ದೇವರಾಜ ಅರಸು ಬರುವುದಕ್ಕೂ ಮುನ್ನ ಭ್ರಷ್ಟಾಚಾರ ಇರಲಿಲ್ಲವೇ?: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರಶ್ನೆ
ತುಮಕೂರು ವಿಶ್ವವಿದ್ಯಾನಿಲಯ ಮತ್ತು ಡಿ.ದೇವರಾಜ ಅರಸು ಅಧ್ಯಯನ ಪೀಠದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಮುಖಿ ಅರಸು ಕೃತಿಯ ಲೋಕಾರ್ಪಣೆ ಮತ್ತು ʼಡಿ.ದೇವರಾಜ ಅರಸು ಸಮಸಮಾಜದ ಕನಸುಗಾರ' ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿದ್ದಾರೆ.
-
ತುಮಕೂರು: ದಿವಂಗತ ದೇವರಾಜ ಅರಸು ಅವರು ಅಧಿಕಾರಕ್ಕೆ ಬರುವುದಕ್ಕೂ ಮೊದಲು ಭ್ರಷ್ಟಾಚಾರವೇ ಇರಲಿಲ್ಲವೇ? ಎಲ್ಲರೂ ಸತ್ಯಹರಿಶ್ಚಂದ್ರರೇ ಇದ್ದರೇ? ಭ್ರಷ್ಟಾಚಾರದ ಆರೋಪ ಅರಸು ಒಬ್ಬರ ಮೇಲೆ ಯಾಕೆ ಬರುತ್ತದೆ. ಅವರಿಗಿಂತ ಹಿಂದೆ ಇದ್ದವರ ಮೇಲೆ ಯಾಕೆ ಬರೋದಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಅರಸು ಅವರು ಜಾರಿಗೊಳಿಸಿದ ಕಾರ್ಯಕ್ರಮಗಳೇ ಇದಕ್ಕೆ ಕಾರಣ ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಮತ್ತು ಡಿ.ದೇವರಾಜ ಅರಸು ಅಧ್ಯಯನ ಪೀಠದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಮುಖಿ ಅರಸು ಕೃತಿಯ ಲೋಕಾರ್ಪಣೆ ಮತ್ತು ಡಿ.ದೇವರಾಜ ಅರಸು ಸಮಸಮಾಜದ ಕನಸುಗಾರ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರಾಜ ಅರಸು ಸಣ್ಣ ಸಣ್ಣ ಸಮುದಾಯದ ನಾಯಕರನ್ನು ಗುರುತಿಸಿ ಅವರನ್ನು ವಿಧಾನಸಭೆ ಆಯ್ಕೆ ಆಗುವಂತೆ ಮಾಡಿದರು. ವೀರಪ್ಪ ಮೊಯ್ಲಿ ಆಯ್ಕೆಯಾಗುವಂತೆ ನೋಡಿಕೊಂಡರು. ಮೊಯ್ಲಿ ಅದೊಂದು ಸಣ್ಣ ಸಮಾಜ. ಕಾರ್ಕಳದಲ್ಲಿ ಅವರ ಜನಸಂಖ್ಯೆ ನೂರಕ್ಕೂ ಮೀರುವುದಿಲ್ಲ. ಅವರಿಗೆ ಅಸೆಂಬ್ಲಿಯ ಕನಸು ಕಾಣಲೂ ಸಾಧ್ಯವಿರಲಿಲ್ಲ. ಆದರೂ ಕಾರ್ಕಳದಿಂದ ಅಸೆಂಬ್ಲಿಗೆ ಬರುತ್ತಾರೆ. ಇದಕ್ಕೆ ಕಾರಣ ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಎಂದು ಹೇಳಿದರು.
ಇಂದು ವಿಧಾನಸಭೆ, ವಿಧಾನಪರಿಷತ್ ಮತ್ತು ಸಂಸತ್‌ನಲ್ಲಿ ಚರ್ಚೆ ನಡೆಯುತ್ತಿಲ್ಲ. ಬದಲಿಗೆ ಪರಸ್ಪರರು ದೂರಿಕೊಳ್ಳುವ ವ್ಯವಸ್ಥೆ ಇದೆ. ನೀನೆಷ್ಟು ಹೊಡೆದೆ ಎಂಬುದು ನನಗೆ ಗೊತ್ತಿಲ್ವ, ನೀನು ಬಹಳ ದೊಡ್ಡ ಮನುಷ್ಯ, ನಿಂದೆಲ್ಲ ತೆಗೀಲಾ ಎಂದು ಪರಸ್ಪರ ದೂಷಿಸಿಕೊಳ್ಳುವುದು ನಡೆಯುತ್ತಿದೆ. ಆದರೂ ಪವರ್ ಟ್ರಾನ್ಸ್‌ಫರ್ ಆಗುತ್ತದೆ. ಅಂತಹ ಭದ್ರ ಬುನಾದಿಯ ಮೇಲೆ ನಿಂತಿರುವ ಪ್ರಜಾಪ್ರಭುತ್ವ ದೇಶ ನಮ್ಮದು. ಆದರೆ ಈಗಿನ ಮಹಾನುಭಾವರುಗಳು ಈ ಪ್ರಜಾಪ್ರಭುತ್ವವನ್ನು ಮಾರಾಟ ಮಾಡಲು ಹೊರಟಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಪತಿ ವೆಂಕಟೇಶ್ವರಲು, ಮೌಲ್ಯಮಾಪನ ಕುಲಸಚಿವ ಮೋಹನ್, ಡಿ.ದೇವರಾಜ ಅರಸು ಅಧ್ಯಯನ ಪೀಠದ ಮುಖ್ಯಸ್ಥ ಗುಂಡೇಗೌಡ, ಲಕ್ಷ್ಮಿಕಾಂತರಾಜೇ ಅರಸ್ ಪ್ರೊ.ನಿತ್ಯಾನಂದ ಶೆಟ್ಟಿ, ಪ್ರೊ.ಗೀತಾ ವಸಂತ, ಪ್ರೊ.ಬಿ.ಕರಿಯಣ್ಣ, ಪ್ರಾಂಶುಪಾಲೆ ದಾಕ್ಷಾಯಣಿ ಇದ್ದರು.