ದೆಹಲಿ ಜಂತರ್ ಮಂತರ್ ಪ್ರತಿಭಟನಾಕಾರರ ಆಹಾರ ತಡೆದಿದ್ದರೆ ಪೊಲೀಸರು? ಸಿಜೆಪಿ ದೂರಿನ ಸತ್ಯಾಸತ್ಯತೆ ಏನು?
CJP: ದೆಹಲಿ ಜಂತರ್ ಮಂತರ್ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರಿಗೆ ಆಹಾರ ತಲುಪಿಸುವುದನ್ನು ದೆಹಲಿ ಪೊಲೀಸರು ತಡೆದಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ ಆರೋಪಿಸಿದೆ. ಆದರೆ ಆಹಾರ ವಿತರಣಾ ಸೇವೆಗಳ ಮೇಲೆ ಯಾವುದೇ ನಿಷೇಧ ಹೇರಿರಲಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಜು. 25: ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ನಡೆದ ವಿದ್ಯಾರ್ಥಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಪೊಲೀಸರ ವಿರುದ್ದ ಮಾಡಿದ್ದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಸಾಬೀತಾಗಿದೆ. ಪ್ರತಿಭಟನಾಕಾರರಿಗೆ ಆಹಾರ ತಲುಪಿಸುವುದನ್ನು ದೆಹಲಿ ಪೊಲೀಸರು ತಡೆದಿದ್ದರು ಎನ್ನುವ ಆರೋಪ ಮಾಡಿತ್ತು. ಸಿಜೆಪಿ ವಕ್ತಾರ ಅಶುತೋಷ್ ರಂಕಾ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ವಾಟ್ಸ್‌ಆ್ಯಪ್ ಚಾಟ್ ಸ್ಕ್ರೀನ್‌ಶಾಟ್ ಹಂಚಿಕೊಂಡು, ಜಂತರ್ ಮಂತರ್‌ನಿಂದ ಸುಮಾರು 5 ಕಿ.ಮೀ. ದೂರದಲ್ಲೇ ಪೊಲೀಸರು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಪ್ರತಿಭಟನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು.
"ನೀವು ಏನೇ ಮಾಡಿದರೂ ಜನರನ್ನು ಜಂತರ್ ಮಂತರ್‌ಗೆ ಬರದಂತೆ ತಡೆಯಲು ಸಾಧ್ಯವಿಲ್ಲ. ನಮಗೆ ಸಿಗುವ ಆಹಾರ ಮತ್ತು ಸಹಾಯವನ್ನು ನಿಲ್ಲಿಸಲು ಸಾಧ್ಯವಿಲ್ಲ" ಎಂದು ಅವರು ಬರೆದುಕೊಂಡಿದ್ದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ನವದೆಹಲಿ ಪ್ರದೇಶದಲ್ಲಿ ಸ್ವಿಗ್ಗಿ, ಝೊಮ್ಯಾಟೊ ಸೇರಿ ಎಲ್ಲ ಆಹಾರ ವಿತರಣಾ ಸೇವೆಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದವು. ಆದರೆ ದೆಹಲಿ ಪೊಲೀಸರು ಈ ವರದಿಗಳನ್ನು ತಕ್ಷಣವೇ ನಿರಾಕರಿಸಿದ್ದು, ಇವು "ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ದಾರಿ ತಪ್ಪಿಸುವ ಸುದ್ದಿಗಳು" ಎಂದು ಸ್ಪಷ್ಟಪಡಿಸಿದ್ದರು. ಸಾರ್ವಜನಿಕರು ಇಂತಹ ಯಾವುದೇ ವದಂತಿ ನಂಬಬಾರದು ಎಂದು ಮನವಿ ಮಾಡಿದ್ದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿಜೆಪಿ ಸಂಭ್ರಮಾಚರಣೆ; ದೀಪ್ಕೆ ಹೇಳಿದ್ದೇನು?
ಪ್ರತಿಭಟನಾ ಸ್ಥಳದಲ್ಲಿದ್ದ ಆಹಾರದ ಖಾಲಿ ಪ್ಯಾಕೆಟ್‌ಗಳನ್ನು ಪರಿಶೀಲಿಸಿ, ಆಹಾರ ಪೂರೈಸುತ್ತಿದ್ದ ಉಪಹಾರ ಗೃಹಗಳು ಮತ್ತು ಕೆಫೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ ಎಂಬ ಮಾಧ್ಯಮ ವರದಿಗಳಿಂದ ಈ ವಿವಾದ ಪ್ರಾರಂಭವಾಯಿತು. ಪೊಲೀಸರು ಹಲವು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಆರ್ಡರ್‌ಗಳ ವಿವರ ಸಂಗ್ರಹಿಸಿದ್ದಾರೆ ಹಾಗೂ ಕೆಲವು ಮಾಲಕರನ್ನು ವಿಚಾರಣೆಗೆ ಕರೆಸಿದ್ದಾರೆ ಎಂದು ಹೇಳಲಾಗಿತ್ತು. ಪ್ರತಿಭಟನೆಯಲ್ಲಿ ಸಮಾಜಘಾತುಕ ಶಕ್ತಿಗಳು ಇರಬಹುದಾದ್ದರಿಂದ ಉಚಿತ ಆಹಾರ ನೀಡುವುದನ್ನು ನಿಲ್ಲಿಸುವಂತೆ ಮತ್ತು ದೊಡ್ಡ ಆನ್‌ಲೈನ್ ಆರ್ಡರ್‌ಗಳ ಬಗ್ಗೆ ಎಚ್ಚರದಿಂದಿರುವಂತೆ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿತ್ತು.
ಇದೇ ವೇಳೆ, ಬಿಎನ್‌ಎಸ್ಎಸ್ ಸೆಕ್ಷನ್ 163ರ ಅಡಿಯಲ್ಲಿ ದೆಹಲಿ ಸಂಚಾರ ಪೊಲೀಸರು ನೀಡಿದ ಸಂಚಾರ ಸಲಹೆಯು ಇನ್ನಷ್ಟು ಗೊಂದಲಕ್ಕೆ ಕಾರಣವಾಯಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಆಹಾರ ವಿತರಣೆ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಗಳು ನಿರ್ಬಂಧಿತ ಪ್ರದೇಶಗಳಲ್ಲಿ ತಮ್ಮ ಕಾರ್ಯಾಚರಣೆಯನ್ನು ನಿಯಂತ್ರಿಸಲು ಸೂಚಿಸಲಾಗಿತ್ತು. ಇದನ್ನು ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಸೇವೆಯ ಸಂಪೂರ್ಣ ನಿಷೇಧವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದರು.
ಗೊಂದಲ ಹೆಚ್ಚಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಅಧಿಕೃತ ಸ್ಪಷ್ಟನೆ ನೀಡಿ, "ನವದೆಹಲಿ ಪ್ರದೇಶದಲ್ಲಿ ಆಹಾರ ವಿತರಣಾ ಆ್ಯಪ್‌ಗಳ ಸೇವೆಗಳ ಮೇಲೆ ಯಾವುದೇ ನಿಷೇಧ ಹೇರಿಲ್ಲ, ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು" ಎಂದು ತಿಳಿಸಿದ್ದರು.