Gubbi News: ಏ.22 ಹಾಗೂ 23 ರಂದು ಗುಬ್ಬಿ ಶ್ರೀ ಮಹೇಶ್ವರಮ್ಮ ದೇವಿ ದೇವಾಲಯ ನೂತನ ಶಿಲಾ ದೇವಾಲಯ ಲೋಕಾರ್ಪಣೆ
ಸೀನಪ್ಪನಹಳ್ಳಿ ಶ್ರೀ ದೊಡ್ಡಮ್ಮದೇವಿ, ಶ್ರೀ ದಾಳಿಯಮ್ಮದೇವಿ, ತಿಪ್ಪೂರು ಶ್ರೀ ಕೋಡಿಕೆಂಪಮ್ಮ ದೇವಿ, ಪೆಮ್ಮನಹಳ್ಳಿ ಶ್ರೀ ಆಂಜನೇಯಸ್ವಾಮಿ ಈ ಪರಿಹಾರ ದೇವರುಗಳನ್ನು ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ಬುಧವಾರ ಸಂಜೆ ಮೆರವಣಿಗೆ ಮೂಲಕ ಕರೆ ತಂದು ಆಲಯ ಪ್ರವೇಶ, ಹೋಮ ಹವನಗಳು ನಡೆಸಿ ಪೂರ್ಣಾಹುತಿ ನಡೆಸಲಾಗುವುದು
-
ಗುಬ್ಬಿ: ಪಟ್ಟಣದ ಮಡಿವಾಳರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮಹೇಶ್ವರಮ್ಮ ದೇವಿಯ ನೂತನ ಶಿಲಾ ದೇವಾಲಯವನ್ನು ಇದೇ ತಿಂಗಳ 22 ಹಾಗೂ 23 ರಂದು ಹಲವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆ ಗೊಳಿಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಪಟ್ಟಣದ ಶ್ರೀ ಮಹೇಶ್ವರಮ್ಮ ದೇವಿ ದೇವಾಲಯದ ಆವರಣದಲ್ಲಿ ಜೀರ್ಣೋದ್ದಾರ ಸೇವಾ ಟ್ರಸ್ಟ್ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಏ.22 ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಣಪತಿ ಪೂಜೆ, ಗಂಗಾಪೂಜೆ ಜೊತೆಗೆ ಸಕಲ ಪರಿವಾರ ದೇವತೆಗಳೊಂದಿಗೆ ಆಲಯ ಪ್ರವೇಶ, ಹೋಮಹವನಗಳು ನಡೆಸಲಾಗುವುದು. ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.
ಸೀನಪ್ಪನಹಳ್ಳಿ ಶ್ರೀ ದೊಡ್ಡಮ್ಮದೇವಿ, ಶ್ರೀ ದಾಳಿಯಮ್ಮದೇವಿ, ತಿಪ್ಪೂರು ಶ್ರೀ ಕೋಡಿಕೆಂಪಮ್ಮ ದೇವಿ, ಪೆಮ್ಮನಹಳ್ಳಿ ಶ್ರೀ ಆಂಜನೇಯಸ್ವಾಮಿ ಈ ಪರಿಹಾರ ದೇವರುಗಳನ್ನು ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ಬುಧವಾರ ಸಂಜೆ ಮೆರವಣಿಗೆ ಮೂಲಕ ಕರೆ ತಂದು ಆಲಯ ಪ್ರವೇಶ, ಹೋಮ ಹವನಗಳು ನಡೆಸಿ ಪೂರ್ಣಾಹುತಿ ನಡೆಸಲಾಗುವುದು ಎಂದರು.
ಏಪ್ರಿಲ್ 23 ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ಅಮ್ಮನವರಿಗೆ ನೇತ್ರೋನ್ಮಿಲನ ಕಾರ್ಯಕ್ರಮ ನಡೆಸಲಾಗುವುದು. ಬೆಳಿಗ್ಗೆ 7.30 ಕ್ಕೆ ಕಳಸ ಪ್ರತಿಷ್ಠಾಪನೆಯನ್ನು ತೆವಡೇಹಳ್ಳಿ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ಹಾಗೂ ತೊರೆಮಠದ ಶ್ರೀ ಅಟವಿ ಚನ್ನಬಸವ ಸ್ವಾಮೀಜಿ ನಡೆಸಿ ಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೃಹಮಂತ್ರಿ ಡಾ.ಜಿ.ಪರಮೇಶ್ವರ್, ಶಾಸಕ ಎಸ್.ಆರ್.ಶ್ರೀನಿವಾಸ್(Home Minister Dr. G. Parameshwar, MLA SR Srinivas) ಹಾಗೂ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಈರಣ್ಣ ಮಾತನಾಡಿ ಅನಾದಿ ಕಾಲದಿಂದಲೂ ಶ್ರೀ ಮಹೇಶ್ವರಮ್ಮ ದೇವಿ ಪೂಜೆ ಇಲ್ಲಿ ನಡೆದು ಬಂದಿದೆ. ಶಿಥಿಲಾವಸ್ಥೆಲ್ಲಿದ್ದ ದೇವಾಲಯಕ್ಕೆ ಜೀವ ತುಂಬುವ ಕೆಲಸ ಸಮಿತಿ ಆರಂಭಿಸಿ ಬಹುಬೇಗ ನೂತನ ಶಿಲಾ ದೇವಾಲಯ ನಿರ್ಮಾಣ ಮಾಡಿದ್ದಾ ರೆ. ಇದೇ ತಿಂಗಳ 22, 23 ರಂದು ಎರಡು ದಿನಗಳ ಕಾಲ ಲೋಕಾರ್ಪಣೆ ಮತ್ತು ಸಂಪ್ರೋಕ್ಷಣೆ ಹಾಗೂ ನೂತನ ಸ್ಥಿರಬಿಂಬ ಪ್ರತಿಷ್ಠಾಪನೆ, ಮಹಾಕುಂಭಾಭಿಷೇಕ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಆಗಮಿಸಲಿದ್ದಾರೆ ಎಂದರು.
ಶ್ರೀ ಮಹೇಶ್ವರಮ್ಮ ದೇವಿ ದೇವಾಲಯ ಜೀರ್ಣೋದ್ಧಾರ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಡಿ.ಬಸವರಾಜು ಮಾತನಾಡಿ ನೂತನ ಶಿಲಾ ದೇವಾಲಯ ನಿರ್ಮಾಣಕ್ಕೆ ಸಾಕಷ್ಟು ಭಕ್ತರು ಸಹಕಾರ ನೀಡಿದ್ದಾರೆ. ರೈತ ಸಂಘದ ಗೋವಿಂದರಾಜು ಅವರು ಅಮ್ಮನವರ ಸ್ಥಿರ ಮೂರ್ತಿ ದಾನವಾಗಿ ನೀಡಿದ್ದಾರೆ. ಕೆನರಾ ಬ್ಯಾಂಕ್ ಎಜಿಎಂ ಗಂಗೇಶ್ ಗುಂಜನ್ ಅವರು ದಾಸೋಹ ವ್ಯವಸ್ಥೆಯನ್ನು ಮಾಡಿದ್ದಾರೆ. ಎರಡು ದಿನದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣರಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಜಿ.ಡಿ.ಗಂಗಾಧರ್, ದೇವಾಲಯ ಮುಖ್ಯಸ್ಥ ದೊಡ್ಡ ಕೆಂಚಯ್ಯ, ಸದಸ್ಯರಾದ ಮಹೇಶ್, ಯತೀಶ್, ತೇಜು, ವೇಣು, ನವೀನ್, ರೈತ ಸಂಘದ ಯತೀಶ್, ಜಗದೀಶ್, ಗಂಗರೇವಯ್ಯ ಇತರರು ಇದ್ದರು.