ʻನನ್ನನ್ನು ಉಳಿಸಿದ್ದಕ್ಕಾಗಿ ನಿಮಗೆ ಧನ್ಯವಾದʼ: ದೇವದತ್ ಪಡಿಕ್ಕಲ್‌ರನ್ನು ಅಪ್ಪಿಕೊಂಡ ಕೆಎಲ್ ರಾಹುಲ್!
ಶ್ರೀಲಂಕಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಕೆಎಲ್ ರಾಹುಲ್ ಅವರನ್ನು ಅವರ ಸಹ ಆಟಗಾರ ದೇವದತ್ ಪಡಿಕ್ಕಲ್ ಬಚಾವ್ ಮಾಡಿದರು. ಎಲ್‌ಬಿಡಬ್ಯು ಸಂಬಂಧ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಕೆಎಲ್ ರಾಹುಲ್‌ಗೆ ಪಡಿಕ್ಕಲ್ ಸಲಹೆ ನೀಡಿದ್ದರು. ಅದರಂತೆ ರಾಹುಲ್ ಜೀವದಾನ ಪಡೆದರು. ಇದಾದ ಬಳಿಕ ಪಡಿಕ್ಕಲ್ ಅವರನ್ನು ರಾಹುಲ್ ಅಪ್ಪಿಕೊಂಡರು.
ದೇವದತ್ ಪಡಿಕ್ಕಲ್‌ರನ್ನು ಅಪ್ಪಿಕೊಂಡ ಕೆಎಲ್ ರಾಹುಲ್. -
ಗಾಲೆ: ಭಾರತ ಹಾಗೂ ಶ್ರೀಲಂಕಾ ತಂಡಗಳ (IND vs SL) ನಡುವಣ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ 11ನೇ ಓವರ್‌ನಲ್ಲಿ ಕೆಎಲ್ ರಾಹುಲ್ (KL Rahul) ಅವರು ಎಲ್‌ಬಿಡ್ಬ್ಯುನಿಂದ ಬಚಾವ್ ಆದರು. ಅವರು ಪ್ರಭತ್ ಜಯಸೂರ್ಯ ಅವರ ಬೌಲಿಂಗ್‌ನಲ್ಲಿ ಚೆಂಡನ್ನು ಪ್ಯಾಡ್ ಮೇಲೆ ಹಾಕಿಕೊಂಡಿದ್ದರು. ಅರೌಂಡ್ ದಿ ವಿಕೆಟ್‌ನಿಂದ ಬೌಲ್ ಮಾಡಿದ ಎಡಗೈ ಸ್ಪಿನ್ನರ್ ಆರ್ಮ್ ಬಾಲ್ ಎಸೆದಿದ್ದರು. ಈ ಎಸೆತಗಳನ್ನು ಅರಿಯುವಲ್ಲಿ ವಿಫಲರಾದ ಕೆಎಲ್ ರಾಹುಲ್ ಚೆಂಡನ್ನು ಸ್ಟಂಪ್ಸ್ ಮುಂದೆ ಪ್ಯಾಡ್ ಮೇಲೆ ಹಾಕಿಕೊಂಡಿದ್ದರು.
ಎದುರಾಳಿ ಆಟಗಾರರ ಬಲವಾದ ಮನವಿಗೆ ಮಣಿದ ಅಂಪೈರ್ ಔಟ್ ತೀರ್ಪು ನೀಡಿದರು. ಈ ವೇಳೆ ಡಗೌಟ್‌ನಲ್ಲಿ ಕುಳಿತಿದ್ದ ನಾಯಕ ಶುಭಮನ್ ಗಿಲ್ ಕೂಡ ಔಟ್ ಎಂದು ಅರಿತು ತಮ್ಮ ಮುಖಭಾವದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ ಕೆಎಲ್ ರಾಹುಲ್ ಕೂಡ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಲು ಮುಂದಾಗಿದ್ದರು. ಆದರೆ, ಇವರ ಬ್ಯಾಟಿಂಗ್ ಜೊತೆಗಾರ ದೇವದತ್ ಪಡಿಕ್ಕಲ್ ನಿಲ್ಲಿಸಿದರು.
IND vs SL: 350 ಟೆಸ್ಟ್ ವಿಕೆಟ್‌ಗಳ ಮೂಲಕ ದಿಗ್ಗಜರನ್ನೊಳಗೊಂಡ ಎಲೈಟ್ ಲಿಸ್ಟ್‌ಗೆ ಸೇರಿದ ರವೀಂದ್ರ ಜಡೇಜಾ!
ಈ ವೇಳೆ ದೇವದತ್ ಪಡಿಕ್ಕಲ್, ಕೆಎಲ್ ರಾಹುಲ್‌ಗೆ ಬಹುಶಃ ನಿಮ್ಮದು ಎಲ್‌ಬಿಡಬ್ಲ್ಯು ಔಟ್ ಆಗಿರುವುದು ಅನುಮಾನ, ಒಮ್ಮೆ ಡಿಆರ್‌ಎಸ್ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ಅದರಂತೆ ರಾಹುಲ್ ಡಿಆರ್‌ಎಸ್ ತೆಗೆದುಕೊಂಡರು. ದೀರ್ಘಾವಧಿ ಬಳಿಕ ಡಿಆರ್‌ಎಸ್ ತೆಗೆದುಕೊಳ್ಳಲಾಯಿತು. ವಿಡಿಯೊ ರೀಪ್ಲೆನಲ್ಲಿ ಕೆಎಲ್ ರಾಹುಲ್ ಔಟ್ ಆದ ರೀತಿ ಕಾಣುತ್ತಿಲ್ಲ. ಚೆಂಡು ಆಫ್ ಸ್ಟಂಪ್ ಹೊರಗಡೆ ಬಿದ್ದಿತ್ತು. ಆದರೆ, ಚೆಂಡು ಸ್ಟಂಪ್ ಮೇಲೆ ಹೊರಗಡೆ ಸಾಗುತ್ತಿತ್ತು. ಹಾಗಾಗಿ ಕೆಎಲ್ ರಾಹುಲ್ ಎಲ್‌ಬಿಡಬ್ಲ್ಯುನಿಂದ ಪಾರಾದರು.
KL Rahul hugging Devdutt Paddikal after a successful DRS suggested by him 😂 #SLvIND pic.twitter.com/vLEys0Vgk3
— Prateek (@prateek_295) August 18, 2026
ದೇವದತ್ ಪಡಿಕ್ಕಲ್ ಸಲಹೆಯಿಂದ ಡಿಆರ್‌ಎಸ್ ತೆಗೆದುಕೊಂಡು ಕೆಎಲ್ ರಾಹುಲ್‌ಗೆ ಫಲ ನೀಡಿತು. ಈ ವೇಳೆ ಕೆಎಲ್ ರಾಹುಲ್ ದೇವದತ್ ಪಡಿಕ್ಕಲ್ ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡು ಧನ್ಯವಾದ ತಿಳಿಸಿದರು. ನಾಲ್ಕನೇ ದಿನ ಈ ಸನ್ನಿವೇಶ ಅತ್ಯಂತ ಸ್ಮೃರಣೀಯವಾಗಿತ್ತು. ಆ ಮೂಲಕ ಟೀಮ್ ಇಂಡಿಯಾ ಮೊದಲನೇ ಟೆಸ್ಟ್ ಪಂದ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು.
IND vs SL: ಶ್ರೀಲಂಕಾ 284ಕ್ಕೆ ಆಲ್‌ಔಟ್, ಭಾರತ ತಂಡಕ್ಕೆ ದೊಡ್ಡ ಮುನ್ನಡೆ!
47 ಎಸೆತಗಳಲಿ 35 ರನ್ ಗಳಿಸಿ ಆಡುತ್ತಿದ್ದ ಕೆಎಲ್ ರಾಹುಲ್ ಅವರು ಇದನ್ನು ದೊಡ್ಡ ಮೊತ್ತವನ್ನಾಗಿ ವಿಸ್ತರಿಸುವಲ್ಲಿ ವಿಫಲರಾದರು. ಆದರೆ ಅವರು 15ನೇ ಓವರ್‌ನಲ್ಲಿ ಮತ್ತೊಮ್ಮೆ ಪ್ರಭತ್ ಜಯಸೂರ್ಯಗೆ ವಿಕೆಟ್ ಒಪ್ಪಿಸಿದರು. ಔಟ್ ಆಗುವವರೆಗೂ ರಾಹುಲ್ ಆಕ್ರಮಣಕಾರಿಯಾಗಿ ರನ್ ಗಳಿಸುತ್ತಿದ್ದರು.
ದೊಡ್ಡ ಮುನ್ನಡೆ ಗಳಿಸಿದ ಭಾರತ ತಂಡ
ಭಾರತ ತಂಡ ನಾಲ್ಕನೇ ದಿನ 35 ಓವರ್‌ಗಳ ಹೊತ್ತಿಗೆ 321 ರನ್‌ಗಳ ಬೃಹತ್ ಮೊತ್ತದ ಮುನ್ನಡೆಯನ್ನು ಪಡೆದಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ 167 ರನ್‌ಗಳನ್ನು ಕಲೆ ಹಾಕಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಅವರು, ದ್ವಿತೀಯ ಇನಿಂಗ್ಸ್‌ನಲ್ಲಿ 75 ಎಸೆತಗಳಲ್ಲಿ 44 ರನ್‌ಗಳನ್ನು ಗಳಿಸಿದ ಬಳಿಕ ವಿಕೆಟ್ ಒಪ್ಪಿಸಿದರು. ನಾಯಕ ಶುಭಮನ್ ಗಿಲ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ರಿಷಭ್ ಪಂತ್ ಅದ್ಭುತವಾಗಿ ಬ್ಯಾಟ್ ಮಾಡಿದರು. ಅವರು 36 ಓವರ್ ಅಂತ್ಯಕ್ಕೆ ಅಜೇಯ 47 ರನ್ ಗಳಿಸಿ ಅರ್ಧಶತಕದಂಚಿನಲ್ಲಿದ್ದರು. ಮತ್ತೊಂದು ತುದಿಯಲ್ಲಿ ರವೀಂದ್ರ ಜಡೇಜಾ ಇದ್ದಾರೆ.