ಎಲ್‌ಎಸ್‌ಜಿ ಮಾಡಿದ 'ಸೂಪರ್' ಎಡವಟ್ಟನ್ನು ತೆರೆದಿಟ್ಟ ಡೇಲ್ ಸ್ಟೇನ್!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 19ನೇ ಆವೃತ್ತಿಯಲ್ಲಿ ಮೂಡಿ ಬಂದ ಮೊದಲ ಸೂಪರ್ ಓವರ್ ಸೆಣಸಾಟದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಎದುರು ಮಂಡಿಯೂರಿತು. ಗೆಲ್ಲುವ ಅತ್ಯುತ್ತಮ ಅವಕಾಶ ಹೊಂದಿದ್ದರೂ, ಕನಿಷ್ಠ ಹೋರಾಟವನ್ನೂ ನೀಡದೆ ತನ್ನದೇ ಎಡವಟ್ಟುಗಳಿಂದ ಎಲ್‌ಎಸ್‌ಜಿ ಸೋತ ಬಗೆಯನ್ನು ಮಾಜಿ ಕ್ರಿಕೆಟಿಗ ಡೇಲ್ ಸ್ಟೇನ್ ವಿವರಿಸಿದ್ದಾರೆ.
ಎಲ್‌ಎಸ್‌ಜಿ ಸ್ಟ್ರಾಟೆಜಿ ಟೀಕಿಸಿದ ಡೇಲ್ ಸ್ಟೇನ್. -
ಲಖನೌ: ರಿಷಭ್ ಪಂತ್ ಸಾರಥ್ಯದ ಲಖನೌ ಸೂಪರ್ ಜಯಂಟ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 2026ರ ಆವೃತ್ತಿಯಲ್ಲಿನ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸಂಭವಿಸಿದ ಸೂಪರ್ ಓವರ್ ಸೆಣಸಾಟದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮಾಜಿ ಕ್ರಿಕೆಟಿಗ ಡೇಲ್ ಸ್ಟೇನ್ ಕಟುವಾಗಿ ಟೀಕಿಸಿದ್ದಾರೆ.
ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಸೂಪರ್ ಓವರ್ ಸೆಣಸಾಟದಲ್ಲಿ ಆತಿಥೇಯ ತಂಡ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಜಿ ವೇಗಿ ಡೇಲ್ ಸ್ಟೇನ್ ಕಿಡಿ ಕಾರಿದ್ದಾರೆ. ವಿಶೇಷವಾಗಿ ಎಡಗೈ ಬ್ಯಾಟರ್ Nicholas Pooran ಅವರನ್ನು ಸೂಪರ್ ಓವರ್ ಓವರ್‌ನಲ್ಲಿ ಬ್ಯಾಟ್ ಮಾಡಲು ಕಳುಹಿಸಿದ ಕ್ರಮ ಸರಿಯಾಗಿರಲಿಲ್ಲ ಎಂದು ಟೀಕೆ ಮಾಡಿದ್ದಾರೆ.
LSG vs KKR: ತಂಡದ ಸತತ ಸೋಲಿಗೆ ಒತ್ತಡವೇ ಕಾರಣ ಎಂದ ರಿಷಭ್ ಪಂತ್
"ಐಪಿಎಲ್‌ನಲ್ಲಿ ಪೂರನ್ ಮೂರು ಸೂಪರ್ ಓವರ್‌ಗಳಲ್ಲಿ ಆಡಿದ್ದು, ಮೂರು ಬಾರಿ ಡಕ್ ಔಟ್ ಆಗಿದ್ದಾರೆ. ಇಂತಹ ಸಂದರ್ಭದಲ್ಲೂ ಅವರನ್ನು ಮೊದಲಿಗೆ ಕಳುಹಿಸುವುದು ಸರಿಯಾದ ನಿರ್ಧಾರ ಆಗಿರಲಿಲ್ಲ. ತಂಡದಲ್ಲಿ ಮಿಚೆಲ್ ಮಾರ್ಷ್, ರಿಷಭ್ ಪಂತ್ ಮತ್ತು ಮುಕುಲ್ ಚೌಧರಿ ಅವರಂತಹ ಸ್ಪೋಟಕ ಬ್ಯಾಟರ್‌ಗಳ ಆಯ್ಕೆ ಇದ್ದವು," ಎಂದು ಸ್ಟೇನ್ ಅಭಿಪ್ರಾಯ ಪಟ್ಟಿದ್ದಾರೆ.
ಪೂರನ್, ಐಪಿಎಲ್ 2026 ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿ ಇಲ್ಲದ ಹಿನ್ನೆಲೆ, ಅವರ ಮೇಲೆ ಇಷ್ಟು ದೊಡ್ಡ ಹೊಣೆಗಾರಿಕೆ ನೀಡುವುದು ತಪ್ಪು ನಿರ್ಧಾರವಾಗಬಹುದು ಎಂದು ಸ್ಟೇನ್ ವಿವರಿಸಿದ್ದಾರೆ. "ಈ ಸೀಸನ್‌ನಲ್ಲಿ ಅವರು 30–40 ರನ್‌ಗಿಂತ ಹೆಚ್ಚು ಗಳಿಸಿಲ್ಲ. ಇಂತಹ ಆಟಗಾರನನ್ನು ಸೂಪರ್ ಓವರ್‌ನಲ್ಲಿ ಮೊದಲ ಚೆಂಡನ್ನು ಎದುರಿಸುವಂತೆ ಕಳುಹಿಸುವುದು ಅತ್ಯಂತ ತಪ್ಪಾದ ನಿರ್ಧಾರ," ಎಂದು ಹೇಳಿದ್ದಾರೆ.
LSG vs KKR: ರಿಂಕು, ನರೇನ್ ಮಿಂಚು ಲಖನೌ ಎದುರು ಸೂಪರ್ ಓವರ್ ಥ್ರಿಲ್ಲರ್ ಗೆದ್ದ ಕೋಲ್ಕತಾ!
ಇದಲ್ಲದೆ, ಟೂರ್ನಿಯಲ್ಲಿ ಉಳಿಯಲು ಹೋರಾಡುತ್ತಿರುವ ತಂಡಗಳು ಭಾವನಾತ್ಮಕ ಅಥವಾ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಸ್ಟೇನ್ ಎಚ್ಚರಿಸಿದ್ದಾರೆ ಕೂಡ. "ಈ ಹಂತದಲ್ಲಿ ಗೆಲುವು ಬಹಳ ಮುಖ್ಯ. ಆದ್ದರಿಂದ, ಉತ್ತಮ ಫಾರ್ಮ್‌ನಲ್ಲಿರುವ ಆಟಗಾರರನ್ನು ಆಯ್ಕೆ ಮಾಡಬೇಕು,” ಎಂದು ಮಾಜಿ ವೇಗಿ ಸಲಹೆ ನೀಡಿದ್ದಾರೆ.
ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ ತಂಡ, ಆರಂಭಿಕ ಆಘಾತದ ಹೊರತಾಗಿಯೂ ರಿಂಕು ಸಿಂಗ್ ಅವರ ಮನಮೋಹಕ ಬ್ಯಾಟಿಂಗ್ ಪ್ರದರ್ಶನದಿಂದ 20 ಓವರ್‌ಗಳಲ್ಲಿ 155-7 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಏಕಾಂಗಿ ಹೋರಾಟ ನಡೆಸಿದ ಎಡಗೈ ಬ್ಯಾಟರ್ ರಿಂಕು, ಎದುರಿಸಿದ 51 ಎಸೆತಗಳಲ್ಲಿ 7 ಫೋರ್ ಮತ್ತು 5 ಸಿಕ್ಸರ್ ನೆರವಿನಿಂದ 83 ರನ್ ಸಿಡಿಸಿ ಔಟಾಗದೇ ಉಳಿದರು. ಎಲ್‌ಎಸ್‌ಜಿ ತಂಡದ ಸ್ಪಿನ್ನರ್ ದಿಗ್ವೇಶ್ ರಾಠಿ ಎದುರು ಕೊನೇ ಓವರ್ ಒಂದರಲ್ಲೇ ಸತತ 4 ಸಿಕ್ಸರ್ ಸಿಡಿಸಿದ ರಿಂಕು, ತಮ್ಮ ವಿಂಟೇಜ್ ಫಾರ್ಮ್ ಕಂಡುಕೊಂಡರು.
RR vs LSG: ಕಳಪೆ ಬ್ಯಾಟಿಂಗ್ ಬಗ್ಗೆ ವಿಷಾದ ವ್ಯಕ್ತಪಡಿಸಿದ ರಿಷಭ್ ಪಂತ್
ಬಳಿಕ ಗುರಿ ಬೆನ್ನತ್ತಿದ ಲಖನೌ ಸೂಪರ್ ಜಯಂಟ್ಸ್, ಆರಂಭದಲ್ಲೇ ಸ್ಪೋಟಕ ಆಟಗಾರ ಮಿಚೆಲ್ ಮಾರ್ಷ್ (2) ವಿಕೆಟ್ ಕಳೆದುಕೊಂಡರೂ ಅನುಭವಿ ಏಡೆನ್ ಮಾರ್ಕ್ರಮ್ (31) ಮತ್ತು ಕ್ಯಾಪ್ಟನ್ ರಿಷಭ್ ಪಂತ್ (42) ಅವರ ಎಚ್ಚರಿಕೆಯ ಬ್ಯಾಟಿಂಗ್ ನೆರವಿನಿಂದ ಚೇತರಿಸಿತು. ಆದರೆ, ಸ್ಲಾಗ್ ಓವರ್‌ಗಳಲ್ಲಿ ಕೆಕೆಆರ್ ತಂಡದ ಬೌಲಿಂಗ್ ತೆಗೆದು ಪರದಾಟ ನಡೆಸಿದ ಎಲ್‌ಎಸ್‌ಜಿ 8 ವಿಕೆಟ್ ನಷ್ಟದಲ್ಲಿ 155 ರನ್ ಕಲೆಹಾಕಿ ಪಂದ್ಯವನ್ನು ಸೂಪರ್ ಓವರ್‌ಗೆ ಕೊಂಡೊಯ್ಯಿತು.
ಫಾಸ್ಟೆಸ್ಟ್ ಸೂಪರ್ ಓವರ್!
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಲು ಬಂದ ಎಲ್‌ಎಸ್‌ಜಿ ತಂಡದ ಪರ ಔಟ್ ಆಫ್ ಫಾರ್ಮ್ ನಿಕೋಲಸ್ ಪೂರನ್ ಸ್ಟ್ರೈಕ್ ತೆಗೆದುಕೊಂಡರೆ, ಏಡೆನ್ ಮಾರ್ಕ್ರಮ್ ನಾನ್ ಸ್ಟ್ರೈಕ್‌ನಲ್ಲಿ ನಿಂತರು. ಮಾಂತ್ರಿಕ ಸ್ಪಿನ್ನರ್ ಸುನಿಲ್ ನರೇನ್, ತಮ್ಮ ಬತ್ತಳಿಕೆಯಿಂದ ಆಫ್ ಸ್ಪಿನ್ ಎಸೆತವನ್ನು ಬಳಕೆ ಮಾಡಿ ಮೊದಲ ಎಸೆತದಲ್ಲೇ ಪೂರನ್‌ನ ಕ್ಲೀನ್ ಬೌಲ್ಡ್ ಮಾಡಿದರು. ಬಳಿಕ ಬ್ಯಾಟ್ ಮಾಡಲು ಬಂದ ರಿಷಭ್ ಪಂತ್ 1 ರನ್ ತೆಗೆದುಕೊಟ್ಟರೆ, 3ನೇ ಎಎತದಲ್ಲಿ ಸಿಕ್ಸರ್ ಬಾರಿಸಲು ಮುಂದಾದ ಮಾರ್ಕ್ರಮ್ ಲಾಂಗ್ ಆನ್‌ಗೆ ಕ್ಯಾಚಿತ್ತರು.
ಪರಿಣಾಮ 2 ರನ್‌ಗಳ ಸುಲಭ ಗುರಿ ಪಡೆದ ಕೆಕೆಆರ್ ತಂಡದ ಪರ ಬ್ಯಾಟ್ ಮಾಡಲು ಬಂದ ಇನ್ ಫಾರ್ಮ್ ಬ್ಯಾಟರ್ ರಿಂಕು ಸಿಂಗ್ ಮೊದಲ ಎಸೆತದಲ್ಲೇ ಫೋರ್ ಹೊಡೆದು ಕೆಕೆಆರ್‌ಗೆ ಜಯದ ಮಾಲೆ ತೊಡಿಸಿದರು. ಪ್ರಸಕ್ತಿ ಸಾಲಿನಲ್ಲಿ 6ನೇ ಸೋಲುಂಡ ಎಲ್‌ಎಸ್‌ಜಿ ತಂಡ ನಾಕ್‌ಔಟ್ ರೇಸ್‌ನಿಂದ ಬಹುತೇಕ ಹೊರ ಬೀಳುವ ಸ್ಥಿತಿಗೆ ಬಂದು ನಿಂತಿದೆ.