Prakash Shesharaghavachar Column: ನೀವು ಒಮ್ಮೆಯಾದರೂ ಭಾರತದ ಪರ ನಿಲ್ಲಬೇಕಿತ್ತು !
‘ಆಪರೇಷನ್ ಸಿಂದೂರ’ ತರುವಾಯ ಮತ್ತೆ ಸರ್ವಪಕ್ಷ ಸಭೆಯನ್ನು ಹಾಗೂ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಅವು ಒತ್ತಾಯಿಸತೊಡಗಿದವು. ಇದಕ್ಕೆ ಕೇಂದ್ರ ಸರಕಾರ ಸೊಪ್ಪು ಹಾಕದಿದ್ದಾಗ, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಯಶಸ್ಸನ್ನು ಪ್ರಶ್ನಿಸಲು ಮುಂದಾ ದವು.


ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಪಹಲ್ಗಾಮ್‌ನಲ್ಲಿ ಉಗ್ರರು ಧರ್ಮವನ್ನು ಕೇಳಿ 26 ಪ್ರವಾಸಿಗರನ್ನು ಅಮಾನುಷವಾಗಿ ಹತ್ಯೆಗೈದಾಗ ಇಡಿ ದೇಶವೇ ಈ ಘೋರ ಹತ್ಯಾಕಾಂಡವನ್ನು ಒಮ್ಮತದಿಂದ ಖಂಡಿಸಿತು. ಭಯೋತ್ಪಾದಕರ ವಿರುದ್ಧ ಪ್ರತೀಕಾರ ಕೈಗೊಳ್ಳಬೇಕು ಎಂಬ ಕೂಗು ದೇಶದೆಲ್ಲೆಡೆಯಿಂದ ಕೇಳಿಬಂದಿತು. ಮೇ 6ರ ರಾತ್ರಿ ಭಾರತೀಯ ಸೇನೆಯು ‘ಆಪರೇಷನ್ ಸಿಂದೂರ’ ಹೆಸರಿನಲ್ಲಿ ಪಾಕಿಸ್ತಾನದಲ್ಲಿನ 9 ಭಯೋ ತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ಕೈಗೊಂಡು, ಅವನ್ನು ನಾಶಮಾಡಿ ನೂರಾರು ಭಯೋತ್ಪಾದಕರನ್ನು ನರಕವಾಸಕ್ಕೆ ರವಾನಿಸಿತು. ತನ್ಮೂಲಕ ಮೋದಿ ಸರಕಾರವು ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರ ಕೈಗೊಂಡಂತಾಯಿತು. 26 ಹುತಾತ್ಮರ ಕುಟುಂಬದವರು ಈ ಕ್ರಮ ವನ್ನು ಮುಕ್ತಕಂಠದಿಂದ ಪ್ರಶಂಸಿಸಿ ಮೋದಿಯವರಿಗೆ ಹೃದಯಪೂರ್ವಕ ವಂದನೆ ಸಲ್ಲಿಸಿದರು. ಆಪರೇಷನ್ ಸಿಂದೂರ ಕಾರ್ಯಾಚರಣೆಯ ಯಶಸ್ಸನ್ನು ಜನರು ನೂರಾರು ಸ್ಥಳಗಳಲ್ಲಿ ಸಂಭ್ರಮಿಸಿದರು.
ಕೇಂದ್ರ ಸರಕಾರವು ಕರೆದಿದ್ದ ಸರ್ವಪಕ್ಷ ಸಭೆಯ ನಂತರ ಎಲ್ಲ ವಿರೋಧ ಪಕ್ಷಗಳವರು “ನಾವು ಸರಕಾರದ ಜತೆಗಿದ್ದೇವೆ ಹಾಗೂ ಸರಕಾರ ಕೈಗೊಳ್ಳುವ ಎಲ್ಲ ಕ್ರಮಗಳಿಗೆ ನಮ್ಮ ಬೆಂಬಲವಿದೆ" ಎಂದು ಒಮ್ಮತದಿಂದ ಘೋಷಿಸಿದರು. ಇಡೀ ದೇಶವು ಐಕಮತ್ಯದ ಮಂತ್ರವನ್ನು ಜಪಿಸಿದ ಅಪರೂಪದ ಗಳಿಗೆ ಅದಾಗಿತ್ತು. ಮೇ 8ರ ರಾತ್ರಿ ಪಾಕಿಸ್ತಾನವು ಭಾರತದ ಮೇಲೆ ಡ್ರೋನ್ ದಾಳಿ ನಡೆಸಿದಾಗ, ಭಾರತೀಯ ವೈಮಾನಿಕ ರಕ್ಷಣಾ ವ್ಯವಸ್ಥೆಯು ಅದನ್ನು ಯಶಸ್ವಿಯಾಗಿ ಹಿಮ್ಮೆ ಟ್ಟಿಸಿತು.
ಮೇ 11ರಂದು ಪಾಕಿಸ್ತಾನದ ಡಿಜಿಎಂಒ ಭಾರತದ ಡಿಜಿಎಂಒಗೆ ಕರೆ ಮಾಡಿ ಕದನವಿರಾಮಕ್ಕೆ ವಿನಂತಿಸಿದಾಗ, ಭಾರತವು ಸಕಾರಾತ್ಮಕವಾಗಿ ಸ್ಪಂದಿಸಿತು, ಅಂದು ಸಂಜೆ 5 ಗಂಟೆಯಿಂದ ಕದನ ವಿರಾಮ ಘೋಷಣೆಯಾಯಿತು.
ಇದನ್ನೂ ಓದಿ: Prakash Shesharaghavachar Column: ಸಂಕಷ್ಟದ ಸಮಯದಲ್ಲಿ ಇದೆಂಥ ವಿಕೃತಿ !
ತಾನು ಕೈಗೊಂಡ ಪ್ರತಿದಾಳಿಗೆ ಕೇವಲ ಮೂರೂವರೆ ದಿನದಲ್ಲೇ ಪಾಕಿಸ್ತಾನವು ತನ್ನ ಪರಾಕ್ರಮದ ಮುಂದೆ ಮಂಡಿಯೂರುವಂತೆ ಮಾಡಿದ ಕೀರ್ತಿ ಭಾರತೀಯ ಸೇನೆಗೆ ಸಲ್ಲುತ್ತದೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ. ದುರ್ದೈ ವವೆಂದರೆ, ಕದನ ವಿರಾಮದ ತರುವಾಯ ವಿರೋಧ ಪಕ್ಷಗಳು ಹೊಸ ವರಸೆ ತೆಗೆಯಲು ಆರಂಭಿಸಿದವು. ಯಶಸ್ವಿ ಕಾರ್ಯಾಚರಣೆಯಿಂದಾಗಿ ಬಿಜೆಪಿಗೆ ದಕ್ಕುವ ‘ರಾಜಕೀಯ ಲಾಭ’ವನ್ನು ಲೆಕ್ಕಿಸಿ ಭಯಬಿದ್ದ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ತಮ್ಮ ಮೊದ ಲಿನ ನಿಲುವಿನಿಂದ ಹಿಂದೆ ಸರಿಯಲು ಶುರು ಹಚ್ಚಿಕೊಂಡವು.
‘ಆಪರೇಷನ್ ಸಿಂದೂರ’ ತರುವಾಯ ಮತ್ತೆ ಸರ್ವಪಕ್ಷ ಸಭೆಯನ್ನು ಹಾಗೂ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಅವು ಒತ್ತಾಯಿಸತೊಡಗಿದವು. ಇದಕ್ಕೆ ಕೇಂದ್ರ ಸರಕಾರ ಸೊಪ್ಪು ಹಾಕದಿದ್ದಾಗ, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಯಶಸ್ಸನ್ನು ಪ್ರಶ್ನಿಸಲು ಮುಂದಾದವು.
‘ಆಪರೇಷನ್ ಸಿಂದೂರ’ ಕುರಿತಾದ ತನ್ನ ನಿಲುವನ್ನು ವಿವರಿಸಲು ಭಾರತವು ವಿವಿಧ ಪಕ್ಷಗಳಿಗೆ ಸೇರಿದ ಸದಸ್ಯರನ್ನು ಒಳಗೊಂಡ ಏಳು ನಿಯೋಗಗಳನ್ನು ವಿವಿಧ ರಾಷ್ಟ್ರಗಳಿಗೆ ಕಳುಹಿಸಿದೆ. ಪಾಕಿಸ್ತಾನದ ನಿರೂಪಣೆಯನ್ನು ವಿರೋಧಿಸಲು ಮತ್ತು ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ನೀಡುತ್ತಾ ಬಂದಿರುವ ಬೆಂಬಲವನ್ನು ಮನದಟ್ಟು ಮಾಡಿಕೊಟ್ಟು, ಭಯೋತ್ಪಾದನೆಯ ನಿಗ್ರಹದ ಕ್ರಮವಾಗಿ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯನ್ನು ಕೈಗೊಳ್ಳಬೇಕಾಗಿ ಬಂದ ಅಗತ್ಯ ತೆಯನ್ನು ವಿವರಿಸಲು, ತನ್ಮೂಲಕ ಅಂತಾರಾಷ್ಟ್ರೀಯ ಬೆಂಬಲವನ್ನು ಪಡೆದು ಭಯೋತ್ಪಾದನೆ ಯ ವಿರುದ್ಧ ಒಮ್ಮತವನ್ನು ಮೂಡಿಸಲು ಈ 7 ನಿಯೋಗಗಳು ವಿವಿಧ ದೇಶಗಳಿಗೆ ಭೇಟಿ ನೀಡುತ್ತಿವೆ.

ಇಂಥ ನಿಯೋಗಗಳ ಪೈಕಿ ಒಂದಕ್ಕೆ ಸಂಸದರ ಹೆಸರು ಸೂಚಿಸುವಂತೆ ಕಾಂಗ್ರೆಸ್ ಪಕ್ಷವನ್ನು ಕೋರಿ ದಾಗ, ವಿದೇಶಾಂಗ ಖಾತೆಯ ಸಂಸದೀಯ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಶಶಿ ತರೂರ್ ಅವರ ಹೆಸರನ್ನು ಅದು ಉದ್ದೇಶಪೂರ್ವಕವಾಗಿ ಕೈಬಿಟ್ಟಿತು!
ವಿದೇಶಾಂಗ ವ್ಯವಹಾರದಲ್ಲಿ ಅನುಭವ ವಿರುವ ತರೂರ್ ಅವರ ಹೆಸರನ್ನು ಸೂಚಿಸದೆ ಕಾಂಗ್ರೆಸ್ ತನ್ನ ಸಣ್ಣ ಬುದ್ಧಿಯನ್ನು ಪ್ರದರ್ಶಿಸಿತು. ಮಮತಾ ಬ್ಯಾನರ್ಜಿಯವರು ತಮ್ಮ ಟಿಎಂಸಿ ಪಕ್ಷದ ಸಂಸದ ಯೂಸಫ್ ಪಠಾಣ್‌ರನ್ನು ಆಯ್ಕೆ ಮಾಡಿದ್ದನ್ನು ವಿರೋಧಿಸಿ, ಬದಲಿಗೆ ಅಭಿಷೇಕ್ ಬ್ಯಾನರ್ಜಿಯವರ ಹೆಸರನ್ನು ನೀಡಿದರು. ಒಮ್ಮತವನ್ನು ಕಾಪಾಡುವ ದೃಷ್ಟಿಯಿಂದ ಈ ವಿಷಯ ದಲ್ಲಿ ರಾಜಕೀಯ ವನ್ನು ಬೆರೆಸುವುದನ್ನು ಟಿಎಂಸಿ ತಪ್ಪಿಸಬಹುದಿತ್ತು.
ತಾವು ಸೂಚಿಸಿದ್ದ ಹೆಸರಿನಲ್ಲಿ ಕೇವಲ ಒಬ್ಬರನ್ನು ಆಯ್ಕೆ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಜೈರಾಮ್ ರಮೇಶ್‌ರವರು, “ಇದು ಗಮನವನ್ನು ಬೇರೆಡೆ ಸೆಳೆಯುವ ಮತ್ತೊಂದು ಪ್ರಯತ್ನ ಎಂದು ನಾನು ಭಾವಿಸುತ್ತೇನೆ" ಎಂದು ಟೀಕಿಸಿ, ತಮ್ಮ ಪಕ್ಷದ ಸದಸ್ಯರೂ ಭಾಗಿಯಾಗಿರುವ ಬಹುಪಕ್ಷಗಳ ನಿಯೋಗದ ಪ್ರವಾಸವನ್ನೂ ರಾಜಕೀಯೀಕರಣಗೊಳಿಸಿದರು.
ರಾಹುಲ್ ಗಾಂಧಿಯವರು ಮೇ 17ರಂದು, ವಿದೇಶಾಂಗ ಸಚಿವ ಜೈಶಂಕರ್‌ರವರ ತುಂಡರಿಸಿದ ವಿಡಿಯೋ ತುಣುಕನ್ನು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡು, “ಸಚಿವರು ಯುದ್ಧಾ ರಂಭಕ್ಕೆ ಮುನ್ನ ಪಾಕಿಸ್ತಾನಕ್ಕೆ ದಾಳಿಯ ಬಗ್ಗೆ ತಿಳಿಸಿ ದ್ರೋಹ ಮಾಡಿದ್ದಾರೆ" ಎಂಬ ಅತ್ಯಂತ ಗಂಭೀರ ಆರೋಪವನ್ನು ಮಾಡಿದರು. ಇದಾಗಿದ್ದೇ ಆಗಿದ್ದು, ಕಾಂಗ್ರೆಸ್‌ನ ಇತರ ನಾಯಕರೂ ಅಷ್ಟೇ ಬೇಜವಾಬ್ದಾರಿಯಿಂದ ಆ ಆರೋಪವನ್ನು ಹಂಚಿಕೊಂಡು, ವಿದೇಶಾಂಗ ಸಚಿವರನ್ನು ‘ದೇಶದ್ರೋಹಿ’ ಎಂದು ಕರೆಯು ವಷ್ಟು, ‘ದೇಶದ ಪ್ರಧಾನಿಯವರು ಶರಣಾಗಿದ್ದಾರೆ’ ಎಂದು ಅಪ ಹಾಸ್ಯ ಮಾಡುವಷ್ಟು ಕೆಳಮಟ್ಟಕ್ಕೆ ತಲುಪಿದ್ದಕ್ಕೆ ಏನನ್ನುವುದು?!!
ರಾಹುಲ್ ಗಾಂಧಿಯವರ ಹೊಣೆಗೇಡಿ ಆರೋಪಕ್ಕೆ ವಿದೇಶಾಂಗ ಇಲಾಖೆಯು, “ಇದು ಸತ್ಯಗಳ ತಪ್ಪು ನಿರೂಪಣೆ; ಸರಕಾರವು ಆಪರೇಷನ್ ಸಿಂದೂರ ಕಾರ್ಯಾಚರಣೆಯ ಆರಂಭದಲ್ಲಿ ಭಯೋ ತ್ಪಾದಕ ಕೇಂದ್ರಗಳ ಮೇಲೆ ದಾಳಿ ನಡೆಸುವ ಬಗ್ಗೆ ಪಾಕಿಸ್ತಾನದ ಡಿಜಿಎಂಒಗೆ ಎಚ್ಚರಿಕೆ ನೀಡಿದ್ದರ ಬಗ್ಗೆ ಸಚಿವರು ಮಾತನಾಡಿರುವುದು" ಎಂದು ಸ್ಪಷ್ಟಪಡಿಸಿತು.
‘ಆಪರೇಷನ್ ಸಿಂದೂರ’ದ ವಿವರಗಳನ್ನು ನೀಡಿದ ಲೆ.ಜ.ರಾಜೀವ್ ಘಾಯ್ ಅವರು, “ಕಾರ್ಯಾ ಚರಣೆಯ ಮುನ್ನ ನಾವು ‘ಭಯೋತ್ಪಾದಕರ ನೆಲೆಯ ಮೇಲೆ ದಾಳಿ ಮಾಡುತ್ತೇವೆ’ ಎಂದು ಪಾಕಿಸ್ತಾನದ ತತ್ಸಮ ಸೇನಾಧಿಕಾರಿಗಳಿಗೆ ಎಚ್ಚರಿಸಿದ್ದೆವು" ಎಂಬ ಮಾಹಿತಿಯನ್ನು ಹಂಚಿ ಕೊಂಡಿದ್ದರು. ರಾಹುಲ್ ಗಾಂಧಿಯವರು ಮತ್ತೆ ಮೇ 19ರಂದು ಮತ್ತೊಂದು ಟ್ವೀಟ್ ಮೂಲಕ, “ವಿದೇಶಾಂಗ ಖಾತೆ ಸಚಿವ ಜೈಶಂಕರ್ ಅವರನ್ನು ನಾನು ಮತ್ತೊಮ್ಮೆ ಕೇಳುತ್ತೇನೆ, ಪಾಕಿಸ್ತಾನಕ್ಕೆ ದಾಳಿಯು ಮುಂಚಿತವಾಗಿ ತಿಳಿದಿದ್ದರಿಂದ ನಾವು ಎಷ್ಟು ಭಾರತೀಯ ವಿಮಾನಗಳನ್ನು ಕಳೆದು ಕೊಂಡಿದ್ದೇವೆ? ಇದು ಒಂದು ಲೋಪವಲ್ಲ, ಅಪರಾಧ.
ರಾಷ್ಟ್ರವು ಸತ್ಯವನ್ನು ತಿಳಿದುಕೊಳ್ಳಲು ಅರ್ಹವಾಗಿದೆ" ಎಂದು ಕೇಳುತ್ತಾರೆ. ರಾಹುಲ್ ಅವರು ತಮ್ಮ ಈ ಎಡವಟ್ಟಿನಿಂದ ಭಾರತೀಯ ಸೈನ್ಯಕ್ಕೆ ಅಪಮಾನ ಎಸಗಿದ್ದಲ್ಲದೆ, ಭಾರತದ ವಿರುದ್ಧ ಅಪಪ್ರಚಾರ ಕೈಗೊಳ್ಳಲು ಶತ್ರುರಾಷ್ಟ್ರಕ್ಕೆ ಗ್ರಾಸ ಒದಗಿಸಿದರು. ಇವರ ಟ್ವೀಟ್ ಅನ್ನು ಬಾಚಿಕೊಂಡ ಪಾಕಿಸ್ತಾನಿ ಮಾಧ್ಯಮಗಳು, ‘ಭಾರತದ ವಿಮಾನಗಳನ್ನು ನಾವು ಹೊಡೆದು ಉರುಳಿಸಿದ್ದನ್ನು ರಾಹುಲ್ ಗಾಂಧಿಯವರೇ ದೃಢಪಡಿಸಿದ್ದಾರೆ’ ಎಂದು ಹೆಮ್ಮೆಪಟ್ಟುಕೊಳ್ಳುವಂತಾಗಿದೆ.
ರಾಹುಲ್ ಗಾಂಧಿಯವರ ಈ ದೇಶವಿರೋಧಿ ನಿಲುವನ್ನು ಪಿ.ಚಿದಂಬರಂ ಮತ್ತು ಸಲ್ಮಾನ್ ಖುರ್ಷಿದ್ ರಂಥ ಹಿರಿಯ ನಾಯಕರು ಬೆಂಬಲಿಸಲಿಲ್ಲ. ಬಿಜೆಪಿ-ವಿರೋಧಿ ಪತ್ರಕರ್ತೆ ಎಂದೇ ಬಿಂಬಿತರಾಗಿರುವ ಬರ್ಖಾ ದತ್ ಅವರು ಟ್ವೀಟ್ ಮೂಲಕ, “ಸಚಿವ ಜೈಶಂಕರ್ ಅವರು ಯುದ್ಧ ಯೋಜನೆಯನ್ನು ಮುಂಚಿತವಾಗಿ ನೀಡಿ ದ್ದರು ಎಂಬ ವಿಚಿತ್ರ ಆರೋಪವನ್ನು ಕಾಂಗ್ರೆಸ್ ಮತ್ತೆ ಮತ್ತೆ ಮಾಡುತ್ತಿರುವುದು ನಂಬಲಸಾಧ್ಯ.
ಮಿಲಿಟರಿ ಕಾರ್ಯಾಚರಣೆಗಳು ಹೇಗೆ ನಡೆಯುತ್ತವೆ ಎಂಬುದನ್ನು ಅವರು ಅರ್ಥಮಾಡಿ ಕೊಂಡಿದ್ದಾರೆಯೇ? ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಯುದ್ಧಕಾ ಲದಲ್ಲಿ ಮೂಲಭೂತ ಪ್ರಬುದ್ಧತೆ ಮತ್ತು ಏಕತೆ ಅಗತ್ಯ. ಕಾಂಗ್ರೆಸ್‌ನ ಈ ವರ್ತನೆ ಆಘಾತಕಾರಿ" ಎಂದು ಕಟುವಾಗಿ ಟೀಕಿಸಿದ್ದಾರೆ.
ಕದನವಿರಾಮದ ಘೋಷಣೆಯನ್ನು ಕೀಳುಮಟ್ಟದಲ್ಲಿ ಟೀಕಿಸುವ ಮತ್ತು ಸಚಿವ ಜೈಶಂಕರ್‌ರನ್ನು ‘ದೇಶದ್ರೋಹಿ’ ಎಂದು ಬಿಂಬಿಸುವ ತಂತ್ರ ಗಾರಿಕೆಯ ಮೂಲಕ ಕಾಂಗ್ರೆಸ್ ಪಕ್ಷವು ದೇಶದ ಭದ್ರತೆಯ ವಿಷಯದಲ್ಲಿ ಹುಡುಗಾಟಿಕೆ ಆಡುತ್ತಿದೆ. ಇದನ್ನು ಕಾಂಗ್ರೆಸ್ಸಿನ ಹೊಸ ಚಹರೆ ಎಂದು ಭಾವಿಸ ಬೇಕೇ? ಮತ್ತೊಂದೆಡೆ ರಾಹುಲರಿಗೆ ಪೈಪೋಟಿ ನೀಡುವವರಂತೆ ಮಲ್ಲಿಕಾರ್ಜುನ ಖರ್ಗೆಯವರು, “ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಪ್ರಧಾನಿ ಮೋದಿಯವರಿಗೆ ಮಾಹಿತಿಯಿತ್ತು" ಎಂಬ ಅತ್ಯಂತ ಬೇಜವಾಬ್ದಾರಿಯ ಆರೋಪವನ್ನು ಮತ್ತೆ ಮತ್ತೆ ಮಾಡುತ್ತಿದ್ದಾರೆ.
“ಇದೊಂದು ಚುಟ್ -ಪುಟ್ ಯುದ್ಧ" ಎಂದು ಲಘುವಾಗಿ ವ್ಯಾಖ್ಯಾನಿಸುವ ಖರ್ಗೆಯವರು, ತಾವು ರಾಷ್ಟ್ರೀಯ ನಾಯಕ ಸ್ಥಾನಕ್ಕೆ ಬಡ್ತಿ ಪಡೆದಿರುವುದನ್ನು ಮರೆತು ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ. 1962ರ ಭಾರತ-ಚೀನಾ ಯುದ್ಧದಲ್ಲಿ ಭಾರತವು ಪರಾಭವ ಹೊಂದಿ ‘ಅಕ್ಸಾಯ್ ಚಿನ್’ ಪ್ರದೇಶವನ್ನು ಕಳೆದುಕೊಂಡಿತು.
ಯುದ್ಧ ಮುಗಿದ ತರುವಾಯದ ಸಂಸತ್ ಅಧಿವೇಶನದಲ್ಲಿ ಅಂದಿನ ಜನಸಂಘದ ನಾಯಕ ವಾಜಪೇಯಿ ಅವರು, ಯುದ್ಧದ ಸೋಲಿಗೆ ನೆಹರು ಅವರನ್ನು ಹೊಣೆ ಮಾಡಲಿಲ್ಲ ಅಥವಾ ಅವರ ರಾಜೀನಾಮೆ ಕೇಳಲಿಲ್ಲ. ಬದಲಿಗೆ ದೇಶದ ಪರವಾಗಿ ಬಲವಾಗಿ ನಿಂತರು. 1965ರ ಭಾರತ ಮತ್ತು ಪಾಕ್ ಯುದ್ಧದಲ್ಲಿ ಭಾರತವು ಮೇಲುಗೈ ಸಾಧಿಸಿದ್ದರೂ, ಒಂದು ವಾರ ನಡೆದ ಈ ಯುದ್ಧಕ್ಕೆ ವಿಶ್ವಸಂಸ್ಥೆಯ ಮಧ್ಯಪ್ರವೇಶದಿಂದಾಗಿ ಕದನವಿರಾಮ ಘೋಷಣೆಯಾಯಿತು.
ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರೀಯವರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ತಾಷ್ಕೆಂಟ್‌ಗೆ ಹೋದಾಗ ನಿಗೂಢವಾಗಿ ಸಾವನ್ನಪ್ಪಿದರು. ವಿರೋಧ ಪಕ್ಷಗಳು ಆ ವಿಷಮ ಗಳಿಗೆಯಲ್ಲಿ ರಾಜಕೀಯವನ್ನು ಬದಿಗಿಟ್ಟು ದೇಶದೊಂದಿಗೆ ನಿಂತವು. 1971ರ ಯುದ್ಧದ ಸಂದರ್ಭದಲ್ಲಿಯೂ ಜನ ಸಂಘವು ಸರಕಾರದೊಂದಿಗೆ ಬಂಡೆಯಂತೆ ನಿಂತಿತು.
ಯುದ್ಧದಲ್ಲಿ ಸೈನ್ಯವು ಸಾಧಿಸಿದ ಜಯವನ್ನು ಶಾಂತಿ ಸಂಧಾನದ ಹೆಸರಲ್ಲಿ ಸೋತೆವು. ಆದರೆ ಜನಸಂಘದ ನಾಯಕತ್ವವು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಬೆಂಬಲಿಸಿತೇ ವಿನಾ, ಶಿಮ್ಲಾ ಒಪ್ಪಂದದ ಲೋಪ ದೋಷಗಳ ಕುರಿತು ಟೀಕೆ- ಟಿಪ್ಪಣಿ ಮಾಡುವ ಸಣ್ಣತನವನ್ನು ತೋರ ಲಿಲ್ಲ. ಸತತ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್, ತನ್ನ ನಕಾರಾತ್ಮಕ ನಿಲುವಿನ ಮೂಲಕ ಜನರ ವಿಶ್ವಾಸ ಗಳಿಸುವ ಭ್ರಮೆಯಲ್ಲಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಭಾರತೀಯರ ಹಿತಾಸಕ್ತಿಗಿಂತ ಅಧಿಕಾರ ರಾಜಕಾರಣವೇ ಮುಖ್ಯ ವಾಗಿಬಿಟ್ಟಿತಾ? ಎಂಬ ಅನುಮಾನ ಕಾಡುತ್ತಿದೆ. ಕಾಂಗ್ರೆಸ್ ಪಕ್ಷವು ಭಾರತದ ಪರ ನಿಲ್ಲ ಬೇಕಾದ ಸಮಯವಿದು, ಭಾರತ- ವಿರೋಧಿ ನಿಲುವು ತಳೆಯುವ ಸಮಯವಲ್ಲ. ಕಾಂಗ್ರೆಸ್ ಇದನ್ನು ಮರೆಯಬಾರದು.
(ಲೇಖಕರು ಬಿಜೆಪಿಯ ವಕ್ತಾರರು)