OTT ದೈತ್ಯ ‘ನೆಟ್ಫ್ಲಿಕ್ಸ್’ ಅಡ್ಡಕ್ಕೆ ಎಂಟ್ರಿ ಕೊಟ್ಟ ‘ಮೆಗಾಸ್ಟಾರ್’ ಚಿರು; ಬರಲಿದೆ ‘ಚಿರಂಜೀವಿಸ್ ಮೆಗಾವರ್ಸ್’ ಟಾಕ್ ಶೋ!
‘ಮೆಗಾಸ್ಟಾರ್’ ಚಿರಂಜೀವಿ ಈಗ ಡಿಜಿಟಲ್ ಲೋಕಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಜನಪ್ರಿಯ ಒಟಿಟಿ ವೇದಿಕೆ ‘ನೆಟ್ಫ್ಲಿಕ್ಸ್’ಗಾಗಿ ಅವರು ನಡೆಸಿಕೊಡಲಿರುವ ‘ಚಿರಂಜೀವಿಸ್ ಮೆಗಾವರ್ಸ್’ (Chiranjeevi's Megaverse) ಎಂಬ ಭರ್ಜರಿ ಸೆಲೆಬ್ರಿಟಿ ಟಾಕ್ ಶೋನ ಪ್ರೋಮೋ ಇದೀಗ ಬಿಡುಗಡೆಯಾಗಿದೆ.
-
ಸುಮಾರು 5 ದಶಕಗಳ ಕಾಲ ಬೆಳ್ಳಿತೆರೆಯ ಮೇಲೆ ತಮ್ಮ ನಟನೆ ಮತ್ತು ಡ್ಯಾನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಟಾಲಿವುಡ್ ‘ಮೆಗಾಸ್ಟಾರ್’ ಚಿರಂಜೀವಿ, ಈಗ ಡಿಜಿಟಲ್ ಜಗತ್ತಿಗೆ ಕಾಲಿಡಲು ಸಜ್ಜಾಗಿದ್ದಾರೆ. ಜನಪ್ರಿಯ ಒಟಿಟಿ ವೇದಿಕೆ ‘ನೆಟ್ಫ್ಲಿಕ್ಸ್’ಗಾಗಿ ಅವರು ನಡೆಸಿಕೊಡಲಿರುವ ‘ಚಿರಂಜೀವಿಸ್ ಮೆಗಾವರ್ಸ್’ (Chiranjeevi's Megaverse) ಎಂಬ ಭರ್ಜರಿ ಸೆಲೆಬ್ರಿಟಿ ಟಾಕ್ ಶೋನ ಪ್ರೋಮೋ ಇದೀಗ ಬಿಡುಗಡೆಯಾಗಿದೆ. ವಿವಿಧ ಕ್ಷೇತ್ರಗಳ ದಿಗ್ಗಜರಿಗೆ ಆತಿಥ್ಯ ವಹಿಸಲು ಸಜ್ಜಾಗಿರುವ ಚಿರು ಅವರ ಲವಲವಿಕೆಯ ಮತ್ತು ಹೊಸ ಅವತಾರದ ಝಲಕ್ ಈ ಪ್ರೋಮೋದಲ್ಲಿದೆ.
ಚಿರು ಹೊಸ ಅವತಾರ
‘ಇದಿ ನಾ ಅಡ್ಡಾ’ ಎನ್ನುವ ಮೂಲಕ ಚಿರಂಜೀವಿ ಈ ಹೊಸ ಶೋಗೆ ಭರ್ಜರಿ ಚಾಲನೆ ನೀಡಿದ್ದಾರೆ. ವಿಶೇಷವೆಂದರೆ, ಈ ಕಾರ್ಯಕ್ರಮದ ಘೋಷಣೆಗೂ ಮುನ್ನ ‘Chira__jeevi’ ಎಂಬ ಹೆಸರಿನಲ್ಲಿ 'N' ಅಕ್ಷರ ಮಿಸ್ ಆಗಿರುವುದನ್ನು 'ನೆಟ್ಫ್ಲಿಕ್ಸ್' ಎಂಟ್ರಿಯ ಸುಳಿವಾಗಿ ಬಳಸಿಕೊಂಡಿದ್ದು ಪ್ರೇಕ್ಷಕರ ಗಮನ ಸೆಳೆದಿತ್ತು. ಸಿನಿಮಾ ರಂಗದಲ್ಲಿ 48 ವರ್ಷಗಳ ಸುದೀರ್ಘ ಪಯಣ ಪೂರೈಸಿರುವ ಚಿರಂಜೀವಿ ಅವರ ಅದ್ದೂರಿ ವ್ಯಕ್ತಿತ್ವವನ್ನು ಈ ಪ್ರೋಮೋ ಬಿಂಬಿಸುತ್ತದೆ. ತೆರೆಯ ಮೇಲಿನ ಅವರ ಸ್ಟಾರ್ ಇಮೇಜ್ಗಿಂತ ಮಿಗಿಲಾದ, ಹೆಚ್ಚು ಪರ್ಸನಲ್, ಹಾಗೂ ಹಾಸ್ಯಪ್ರಜ್ಞೆಯನ್ನು ಈ ಶೋ ಮೂಲಕ ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತಿದೆ.
ಯಾವಾಗ ಪ್ರಸಾರ?
ಸಿನಿಮಾ, ಕ್ರೀಡೆ ಮತ್ತು ಜನಪ್ರಿಯ ಸಂಸ್ಕೃತಿಯ ಹಲವು ಪ್ರಮುಖ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿರಂಜೀವಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಕಮಲ್ ಹಾಸನ್, ನಾಗಾರ್ಜುನ, ಪ್ರಭಾಸ್, ಬ್ರಹ್ಮಾನಂದಂ, ರವಿತೇಜ, ನಾನಿ, ನಿರ್ದೇಶಕರಾದ ಸಂದೀಪ್ ರೆಡ್ಡಿ ವಂಗಾ ಮತ್ತು ಬಾಬಿ ಕೊಲ್ಲಿ ಸೇರಿದಂತೆ ಭಾರತೀಯ ಚಿತ್ರರಂಗದ ಘಟಾನುಘಟಿಗಳು ಈ ಶೋಗೆ ಅತಿಥಿಗಳಾಗಿ ಆಗಮಿಸುವ ನಿರೀಕ್ಷೆಯಿದೆ. ಗೋಲ್ಡ್ ಬಾಕ್ಸ್ ಎಂಟರ್ಟೈನ್ಮೆಂಟ್ಸ್, ಆಟಮ್ ಮೀಡಿಯಾ ವೆಂಚರ್ಸ್ ಮತ್ತು ಸೋಲ್ ಪ್ರೊಡಕ್ಷನ್ ಎಲ್ಎಲ್ಪಿ ಜಂಟಿಯಾಗಿ ನಿರ್ಮಿಸಿರುವ ‘ಚಿರಂಜೀವಿಸ್ ಮೆಗಾವರ್ಸ್’, ಇದೇ ನವೆಂಬರ್ 30ರಂದು ಸಂಜೆ 4.30ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಪ್ರೀಮಿಯರ್ ಆಗಲಿದೆ.
ಸಿನಿಮಾಗಳಲ್ಲೂ ಬ್ಯುಸಿ ಇರುವ ಚಿರು
ಒಂದೆಡೆ ಟಾಕ್ ಶೋ ನಿರೂಪಕರಾಗಿ ಹೊಸ ಅಧ್ಯಾಯ ಆರಂಭಿಸುತ್ತಿರುವ ಚಿರಂಜೀವಿ, ಮತ್ತೊಂದೆಡೆ ಸಾಲು ಸಾಲು ಸಿನಿಮಾಗಳಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಮಲ್ಲಿಡಿ ವಸಿಷ್ಠ ನಿರ್ದೇಶನದ ಬಹುನಿರೀಕ್ಷಿತ ಫ್ಯಾಂಟಸಿ ಚಿತ್ರ ‘ವಿಶ್ವಂಭರ’ದಲ್ಲಿ ಅವರು ನಟಿಸುತ್ತಿದ್ದು, ತ್ರಿಷಾ ಕೃಷ್ಣನ್ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಇದರೊಂದಿಗೆ, ‘ವಾಲ್ತೇರು ವೀರಯ್ಯ’ ಖ್ಯಾತಿಯ ನಿರ್ದೇಶಕ ಬಾಬಿ ಕೊಲ್ಲಿ ಜೊತೆ ‘ಕಾಕಾ’ ಚಿತ್ರಕ್ಕಾಗಿ ಚಿರು ಮತ್ತೊಮ್ಮೆ ಕೈಜೋಡಿಸಿದ್ದು, ಈ ಸಿನಿಮಾ 2027ರ ಜನವರಿ 13ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ತೆರೆಕಾಣುವ ಸಾಧ್ಯತೆಯಿದೆ.