Majestic 2 Movie: ಪಾತ್ರಕ್ಕಾಗಿ ಹಿಡನ್ ಕ್ಯಾಮೆರಾ ಇಟ್ಕೊಂಡು ಮೆಜೆಸ್ಟಿಕ್‌ನಲ್ಲಿ ರಾತ್ರಿ ಕಳೆದ ನಟಿ ಸಂಹಿತಾ ವಿನ್ಯಾ!
Majestic 2 Movie Update: ನಟಿ ಸಂಹಿತಾ ವಿನ್ಯಾ ಸದ್ಯ 'ಮೆಜೆಸ್ಟಿಕ್ 2' ಚಿತ್ರಕ್ಕಾಗಿ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಹಳ್ಳಿಯಿಂದ ಬಂದ ಗಾರ್ಮೆಂಟ್ಸ್ ಹುಡುಗಿಯ ಪಾತ್ರ ಮಾಡುತ್ತಿರುವ ಅವರು, ನೈಜತೆಗಾಗಿ ಮೆಜೆಸ್ಟಿಕ್ ಏರಿಯಾದಲ್ಲಿ ಹಿಡನ್ ಕ್ಯಾಮೆರಾ ಹಿಡಿದು ರಾತ್ರಿಪೂರ ಓಡಾಡಿ ಅಲ್ಲಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ್ದಾರಂತೆ.
-
ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿರುವ ಬಹುಭಾಷಾ ನಟಿ ಸಂಹಿತಾ ವಿನ್ಯಾ ಸದ್ಯ ʻಮೆಜೆಸ್ಟಿಕ್ 2ʼ ಸಿನಿಮಾದ ಮೂಲಕ ಕಮಾಲ್ ಮಾಡೋಕೆ ರೆಡಿ ಆಗಿದ್ದಾರೆ. ಈಚೆಗೆ ತೆರೆಕಂಡಿದ್ದ ಜಿಎಸ್‌ಟಿ ಸಿನಿಮಾದಲ್ಲೂ ನಟಿಸಿದ್ದ ಸಂಹಿತಾ ಈಗ ಮೆಜೆಸ್ಟಿಕ್ 2 ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಪಾತ್ರಕ್ಕಾಗಿ ಮೆಜೆಸ್ಟಿಕ್‌ನಲ್ಲಿ ಸುತ್ತಾಟ
ಹೌದು, ʻಮೆಜೆಸ್ಟಿಕ್ 2ʼ ಸಿನಿಮಾದಲ್ಲಿ ಸಂಹಿತಾಗೆ ಗಾರ್ಮೆಂಟ್‌ನಲ್ಲಿ ಕೆಲಸ ಮಾಡೋ ಹುಡುಗಿಯ ಪಾತ್ರ. ಹಾಗಾಗಿ, ಆ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿತ್ತಂತೆ. ಜೊತೆಯಾಗಿ ಒಬ್ಬಂಟಿ ಉದ್ಯೋಗಸ್ಥ ಹೆಣ್ಣು ಮಕ್ಕಳು ಬೆಂಗಳೂರಿನಂತಹ ಮಹಾನಗರದಲ್ಲಿ ಹೇಗೆ ಬದುಕು ಕಟ್ಟಿಕೊಳ್ಳುತ್ತಾರೆ? ಯಾವೆಲ್ಲಾ ಸವಾಲುಗಳನ್ನು ಎದುರಿಸುತ್ತಾರೆ ಎಂಬುದನ್ನು ಈ ಪಾತ್ರದ ಮೂಲಕ ತೋರಿಸಲಾಗಿದೆಯಂತೆ.
IIFA 2025: IIFA 2025 ಗ್ರೀನ್ ಕಾರ್ಪೆಟ್‌ನಲ್ಲಿ ಮಿಂಚಿದ ಕನ್ನಡದ ನಟಿ, ಸೂಪರ್ ಮಾಡೆಲ್ ಸಂಹಿತಾ ವಿನ್ಯಾ
"ಮೆಜೆಸ್ಟಿಕ್‌ನಂತಹ ಏರಿಯಾಗಳಲ್ಲಿನ ಸ್ಥಿತಿಗತಿಗಳನ್ನು ತಿಳಿಯುವುದಕ್ಕೆ ಹಿಡನ್ ಕ್ಯಾಮರಾ ಇಟ್ಕೊಂಡು ರಾತ್ರಿಪೂರ ಅಲ್ಲಿ ಓಡಾಡಿದ್ದೆ. ಹೀಗಾಗಿ ನನ್ನ ಪಾತ್ರವು ವಿಭಿನ್ನವಾಗಿ ಮತ್ತು ನ್ಯಾಚುರಲ್ ಆಗಿ ಮೂಡಿಬರಲು ಸಹಾಯಕವಾಯ್ತು" ಎನ್ನುತ್ತಾರೆ ಸಂಹಿತಾ ವಿನ್ಯಾ.
"ಹಳ್ಳಿ ಹುಡುಗಿಯೊಬ್ಬಳು ಮೆಜೆಸ್ಟಿಕ್‌ಗೆ ಬಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅಲ್ಲಿ ಆಕೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ ಎಂಬುದನ್ನು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ. ಈ ಚಿತ್ರದಲ್ಲಿ ಭೂಗತ ಲೋಕದ ಕಥೆ ಇದೆ. ಅದರ ಜೊತೆಗೆ ಲವ್ ಸ್ಟೋರಿಯನ್ನು ಕೂಡ ಕಥೆಯೊಳಗೆ ಬ್ಲೆಂಡ್ ಮಾಡಿದ್ದಾರೆ. ಹಳ್ಳಿಗಳಿಂದ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಳ್ಳುವ ಹುಡುಗಿಯರಿಗೆ ಈ ಪಾತ್ರ ಮನಮುಟ್ಟುತ್ತದೆ ಎಂಬ ಭರವಸೆ ನನಗೆ ಇದೆ" ಎನ್ನುವುದು ಸಂಹಿತಾ ವಿನ್ಯಾ ಅಭಿಪ್ರಾಯ.
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಮಗ ಭರತ್ ಅವರು 'ಮೆಜೆಸ್ಟಿಕ್ 2' ಸಿನಿಮಾದ ಮೂಲಕ ಹೀರೋ ಆಗಿದ್ದಾರೆ. ಅವರ ಎದುರು ಸಂಹಿತಾ ನಾಯಕಿಯಾಗಿದ್ದಾರೆ. ಅಮ್ಮಾ ಎಂಟರ್‌ಪ್ರೈಸಸ್ ಮೂಲಕ ಎಚ್ ಆನಂದಪ್ಪ ಅವರು ಈ ಸಿನಿಮಾಕ್ಕೆ ಹಣ ಹಾಕಿದ್ದು, ಹೀರೋ ತಾಯಿ ಪಾತ್ರದಲ್ಲಿ ನಟಿ ಶ್ರುತಿ ಅವರು ಕಾಣಿಸಿಕೊಂಡಿದ್ದಾರೆ. ವಿನು ಮನಸು ಅವರ ಸಂಗೀತ ಸಂಯೋಜನೆಯಿರುವ ಮೆಜೆಸ್ಟಿಕ್ 2 ಸಿನಿಮಾಕ್ಕೆ ವೀನಸ್ ಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.