ʻವಿಜಯ್ ಸಿಎಂ ಆಗಿದ್ದಕ್ಕೆ ನಾನ್ಯಾಕೆ ಅಸೂಯೆ ಪಟ್ಟುಕೊಳ್ಳಲಿ?ʼ; ಎಲ್ಲಾ ಊಹಾಪೋಹಗಳಿಗೆ ʻತಲೈವಾʼ ರಜನಿಕಾಂತ್ ಫುಲ್ ಸ್ಟಾಪ್
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋಲಿನ ಬಳಿಕ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದ ಕುರಿತು ನಟ ರಜನಿಕಾಂತ್ ಭಾನುವಾರ ಸ್ಪಷ್ಟನೆ ನೀಡಿದ್ದಾರೆ. ನೂತನ ಸಿಎಂ ವಿಜಯ್ ಅವರ ಗೆಲುವನ್ನು ತಡೆಯಲು ತಾವೇನೂ ಪ್ಲಾನ್ ಮಾಡಿಲ್ಲ ಎಂದ ಅವರು, ಸ್ಟಾಲಿನ್ ತಮ್ಮ 40 ವರ್ಷಗಳ ಹಳೆಯ ಸ್ನೇಹಿತ ಎಂದು ಹೇಳಿದ್ದಾರೆ.
-
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷದ ಸೋಲಿನ ನಂತರ ತಾವು ಎಂ. ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರ ಕುರಿತು ʻಸೂಪರ್‌ಸ್ಟಾರ್ʼ ರಜನಿಕಾಂತ್ ಅವರು ಭಾನುವಾರ ಸ್ಪಷ್ಟನೆ ನೀಡಿದ್ದಾರೆ. "ನಾನು ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಒಬ್ಬ ಸ್ನೇಹಿತನಾಗಿ ಭೇಟಿಯಾಗಿದ್ದೆ. ಆದರೆ ವಿಜಯ್ ಅವರು ಮುಂದಿನ ಸಿಎಂ ಆಗುವುದಕ್ಕೆ ನನ್ನ ವಿರೋಧವಿದೆ ಎಂಬಂತೆ ಅದನ್ನು ತಪ್ಪಾಗಿ ಅರ್ಥೈಸಲಾಯಿತು" ಎಂದು ರಜನಿಕಾಂತ್ ಹೇಳಿದ್ದಾರೆ.
ಕಮಲ್ ಸಿಎಂ ಆಗಿದ್ದರೆ ಅಸೂಯೆ ಆಗ್ತಿತ್ತೇನೋ..?
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸಣ್ಣ ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ವಿಜಯ್ ಸಿಎಂ ಆದಮೇಲೆ ಟ್ವೀಟ್ ಮಾಡಿ ರಜನಿಕಾಂತ್ ವಿಶ್ ಮಾಡಿದ್ದರು. ಇದೀಗ ಬಹಿರಂಗವಾಗಿ ಹಲವು ಸ್ಪಷ್ಟನೆಗಳನ್ನು ನೀಡಿದ್ದಾರೆ.
Rajinikanth-Kamal Haasan: ಬರೋಬ್ಬರಿ 4 ದಶಕಗಳ ಬಳಿಕ ತೆರೆಮೇಲೆ ಒಂದಾಗಲಿದ್ದಾರೆ ರಜನಿಕಾಂತ್-ಕಮಲ್ ಹಾಸನ್
"ಚುನಾವಣೆಗೆ ಸಂಬಂಧಿಸಿದಂತೆ ನನ್ನ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನಾನು ಈ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿದ್ದೇನೆ. ಒಂದು ವೇಳೆ ನಾನು ಇವುಗಳಿಗೆ ಪ್ರತಿಕ್ರಿಯಿಸದಿದ್ದರೆ, ಆ ಟೀಕೆಗಳೇ ನಿಜ ಎಂದು ಜನರು ನಂಬಿಬಿಡುತ್ತಾರೆ. ನನ್ನ ಮತ್ತು ವಿಜಯ್ ನಡುವೆ ಜನರೇಷನ್ ಗ್ಯಾಪ್ ಇದೆ. ನಾವು ಸಮಕಾಲೀನರಲ್ಲ. ವಿಜಯ್ ಸಿಎಂ ಆಗಿದ್ದರ ಬಗ್ಗೆ ನಾನು ಯಾಕೆ ಅಸೂಯೆ ಪಡಲಿ? ಒಂದು ವೇಳೆ ಕಮಲ್ ಮುಖ್ಯಮಂತ್ರಿಯಾಗಿದ್ದರೆ ನಾನು ಸ್ವಲ್ಪ ಅಸೂಯೆ ಪಡುತ್ತಿದ್ದೆನೇನೋ.." ಎಂದು ರಜನಿಕಾಂತ್ ತಮಾಷೆ ಮಾಡಿದ್ದಾರೆ.
ವಿಜಯ್ ಗೆದ್ದಿದ್ದು ಆಶ್ಚರ್ಯವಾಗಿದೆ!
"ಚುನಾವಣಾ ಫಲಿತಾಂಶ ಪ್ರಕಟವಾಗಿ ವಿಜಯ್ ಅವರ ಪಕ್ಷ ಗೆಲುವು ಸಾಧಿಸುತ್ತಿದ್ದಂತೆ ನಾನು ಅವರಿಗೆ ಶುಭ ಹಾರೈಸಿದ್ದೆ. ತಮ್ಮ ಮೊದಲ ಚುನಾವಣೆಯಲ್ಲೇ ವಿಜಯ್ ರಾಜ್ಯದ ಮುಖ್ಯಮಂತ್ರಿ ಆಗಿವುರುವುದನ್ನು ಕಂಡು ತಮಗೂ ಆಶ್ಚರ್ಯವಾಗಿದೆ. ಚುನಾವಣಾ ಫಲಿತಾಂಶದ ನಂತರ ನಾನು ಪ್ರೀತಿಯ ಸ್ಟಾಲಿನ್ ಅವರನ್ನು ಭೇಟಿಯಾದೆ. ಅದು ಕೆಲವು ಟೀಕೆಗಳಿಗೆ ಕಾರಣವಾಯಿತು. ಸ್ಟಾಲಿನ್ ಅವರು ಕಳೆದ 38-40 ವರ್ಷಗಳಿಂದ ನನ್ನ ಸ್ನೇಹಿತರು. ನಮ್ಮ ಸ್ನೇಹ ರಾಜಕೀಯವನ್ನು ಮೀರಿದ್ದು. ಪ್ರಜಾಪ್ರಭುತ್ವದಲ್ಲಿ ಗೆಲುವು ಮತ್ತು ಸೋಲು ಸಾಮಾನ್ಯ.
ಆದರೂ, ಸ್ಟಾಲಿನ್ ಅವರೊಂದಿಗಿನ ನನ್ನ ಸ್ನೇಹ ರಾಜಕಾರಣವನ್ನು ಮೀರಿದ್ದು. ಕೊಳತ್ತೂರು ಕ್ಷೇತ್ರದಲ್ಲಿ ಅವರು ಅನುಭವಿಸಿದ ಸೋಲು ತಮಗೆ ಬೇಸರ ತಂದಿದೆ. ಹಾಗಾಗಿ ನಾನು ಅವರನ್ನು ಒಬ್ಬ ಸ್ನೇಹಿತನಾಗಿ ಭೇಟಿಯಾದೆ. ಅದಕ್ಕೆ ಕೆಲವರು, ವಿಜಯ್ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯುವುದು ಹೇಗೆ ಎಂದು ಚರ್ಚಿಸಲು ರಜನಿಕಾಂತ್ ಅಲ್ಲಿಗೆ ಹೋಗಿದ್ದರು ಎಂದು ಮಾತನಾಡಿಕೊಂಡರು.. ಇಂತಹ ಪರಿಸ್ಥಿತಿಯಲ್ಲಿ ನಾನು ಇಷ್ಟನ್ನೇ ಹೇಳಬಲ್ಲೆ, ರಜನಿಕಾಂತ್ ಅಷ್ಟು ಚೀಪ್ ವ್ಯಕ್ತಿಯಲ್ಲ" ಎಂದು ತಲೈವಾ ಹೇಳಿಕೊಂಡಿದ್ದಾರೆ.
ಯಾರಿಗೆ ಏನು ಸಿಗಬೇಕೋ ಅದು ಸಿಕ್ಕೇ ತೀರುತ್ತದೆ
"ನನಗೂ ಮತ್ತು ವಿಜಯ್ ಮಧ್ಯೆ 25 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ. ನನ್ನನ್ನು ನಾನು ವಿಜಯ್ ಜೊತೆ ಹೋಲಿಸಿಕೊಂಡರೆ ಅದು ನನಗೆ ಒಳ್ಳೆಯದಲ್ಲ. ವಿಜಯ್ ತಮ್ಮನ್ನು ನನ್ನ ಜೊತೆ ಹೋಲಿಸಿಕೊಂಡರೆ ಅದು ಅವರಿಗೂ ಒಳ್ಳೆಯದಲ್ಲ. ನಾನು ಅವರನ್ನು ಬಾಲ್ಯದಿಂದಲೂ ನೋಡುತ್ತಿದ್ದೇನೆ. ನಾನು ವಿಮಾನ ನಿಲ್ದಾಣದಲ್ಲಿ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಲಿಲ್ಲ ಎಂದು ಸುದ್ದಿ ಹಬ್ಬಿಸಲಾಯಿತು.
ಆದರೆ ಅವರು ಗೆದ್ದ ತಕ್ಷಣವೇ ನಾನು ಟ್ವಿಟರ್ ಖಾತೆಯಲ್ಲಿ ನನ್ನ ಅಭಿನಂದನೆಗಳನ್ನು ಪೋಸ್ಟ್ ಮಾಡಿದ್ದೆ.. ನಾನು ರಾಜಕೀಯದಲ್ಲಿ ಇಲ್ಲ. ನಾನು ಈಗಾಗಲೇ ರಾಜಕೀಯದಿಂದ ಹೊರಬಂದಿದ್ದೇನೆ. ನಾನು ರಾಜಕೀಯದಲ್ಲೇ ಇಲ್ಲದಿರುವಾಗ, ಅವರ ಬಗ್ಗೆ ನನಗೇಕೆ ಅಸೂಯೆ? ಯಾರಿಗೆ ಏನು ಸಿಗಬೇಕೋ ಅದು ಸಿಕ್ಕೇ ತೀರುತ್ತದೆ, ಸಿಗಬಾರದ್ದು ಸಿಗುವುದಿಲ್ಲ" ಎಂದು ರಜನಿಕಾಂತ್ ಹೇಳಿದ್ದಾರೆ.
ರಜನಿಕಾಂತ್ ಪ್ರತಿಕ್ರಿಯೆ
"People should give him 2yrs of time.. His fans & party members should behave carefully.. It will directly affect Vijay.. After 60yrs, people wanted change. Vijay came with cinema fame, youngsters, ladies & Social media support.."
— Laxmi Kanth (@iammoviebuff007) May 17, 2026
- Superstar #Rajinikanthpic.twitter.com/lG0nW1AsGx
ನನಗೆ ಅಸೂಯೆ ಇಲ್ಲ
"52ನೇ ವಯಸ್ಸಿನಲ್ಲಿ, ಅವರು ಎಂಜಿಆರ್ ಅಥವಾ ಎನ್‌ಟಿಆರ್ ಸಾಧಿಸಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಿದ್ದಾರೆ. ಸಿನಿಮಾ ರಂಗದಿಂದ ಬಂದು, ಅವರು ಪ್ರಬಲ ಪಕ್ಷಗಳನ್ನು ಮತ್ತು ಬಿಜೆಪಿಯನ್ನು ಏಕಾಂಗಿಯಾಗಿ ಸೋಲಿಸಿದ್ದಾರೆ. ನನಗೆ ಅಸೂಯೆ ಇಲ್ಲ, ಬದಲಿಗೆ ಆಶ್ಚರ್ಯ ಮತ್ತು ಸಂತೋಷ ಎರಡೂ ಒಟ್ಟಿಗೇ ಆಗುತ್ತಿದೆ. ನಾನು ಅವರನ್ನು ಪ್ರಶಂಸಿಸುತ್ತೇನೆ. ಹಾಗಾಗಿ ಇಲ್ಲಿ ಯಾವುದೇ ಅಸೂಯೆ ಇಲ್ಲ. ಜನರ ನಿರೀಕ್ಷೆ ವಿಜಯ್ ಅವರ ಮೇಲೆ ತುಂಬಾ ಹೆಚ್ಚಾಗಿದೆ. ಅವರು ಅದನ್ನು ಈಡೇರಿಸುತ್ತಾರೆ ಎಂದು ನಾನು ನಂಬುತ್ತೇನೆ. ಅವರಿಗೆ ನನ್ನ ಶುಭ ಹಾರೈಕೆಗಳು" ಎಂದು ರಜನಿಕಾಂತ್ ತಿಳಿಸಿದರು.