ʻಹಸಿದವರ ಅನ್ನದಾತ, ಹುಡುಕಿದರು ಸಿಗದ ಗುಣವಂತʼ; ಅಗಲಿದ ಸ್ನೇಹಿತ ದಿಲೀಪ್ ರಾಜ್‌ಗಾಗಿ ಹಾಡು ಬರೆದ ನಟ ನವೀನ್ ಕೃಷ್ಣ
ನಟ, ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನವಾಗಿ 9 ದಿನಗಳು ಕಳೆದಿದ್ದು, ಅವರ ಆತ್ಮೀಯ ಗೆಳೆಯ ನಟ ನವೀನ್ ಕೃಷ್ಣ ತಮ್ಮ ಸ್ನೇಹಿತನ ಸವಿನೆನಪಿನಲ್ಲಿ ಮನಮಿಡಿಯುವ ಭಾವುಕ ಗೀತೆಯೊಂದನ್ನು ಬರೆದು ಹಾಡಿದ್ದಾರೆ. ಕಷ್ಟದಲ್ಲಿದ್ದಾಗ ತಮಗೆ ಧೈರ್ಯ ತುಂಬಿ ನಿರ್ದೇಶನ ಕ್ಷೇತ್ರಕ್ಕೆ ಕರೆತಂದ ದಿಲೀಪ್ ರಾಜ್ ಅವರನ್ನು "ಹಸಿದವರ ಅನ್ನದಾತ" ಎಂದು ಕೊಂಡಾಡಿದ್ದಾರೆ.
-
ಕನ್ನಡ ಕಿರುತೆರೆ ಮತ್ತು ಬೆಳ್ಳಿಪರದೆಯ ಜನಪ್ರಿಯ ನಟ, ನಿರ್ಮಾಪಕ ದಿಲೀಪ್ ರಾಜ್ ಅವರ ಹೃದಯಾಘಾತದಿಂದ ನಿಧನರಾಗಿ ಆಗಲೇ 9 ದಿನಗಳು ಕಳೆದಿವೆ. ಮೇ 13ರಂದು ದಿಲೀಪ್ ಅರ ಹಠಾತ್ ನಿಧನ ಇಡೀ ಕರುನಾಡನ್ನೇ ದಿಗ್ಭ್ರಮೆಗೊಳಿಸಿತ್ತು. ದಿಲೀಪ್ ರಾಜ್ ಇಷ್ಟು ಬೇಗನೆ ಸಾವಿನ ಮನೆಯ ಕದ ತಟ್ಟುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇಂದಿಗೂ ಅವರು ನಮ್ಮೊಂದಿಗೇ ಇದ್ದಾರೆ ಎಂಬ ಭಾವನೆಯಲ್ಲಿಯೇ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ದಿನ ದೂಡುತ್ತಿದ್ದಾರೆ.
ಸದ್ಯ ದಿಲೀಪ್ ರಾಜ್ ಅವರ ಆತ್ಮೀಯ ಗೆಳೆಯ, ನಟ ನವೀನ್ ಕೃಷ್ಣ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಗೆಳೆಯನಿಗಾಗಿ ಬರೆದುಕೊಂಡಿರುವ ಮನ ಮಿಡಿಯುವ ಸಾಲುಗಳು ಈಗ ಪ್ರತಿಯೊಬ್ಬರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿವೆ.
"ಒಂದಾನೊಂದು ಕಾಲದಲ್ಲಿ,
ಚಿಕ್ಕದೊಂದು ಗೂಡಿನಲ್ಲಿ...
ಜನಿಸಿದ ಕಂದನು ರಾಜನಾಗಲು,
ಊರೆಲ್ಲಾ ಬೆಳಗಲು,
ದಿಲೀಪನಾಗಲು...
ಒಂದಾನೊಂದು ಕಾಲದಲ್ಲಿ,
ಚಿಕ್ಕದೊಂದು ಗೂಡಿನಲ್ಲಿ...
ಕಲೆಯೋ ಅವನ ಉಸಿರಾಯ್ತು,
ನಗುವೇ ಅವನ ಹೆಸರಾಯ್ತು,
ವಿದ್ಯಾ ಅವನ ಜೊತೆಯಾಯ್ತು,
ಸಾಧನೆ ರೂಢಿಯಾಯ್ತು...
ಹಸಿದವರ... ಅನ್ನದಾತ,
ಹುಡುಕಿದರು ಸಿಗದ... ಗುಣವಂತ
ಯಾರೇ ಕೈ ಮುಗಿದರು,
ಬಿಡದೆ ಕೈ ಹಿಡಿವಾತ.
ವಿಧಿಯು ಬಂದು ಕರೆದರೂ,
ಸಾವಿಗೂ ಕೈ ಚಾಚಿದಾತ...
ಒಂದಾನೊಂದು ಕಾಲದಲ್ಲಿ,
ಚಿಕ್ಕದೊಂದು ಗೂಡಿನಲ್ಲಿ...
ಜನಿಸಿದ ಕಂದನು ರಾಜನಾಗಲು,
ಊರೆಲ್ಲಾ ಬೆಳಗಲು...
ದಿಲೀಪನಾಗಲು..."
- ಇದು ನವೀನ್ ಕೃಷ್ಣ ಬರೆದು ಹಾಡಿರುವ ಹಾಡಿನ ಸಾಲುಗಗಳು. ಅಂದಹಾಗೆ, ದಿಲೀಪ್ ಮತ್ತು ನವೀನ್ ಅವರದ್ದು ಇಂದು ನಿನ್ನೆಯ ಸ್ನೇಹವಲ್ಲ. ಒಂದೇ ಕಾಲೇಜಿನಲ್ಲಿ ಓದುತ್ತಾ, ಒಟ್ಟಿಗೆ ಸಿನಿಮಾ ಕನಸು ಕಂಡವರು. 25 ವರ್ಷಕ್ಕೂ ಹಳೆಯ ಸ್ನೇಹಿತರು. ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ರಂಗಕ್ಕೆ ಒಟ್ಟೊಟ್ಟಿಗೇ ಹೆಜ್ಜೆ ಇಟ್ಟ ಈ ಜೋಡಿ, ಜೀವನದ ಏಳುಬೀಳುಗಳನ್ನು ಜೊತೆಯಾಗಿಯೇ ಎದುರಿಸಿತ್ತು.
ನನ್ನನ್ನ ನಿರ್ದೇಶಕ ಮಾಡಿದ ನಿರ್ದೇಶಕನಿಗೆ....
ನಿರ್ದೇಶನಕನಾಗುವುದಕ್ಕೆ ದಿಲೀಪ್ ಕಾರಣ
ನಟರಾಗಿದ್ದ ನವೀನ್ ಕೃಷ್ಣ ಈಗ ಯಶಸ್ವಿ ಧಾರಾವಾಹಿಗಳ ನಿರ್ದೇಶಕರು. ಆದರೆ ಅವರಗೆ ನಿರ್ದೇಶನ ಕ್ಷೇತ್ರಕ್ಕೆ ಕಾಲಿಡುವಂತೆ ಪ್ರೇರೇಪಿಸಿದ್ದೇ ನಟ ದಿಲೀಪ್ ರಾಜ್. ಸಿನಿಮಾರಂಗದಲ್ಲಿ ಅಂದುಕೊಂಡ ಯಶಸ್ಸು ಸಿಗದೇ ಕಷ್ಟದಲ್ಲಿದ್ದಾಗ, ದಿಲೀಪ್ ರಾಜ್ ಅವರೇ ನವೀನ್ ಕೃಷ್ಣ ಅವರ ಕೈ ಹಿಡಿದಿದ್ದರು. "ನೀನ್ಯಾಕೆ ನಿರ್ದೇಶನ ಮಾಡಬಾರದು?" ಎಂದು ಧೈರ್ಯ ತುಂಬಿ, ಅವರನ್ನು ನಿರ್ದೇಶಕನಾಗುವಂತೆ ಮಾಡಿದರು.
ಸದ್ಯ ತಾವು ಹಂಚಿಕೊಂಡ ವಿಡಿಯೋಗೆ "ನನ್ನನ್ನು ನಿರ್ದೇಶಕನನ್ನಾಗಿ ಮಾಡಿದ ನಿರ್ದೇಶಕನಿಗೆ..." ಎಂದು ಕೈಮುಗಿದು ಭಾವುಕರಾಗಿದ್ದಾರೆ ನವೀನ್. "ನೀನಿಲ್ಲ ಅನ್ನೋದನ್ನ ನನ್ನ ಕೈಲಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀನು ಎಲ್ಲೇ ಇದ್ದರೂ ಎಂದಿನಂತೆ ನಗುನಗುತ್ತಾ ಇರು. ಲವ್ ಯೂ ದಿಲೀಪ..." ಎಂದು ಬರೆದುಕೊಂಡಿದ್ದಾರೆ. ನವೀನ್ ಕೃಷ್ಣ ಅವರ ಈ ಭಾವುಕ ಪೋಸ್ಟ್‌ಗೆ ಸ್ನೇಹಿತರು, ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ದಿಲೀಪ್ ರಾಜ್ ಅವರ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.