28 ಎಸೆತಗಳಲ್ಲಿ ಶತಕ, 52 ಎಸೆತಗಳಲ್ಲಿ ದ್ವಿಶತಕ, ಒಂದೇ ಇನಿಂಗ್ಸ್ನಲ್ಲಿ 28 ಸಿಕ್ಸರ್; ವೈಭವ್ ಸೂರ್ಯವಂಶಿಯ ವಿಶ್ವ ದಾಖಲೆಗಳ ವಿವರ!
ಯುಎಇ ವಿರುದ್ಧ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ಲಿಸ್ಟ್ ಎ ಕ್ರಿಕೆಟ್ನಲ್ಲಿ ಹಲವು ವಿಶ್ವದಾಖಲೆಗಳನ್ನು ಬರೆದಿದ್ದಾರೆ. 28 ಎಸೆತಗಳಲ್ಲಿ ಶತಕ, 52 ಎಸೆತಗಳಲ್ಲಿ ದ್ವಿಶತಕ ಹಾಗೂ 28 ಸಿಕ್ಸರ್ಗಳ ನೆರವಿನಿಂದ ಭಾರತ ಎ ತಂಡ 14.2 ಓವರ್ಗಳಲ್ಲೇ ಜಯ ಸಾಧಿಸಿತು.
52 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಹಲವು ವಿಶ್ವ ದಾಖಲೆಗಳನ್ನು ಮುರಿದ ವೈಭವ್ ಸೂರ್ಯವಂಶಿ! -
ದೋಹಾ: ಭಾರತದ 15 ವಯಸ್ಸಿನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಮಂಗಳವಾರ (ನವೆಂಬರ್ 24) ಕ್ರಿಕೆಟ್ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಕತಾರ್ನ ದೋಹಾದಲ್ಲಿ ನಡೆದಿದ್ದ ಎಸಿಸಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ್ದಾರೆ. ಕೇವಲ 28 ಎಸೆತಗಳಲ್ಲಿ ಶತಕ, 52 ಎಸೆತಗಳಲ್ಲಿ ದ್ವಿಶತಕ ಹಾಗೂ ಒಂದೇ ಇನಿಂಗ್ಸ್ನಲ್ಲಿ 28 ಸಿಕ್ಸರ್ಗಳನ್ನು ಸಿಡಿಸಿ ಲಿಸ್ಟ್ ಎ ಕ್ರಿಕೆಟ್ನ ದಾಖಲೆ ಪುಸ್ತಕವನ್ನೇ ವೈಭವ್ ಬದಲಿಸಿದ್ದಾರೆ.
ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸುವ ಮೂಲಕ ಭಾರತ ಎ ತಂಡಕ್ಕೆ 250 ರನ್ಗಳ ಗುರಿಯನ್ನು ಬೆನ್ನಟ್ಟಲು ನೆರವಾದರು. ಅವರ ಸ್ಫೋಟಕ ಬ್ಯಾಟಿಂಗ್ನಿಂದ ಭಾರತ ಎ ತಂಡ ಕೇವಲ 14.2 ಓವರ್ಗಳಲ್ಲಿ ಗುರಿ ತಲುಪಿ ಭರ್ಜರಿ ಜಯ ದಾಖಲಿಸಿತು.
ಕೇವಲ 28 ಎಸೆತಗಳಲ್ಲಿ ಲಿಸ್ಟ್ ಎ ಶತಕ; ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ!
52 ಎಸೆತಗಳಲ್ಲಿ ದ್ವಿಶತಕ
ವೈಭವ್ ಸೂರ್ಯವಂಶಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ 50 ಓವರ್ಗಳ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕದ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ನ್ಯೂಜಿಲೆಂಡ್ನ ಚಾಡ್ ಬೋವ್ಸ್ ಈ ದಾಖಲೆ ಹೊಂದಿದ್ದರು. ಅವರು 2024ರ ಅಕ್ಟೋಬರ್ನಲ್ಲಿ ಕ್ಯಾಂಟರ್ಬರಿ ತಂಡದ ಪರ ಒಟಾಗೊ ವಿರುದ್ಧ 103 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದರು. ಇದೀಗ ಸೂರ್ಯವಂಶಿ ಈ ದಾಖಲೆಯನ್ನು ಅರ್ಧಕ್ಕಿಂತಲೂ ಕಡಿಮೆ ಎಸೆತಗಳಲ್ಲಿ ಮುರಿದಿದ್ದಾರೆ.
ಒಂದೇ ಇನಿಂಗ್ಸ್ನಲ್ಲಿ 28 ಸಿಕ್ಸರ್ಗಳ ವಿಶ್ವದಾಖಲೆ
ದ್ವಿಶತಕದ ಜೊತೆಗೆ ಸೂರ್ಯವಂಶಿ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್ನ ಒಂದೇ ಇನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುಎಇ ವಿರುದ್ಧದ ಪಂದ್ಯದಲ್ಲಿ ಅವರು ಬರೋಬ್ಬರಿ 28 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಡಿ'ಆರ್ಸಿ ಶಾರ್ಟ್ ಹೆಸರಿನಲ್ಲಿ ಈ ದಾಖಲೆ ಇತ್ತು. ಅವರು ಲಿಸ್ಟ್ ಎ ಕ್ರಿಕೆಟ್ನ ಒಂದು ಇನಿಂಗ್ಸ್ನಲ್ಲಿ 23 ಸಿಕ್ಸರ್ಗಳನ್ನು ಬಾರಿಸಿದ್ದರು. ಇದೀಗ ವೈಭವ್ ಐದು ಸಿಕ್ಸರ್ಗಳ ಅಂತರದಿಂದ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಫ್ರೇಸರ್-ಮೆಗರ್ಕ್ ದಾಖಲೆ ಮುರಿದ ವೈಭವ್
ಇದೇ ಪಂದ್ಯದಲ್ಲಿ ಸೂರ್ಯವಂಶಿ ಲಿಸ್ಟ್ ಎ ಕ್ರಿಕೆಟ್ನ ಅತ್ಯಂತ ವೇಗದ ಶತಕದ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಗರ್ಕ್ 2023ರ ಅಕ್ಟೋಬರ್ನಲ್ಲಿ ದಕ್ಷಿಣ ಆಸ್ಟ್ರೇಲಿಯಾ ತಂಡದ ಪರ ಟ್ಯಾಸ್ಮೇನಿಯಾ ವಿರುದ್ಧ 29 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದರೆ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ. ಅಷ್ಟೇ ಅಲ್ಲ, 40 ಎಸೆತಗಳಲ್ಲಿ 150 ರನ್ ಗಳಿಸಿ ಮತ್ತೊಂದು ವೇಗದ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಲಿಸ್ಟ್ ಎ ಕ್ರಿಕೆಟ್ನಲ್ಲಿ ವೇಗದ ದಾಖಲೆಗಳ ಒಡೆಯ
ವೇಗದ ಅರ್ಧಶತಕ: 11 ಎಸೆತಗಳು vs ಶ್ರೀಲಂಕಾ ಎ
ವೇಗದ ಶತಕ: 28 ಎಸೆತಗಳು vs ಯುಎಇ
ವೇಗದ 150 ರನ್: 40 ಎಸೆತಗಳು vs ಯುಎಇ
ವೇಗದ ದ್ವಿಶತಕ: 52 ಎಸೆತಗಳು vs ಯುಎಇ
2️⃣0️⃣4️⃣ Runs 5️⃣3️⃣ Balls 2️⃣8️⃣ Sixes 7️⃣ Fours 3️⃣8️⃣5️⃣ Strike Rate We are running out of superlatives for Vaibhav Sooryavanshi 👏🫡 Updates ▶️ https://t.co/6Vwvc5BnWQ #TeamIndia | #RisingStarsAsiaCup | #INDAvUAE https://t.co/H3kJoSezGV
— BCCI (@BCCI) November 24, 2026
ಪಾಕಿಸ್ತಾನ ವಿರುದ್ಧದ ನಿರಾಸೆ ಮರೆತು ಅಬ್ಬರ
ಭಾನುವಾರ ಪಾಕಿಸ್ತಾನ ಶಾಹೀನ್ಸ್ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವೈಭವ್ ಸೂರ್ಯವಂಶಿ ಅವರಿಂದ ಸಾಧ್ಯವಾಗಲಿಲ್ಲ. ಆದರೆ, ಯುಎಇ ಬೌಲರ್ಗಳ ಮೇಲೆ ಮೊದಲ ಓವರ್ನಿಂದಲೇ ದಾಳಿ ಆರಂಭಿಸಿದ ಅವರು, ಸ್ಪಿನ್ನರ್ಗಳು ಮತ್ತು ವೇಗದ ಬೌಲರ್ಗಳೆನ್ನದೆ ಎಲ್ಲರನ್ನೂ ಸಮಾನವಾಗಿ ದಂಡಿಸಿದರು.
40 ಎಸೆತಗಳಲ್ಲಿ 150 ರನ್ ಗಳಿಸುವ ವೇಳೆಗೆ ಅವರು 20 ಸಿಕ್ಸರ್ಗಳು ಹಾಗೂ ಆರು ಬೌಂಡರಿಗಳನ್ನು ಬಾರಿಸಿದ್ದರು. ದೋಹಾದ ಯೂನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಮೈದಾನದಲ್ಲಿ ಅವರ ಬ್ಯಾಟಿಂಗ್ ಅಬ್ಬರಕ್ಕೆ ಯುಎಇ ಬೌಲರ್ಗಳು ಸಂಪೂರ್ಣವಾಗಿ ತತ್ತರಿಸಿದರು.
ಲಿಸ್ಟ್ ಎ ಕ್ರಿಕೆಟ್ನಲ್ಲಿ ಸೂರ್ಯವಂಶಿ 150 ರನ್ಗಳ ಗಡಿ ದಾಟಿದ್ದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡದ ಪರ ಅರುಣಾಚಲ ಪ್ರದೇಶ ವಿರುದ್ಧ 36 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅವರು, ಅಂತಿಮವಾಗಿ 84 ಎಸೆತಗಳಲ್ಲಿ 190 ರನ್ ಗಳಿಸಿದ್ದರು.
Never in doubt! 🏅 Vaibhav Sooryavanshi is the Player of the Match for an innings we will remember for a very long time! 👏🙌 Scorecard ▶️ https://t.co/6Vwvc5BnWQ #TeamIndia | #RisingStarsAsiaCup | #INDAvUAE https://t.co/TbYuy7mjam
— BCCI (@BCCI) November 24, 2026
ಐಪಿಎಲ್ನಲ್ಲೂ ದಾಖಲೆ ನಿರ್ಮಿಸಿದ್ದ ಯುವ ಆಟಗಾರ
ವೈಭವ್ ಸೂರ್ಯವಂಶಿಗೆ ದಾಖಲೆ ನಿರ್ಮಿಸುವುದು ಹೊಸದೇನಲ್ಲ. ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲೇ ರಾಜಸ್ಥಾನ್ ರಾಯಲ್ಸ್ ಪರ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆ ಮೂಲಕ ಐಪಿಎಲ್ನಲ್ಲಿ ಭಾರತೀಯ ಬ್ಯಾಟರ್ ಒಬ್ಬರು ದಾಖಲಿಸಿದ ಅತ್ಯಂತ ವೇಗದ ಶತಕದ ದಾಖಲೆಯನ್ನು ಬರೆದಿದ್ದರು. ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.