IPL 2025: ಆರ್ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಎಲ್ಲಾ 8 ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರ!
IPL 2025 Playoffs Scenario: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಅತ್ಯಂತ ನಿರ್ಣಯಕ ಹಂತವನ್ನು ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಹೊರತುಪಡಿಸಿದರೆ, ಇನ್ನುಳಿದ ಎಂಟೂ ತಂಡಗಳು ಕೂಡ ಪ್ಲೇಆಫ್ಸ್ ರೇಸ್ನಲ್ಲಿವೆ. ಈ ತಂಡಗಳ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ನಾಕ್ಔಟ್ ಹಂತಕ್ಕೆ ಬಹುತೇಕ ಲಗ್ಗೆ ಇಟ್ಟಿವೆ.



ಪ್ಲೇಆಫ್ಸ್ ರೇಸ್ನಲ್ಲಿ 8 ತಂಡಗಳು
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇಆಫ್ಸ್ ರೇಸ್ನ ಚಿತ್ರಣ ಇದೀಗ ಆಸಕ್ತದಾಯಕ ತಿರುವು ಪಡೆದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಟೂರ್ನಿಯಿಂದ ಈಗಾಗಲೇ ಎಲಿಮಿನೇಟ್ ಆಗಿವೆ. ನಾಲ್ಕು ಪ್ಲೇಆಫ್ಸ್ ಸ್ಥಾನಗಳಿಗೆ ಎಂಟು ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯುತ್ತಿದೆ. ಟೂರ್ನಿಯಲ್ಲಿ ಇನ್ನು 16 ಲೀಗ್ ಪಂದ್ಯಗಳು ಬಾಕಿ ಉಳಿದಿವೆ.

ತೀವ್ರ ಕುತೂಹಲ ಕೆರಳಿಸಿದ ಪ್ಲೇಆಫ್ಸ್ ಸ್ಪರ್ಧೆ
2025ರ ಐಪಿಎಲ್ ಪ್ಲೇಆಫ್ಸ್ಗೆ ಅರ್ಹತೆ ಪಡೆಯಲು ನಡೆಯುತ್ತಿರುವ ಹೋರಾಟ ತೀವ್ರ ರೋಮಾಂಚನಕಾರಿಯಾಗಿದೆ. ಎರಡು ತಂಡಗಳು ಹೊರಬಿದ್ದಿವೆ. ಆದರೆ ಎಂಟು ತಂಡಗಳು ಇನ್ನೂ ನಾಲ್ಕು ಸ್ಥಾನಗಳಿಗಾಗಿ ಕಠಿಣ ಪೈಪೋಟಿ ನಡೆಸುತ್ತಿವೆ. ಅಂದ ಹಾಗೆ ಪ್ಲೇಆಫ್ಸ್ ಅರ್ಹತೆ ಪಡೆಯಲು ಎಂಟು ತಂಡಗಳು ಇನ್ನೂ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಸೇರಿದಂತೆ ಪ್ರಮುಖ ಲೆಕ್ಕಾಚಾರಗಳನ್ನು ಇಲ್ಲಿ ವಿವರಿಸಲಾಗಿದೆ.

ಆರ್ಸಿಬಿಗೆ ಒಂದು ಗೆಲುವು ಅಗತ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ 11 ಪಂದ್ಯಗಳಲ್ಲಿ 16 ಅಂಕಗಳನ್ನು ಗಳಿಸಿದೆ. ಲಖನೌ ಸೂಪರ್ ಜಯಂಟ್ಸ್, ಸನ್ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತನ್ನ ಕೊನೆಯ ಮೂರು ಪಂದ್ಯಗಳನ್ನು ಆಡಬೇಕಾಗಿದೆ. ಈ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಪಡೆದರೆ, ಪ್ಲೇಆಫ್ಸ್ಗೆ ಅರ್ಹತೆ ಪಡೆಯಲಿದೆ. ಆದರೆ, ಇನ್ನುಳಿದ ಮೂರೂ ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನವನ್ನು ಉಳಿಸಿಕೊಳಗಳು ಆರ್ಸಿಬಿ ಎದುರು ನೋಡುತ್ತಿದೆ.

ಪಂಜಾಬ್ ಕಿಂಗ್ಸ್ಗೆ 2 ಗೆಲುವು ಬೇಕು
ಲಖನೌ ಸೂಪರ್ ಜಯಂಟ್ಸ್ ವಿರುದ್ದದ ಗೆಲುವಿನ ಮೂಲಕ ಪಂಜಾಬ್ ಕಿಂಗ್ಸ್, ಐಪಿಎಲ್ ಪ್ಲೇಆಫ್ಸ್ಗೆ ಇನ್ನಷ್ಟು ಸನಿಹವಾಗಿದೆ. ಪಂಜಾಬ್ ಕಿಂಗ್ಸ್ 11 ಪಂದ್ಯಗಳಿಂದ 15 ಅಂಕಗಳನ್ನು ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ತನ್ನ ಕೊನೆಯ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದರೆ ಪಂಜಾಬ್ ನಾಕ್ಔಟ್ಗೆ ಪ್ರವೇಶಿಸಲಿದೆ. ಒಂದು ವೇಳೆ ಒಂದನ್ನು ಗೆದ್ದರೂ ಅವಕಾಶವಿದೆ.

ಗುಜರಾತ್ ಮತ್ತು ಮುಂಬೈ ನಡುವೆ ಕಠಿಣ ಸ್ಪರ್ಧೆ
ಮುಂಬೈ ಇಂಡಿಯನ್ಸ್ 11 ಪಂದ್ಯಗಳಲ್ಲಿ 14 ಅಂಕಗಳನ್ನು ಕಲೆ ಹಾಕಿದೆ. ಆದರೆ ಗುಜರಾತ್ ಟೈಟನ್ಸ್ 10 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿದೆ. ಇದಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ 10 ಪಂದ್ಯಗಳಲ್ಲಿ 12 ಅಂಕಗಳನ್ನು ಹೊಂದಿಗೆ. ಮುಂದಿನ ದಿನಗಳಲ್ಲಿ ಮುಂಬೈ, ಗುಜರಾತ್ ಮತ್ತು ಡೆಲ್ಲಿ ತಂಡಗಳು ಪರಸ್ಪರ ಕಾದಾಟ ನಡೆಸಲಿವೆ. ಮುಂಬೈ ಮತ್ತು ಗುಜರಾತ್ಗೆ ಎರಡು ಗೆಲುವು ಅಗತ್ಯವಿದೆ. ಇನ್ನು ಡೆಲ್ಲಿ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿದೆ.

ಕೋಲ್ಕತಾ ಮತ್ತು ಲಖನೌ ತಂಡಗಳಿಗೂ ಅವಕಾಶ
ಕೋಲ್ಕತ್ತಾ ನೈಟ್ ರೈಡರ್ಸ್ 11 ಪಂದ್ಯಗಳಿಂದ 11 ಅಂಕಗಳನ್ನು ಗಳಿಸಿದೆ. ಸಿಎಸ್ಕೆ, ಸನ್ರೈಸರ್ಸ್ ಹೈದರಾಬಾದ್ ಮತ್ತು ಆರ್ಸಿಬಿ ವಿರುದ್ಧ ತನ್ನ ಕೊನೆಯ ಮೂರು ಪಂದ್ಯಗಳನ್ನು ಆಡಬೇಕಾಗಿದೆ. ಲಖನೌ ಸೂಪರ್ ಜಯಂಟ್ಸ್ 11 ಪಂದ್ಯಗಳಲ್ಲಿ 10 ಅಂಕಗಳನ್ನು ಗಳಿಸಿದೆ. ಆರ್ಸಿಬಿ, ಗುಜರಾತ್ ಮತ್ತು ಹೈದರಾಬಾದ್ ವಿರುದ್ಧ ಕೊನೆಯ ಪಂದ್ಯಗಳನ್ನು ಆಡಬೇಕಾಗಿದೆ. ಕೆಕೆಆರ್ ಮತ್ತು ಎಲ್ಎಸ್ಜಿ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ.

ಹೈದರಾಬಾದ್ ಏನು ಮಾಡಬೇಕು?
ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ಲೇಆಫ್ಸ್ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಿದೆ. 6 ಅಂಕಗಳ ಮೂಲಕ ಅಂಕಪಟ್ಟಿಯಲ್ಲಿ 9ನೇ ಸ್ಥಾನವನ್ನು ಅಲಂಕರಿಸಿರುವ ಹೈದರಾಬಾದ್, ಇನ್ನುಳಿದ ನಾಲ್ಕೂ ಪಂದ್ಯಗಳನ್ನು ಗೆದ್ದರೆ, ಒಟ್ಟು 14 ಅಂಕಗಳನ್ನು ಕಲೆ ಹಾಕಿದಂತಾಗುತ್ತದೆ.