಾದಿ ಹೀಗಿತ್ತು
ʼʼದೆಹಲಿ ಸುತ್ತಮುತ್ತ ಭಾರಿ ಗಾಳಿಯೊಂದಿಗೆ ಜೋರಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಎಟಿಎಸ್ (Air Traffic Control) ಸೂಚನೆಯ ಮೇರೆಗೆ ಸಿಎಂ ಇದ್ದ ವಿಮಾನದ ಮಾರ್ಗವನ್ನು ಜೈಪುರದತ್ತ ಬದಲಾಯಿಸಿ ಅಲ್ಲಿ ಇಳಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾತಾವರಣ ತಿಳಿಯಾದ ಬಳಿಕ ಈ ವಿಶೇಷ ವಿಮಾನ ದೆಹಲಿಯತ್ತ ಹಾರಲಿದೆ.
ಯಾರೆಲ್ಲ ಇದ್ದರು?
ಈ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್‌ನ ಪ್ರಮುಖರು ಮತ್ತು ರಾಜ್ಯದ ಸಚಿವರ ದೊಡ್ಡ ದಂಡೇ ಇದೆ ಎನ್ನಲಾಗಿದೆ. ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಎ.ಎಸ್. ಪೊನ್ನಣ್ಣ, ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಅಭಿಷೇಕ್ ದತ್ ವಿಮಾನದಲ್ಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಶುಕ್ರವಾರ ಈ ನಾಯಕರೆಲ್ಲ ರಾಹುಲ್ ಗಾಂಧಿ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ರಾಜ್ಯಪಾಲ
ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಧ್ಯ ಪ್ರದೇಶ ಪ್ರವಾಸದಲ್ಲಿದ್ದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಇದೀಗ ಥಾವರ್ ಚಂದ್ ಗೆಹ್ಲೋಟ್ ಬೆಂಗಳೂರಿಗೆ ಆಗಮಿಸಿದ್ದು, ರಾಜೀನಾಮೆ ಪತ್ರಕ್ಕೆ ಅಂಕಿತ ಹಾಕಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ರಾಜ್ಯಪಾಲರು ತಮ್ಮ ರಾಜೀನಾಮೆ ಪತ್ರ ಅಂಗೀಕರಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ತಮ್ಮ ಸಂಬಂಧಿಕರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರು ತುರ್ತಾಗಿ ಮಧ್ಯ ಪ್ರದೇಶಕ್ಕೆ ತೆರಳಿದ್ದರು ಎನ್ನಲಾಗಿದೆ.
ವಿದಾಯ ಭಾಷಣದಲ್ಲಿ ಮೇರು ನಟ ಡಾ. ರಾಜ್‌ಕುಮಾರ್ ಸ್ಮರಿಸಿದ ಸಿದ್ದರಾಮಯ್ಯ; ಹೇಳಿದ್ದೇನು?
ಡಿಕೆಶಿಯೂ ದೆಹಲಿಗೆ
ಇತ್ತ ರಾಜ್ಯ ರಾಜಕೀಯದಲ್ಲಿ ಚಟುವಟಿಕೆ ಗರಿಗರದರಿದ್ದು ಡಿ.ಕೆ. ಶಿವಕುಮಾರ್ ಕೂಡ ಹೈಕಮಾಂಡ್ ಜತೆ ಚರ್ಚಿಸಲು ದಹಲಿಯತ್ತ ಹೊರಟಿದ್ದಾರೆ. ನೂತನ ಮುಖ್ಯಮಂತ್ರಿ ನೇಮಕ, ಅಧಿಕಾರ ಹಂಚಿಕೆ, ಸಚಿವ ಸಂಪುಟ ಪುನಾರಚನೆ ಮತ್ತು ಇತರ ಆಂತರಿಕ ರಾಜಕೀಯ ಚರ್ಚೆಗಳ ಕುರಿತು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಲು ಅವರು ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಭೇಟಿ ವೇಳೆ ಪ್ರಮಾಣ ವಚನ ಸ್ವೀಕಾರ ದಿನಾಂಕವೂ ನಿಗದಿಪಡಿಸುವ ಸಾಧ್ಯತೆ ಇದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.