ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನಾನು ಒಬ್ಬಳೇ ಕ್ಯಾರಾವ್ಯಾನ್‌ನಲ್ಲಿ ಇರುವಾಗ, ಆತ ಒಳಬಂದು ತನ್ನ ಶರ್ಟ್‌ ತೆಗೆದʼ; ನಟಿ ಕಾಜಲ್‌ ಅಗರ್ವಾಲ್‌ ಬಿಚ್ಚಿಟ್ಟ ಶೂಟಿಂಗ್‌ ಸೆಟ್‌ನ ಕಹಿ ಘಟನೆ

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ಶೂಟಿಂಗ್ ಸೆಟ್‌ನಲ್ಲಿ ತಮಗೆ ಎದುರಾದ ಆಘಾತಕಾರಿ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಕ್ಯಾರಾವ್ಯಾನ್‌ನಲ್ಲಿ ತಾವು ಒಂಟಿಯಾಗಿದ್ದಾಗ ಸಹಾಯಕ ನಿರ್ದೇಶಕನೊಬ್ಬ ಅನುಮತಿಯಿಲ್ಲದೆ ಒಳಬಂದು, ಶರ್ಟ್ ಬಿಚ್ಚಿ ಎದೆಯ ಮೇಲಿದ್ದ ಟ್ಯಾಟೂ ತೋರಿಸಿದ್ದಾಗಿ ಹೇಳಿದ್ದಾರೆ.

ʻಒಂಟಿಯಾಗಿದ್ದಾಗ ಒಳಬಂದು ಶರ್ಟ್ ತೆಗೆದʼ; ಕಾಜಲ್ ಅಗರ್ವಾಲ್‌ಗೆ ಕಹಿ ಅನುಭವ

-

Avinash GR
Avinash GR Jul 24, 2026 8:29 PM

ಸಿನಿಮಾ ರಂಗದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಬ್ಯುಸಿಯಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್, ಇತ್ತೀಚೆಗೆ ಶೂಟಿಂಗ್ ಸೆಟ್‌ನಲ್ಲಿ ತಮಗೆ ಎದುರಾದ ಆಘಾತಕಾರಿ ಹಾಗೂ ಕಹಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಕ್ಯಾರಾವ್ಯಾನ್‌ನಲ್ಲಿ ತಮ್ಮ ಖಾಸಗಿ ಸಮಯದಲ್ಲಿ ನಡೆದ ಈ ಘಟನೆಯು ತಮ್ಮನ್ನು ಕೆಲಕಾಲ ಆತಂಕಕ್ಕೀಡು ಮಾಡಿತ್ತು ಎಂದು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಮದುವೆ, ಮಗು ಅಂತ ಬಿಡುವು ತೆಗೆದುಕೊಂಡಿದ್ದ ಕಾಜಲ್‌, ತಮ್ಮ ದ್ವಿತೀಯ ಇನಿಂಗ್ಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ಹೊತ್ತಿನಲ್ಲಿ ಸಂದರ್ಶನ ನೀಡಿದ್ದು, ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಪ್ರೈವೇಟ್ ಸ್ಪೇಸ್‌ಗೆ ದಿಢೀರ್ ಎಂಟ್ರಿ!

"ಕೆಲವು ದಿನಗಳ ಹಿಂದೆ ಸಿನಿಮಾವೊಂದರ ಶೂಟಿಂಗ್‌ನಲ್ಲಿ ಮೊದಲ ಟೇಕ್‌ ಮುಗಿಸಿ ನಾನು ನನ್ನ ಕ್ಯಾರಾವ್ಯಾನ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಆ ಸಮಯದಲ್ಲಿ ಆ ಚಿತ್ರದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಯಾವುದೇ ಪೂರ್ವಾನುಮತಿ ಇಲ್ಲದೆ ಹಠಾತ್ತನೆ ನನ್ನ ಕೊಠಡಿಗೆ ಪ್ರವೇಶಿಸಿದ. ಒಳಬರುತ್ತಿದ್ದಂತೆ ಆತ ತನ್ನ ಶರ್ಟ್ ಬಿಚ್ಚಿ, ಎದೆಯ ಮೇಲೆ ನನ್ನ ಹೆಸರಿನಲ್ಲಿ ಹಾಕಿಸಿಕೊಂಡಿದ್ದ ಟ್ಯಾಟೂವನ್ನು ತೋರಿಸಿದ. ಒಬ್ಬಳೇ ಇದ್ದಾಗ ನಡೆದ ಈ ಅನಿರೀಕ್ಷಿತ ಘಟನೆಯಿಂದ ನನ್ನ ಕೈಕಾಲುಗಳು ನಡುಗಿಹೋದವು" ಎಂದು ಕಾಜಲ್ ಆತಂಕದ ಕ್ಷಣವನ್ನು ವಿವರಿಸಿದ್ದಾರೆ.

Kajal Aggarwal: ಸೌತ್‌ನವರ ಈ ಗುಣವನ್ನು ಬಾಲಿವುಡ್‌ ಕಲಿಯಬೇಕು ಎಂದ ಕಾಜಲ್ ಅಗರ್ವಾಲ್

ಅಭಿಮಾನಿಗಳ ಪ್ರೀತಿಯ ಬಗ್ಗೆ ಗೌರವ ವ್ಯಕ್ತಪಡಿಸಿದ ಕಾಜಲ್‌ ಅವರು, "ನಟಿಯಾಗಿ ಅಭಿಮಾನಿಗಳು ತೋರಿಸುವ ಪ್ರೀತಿಯನ್ನು ನಾನು ಮನಸ್ಪೂರ್ವಕವಾಗಿ ಗೌರವಿಸುತ್ತೇನೆ. ನನ್ನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಸಂತೋಷವೇ ಇದೆ. ಆದರೆ ಒಬ್ಬ ಮಹಿಳೆ ಒಂಟಿಯಾಗಿರುವಾಗ, ಯಾವುದೇ ಅನುಮತಿ ಪಡೆಯದೆ ಆಕೆಯ ಖಾಸಗಿ ಜಾಗಕ್ಕೆ ಪ್ರವೇಶಿಸುವುದು ಸರಿಯಾದ ಪದ್ಧತಿಯಲ್ಲ. ಹೀಗಾಗಿ ಆ ವಿಷಯದ ಸೂಕ್ಷ್ಮತೆಯನ್ನು ಆತನಿಗೆ ಮೃದುವಾಗಿ ತಿಳಿಸಿ ಎಚ್ಚರಿಕೆ ನೀಡಿದೆ" ಎಂದು ಹೇಳಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ

ಇತ್ತೀಚೆಗೆ ನಂದಮೂರಿ ಬಾಲಕೃಷ್ಣ ಜೋಡಿಯಾಗಿ 'ಭಗವಂತ್ ಕೇಸರಿ' ಚಿತ್ರದಲ್ಲಿ ರಂಜಿಸಿದ್ದ ಕಾಜಲ್, ಈಗ ಮತ್ತೆ ಗೋಪಿಚಂದ್ ಮಲಿನೇನಿ ನಿರ್ದೇಶನದ ನೂತನ ಸಿನಿಮಾದಲ್ಲಿ ಮತ್ತೆ ಬಾಲಯ್ಯಗೆ ಹೀರೊಯಿನ್ ಆಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಬಾಲಿವುಡ್‌ನ ಪ್ರತಿಷ್ಠಿತ ಬಿಗ್ ಬಜೆಟ್ ಸಿನಿಮಾ 'ರಾಮಾಯಣ'ದಲ್ಲಿ ಮಂಡೋದರಿ ಪಾತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್‌ಗೆ ಜೋಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಪರಿಸರ ಸಮಸ್ಯೆ ಹಾಗೂ ಆಹಾರ ಕಲಬೆರಕೆ ಹಿನ್ನೆಲೆಯಲ್ಲಿ ತೆರೆಕಂಡ 'ದಿ ಇಂಡಿಯಾ ಸ್ಟೋರಿ' ಚಿತ್ರದಲ್ಲಿ ವಕೀಲೆಯಾಗಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದರು.

ಈ ಎಲ್ಲ ಯಶಸ್ಸಿನ ನಡುವೆಯೂ ಶೂಟಿಂಗ್ ಸೆಟ್‌ಗಳಲ್ಲಿ ಮಹಿಳಾ ಕಲಾವಿದರ ಸುರಕ್ಷತೆ ಮತ್ತು ಖಾಸಗಿತನದ ಕುರಿತು ಕಾಜಲ್ ಹಂಚಿಕೊಂಡಿರುವ ಈ ಘಟನೆ ಚಲನಚಿತ್ರ ರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.