ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಟಾರ್‌ ಸುವರ್ಣದಲ್ಲಿ ಬರ್ತಿದೆ ಹೊಸ ಧಾರಾವಾಹಿ ʻಆನಂದ ನಿಲಯʼ; ಮುಖ್ಯಪಾತ್ರದಲ್ಲಿ 'ಆಕಾಶದೀಪ' ಖ್ಯಾತಿಯ ನಟಿ ದಿವ್ಯ ಶ್ರೀಧರ್

'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ 'ಆನಂದ ನಿಲಯ' ಎಂಬ ನೂತನ ಕೌಟುಂಬಿಕ ಧಾರಾವಾಹಿ ಪ್ರಸಾರವಾಗಲಿದೆ. 'ಆಕಾಶದೀಪ' ಖ್ಯಾತಿಯ ದಿವ್ಯ ಶ್ರೀಧರ್ ಹಾಗೂ ಹಿರಿಯ ನಟ ರಾಕೇಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಧಾರಾವಾಹಿಯನ್ನು ಆದರ್ಶ್ ಹೆಗಡೆ ನಿರ್ದೇಶಿಸಿದ್ದು, ಜಿಯೋಹಾಟ್‌ಸ್ಟಾರ್‌ನಲ್ಲೂ ವೀಕ್ಷಿಸಬಹುದು.

ʻಆನಂದ ನಿಲಯʼ ಸೀರಿಯಲ್‌ ಮೂಲಕ ʻಆಕಾಶದೀಪʼ ನಟಿ ದಿವ್ಯ ಶ್ರೀಧರ್ ಕಂಬ್ಯಾಕ್!

-

Avinash GR
Avinash GR Aug 7, 2026 8:20 PM

ಕನ್ನಡ ಕಿರುತೆರೆಯಲ್ಲಿ ವಿನೂತನ ಧಾರಾವಾಹಿಗಳನ್ನು ನೀಡುತ್ತಿರುವ 'ಸ್ಟಾರ್ ಸುವರ್ಣ' ವಾಹಿನಿ ಇದೀಗ ʻಆನಂದ ನಿಲಯʼ ಎಂಬ ಹೊಸ ಕಥಾಹಂದರವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. 'ಜೈಲಲಿತಾ' ಹಾಗೂ 'ಮರ್ಯಾದೆ ರಾಮಣ್ಣ' ಧಾರಾವಾಹಿಗಳ ಯಶಸ್ಸಿನ ಬಳಿಕ ಈ ಹೊಸ ಕಥೆ ಪ್ರಸಾರವಾಗುತ್ತಿದೆ.

ಈ ಧಾರಾವಾಹಿಯ ಕಥಾ ಸಾರಾಂಶ ಏನು?

ಇದು ಸುಂದರ ಕೂಡು ಕುಟುಂಬದ ಕಥೆ. ತಂದೆಯ ಹಿಟ್ಟಿನ ಗಿರಣಿಯನ್ನು ಒಟ್ಟಾಗಿ ನಿರ್ವಹಿಸುವ ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್ ಎಂಬ ನಾಲ್ಕು ಸಹೋದರರು ಈ ಕುಟುಂಬದ ಕೇಂದ್ರಬಿಂದು. ಹಿರಿಯಣ್ಣ ಧರ್ಮ ತಮ್ಮಂದಿರಿಗೆ ತಂದೆ ಹಾಗೂ ಗೆಳೆಯನಾಗಿ ಬೆನ್ನೆಲುಬಾಗಿ ನಿಂತರೆ, ಧರ್ಮನ ಪತ್ನಿ ಸುಧಾ ಮಹಾಲಕ್ಷ್ಮಿಯಂತೆ ಮೈದುನರನ್ನು ಮಕ್ಕಳಂತೆ ಸಲಹುತ್ತಾ ಮನೆಗೆ ಅಮ್ಮನಂತಿದ್ದಾರೆ.

ತಮ್ಮ ವೈವಾಹಿಕ ಜೀವನಕ್ಕಿಂತಲೂ ಸಹೋದರರ ಸಂತೋಷಕ್ಕೇ ಹೆಚ್ಚಿನ ಆದ್ಯತೆ ನೀಡುವ ಈ ದಂಪತಿ, ಮುಂದಿನ ದಿನಗಳಲ್ಲಿ ಮನೆಗೆ ಸೊಸೆಯಂದಿರು ಬಂದ ಮೇಲೆ ಎದುರಾಗುವ ಸವಾಲುಗಳು ಮತ್ತು ಬದಲಾವಣೆಗಳನ್ನು ಹೇಗೆ ಎದುರಿಸುತ್ತಾರೆ ಎಂಬುದೇ ‘ಆನಂದ ನಿಲಯ’ ಸೀರಿಯಲ್‌ ಮುಖ್ಯ ಕಥಾವಸ್ತು.

ಯಾರೆಲ್ಲಾ ಇದ್ದಾರೆ ಈ ಧಾರಾವಾಹಿಯಲ್ಲಿ?

13 ವರ್ಷಗಳ ಹಿಂದೆ 'ಆಕಾಶದೀಪ' ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯ ಶ್ರೀಧರ್ 'ಸುಧಾ' ಪಾತ್ರದ ಮೂಲಕ ಸುವರ್ಣ ಪರಿವಾರಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. 'ಧರ್ಮ'ನ ಪಾತ್ರದಲ್ಲಿ ಹಿರಿಯ ನಟ ರಾಕೇಶ್ ನಟಿಸುತ್ತಿದ್ದು, ತಮ್ಮಂದಿರಾಗಿ ಕೌಶಿಕ್, ಹರ್ಷ ಮತ್ತು ನಿತೀಶ್ ನಟಿಸುತ್ತಿದ್ದಾರೆ. ಉಳಿದಂತೆ, ಚಿತ್ಕಲಾ ಬಿರಾದರ್, ಸಿತಾರಾ, ಸಪ್ನ ದೀಕ್ಷಿತ್, ನಯನ ಶೆಟ್ಟಿ, ನಿಶಾ, ರೇಷ್ಮಾ ಮುಂತಾದ ಅನುಭವಿ ನಟ-ನಟಿಯರ ಬಳಗವಿದೆ.

Photos: 'ಸುವರ್ಣ ಸಂಕ್ರಾಂತಿ' ಸಂಭ್ರಮದಲ್ಲಿ ಸ್ಟಾರ್‌ ಸುವರ್ಣ ತಾರೆಯರ ಸಮಾಗಮ; ಯಾರೆಲ್ಲಾ ಇದ್ದಾರೆ ನೋಡಿ

'ನೀಲಾ ಪ್ರೊಡಕ್ಷನ್' ಬ್ಯಾನರ್ ಅಡಿಯಲ್ಲಿ ಸುಬ್ರಮಣ್ಯ ಮೂರ್ತಿನಾಥ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಆದರ್ಶ್ ಹೆಗಡೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ʻಆನಂದ ನಿಲಯʼ ಧಾರಾವಾಹಿಯು ಇದೇ ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ 'ಸ್ಟಾರ್ ಸುವರ್ಣ' ವಾಹಿನಿ ಹಾಗೂ 'JioHotstar'ನ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಲಿದೆ.