ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಿವಪುರಿ ಅಪಘಾತ: ತಪ್ಪು ಮಾಡಿದವನಿಗೆ ಶಿಕ್ಷೆಯಾಗಲಿ ಅಂದ ಶಾಸಕ; ಚಿಕಿತ್ಸೆಗೂ ಹಣವಿಲ್ಲದೆ ಕಣ್ಣೀರಿಡುತ್ತಿದ್ದಾರೆ ಸಂತ್ರಸ್ತರು

Shivapuri Accident: ಮಧ್ಯಪ್ರದೇಶದ ಶಿವಪುರಿಯಲ್ಲಿ ಬಿಜೆಪಿ ಶಾಸಕ ಪ್ರೀತಮ್ ಲೋಧಿ ಅವರ ಪುತ್ರ ದಿನೇಶ್ ಲೋಧಿಗೆ ಸೇರಿದ ಥಾರ್‌ ಐವರಿಗೆ ಡಿಕ್ಕಿ ಹೊಡೆದ ಪ್ರಕರಣ ವಿವಾದಕ್ಕೆ ಕಾರಣವಾಗಿದೆ. ಗಾಯಾಳುಗಳು ಯಾವುದೇ ಸಹಾಯ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ. ಪ್ರಕರಣದ ವಿರುದ್ಧ ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಶಿವಪುರಿ ಅಪಘಾತ: ಶಾಸಕ ಪುತ್ರನ ವಿರುದ್ಧ ಪ್ರಕರಣ ದಾಖಲು

ಹುಚ್ಚಾಟ ಮೆರೆದ ಬಿಜೆಪಿ ಶಾಸಕನ ಪುತ್ರ -

Profile
Sushmitha Jain Apr 18, 2026 11:02 PM

ಭೋಪಾಲ್‌, ಏ. 18: ಮಧ್ಯಪ್ರದೇಶದ (Madhya Pradesh) ಶಿವಪುರಿಯಲ್ಲಿ (Shivapuri) ಬಿಜೆಪಿ (BJP) ಶಾಸಕರೊಬ್ಬರ ಪುತ್ರ ತನ್ನ ಥಾರ್ ಎಸ್‌ಯುವಿ (Thar SUV) ವಾಹನದಿಂದ ಐವರಿಗೆ ಡಿಕ್ಕಿ ಹೊಡೆದ ಪ್ರಕರಣ ಈಗ ತೀವ್ರ ಸ್ವರೂಪದ ವಿವಾದವಾಗಿ ಬದಲಾಗಿದೆ. ಘಟನೆಯಲ್ಲಿ ಗಾಯಗೊಂಡ ಸಂತ್ರಸ್ತರು ತಮಗೆ ಆರೋಪಿಯ ಕಡೆಯಿಂದ ಯಾವುದೇ ಸಹಾಯ ಸಿಕ್ಕಿಲ್ಲ ಎಂದು ಆರೋಪಿಸಿದ್ದು, ಪ್ರಸ್ತುತ ತಮ್ಮ ಚಿಕಿತ್ಸಾ ವೆಚ್ಚವನ್ನು ಭರಿಸಲು ಹರಸಾಹಸ ಪಡುತ್ತಿದ್ದಾರೆ.

ಪಿಚೋರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಲೋಧಿ (Preetam Lodhi) ಅವರ ಪುತ್ರ ದಿನೇಶ್ ಲೋಧಿ (Dinesh Lodhi) ಈ ವಾರದ ಆರಂಭದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಮೂವರು ಪುರುಷರು ಮತ್ತು ಇಬ್ಬರು ಮಹಿಳಾ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದರು. ಸಂಜಯ್ ಪರಿಹಾರ್, ಆಶಿಶ್ ಪರಿಹಾರ್, ಅಂಶುಲ್ ಪರಿಹಾರ್, ಸೀತಾ ವರ್ಮಾ ಮತ್ತು ಪೂಜಾ ಸೋನಿ ಗಾಯಗೊಂಡವರು.

ಸಂತ್ರಸ್ತರ ಅಳಲು

ಗಾಯಾಳುಗಳ ಪೈಕಿ ಸಂಜಯ್ ಪರಿಹಾರ್ ಮಾತನಾಡಿ, "ನಾವು ಇಬ್ಬರು ಪೊಲೀಸರೊಂದಿಗೆ ಶಾಸಕರನ್ನು ಭೇಟಿ ಮಾಡಲು ಹೋಗಿದ್ದೆವು. ಆದರೆ ಅವರು ಜಿಮ್‌ಗೆ ಹೋಗುತ್ತಿದ್ದೇನೆ ಎಂದು ಹೇಳಿ, ನಂತರ ಇನ್ಸ್‌ಪೆಕ್ಟರ್‌ಗೆ ಕರೆ ಮಾಡುವುದಾಗಿ ತಿಳಿಸಿ ನಮ್ಮನ್ನು ಕಳುಹಿಸಿದರು. ಆದರೆ ನಂತರ ನಮಗೆ ಯಾವುದೇ ಕರೆ ಬರಲಿಲ್ಲ ಮತ್ತು ಚಿಕಿತ್ಸೆಗೆ ಯಾವುದೇ ವ್ಯವಸ್ಥೆ ಮಾಡಲಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಲೆ ಮತ್ತು ಬೆನ್ನಿನ ಕೆಳಭಾಗಕ್ಕೆ ಗಾಯ ಮಾಡಿಕೊಂಡಿರುವ ಶಾಲಾ ಶಿಕ್ಷಕಿ ಸೀತಾ ವರ್ಮಾ ತಮ್ಮ ಸ್ವಂತ ಹಣದಿಂದಲೇ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಮಹಿಳಾ ಮೀಸಲು ಮಸೂದೆ ಸೋಲಿಸಿದ ಇಂಡಿ ಕೂಟವನ್ನು ದೇಶದ ನಾರಿಶಕ್ತಿ ಎಂದಿಗೂ ಕ್ಷಮಿಸಲ್ಲ: ಎಚ್‌ಡಿಕೆ

ಪೊಲೀಸ್ ಕ್ರಮ ಮತ್ತು ವಿವಾದ

ಈ ಪ್ರಕರಣದಲ್ಲಿ ಪೊಲೀಸರು ದಿನೇಶ್ ಲೋಧಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 281 ಮತ್ತು 125(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇವುಗಳು ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳಾಗಿದ್ದು, ಗರಿಷ್ಠ ಶಿಕ್ಷೆ ಏಳು ವರ್ಷಕ್ಕಿಂತ ಕಡಿಮೆ ಇರುವುದರಿಂದ ಆರೋಪಿಯನ್ನು ಬಂಧಿಸದೆ ಕೇವಲ ನೋಟಿಸ್ ನೀಡಿ ಕಳುಹಿಸಲಾಗಿದೆ. ಆರಂಭದಲ್ಲಿ ʼಅಪರಿಚಿತ ಚಾಲಕʼ ಎಂದು ಎಫ್‌ಐಆರ್ ದಾಖಲಿಸಲಾಗಿತ್ತು, ಆದರೆ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ನಂತರವಷ್ಟೇ ದಿನೇಶ್ ಲೋಧಿ ಹೆಸರನ್ನು ಸೇರಿಸಲಾಗಿದೆ.

ಇನ್ನು ದಿನೇಶ್ ಲೋಧಿ ಈ ಹಿಂದೆಯೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. 2023ರಲ್ಲಿ ಬೆದರಿಕೆ ಹಾಕಿದ ಆರೋಪ ಮತ್ತು 2024ರಲ್ಲಿ ಗ್ವಾಲಿಯರ್‌ನಲ್ಲಿ ನೆರೆಹೊರೆಯವರ ಮೇಲೆ ವಾಹನ ಹರಿಸಲು ಯತ್ನಿಸಿದ ಆರೋಪದ ಮೇಲೆ ಇವನು ಜೈಲು ಶಿಕ್ಷೆ ಅನುಭವಿಸಿದ್ದ ಎಂದು ವರದಿಯಾಗಿದೆ. ಈ ಬಾರಿ ಕೂಡ ಅಪಘಾತದ ನಂತರ "ನಾನು ಸೈರನ್ ಹಾಕಿದ್ದೆ, ನೀವು ಯಾಕೆ ಪಕ್ಕಕ್ಕೆ ಸರಿಯಲಿಲ್ಲ?" ಎಂದು ಸಂತ್ರಸ್ತರ ಮೇಲೆ ದಿನೇಶ್ ಲೋಧಿ ಕೂಗಾಡುತ್ತಿರುವ ವಿಡಿಯೊ ವೈರಲ್ ಆಗಿದೆ. ಶಾಸಕ ಪ್ರೀತಮ್ ಲೋಧಿ ಮಾತ್ರ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳಿಕೆ ನೀಡಿದ್ದಾರೆ.