ಉಗ್ರ ಸಂಘಟನೆಗೆ ಯುವಕರನ್ನು ಭರ್ತಿ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಗೆ 10 ವರ್ಷ ಜೈಲು
ಭಯೋತ್ಪಾದಕ ಚಟುವಟಿಕೆ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯುವಕನಿಗೆ 10 ವರ್ಷ ಕಠಿಣ ಜೈಲು ವಿಧಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯವು ಶಿರಸಿ ಮೂಲದ ಸಯ್ಯದ್ ಎಂ. ಇದ್ರಿಸ್ ಎಂಬಾತನಿಗೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
ಸಂಗ್ರಹ ಚಿತ್ರ -
ಶಿರಸಿ: ಭಯೋತ್ಪಾದಕ ಚಟುವಟಿಕೆ (Terrorist link) ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯುವಕನಿಗೆ 10 ವರ್ಷ ಕಠಿಣ ಜೈಲು ವಿಧಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯವು ಶಿರಸಿ ಮೂಲದ ಸಯ್ಯದ್ ಎಂ. ಇದ್ರಿಸ್ ಎಂಬಾತನಿಗೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ (LeT)ಗೆ ಯುವಕರನ್ನು ಭರ್ತಿ ಮಾಡುವ ಮತ್ತು ರ್ಯಾಡಿಕಲೈಸ್ ಮಾಡುವ ಸಂಚು ರೂಪಿಸಿದ ಆರೋಪದ ಮೇಲೆ ಸಯ್ಯದ್ ಎಂ. ಇದ್ರಿಸ್‌ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ನ್ಯಾಯಾಲಯವು ಇದ್ರಿಸ್‌ಗೆ 70,000 ರೂ. ದಂಡವನ್ನೂ ವಿಧಿಸಿದೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅಡಿ ಈ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. 2020ರ ಮಾರ್ಚ್‌ನಲ್ಲಿ ಪಶ್ಚಿಮ ಬಂಗಾಳದ ಬದುರಿಯಾ ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾದ ಪ್ರಕರಣವನ್ನು ಏಪ್ರಿಲ್‌ನಲ್ಲಿ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ತನಿಖೆಯಲ್ಲಿ ಇದ್ರಿಸ್ ಪಾಕಿಸ್ತಾನ್ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿ, ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಲಿಂ ಯುವಕರನ್ನು ಉಗ್ರ ಸಂಘಟನೆಗೆ ಆಕರ್ಷಿಸುವುದು, ರ್ಯಾಡಿಕಲೈಸ್ ಮಾಡುವುದು ಮತ್ತು ಭರ್ತಿ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದನು ಎಂದು ಸಾಬೀತಾಗಿತ್ತು.
ಇದ್ರಿಸ್ ಉಗ್ರ ಸಂಘಟನೆಗಳ ಸದಸ್ಯರಿದ್ದ ಸುಮಾರು 150 ಮಂದಿಯ ವಾಟ್ಸ್‌ಆಪ್ ಗ್ರೂಪ್‌ಗೆ ಸೇರಿದ್ದ. ಯುವಕರ ನೇಮಕಾತಿಗೆ ಸಂಬಂಧಿಸಿದಂತೆ ಆತನ ಸಾಕಷ್ಟು ಹಣ ಸಂದಾಯವಾಗುತ್ತಿತ್ತು. ಈತ ಯ ಶಿರಸಿ ತಾಲ್ಲೂಕಿನ ಅರೆಕೊಪ್ಪದವನು. ಮೊದಲು ಗೋವಾದಲ್ಲಿ ಗ್ಲಾಸ್ ಕಟ್ಟಿಂಗ್ ಕೆಲಸ ಮಾಡುತ್ತಿದ್ದ. ನಂತರ ಊರಿಗೆ ಮರಳಿ ಕೂಲಿ ಕೆಲಸ ಮಾಡುತ್ತಿದ್ದ. ಕೋವಿಡ್ ಸಮಯದಲ್ಲಿ ಊರಿನಲ್ಲಿ ತನ್ನ ಅಣ್ಣನ ಚಿಕನ್ ಸೆಂಟರ್ ನೋಡಿಕೊಳ್ಳುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇತರ ಆರೋಪಿಗಳೂ ಇದ್ದು, ಕೆಲವರು ಪಾಕಿಸ್ತಾನ್ ಮೂಲದವರು ಎಂದು ತಿಳಿದುಬಂದಿದೆ.