‘ನೀನು ಅತ್ಯಂತ ಕೊಳಕು ಮಹಿಳೆ ಎಂದಿದ್ದರು’; ಪತಿ ದರ್ಶನ್ ಹೇಳಿದ್ದ ಆಘಾತಕಾರಿ ಮಾತನ್ನು ಬಹಿರಂಗಪಡಿಸಿದ ನಟಿ ಅಪರಾ ಮೆಹ್ತಾ!
'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಖ್ಯಾತಿಯ ಹಿರಿಯ ನಟಿ ಅಪರಾ ಮೆಹ್ತಾ ತಮ್ಮ ಪತಿ ದರ್ಶನ್ ಜರಿವಾಲಾ ಅವರಿಂದ ಬೇರ್ಪಟ್ಟ ಆಘಾತಕಾರಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಮದುವೆಯ ವಾರ್ಷಿಕೋತ್ಸವದಂದೇ ಅವರಿಗೆ, 'ನನ್ನ ಜೀವನದಲ್ಲಿ ಕಂಡ ಅತ್ಯಂತ ಕೊಳಕು ಮಹಿಳೆ ನೀನು, ನನಗೆ ನಿನ್ನ ಮೇಲೆ ಪ್ರೀತಿ ಇಲ್ಲ' ಎಂದು ಪತಿ ಹೇಳಿ ಹೊರನಡೆದಿದ್ದರು.
-
‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿಯ ‘ಸವಿತಾ ಮನ್ಸುಖ್ ವಿರಾನಿ’ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಹಿರಿಯ ನಟಿ ಅಪರಾ ಮೆಹ್ತಾ, ತಮ್ಮ ವೈಯಕ್ತಿಕ ಜೀವನದ ಕಹಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಪತಿ, ಹಿರಿಯ ನಟ ದರ್ಶನ್ ಜರಿವಾಲಾ ಅವರಿಂದ ಕಾನೂನುಬದ್ಧ ವಿಚ್ಛೇದನ ಪಡೆಯದೇ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ ಕಾರಣ ಹಾಗೂ ಆ ಸಮಯದಲ್ಲಿ ನಡೆದ ಆಘಾತಕಾರಿ ಸಂಭಾಷಣೆಯನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯ ವಾರ್ಷಿಕೋತ್ಸವದಂದೇ ಬಂತು ಆ ಕರೆ!
ತಮ್ಮ ಪ್ರತ್ಯೇಕಗೊಂಡ ದಿನಗಳನ್ನು ನೆನಪಿಸಿಕೊಂಡ ಅಪರಾ ಮೆಹ್ತಾ, "ನಾನು ಒಂದು ಶೋಗಾಗಿ ಅಮೆರಿಕದಲ್ಲಿದ್ದಾಗ ನಮ್ಮ ಮದುವೆಯ ವಾರ್ಷಿಕೋತ್ಸವದ ದಿನದಂದೇ ದರ್ಶನ್‌ಗೆ ಕರೆ ಮಾಡಿದ್ದೆ. ಆಗ ಅವರು ‘ನಾವು ತುರ್ತಾಗಿ ಮಾತನಾಡಬೇಕಾಗಿದೆ’ ಎಂದರು. ಭಾರತಕ್ಕೆ ವಾಪಸ್ ಬಂದ ತಕ್ಷಣ ಅವರು ಈ ಮದುವೆ ಬಂಧವನ್ನು ಮುಂದುವರಿಸಲು ತಮಗೆ ಇಷ್ಟವಿಲ್ಲ ಎಂಬ ವಿಷಯವನ್ನು ತಿಳಿಸಿದರು" ಎಂದು ಹೇಳಿದ್ದಾರೆ.
ಅಮೆರಿಕದಿಂದ ಬಂದಿಳಿದ ತಕ್ಷಣವೇ ಕಹಿ ಅನುಭವ
ಆ ದಿನ ನಡೆದ ಘಟನೆಯನ್ನು ವಿವರವಾಗಿ ಹಂಚಿಕೊಂಡ ನಟಿ ಅಪರಾ, "ಅಮೆರಿಕದಿಂದ ಶೋ ಮುಗಿಸಿ ಬೆಳಗಿನ ಜಾವ 3 ಗಂಟೆಗೆ ಭಾರತಕ್ಕೆ ಲ್ಯಾಂಡ್ ಆದೆ. 5 ಗಂಟೆಗೆ ಮನೆ ತಲುಪಿದ ನನಗೆ ಬೆಳಿಗ್ಗೆ 7 ಗಂಟೆಗೆ ಶೂಟಿಂಗ್ ಇತ್ತು. ಆಗ ದರ್ಶನ್ ನನ್ನ ಬಳಿ ಬಂದು, 'ನೋಡು ಅಪರಾ, ನಾವು ಬೇರೆಯಾಗಬೇಕಾಗಿದೆ. ನನಗೆ ನಿನ್ನ ಮೇಲಿದ್ದ ಪ್ರೀತಿ ಕಡಿಮೆಯಾಗಿದೆ. ನನಗೆ ಈಗ ನಿನ್ನನ್ನು ಇಷ್ಟವಿಲ್ಲ ಮತ್ತು ನನ್ನ ಜೀವನದಲ್ಲಿ ನಾನು ಕಂಡ ಅತ್ಯಂತ ಕೊಳಕು ಮಹಿಳೆ ನೀನು' ಎಂದು ಹೇಳಿದರು" ಎಂದು ಬಹಿರಂಗಪಡಿಸಿದ್ದಾರೆ.
ಶೂಟಿಂಗ್ ಸ್ಪಾಟ್‌ನಲ್ಲಿ ಆಘಾತ, ಆದರೂ ಕಾಯ್ದುಕೊಂಡ ಬಾಂಧವ್ಯ
ಪತಿಯ ಮಾತಿನಿಂದ ಆಘಾತಕ್ಕೊಳಗಾಗಿದ್ದರೂ ಆ ಕ್ಷಣದಲ್ಲಿ ಸುಮ್ಮನೆ ಶೂಟಿಂಗ್‌ಗೆ ತೆರಳಿದ್ದಾಗಿ ಅಪರಾ ತಿಳಿಸಿದ್ದಾರೆ. "ಅಂದು ಶೂಟಿಂಗ್‌ನಲ್ಲಿ ನನಗೆ ಮೂರು ಪ್ರಮುಖ ಸೀನ್‌ಗಳಿದ್ದವು. ಪ್ರಯಾಣದ ಆಯಾಸದಿಂದ ಟೇಕ್‌ಗಳ ಮಧ್ಯೆ ತೂಕಡಿಸುತ್ತಿದ್ದೆ. ಮಧ್ಯಾಹ್ನದ ವೇಳೆಗೆ ನನಗೆ ಅವರ ಮಾತಿನ ಗಂಭೀರತೆ ಅರ್ಥವಾಯಿತು. 'ದರ್ಶನ್ ನಿಜವಾಗಿಯೂ ಹಾಗೆ ಹೇಳಿದರಾ?' ಎಂದು ಯೋಚಿಸತೊಡಗಿದೆ" ಎಂದಿದ್ದಾರೆ.
ಹಿಂದಿ ಕಿರುತೆರೆಯ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ
ತದನಂತರ ದರ್ಶನ್ ಜರಿವಾಲಾ ಮನೆಯಿಂದ ಹೊರನಡೆದರು. ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯದಿದ್ದರೂ, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ, ಇಷ್ಟೆಲ್ಲಾ ನಡೆದಿದ್ದರೂ ಇಂದಿಗೂ ತಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಹಾಗೂ ಗೌರವ ಉಳಿದುಕೊಂಡಿದೆ ಎಂದು ಅಪರಾ ಮೆಹ್ತಾ ಸ್ಪಷ್ಟಪಡಿಸಿದ್ದಾರೆ.