ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಎಂ ವಿಜಯ್‌ ಭೇಟಿ ಮಾಡಿದ ನಟ ಕಮಲ್‌ ಹಾಸನ್;‌ ಚಿತ್ರರಂಗದ ಉಳಿವಿಗಾಗಿ ʻದಳಪತಿʼ ಎದುರು ʻಉಳಗನಾಯಗನ್ʼ ಇಟ್ಟ ಡಿಮ್ಯಾಂಡ್‌ಗಳೇನು?

ನಟ, ರಾಜಕಾರಣಿ ಕಮಲ್ ಹಾಸನ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಭೇಟಿಯಾಗಿ ಚಿತ್ರರಂಗದ ಉಳಿವಿಗಾಗಿ ಪ್ರಮುಖ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಒಟಿಟಿ ಆರಂಭ, ಶೇ.4ರಷ್ಟು ಮನರಂಜನಾ ತೆರಿಗೆ ರದ್ದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯ್‌ಗೆ ಕಮಲ್ ಹಾಸನ್ ಬಿಗ್ ರಿಕ್ವೆಸ್ಟ್; ಸಿಎಂ ಮುಂದಿಟ್ಟ ಬೇಡಿಕೆಗಳೇನು?

-

Avinash GR
Avinash GR May 17, 2026 1:32 PM

ನಟ, ರಾಜಕಾರಣಿ ಕಮಲ್ ಹಾಸನ್ ಅವರು ಶನಿವಾರ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಭೇಟಿಯಾಗಿ, ಸರ್ಕಾರಿ ಸ್ವಾಮ್ಯದ ಒಟಿಟಿ (OTT) ಪ್ಲಾಟ್‌ಫಾರ್ಮ್ ಸ್ಥಾಪನೆ ಮತ್ತು ಮನರಂಜನಾ ತೆರಿಗೆ ರದ್ದತಿ ಸೇರಿದಂತೆ ತಮಿಳು ಚಿತ್ರರಂಗಕ್ಕೆ ಸಂಬಂಧಿಸಿದ ಆರು ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಸಿಎಂ ವಿಜಯ್‌ ಕುರಿತು ಕಮಲ್ ಹಾಸನ್ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

"ನಾನು ತಮಿಳುನಾಡಿನ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಹೋದರ ವಿಜಯ್ ಅವರನ್ನು ಖುದ್ದಾಗಿ ಭೇಟಿಯಾಗಿ ನನ್ನ ಶುಭ ಹಾರೈಕೆಗಳನ್ನು ತಿಳಿಸಿದೆ. ಅವರು ತಮಿಳುನಾಡಿನ ಅಭಿವೃದ್ಧಿಗಾಗಿ ತಮಗಿರುವ ಹಲವಾರು ಕನಸುಗಳನ್ನು ಅತ್ಯಂತ ಉತ್ಸಾಹದಿಂದ ಹಂಚಿಕೊಂಡರು. ಭೇಟಿಯ ಸಂದರ್ಭದಲ್ಲಿ ಅವರು ತೋರಿಸಿದ ನಮ್ರತೆ ಮತ್ತು ಪ್ರೀತಿ ನನ್ನಲ್ಲಿ ಹೆಮ್ಮೆಯನ್ನು ತುಂಬಿತು. ವಿವಿಧ ಅಡೆತಡೆಗಳನ್ನು ಎದುರಿಸುತ್ತಿರುವ ತಮಿಳು ಚಿತ್ರರಂಗಕ್ಕೆ ತಮಿಳುನಾಡು ಸರ್ಕಾರದ ಬೆಂಬಲ ಮತ್ತು ಪ್ರೋತ್ಸಾಹ ಅತ್ಯಗತ್ಯ ಎಂಬುದನ್ನು ಒತ್ತಿಹೇಳುತ್ತಾ, ನಾನು ಅವರಿಗೆ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದೇನೆ" ಎಂದು ಕಮಲ್‌ ಬರೆದುಕೊಂಡಿದ್ದಾರೆ.

Thalapathy Vijay: ನಟ ವಿಜಯ್‌-ಸಂಗೀತಾ ಡಿವೋರ್ಸ್‌ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್‌

ಒಟಿಟಿ ಪ್ಲಾಟ್‌ಫಾರ್ಮ್ ಆರಂಭಿಸಲು ಮನವಿ

"ತಮಿಳು ಪ್ರೇಕ್ಷಕರು, ತಮಿಳು ಸಿನಿಮಾಗಳು, ಸ್ವತಂತ್ರ ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಕೈಗೆಟುಕುವ ಮತ್ತು ಸಬ್ಸಿಡಿ ದರದಲ್ಲಿ ವೀಕ್ಷಿಸಲು ಅನುವಾಗುವಂತೆ ಸರ್ಕಾರಿ ಸ್ವಾಮ್ಯದ ಒಟಿಟಿ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಬೇಕೆಂದು ನಾನು ತಮಿಳುನಾಡು ಸರ್ಕಾರವನ್ನು ವಿನಂತಿಸುತ್ತೇನೆ" ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ.

ಪೈರಸಿಯನ್ನು ತಡೆಗಟ್ಟಿ ಎಂದ ಕಮಲ್‌

"ಹೆಚ್ಚುತ್ತಿರುವ ಚಿತ್ರ ನಿರ್ಮಾಣ, ವಿತರಣೆ ಮತ್ತು ಚಿತ್ರಮಂದಿರಗಳ ನಿರ್ವಹಣಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಸಂಸ್ಥೆಗಳು ವಿಧಿಸುವ ಶೇ.4 ರಷ್ಟು ಮನರಂಜನಾ ತೆರಿಗೆಯನ್ನು ರದ್ದುಗೊಳಿಸಬೇಕೆಂದು ನಾನು ವಿನಂತಿಸುತ್ತೇನೆ. ಇದು ತಮಿಳು ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲಿದೆ. ಪೈರಸಿಯು ಸಾವಿರಾರು ಕಲಾವಿದರು, ತಂತ್ರಜ್ಞರು ಮತ್ತು ನಿರ್ಮಾಪಕರ ಕಠಿಣ ಪರಿಶ್ರಮ ಹಾಗೂ ಹೂಡಿಕೆಯನ್ನು ನಾಶಪಡಿಸುತ್ತದೆ. ಆದ್ದರಿಂದ ಬಲವಾದ ಪೈರಸಿ ವಿರೋಧಿ ತಂಡವನ್ನು ರಚಿಸಬೇಕು" ಎಂದು ಕಮಲ್‌ ಸರ್ಕಾರವನ್ನು ಒತ್ತಾಯಿಸಿದರು.

5 ಶೋ ಕೊಡಿ ಎಂದ ಕಮಲ್

"ಕಳ್ಳತನದಿಂದ ಹಂಚಿಕೆಯಾಗುವ ಕಂಟೆಂಟ್‌ಗಳನ್ನು ತಕ್ಷಣವೇ ಇಂಟರ್ನೆಟ್‌ನಿಂದ ತೆಗೆದುಹಾಕುವ ಅಧಿಕಾರ ಹೊಂದಿರುವ, ತಮಿಳು ಚಿತ್ರರಂಗವನ್ನು ರಕ್ಷಿಸುವ ವಿಶೇಷ ಪೈರಸಿ ವಿರೋಧಿ ಜಾರಿ ತಂಡವನ್ನು ತಮಿಳುನಾಡು ಪೊಲೀಸ್ ಸೈಬರ್ ಕ್ರೈಮ್ ವಿಭಾಗದ ಅಡಿಯಲ್ಲಿ ರಚಿಸಬೇಕೆಂದು ನಾನು ವಿನಂತಿಸುತ್ತೇನೆ. ರಾಜ್ಯಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಎಲ್ಲಾ ಸಿನಿಮಾಗಳಿಗೂ ದಿನಕ್ಕೆ 5 ಪ್ರದರ್ಶನಗಳನ್ನು ನೀಡಲು ಅನುಮತಿ ನೀಡಬೇಕು. ಇದು ಚಿತ್ರಮಂದಿರಗಳ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಚಿತ್ರ ಪ್ರದರ್ಶನ ವಲಯವು ಚೇತರಿಸಿಕೊಳ್ಳಲು ಬೆಂಬಲ ನೀಡುತ್ತದೆ" ಎಂದು ಕಮಲ್‌ ಹೇಳಿದ್ದಾರೆ.

ಕಮಲ್‌ ಹಾಸನ್‌ ಅವರ ಬೇಡಿಕೆಗಳು



"ಚಿತ್ರಮಂದಿರಗಳನ್ನು ರಕ್ಷಿಸಲು, ತಮಿಳುನಾಡಿನಲ್ಲಿ ಬಿಡುಗಡೆಯಾಗುವ ಎಲ್ಲಾ ಚಿತ್ರಗಳಿಗೆ ಕಡ್ಡಾಯವಾಗಿ ಎಂಟು ವಾರಗಳ ಒಟಿಟಿ ಬಿಡುಗಡೆ ಅವಧಿಯನ್ನು (OTT release window) ನಿಯಂತ್ರಿಸಲು ಮತ್ತು ಜಾರಿಗೊಳಿಸಬೇಕು. ಇದು ಚಿತ್ರಮಂದಿರಗಳ ಮಾಲೀಕರು ಮತ್ತು ವಿತರಕರು ಆರ್ಥಿಕವಾಗಿ ಉಳಿಯಲು ಸಹಾಯ ಮಾಡುತ್ತದೆ. ತಮಿಳುನಾಡನ್ನು ದೇಶದ ಪ್ರಮುಖ ಚಲನಚಿತ್ರ ನಿರ್ಮಾಣ ಕೇಂದ್ರವನ್ನಾಗಿ ಮರುಸ್ಥಾಪಿಸಲು ಹಾಗೂ ರಾಜ್ಯಾದ್ಯಂತ ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಿನಿಮಾ ನಿರ್ಮಾಣ ಪ್ರೋತ್ಸಾಹಕ ಯೋಜನೆಯನ್ನು ಪರಿಚಯಿಸಬೇಕು" ಎಂದು ನಟ ಕಮಲ್‌ ಹಾಸನ್‌ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.