Pravasi Prapancha: ವಿಶ್ವವಾಣಿ ಸಮೂಹದ ʼಪ್ರವಾಸಿ ಪ್ರಪಂಚʼ; ಜೂ. 4ರಂದು ಸಿಎಂ ಸಿದ್ದರಾಮಯ್ಯರಿಂದ ಲೋಕಾರ್ಪಣೆ
ವಿಶ್ವೇಶ್ವರ ಭಟ್ ನೇತೃತ್ವದ ʼಪ್ರವಾಸಿ ಪ್ರಪಂಚʼ (Pravasi Prapancha) ವಾರಪತ್ರಿಕೆಯನ್ನು ಜೂನ್ 4ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ. ಸಚಿವರಾದ ಎಚ್.ಕೆ ಪಾಟೀಲ್, ಎಂ.ಬಿ ಪಾಟೀಲ, ಶಾಸಕ ಅನಿಲ್ ಚಿಕ್ಕಮಾದು, ಎಂ. ಶ್ರೀನಿವಾಸ್, ಚಲನಚಿತ್ರ ನಟ ಡಾಲಿ ಧನಂಜಯ ಉಪಸ್ಥಿತರಿರಲಿದ್ದಾರೆ.

ಪ್ರವಾಸಿ ಪ್ರಪಂಚದ ಅನಾವರಣ ಜೂನ್ 4ರಂದು.

ಬೆಂಗಳೂರು: ವಿಶ್ವವಾಣಿ (Vishwavani) ಮಾಧ್ಯಮ ಸಂಸ್ಥೆಯ ನೂತನ ಸಾಹಸ ʼಪ್ರವಾಸಿ ಪ್ರಪಂಚʼ ವಾರಪತ್ರಿಕೆ (Pravasi Prapancha) ಜೂನ್ 4ರಂದು ಬುಧವಾರ ಲೋಕಾರ್ಪಣೆಗೊಳ್ಳಲಿದೆ. ಪ್ರವಾಸೋದ್ಯಮದ (Tourism) ನಾನಾ ಮುಖಗಳನ್ನು ಕನ್ನಡಿಗರ ಮನೆಮನೆಗೆ ತಲುಪಿಸುವ ಉದ್ದೇಶವುಳ್ಳ ಈ ಪತ್ರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಜೂನ್ 4ರ ಬೆಳಗ್ಗೆ ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ.

ಪ್ರವಾಸಿ ಪ್ರಪಂಚದ ಮುದ್ರಣ ಆವೃತ್ತಿಯನ್ನು ಸಿಎಂ ಬಿಡುಗಡೆ ಮಾಡಿದರೆ, ವೆಬ್‌ಸೈಟ್ ಅನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಡಿಜಿಟಲ್ ಚಾನೆಲ್‌ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ಚಾಲನೆ ನೀಡುತ್ತಾರೆ. ಸೋಶಿಯಲ್ ಮೀಡಿಯಾಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್ ಚಾಲನೆ ಕೊಡಲಿದ್ದಾರೆ. ಚಲನಚಿತ್ರ ನಟ ಡಾಲಿ ಧನಂಜಯ ವಿಶೇಷ ಉಪಸ್ಥಿತಿ ವಹಿಸಲಿದ್ದಾರೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿ. ಅಧ್ಯಕ್ಷ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರು ಪ್ರವಾಸಿ ಡಾಕ್ಯುಮೆಂಟರಿ ಸ್ಪರ್ಧೆಯ ಬಹುಮಾನ ವಿತರಣೆ ಮಾಡಲಿದ್ದಾರೆ. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಶ್ವೇಶ್ವರ ಭಟ್ ಅವರ ಸಾರಥ್ಯದಲ್ಲಿ ಹೊರಬರಲಿರುವ ʼಪ್ರವಾಸಿ ಪ್ರಪಂಚʼದ ಕಾರ್ಯ ನಿರ್ವಾಹಕ ಸಂಪಾದಕರಾಗಿ ನವೀನ್ ಸಾಗರ್ ಕಾರ್ಯ ನಿರ್ವಹಿಸಲಿದ್ದಾರೆ. ಚಿದಾನಂದ ಕಡಲಾಸ್ಕರ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ.
ವಿಶ್ವವಾಣಿ ದಿನಪತ್ರಿಕೆ, ಲೋಕಧ್ವನಿ ದಿನಪತ್ರಿಕೆ, ವಿಶ್ವವಾಣಿ ಟಿವಿ ವಾಹಿನಿ, ವಾಗ್ದೇವಿ ವಿಧ್ಯಾವರ್ಧಕ ಟ್ರಸ್ಟ್, ವಿಶ್ವವಾಣಿ ಮಾಧ್ಯಮ ವಿದ್ಯಾಪೀಠ, ವಿಶ್ವವಾಣಿ ಪುಸ್ತಕ ಪ್ರಕಾಶನಗಳು ಈಗಾಗಲೇ ವಿಶ್ವವಾಣಿ ಸಮೂಹದಲ್ಲಿವೆ.
ಈಗಾಗಲೇ ಪ್ರವಾಸಿ ಪ್ರಪಂಚದ ಟೈಟಲ್ ಅನ್ನು ಚಿತ್ರನಟರಾದ ಜಗ್ಗೇಶ್, ವಸಿಷ್ಠ ಸಿಂಹ ಹಾಗೂ ಜಯಮಾಲ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.

'ಪ್ರವಾಸಿ ಪ್ರಪಂಚ'ದಲ್ಲಿ ಏನಿರುತ್ತವೆ?
'ಪ್ರವಾಸಿ ಪ್ರಪಂಚ' ವಾರಕ್ಕೊಮ್ಮೆ ಪ್ರತಿ ಶನಿವಾರ ಪ್ರಕಟವಾಗಲಿದೆ. ಬ್ರಾಡ್ ಶೀಟ್ ಆಕಾರದಲ್ಲಿ ಕನಿಷ್ಠ 16 ಪುಟಗಳೊಂದಿಗೆ ಮುದ್ರಣ ಆವೃತ್ತಿ ಬರಲಿದ್ದು ರಾಜ್ಯ- ದೇಶ- ವಿದೇಶಗಳ ಪ್ರವಾಸಿ ತಾಣಗಳ ಸೊಗಸಾದ ಸಚಿತ್ರ ಪರಿಚಯ, ಅಲ್ಲಿಗೆ ತಲುಪುವ ಬಗೆ, ಪ್ರವಾಸಿಗರ ಅನುಭವ, ಕಡಿಮೆ ಬಜೆಟ್‌ನ ಟೂರ್ ಪ್ಲಾನಿಂಗ್, ಉತ್ತಮ ವಸತಿ ವ್ಯವಸ್ಥೆ ಇತ್ಯಾದಿಗಳನ್ನೆಲ್ಲ ಒಳಗೊಳ್ಳಲಿದೆ. ಇದು ವೆಬ್ ಸೈಟ್, ಡಿಜಿಟಲ್ ಚಾನೆಲ್ ಸ್ವರೂಪಗಳಲ್ಲೂ ಪ್ರಕಟವಾಗಲಿದ್ದು, ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಅನ್ನೂ ಹೊಂದಿರಲಿದೆ.

ಪ್ರವಾಸ, ಪ್ರವಾಸೋದ್ಯಮ ಮತ್ತು ಆತಿಥ್ಯ (ಹೋಟೆಲ್, ರೆಸಾರ್ಟ್) ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನ, ಸುದ್ದಿ, ಅಂಕಣ, ಪ್ರವಾಸ ಕಥನ, ಪ್ರವಾಸ ಪುಸ್ತಕ ವಿಮರ್ಶೆ, ಪ್ರವಾಸಿ ತಾಣ ಪರಿಚಯ ಸೇರಿದಂತೆ ಇನ್ನೂ ಹತ್ತಾರು ಆಸಕ್ತಿದಾಯಕ, ಸ್ವಾರಸ್ಯಪೂರ್ಣ ಮಾಹಿತಿಗಳನ್ನು ಪ್ರವಾಸಿ ಪ್ರಪಂಚ ಹೊಂದಿರಲಿದೆ. ಒಂದು ವಾರವಿಡೀ ಓದಬಹುದಾದ ಸಮೃದ್ಧ ಹೂರಣವಿರುತ್ತದೆ. ಇದಕ್ಕೆ ಓದುಗರೂ ಬರೆಯಬಹುದು ಹಾಗೂ ತಾವು ಭೇಟಿ ನೀಡಿದ ತಾಣದ ಕುರಿತ ಲೇಖನ, ಚಿತ್ರ, ವಿಡಿಯೋಗಳನ್ನೂ ಕಳಿಸಬಹುದು.

ʼಪ್ರವಾಸಿ ಪ್ರಪಂಚʼದ ಮಾತೃ ಸಂಸ್ಥೆಯಾದ ವಿಶ್ವವಾಣಿಯು ಈಗಾಗಲೇ ಕರ್ನಾಟಕದ ಹಾಗೂ ಹೊರಗಿನ ವಿಶಿಷ್ಟ ಸಾಧಕರಿಗೆ ʼಗ್ಲೋಬಲ್ ಅಚೀವರ್ಸ್ ಅವಾರ್ಡ್ʼಗಳನ್ನು ನೀಡುತ್ತಿದೆ. ಕರುನಾಡಿನ ಸಾಧಕರನ್ನು ಹೊರದೇಶಗಳಿಗೆ ಕರೆದೊಯ್ದು ಅಲ್ಲಿ ಅಂತಾರಾಷ್ಟ್ರೀಯ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸುವುದು ಈ ಪ್ರಶಸ್ತಿಯ ಸ್ವರೂಪವಾಗಿದೆ. ಇತ್ತೀಚೆಗೆ ರಷ್ಯಾ, ಜಾರ್ಜಿಯಾ, ಮಸ್ಕತ್‌ಗಳಲ್ಲಿ ಹೀಗೆ ಪ್ರಶಸ್ತಿಗಳನ್ನು ಹಲವಾರು ಮಂದಿಗೆ ನೀಡಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರವಾಸಿ ಪ್ರಪಂಚದ ಟೈಟಲ್ ಸಾಂಗ್ ಇಲ್ಲಿದೆ, ಕೇಳಿ:
ಇದು “ಪ್ರವಾಸಿ ಪ್ರಪಂಚ” ಪತ್ರಿಕೆಯ ಟೈಟಲ್ ಸಾಂಗ್ ! ಹೇಗಿದೆ ಕೇಳಿ ನೋಡಿ. ಅಂದ ಹಾಗೆ ಪತ್ರಿಕೆಗಾಗಿಯೇ ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ರಚಿಸಿದವರು ಆತ್ಮೀಯ ಸ್ನೇಹಿತರಾದ ಡಾ. ವಿ. ನಾಗೇಂದ್ರ ಪ್ರಸಾದ. pic.twitter.com/ugP2ljazYj
— Vishweshwar Bhat (@VishweshwarBhat) June 2, 2025