ಹೊಸ ರೂಪದಲ್ಲಿ ಮತ್ತೆ ಬರಲಿದೆ ʻಭೀಮಾ ತೀರದಲ್ಲಿʼ; ತೆಲುಗಿಗೆ ʻಕಡಪʼ ಹೆಸರಿನಲ್ಲಿ ಡಬ್ ಆಯ್ತು ʻದುನಿಯಾʼ ವಿಜಯ್ ಸಿನಿಮಾ
Bheema Theeradalli Re-Release: ದುನಿಯಾ ವಿಜಯ್ ಅಭಿನಯದ 'ಭೀಮಾ ತೀರದಲ್ಲಿ' ಚಿತ್ರ 14 ವರ್ಷಗಳ ನಂತರ ಹೊಸ ರೂಪದಲ್ಲಿ ತೆರೆಗೆ ಬರಲಿದೆ. ನಿರ್ಮಾಪಕ ಅಣಜಿ ನಾಗರಾಜ್ ಅವರು ಈ ಚಿತ್ರವನ್ನು ನೆಗೆಟಿವ್‌ನಿಂದ ಡಿಜಿಟಲ್ ರೂಪಕ್ಕೆ ತಂದು, ಸ್ವಲ್ಪ ಟ್ರಿಮ್ ಮಾಡಿ ಮಾರ್ಚ್ 6ರಂದು ಬಿಡುಗಡೆ ಮಾಡುತ್ತಿದ್ದಾರೆ.
-
ದುನಿಯಾ ವಿಜಯ್ ನಾಯಕತ್ವದಲ್ಲಿ, ಎನ್. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಭೀಮಾ ತೀರದಲ್ಲಿ ಸಿನಿಮಾವು 14 ವರ್ಷಗಳ ಹಿಂದೆ ತೆರೆಕಂಡಿತ್ತು. ವೀರ ಫಿಲಂಸ್ ಮೂಲಕ ಅಣಜಿ ನಾಗರಾಜ್ ಅವರು ನಿರ್ಮಿಸಿದ್ದ ಈ ಸಿನಿಮಾ ಅಂದು ಹಿಟ್ ಎನಿಸಿಕೊಂಡಿತ್ತು. ಇದೀಗ ಆ ಚಿತ್ರವನ್ನು ಪುನಃ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಬಾರಿ ಅದನ್ನು ಡಿಜಿಟಲ್ ರೂಪದಲ್ಲಿ ರಿಲೀಸ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.
ಓಂ ಪ್ರಕಾಶ್ ರಾವ್ ಏನ್ ಹೇಳ್ತಾರೆ?
"ನಾನು ಅಣಜಿ ನಾಗರಾಜ್ ಅವರ ಜೊತೆ ತುಂಬಾ ಸಿನಿಮಾಗಳನ್ನು ಮಾಡಿದ್ದೇನೆ. ಅದರಲ್ಲಿ ʻಭೀಮಾ ತೀರದಲ್ಲಿʼ ಸಿನಿಮಾ ಅಂದು ತುಂಬಾ ಸದ್ದು ಮಾಡಿ, ಯಶಸ್ವೀ ಪ್ರದರ್ಶನ ಕಂಡಿತ್ತು. ಆ ಚಿತ್ರದ ಹಿಂದೆ ಕಥೆಗಳು ತುಂಬಾ ಇವೆ. ನಡೆಯಲು ಸಾಧ್ಯವಾಗದೇ ಇದ್ದಂತಹ ನಟ ಲೋಕನಾಥ್ ಅವರು ಅಂದು ಅಟ್ಟವನ್ನೇ ಹತ್ತಿ ಅಭಿನಯಿಸಿದ್ದರು, ಸಿನಿಮಾಗೆ ನಿರ್ಮಾಪಕ ಅಣಜಿ ನಾಗರಾಜ್ ತುಂಬಾ ಕಷ್ಟಪಟ್ಟಿದ್ದರು. ನಂತರ ಚಿತ್ರ ಯಶಸ್ವಿಯೂ ಆಗಿತ್ತು. ಇದೀಗ ನೆಗೆಟಿವ್‌ನಲ್ಲಿದ್ದ ಚಿತ್ರವನ್ನು ಸ್ವಲ್ಪ ಟ್ರಿಮ್ ಮಾಡಿ ಡಿಜಿಟಲ್ ರೂಪಕ್ಕೆ ತಂದು ರಿಲೀಸ್ ಮಾಡುತ್ತಿದ್ದಾರೆ. ಕನ್ನಡ ಅಲ್ಲದೆ ತೆಲುಗು, ತಮಿಳು ಸೇರಿ ಬೇರೆ ಭಾಷೆಗಳಿಗೂ ಡಬ್ ಮಾಡಿಸಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದಾರೆ. ನಾನೇ ಯೂಟ್ಯೂಬ್‌ನಲ್ಲಿ ಐದಾರು ಸಲ ಈ ಚಿತ್ರವನ್ನು ನೋಡಿದ್ದೇನೆ. ಅಂದು ಡೈಲಾಗ್ ಮತ್ತು ಮೇಕಿಂಗ್ ವಿಚಾರದಲ್ಲಿ ನಾವು ತುಂಬಾ ಕೆಲಸ ಮಾಡಿದ್ದೆವು" ಎನ್ನುತ್ತಾರೆ ಓಂ ಪ್ರಕಾಶ್ ರಾವ್.
ಭೀಮಾ ತೀರದಲ್ಲಿ ಚಿತ್ರದ ಬಜೆಟ್ ಎಷ್ಟು?
"ಅಪ್‌ಡೇಟ್ ಆಗಿರುವ ನಮ್ಮ ಸಿನಿಮಾ ಭೀಮಾ ತೀರದಲ್ಲಿ ಮಾರ್ಚ್ 6ರಂದು ರಿಲೀಸ್‌ಆಗುತ್ತಿದೆ. ನಾನು ತುಂಬಾ ಇಷ್ಟಪಟ್ಟು ಮಾಡಿದ ಚಿತ್ರ ಇದು. ಈಗ ಎಡಿಟ್ ಮಾಡಿ ಹೊಸ ರೂಪದಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಡಿಜಿಟಲ್‌ಗೂ ರೀಲ್‌ಗೂ ತುಂಬಾ ವ್ಯತ್ಯಾಸವಿದೆ. ರೀಲ್ ಕ್ವಾಲಿಟಿ ಡಿಜಿಟಲ್‌ನಲ್ಲಿ ಮಾಡಲು ಸಾಧ್ಯವಿಲ್ಲ. ನೆಗೆಟಿವ್‌ನಲ್ಲಿ ನಮ್ಮ ಚಿತ್ರವೇ ಕೊನೆಯದಾಗಿತ್ತು. 14 ವರ್ಷಗಳಾದರೂ ನೋಡುವಾಗ ಈಗಷ್ಟೇ ರೆಡಿಯಾದ ಚಿತ್ರ ಎಂಬಂತೆ ಇರುತ್ತದೆ. ಆಗ 5-6 ಕೋಟಿ ರೂ.ಗಳಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಆದರೆ ಇದನ್ನು ಈಗ ನೋಡಿದರೆ 50-60 ಕೋಟಿ ರೂ. ಬಜೆಟ್‌ನ ಸಿನಿಮಾ ಅನಿಸುತ್ತದೆ" ಎಂದು ನಿರ್ಮಾಪಕ ಅಣಜಿ ನಾಗರಾಜ್ ಅವರು ಹೇಳಿದ್ದಾರೆ.
ಮೊದಲ ಎರಡು ಭಾಷೆಯಲ್ಲಿ ರಿಲೀಸ್
"ನನ್ನ ಸ್ನೇಹಿತ ವೆಂಕಟೇಶ್ ಹಾಗೂ ಇನ್ನಿತರರು ಸೇರಿ ಭೀಮಾ ತೀರದಲ್ಲಿ ಸಿನಿಮಾವನ್ನು ತೆಲುಗಿಗೆ ಕಡಪ ಎಂಬ ಹೆಸರಿನಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಮಾರ್ಚ್ 6ರಂದು ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. 2 ಬಿಟ್ಟು ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ನಮ್ಮ ಸಿನಿಮಾದ ಹೀರೋ ವಿಜಯ್ ಅವರು ರಿಲೀಸ್ ಟೈಮ್‌ನಲ್ಲಿ ನಮ್ಮ ಜೊತೆಗೆ ಇರುತ್ತಾರೆ" ಎಂದು ನಿರ್ಮಾಪಕ ಅಣಜಿ ನಾಗರಾಜ್ ಅವರು ತಿಳಿಸಿದ್ದಾರೆ.