50ನೇ ದಿನದ ಸೆಲೆಬ್ರೇಷನ್, 150+ ಕೋಟಿ ಕಲೆಕ್ಷನ್; ಬ್ಲಾಕ್ ಬಸ್ಟರ್ ʻಪ್ರೇಮದ ಊರಲಿʼ ಚಿತ್ರತಂಡ ಹೇಳಿದ್ದೇನು?
ʻಪ್ರೇಮದ ಊರಲಿʼ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ 150 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ 50 ದಿನಗಳನ್ನು ಪೂರೈಸಿದೆ. ಬಾಯ್ಮಾತಿನ ಪ್ರಚಾರದಿಂದಲೇ ನಾಡಿನಾದ್ಯಂತ ಮನೆಮಾತಾದ ಈ ಚಿತ್ರಕ್ಕೆ ಪ್ರೀತಿ ತೋರಿಸಿದ ಕನ್ನಡಿಗರಿಗೆ ನಾಯಕ ಶ್ರೀರಾಮ್, ನಟಿಯರಾದ ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
-
2026ನೇ ಸಾಲಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಬ್ಲಾಕ್ಬಸ್ಟರ್ ಸಿನಿಮಾ ‘ಪ್ರೇಮದ ಊರಲಿ’ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಕೇವಲ 2 ಕೋಟಿ ರೂಪಾಯಿಗೂ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು, ಆರಂಭದಲ್ಲಿ ಬೆರಳೆಣಿಕೆಯಷ್ಟು ಪ್ರದರ್ಶನಗಳೊಂದಿಗೆ ತೆರೆಕಂಡ ಈ ಚಿತ್ರ, ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದಲೇ ನೂರಾರು ಚಿತ್ರಮಂದಿರಗಳನ್ನು ಆವರಿಸಿಕೊಂಡಿತು.
ಸದ್ಯ ಬಾಕ್ಸ್ ಆಫೀಸ್ನಲ್ಲಿ 150 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡು ಸ್ಯಾಂಡಲ್ವುಡ್ನಲ್ಲಿ ದೊಡ್ಡ ಸಂಚಲನ ಮೂಡಿಸಿರುವ ಈ ಸಿನಿಮಾದ ಭರ್ಜರಿ ಯಶಸ್ಸಿನ ಕುರಿತು ನಾಯಕ ನಟ ಶ್ರೀರಾಮ್, ನಟಿಯರಾದ ರಮಿಕಾ ಶಿವು ಹಾಗೂ ತಪಸ್ವಿನಿ ಪೂಣಚ್ಚ ತಮ್ಮ ಸಂತಸ ಮತ್ತು ಕೃತಜ್ಞತೆಯನ್ನು ಹಂಚಿಕೊಂಡಿದ್ದಾರೆ.
ಉತ್ತರ ಕರ್ನಾಟಕಕ್ಕೆ ನಾವೆಲ್ಲಾ ಬರ್ತಿವಿ
ಚಿತ್ರದ ಐತಿಹಾಸಿಕ ಗೆಲುವಿನ ಬಗ್ಗೆ ಮಾತನಾಡಿದ ನಟ ಶ್ರೀರಾಮ್, "ಮೊದಲ ದಿನದಿಂದ ಇಲ್ಲಿಯವರೆಗೂ ನಮ್ಮ ಸಿನಿಮಾವನ್ನು ಪ್ರೀತಿಸಿ ಆಶೀರ್ವದಿಸಿದ ಕನ್ನಡಿಗರಿಗೆ ಕೋಟಿ ನಮನಗಳು. ನಾನು ನಿಜಜೀವನದಲ್ಲಿ ಎಂದೂ ರೈತನ ಕೆಲಸ ಮಾಡಿದವನಲ್ಲ, ಆದರೆ ಈ ಸಿನಿಮಾ ಮೂಲಕ ಮಣ್ಣನ್ನು ಸ್ಪರ್ಶಿಸಿದ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಿರ್ದೇಶಕರು, ನಿರ್ಮಾಪಕರು, ಸಂಕಲನಕಾರರು, ಛಾಯಾಗ್ರಾಹಕ ರಾಜ್ಕಾಂತ್ ಹಾಗೂ ಎಲ್ಲಾ ತಂತ್ರಜ್ಞರ ಶ್ರಮಕ್ಕೆ ಈ ಗೆಲುವು ಸಲ್ಲಬೇಕು" ಎಂದರು.
ಇದೇ ವೇಳೆ ಸಹನಟರನ್ನು ಶ್ಲಾಘಿಸಿದ ಅವರು, "ರಮಿಕಾ ಶಿವು ಅವರಿಗೆ ಇದು ಮೊದಲ ಸಿನಿಮಾವಾದರೂ ಅದ್ಭುತವಾಗಿ ನಟಿಸಿದ್ದಾರೆ. ತಪಸ್ವಿನಿ ಪೂಣಚ್ಚ ಕಣ್ಣಲ್ಲೇ ಅಭಿನಯಿಸಿ ಗಮನಸೆಳೆದಿದ್ದಾರೆ ಹಾಗೂ ಹಿರಿಯ ನಟ ರಂಗಾಯಣ ರಘು ಸರ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಅವಿಸ್ಮರಣೀಯ ಅನುಭವ. ಸದ್ಯದಲ್ಲೇ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಪ್ರವಾಸ ಮಾಡಿ ನಿಮ್ಮೆಲ್ಲರನ್ನೂ ಖುದ್ದಾಗಿ ಭೇಟಿಯಾಗುತ್ತೇವೆ" ಎಂದು ಭರವಸೆ ನೀಡಿದರು.
ಸಕ್ಸಸ್ ನೋಡಿ ಕೈ-ಕಾಲು ನಡುಗಲಾರಂಭಿಸಿದ್ದವು
ತಮ್ಮ ಚೊಚ್ಚಲ ಚಿತ್ರದಲ್ಲೇ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ನಟಿ ರಮಿಕಾ ಶಿವು ತಮ್ಮ ಅನುಭವ ಹಂಚಿಕೊಂಡು, "ನಿಜ ಹೇಳಬೇಕೆಂದರೆ ಇಷ್ಟೊಂದು ದೊಡ್ಡ ಪ್ರೀತಿಯನ್ನು ನಾವು ಯಾರೂ ನಿರೀಕ್ಷಿಸಿರಲಿಲ್ಲ. ನಮ್ಮ ಗೆಲುವಿಗಿಂತ ಹೆಚ್ಚಾಗಿ ಪ್ರೇಕ್ಷಕರೇ ಇದನ್ನು 'ನಮ್ಮ ಕನ್ನಡ ಸಿನಿಮಾ' ಎಂದು ತಲೆಯ ಮೇಲೆ ಹೊತ್ತು ಸಂಭ್ರಮಿಸುತ್ತಿದ್ದಾರೆ. ಜನರು ನಮ್ಮನ್ನು ನಿಜನಾಮದ ಬದಲು 'ವಸಂತ', 'ರುಕ್ಕು', 'ಸಂತು', 'ನಾಗಣ್ಣ' ಎಂದು ಪಾತ್ರಗಳ ಹೆಸರಿನಿಂದಲೇ ಗುರುತಿಸಿ ಕರೆಯುತ್ತಿರುವುದು ನಟಿಯಾಗಿ ನನಗೆ ಸಿಕ್ಕ ದೊಡ್ಡ ಗೌರವ. ಮೊದಲ ಬಾರಿ ಚಿತ್ರಮಂದಿರಕ್ಕೆ ಹೋದಾಗ ಜನರ ಪ್ರತಿಕ್ರಿಯೆ ಕಂಡು ನನಗೆ ನಂಬಲಾಗದೆ ಕೈ-ಕಾಲು ನಡುಗಲಾರಂಭಿಸಿದ್ದವು. ಇಂದು ಯಾರ ಫೋನ್ ನೋಡಿದರೂ ನಮ್ಮ ಚಿತ್ರದ ಹಾಡು ಕೇಳಿಸುತ್ತಿದೆ, ಆಟೋಗಳ ಮೇಲೆ 'ವಸಂತ' ಪಾತ್ರದ ಫೋಟೋಗಳನ್ನು ನೋಡುವಾಗ ಮನಸ್ಸು ತುಂಬಿ ಬರುತ್ತದೆ" ಎಂದು ಭಾವುಕರಾದರು.
ಯಶಸ್ಸಿನ ಹಿಂದೆ ಹೆಣ್ಣುಮಕ್ಕಳ ಶಕ್ತಿ
ರುಕ್ಮಿಣಿ ಪಾತ್ರಧಾರಿ ನಟಿ ತಪಸ್ವಿನಿ ಪೂಣಚ್ಚ ಮಾತನಾಡಿ, "ಚಿತ್ರ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ ಒಂದು ದಿನವೂ ಮನೆಯಲ್ಲಿ ಕೂರಲು ಸಮಯ ಸಿಗದಷ್ಟು ಪ್ರೀತಿಯನ್ನು ಜನರು ನೀಡುತ್ತಿದ್ದಾರೆ. ಸಕ್ಸಸ್ ಹೇಗೆ ಆಚರಿಸುತ್ತಿದ್ದೀರಿ ಎಂದು ಹಲವರು ಕೇಳುತ್ತಾರೆ; ಚಿತ್ರಮಂದಿರಗಳಲ್ಲಿ ಜನರ ನಡುವೆ ಬೆರೆತಾಗ ಅವರು ಹಾಕುವ ಶಿಳ್ಳೆ, ಚಪ್ಪಾಳೆ ಮತ್ತು ಕೂಗುಗಳೇ ನಮ್ಮ ನಿಜವಾದ ಸಂಭ್ರಮವಾಗಿದೆ. ಈ ಸಿನಿಮಾದ ಯಶಸ್ಸಿನ ಹಿಂದೆ ಹೆಣ್ಣುಮಕ್ಕಳ ಶಕ್ತಿ ಮತ್ತು ಕಾಲ್ಗುಣ ದೊಡ್ಡದಿದೆ. ನಮ್ಮ ಚಿತ್ರದ ನಿರ್ಮಾಪಕಿ, ರುಕ್ಮಿಣಿ, ವಸಂತ ಪಾತ್ರಗಳು ಹಾಗೂ ನಟ ಶ್ರೀರಾಮ್ ಅವರ ಪತ್ನಿಯ ಕಾಲ್ಗುಣದಿಂದಲೂ ಈ ಸಿನಿಮಾ ಇಂದು ಈ ಮಟ್ಟಕ್ಕೆ ಬಂದು ನಿಂತಿದೆ" ಎಂದು ಸಂತಸ ವ್ಯಕ್ತಪಡಿಸಿದರು.
Premada Oorali movie: ಗಂಟೆಗೆ 15 ಸಾವಿರ ಟಿಕೆಟ್ ಮಾರಾಟ; ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಗಳಿಕೆ
ಸಣ್ಣ ಬಜೆಟ್ನ ಸಿನಿಮಾವೊಂದು ಗಟ್ಟಿಯಾದ ಕಥೆ ಮತ್ತು ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರೆ ಎಂತಹ ಅದ್ಭುತ ದಾಖಲೆ ಬರೆಯಬಹುದು ಎಂಬುದಕ್ಕೆ ‘ಪ್ರೇಮದ ಊರಲಿ’ ಸಾಕ್ಷಿಯಾಗಿದೆ. 50 ದಿನಗಳ ನಂತರವೂ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ, ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯವನ್ನು ತುಂಬಿದೆ.