SIR: 2002ರ ವಿವರ ಕಡ್ಡಾಯವಲ್ಲ; ಮಹತ್ವದ ಮಾಹಿತಿ ಹಂಚಿಕೊಂಡ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್
V Anbukumar: ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಪ್ರಕ್ರಿಯೆ ರಾಜ್ಯದಲ್ಲಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಅದಾಗ್ಯೂ ಈ ಬಗ್ಗೆ ಮೂಡಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಇದೀಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟನೆ ನೀಡಿ 2002ರ ಸ್ವಯಂ ಹಾಗೂ ಪೋಷಕರ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಜು. 23: ವಿಶೇಷ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ರಾಜ್ಯದಲ್ಲಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮನೆ ಮನೆ ಎಣಿಕೆ ನಮೂನೆ ವಿತರಣೆಯಲ್ಲಿ ಕರ್ನಾಟಕ ಶೇಕಡಾ 99.89ರಷ್ಟು ಸಾಧನೆ ಮಾಡಿದೆ. ಇದೀಗ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ (V Anbukumar) ಮುಖ್ಯ ಮಾಹಿತಿ ಹಂಚಿಕೊಂಡಿದ್ದು, ಎಸ್‌ಐಆರ್ ನಮೂನೆಗಳಲ್ಲಿ 2002ರ ಸ್ವಯಂ ಹಾಗೂ ಪೋಷಕರ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದಾಗ್ಯೂ ಆಗಸ್ಟ್ 8ರೊಳಗೆ ನಾಗರಿಕರು ತಮ್ಮ ನಮೂನೆಗಳನ್ನು ಸಲ್ಲಿಸುವುದು ಕಡ್ಡಾಯ.
ʼʼಭೌತಿಕ ನಮೂನೆ ಪಡೆದಿದ್ದರೂ, ಅದನ್ನು ಆನ್‌ಲೈನ್ ಮೂಲಕವೂ ಭರ್ತಿ ಮಾಡಿ ಸಲ್ಲಿಸಬಹುದು. 2002ರ ದಾಖಲೆಗಳು ಲಭ್ಯವಿಲ್ಲದಿದ್ದರೂ ನಮೂನೆ ಸಲ್ಲಿಸಲು ಅವಕಾಶವಿದೆ. ಬಳಿಕ ಅಗತ್ಯವಿದ್ದರೆ ನಮೂನೆಯಲ್ಲಿ ಉಲ್ಲೇಖಿಸಿರುವ 12 ದಾಖಲೆಗಳಲ್ಲಿ ಒಂದನ್ನು ಸಲ್ಲಿಸುವಂತೆ ನೋಟಿಸ್ ನೀಡಲಾಗುತ್ತದೆ. ಯಾವ ದಾಖಲೆ ಬೇಕು ಎಂಬುದನ್ನು ಸಂಬಂಧಿತ ಚುನಾವಣಾ ನೋಂದಣಿ ಅಧಿಕಾರಿ ಅಂತಿಮವಾಗಿ ನಿರ್ಧರಿಸಲಿದ್ದಾರೆʼʼ ಎಂದು ಹೇಳಿದ್ದಾರೆ.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ SIRನಲ್ಲಿ ಭಾಗಿಯಾಗಿ ಪ್ರೇರಣೆಯಾದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
47.02 ಲಕ್ಷ ಮಂದಿಯ ಹೆಸರು ಡಿಲೀಟ್
ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಿಂದ 47.02 ಲಕ್ಷ ಮಂದಿಯ ಹೆಸರು ಡಿಲಿಟ್ ಆಗಲಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ. ಪತ್ತೆಯಾಗದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ ಮಾಡಿಸಿರುವವರು ಮತ್ತು ಇತರ ಎಂಬುದಾಗಿ ವರ್ಗೀಕರಿಸಿ ಇವರ ಹೆಸರನ್ನು ಡಿಲೀಟ್ ಮಾಡಲಾಗುತ್ತದೆ ಎಂದಿದ್ದಾರೆ.
ʼʼ2002ರ ಮತದಾರರ ಪಟ್ಟಿಯಲ್ಲಿ ವಿವರ ಇಲ್ಲದಿದ್ದರೂ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಎನ್ಯೂಮರೇಷನ್ ಅರ್ಜಿಯನ್ನು ಬಿಎಲ್‌ಒಗಳಿಗೆ ಸಲ್ಲಿಸಬಹುದು. ರಾಜ್ಯದ 5.54 ಕೋಟಿ ಮತದಾರರ ಪೈಕಿ ಶೇಕಡಾ 91.61ರಷ್ಟು ಮಂದಿಯ ವಿವರಗಳನ್ನು, 2002ರ ಮತದಾರರ ಪಟ್ಟಿಯಲ್ಲಿನ ವಿವರಗಳಿಗೆ ಮ್ಯಾಪಿಂಗ್ ಮಾಡಲಾಗಿದೆ. ಒಂದೊಮ್ಮೆ ಮ್ಯಾಪಿಂಗ್ ಆಗದೇ ಇದ್ದವರು, ಎನ್ಯೂಮರೇಷನ್ ಅರ್ಜಿಯ ಕೊನೆಯ ಕಾಲಂನಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅಂತಹವರ ಹೆಸರು ಮುಂದಿನ ಆಗಸ್ಟ್ 8ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳಲಿದೆʼʼ ಎಂದು ಹೇಳಿದ್ದಾರೆ.
ಕುಟುಂಬದ ಯಾವುದೇ ಸದಸ್ಯರ ಸಹಿ ಮಾನ್ಯ
ʼʼಮನೆಗೆ ಭೇಟಿ ನೀಡಿದ ವೇಳೆ ಸಂಬಂಧಪಟ್ಟ ಮತದಾರರು ಮನೆಯಲ್ಲಿ ಇಲ್ಲದಿದ್ದರೆ, ಕುಟುಂಬದ ಯಾವುದೇ ವಯಸ್ಕ ಸದಸ್ಯರು ಅವರ ಪರವಾಗಿ ಎಣಿಕೆ ನಮೂನೆಗೆ ಸಹಿ ಮಾಡಿ ಸಲ್ಲಿಸಬಹುದು. ಹೀಗಾಗಿ ಮತದಾರರು ಮನೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಫಾರ್ಮ್‌ಗಳನ್ನು ತಡೆಹಿಡಿಯಬಾರದುʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2000-2006ರ ಅವಧಿಯ ದಾಖಲೆಗಳಿಲ್ಲದಿದ್ದರೂ ಫಾರ್ಮ್ ಸಲ್ಲಿಸಲು ಅವಕಾಶವಿದೆ. ಇದುವರೆಗೆ 17,19,836 (ಶೇ. 3.1) ಫಾರ್ಮ್‌ಗಳು ಆ ದಾಖಲೆಗಳಿಲ್ಲದೆ ಸಲ್ಲಿಕೆಯಾಗಿವೆ. ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಗಮನಿಸಿ; ಎಸ್‌ಐಆರ್ ಪ್ರಕ್ರಿಯೆ ವೇಳೆ 2002ರ ಮಾಹಿತಿ ನಮೂದಿಸುವುದು ಕಡ್ಡಾಯವಲ್ಲ
ಯಾವ ದಾಖಲೆ ಮಾನ್ಯ?
''ಪಿಸಿಆರ್, ಸರ್ಕಾರಿ ಮುದ್ರೆ ಅಥವಾ ನಿರ್ದಿಷ್ಟ ದಾಖಲೆಯನ್ನೇ ಕಡ್ಡಾಯ ಎಂದು ಹೇಳಲು ಸಾಧ್ಯವಿಲ್ಲ. ಚುನಾವಣಾ ಆಯೋಗವೇ ಎಣಿಕೆ ನಮೂನೆಯ ಹಿಂಭಾಗದಲ್ಲಿ ಮಾನ್ಯ ದಾಖಲೆಗಳ ಪಟ್ಟಿ ಪ್ರಕಟಿಸಿದ್ದು, ಮತದಾರರು ಅವುಗಳಲ್ಲಿ ಯಾವುದಾದರೂ ದಾಖಲೆ ಸಲ್ಲಿಸಬಹುದು. ಸಲ್ಲಿಸಿದ ದಾಖಲೆಗಳನ್ನು ಸಂಬಂಧಿತ ಇಆರ್‌ಒ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಯಾವ ದಾಖಲೆ ಬೇಕು, ಎಷ್ಟು ದಾಖಲೆ ಬೇಕು ಎಂಬುದನ್ನು ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಅಗತ್ಯವಿದ್ದರೆ ಸ್ಪಷ್ಟಪಡಿಸಲಾಗುವುದುʼʼ ಎಂದು ಅನ್ಬುಕುಮಾರ್ ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.