Annayya: ಮಾರಿಗುಡಿ ಮನೆಮಗ ಶಿವಣ್ಣನ 'ಮಡಿಲು' ಯೋಜನೆ; ಜಾಗೃತಿ ಮೂಡಿಸಿದ ಅಣ್ಣಯ್ಯನಿಗೆ ಭಾರಿ ಮೆಚ್ಚುಗೆ
Annayya Serial: ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆದಿರುವ ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯಲ್ಲಿ ಈಗ ಕ್ರಾಂತಿಕಾರಿ ಬದಲಾವಣೆಯ ಸಂದೇಶವೊಂದು ಮೂಡಿಬಂದಿದೆ. ಕಥಾನಾಯಕ ಶಿವು (ವಿಕಾಶ್ ಉತ್ತಯ್ಯ), ತನ್ನ ತಂಗಿಯರಷ್ಟೇ ಅಲ್ಲದೆ ಊರಿನ ಎಲ್ಲಾ ಹೆಣ್ಣುಮಕ್ಕಳ ಹಿತದೃಷ್ಟಿಯಿಂದ 'ಮಡಿಲು' ಎಂಬ ಯೋಜನೆಯನ್ನು ಆರಂಭಿಸಿದ್ದಾನೆ.
-
ಪ್ರಸ್ತುತ ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ಅಣ್ಣಯ್ಯ' (Annayya) ಧಾರಾವಾಹಿಯಲ್ಲಿ ಒಂದು ಸುಂದರ ಟ್ವಿಸ್ಟ್ ಸಿಕ್ಕಿದೆ. ತಂದೆ ಇಲ್ಲದ ಮನೆಯಲ್ಲಿ ತನ್ನ ನಾಲ್ವರು ತಂಗಿಯರನ್ನು ಪ್ರೀತಿಯಿಂದ ಸಾಕುವ ಅಣ್ಣ ಶಿವು (ಅಣ್ಣಯ್ಯ) ಜವಾಬ್ದಾರಿಯುತ ಯುವಕ. ತಂಗಿಯರ ವಿದ್ಯಾಭ್ಯಾಸ, ಮದುವೆ ಮತ್ತು ಅವರ ಸಂತೋಷಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುವ ಶಿವು, ಈಗ ಸಮಾಜಕ್ಕೆ ಒಂದು ಸಂದೇಶ ನೀಡಲು ಹೊರಟಿದ್ದಾನೆ.
ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನ
ಜೀ ಕನ್ನಡ ಪ್ರತಿಬಾರಿಯೂ ಮನರಂಜನೆಯೊಂದಿಗೆ ಮನಮುಟ್ಟುವ ಕಥೆ, ಸಂದೇಶಗಳನ್ನು ಹೊತ್ತು ತಂದು ವೀಕ್ಷಕರಿಗೆ ಅಚ್ಚರಿ ನೀಡುತ್ತಲೇ ಇರುತ್ತದೆ. ಈ ಬಾರಿ 'ಅಣ್ಣಯ್ಯ' ಧಾರಾವಾಹಿಯಲ್ಲಿ ಹೆಣ್ಣು ಮಕ್ಕಳ ಪರವಾಗಿ ನಿಂತು, ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ.
ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ವ್ಯವಸ್ಥೆ
ಹೆಣ್ಣು ಮಕ್ಕಳ ತಿಂಗಳ ನೋವಿನ ಬಗ್ಗೆ ಬೆಳಕು ಚೆಲ್ಲಲು ಕಥಾ ಹಂದರದಲ್ಲೇ ಹಾದಿ ಹುಡುಕಿಕೊಂಡಿರುವ ಅಣ್ಣಯ್ಯ ತಂಡ, ಹೆಣ್ಣುಮಕ್ಕಳ ದೇಹದಲ್ಲಾಗುವ ಸಹಜ ಪ್ರಕ್ರಿಯೆಯ ಬಗ್ಗೆ ಸಮಾಜಕ್ಕಿರುವ ಮುಜುಗರ, ಮಡಿವಂತಿಕೆ, ಮೂಢನಂಬಿಕೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದೆ. ಮಾರಿಗುಡಿ ಎಂಬ ಹಳ್ಳಿಯಲ್ಲಿ ನಡೆಯುವ ಈ ಕಥೆಯಲ್ಲಿ ಕಥಾನಾಯಕ ಶಿವು ತನ್ನ ಅಂಗಡಿಯಲ್ಲಿ ಊರ ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ 'ಮಡಿಲು' ಎಂಬ ಹೊಸ ಯೋಜನೆ ಶುರುಮಾಡಿ ಎಲ್ಲರ ಮನಗೆದ್ದಿದ್ದಾನೆ. ಋತುಸ್ರಾವದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಶುಚಿತ್ವ ಕಾಪಾಡಿಕೊಳ್ಳಬೇಕು ಮತ್ತು ಮನೆಯಲ್ಲಿರುವ ಗಂಡುಮಕ್ಕಳು ಮುಜುಗರ ಬಿಟ್ಟು ಅವರ ಜತೆ ನಿಲ್ಲಬೇಕು ಎಂದು ನಾಯಕಿ ಡಾಕ್ಟರ್ ಪಾರು ಜತೆ ಸೇರಿ ದೊಡ್ಡ ಸಂದೇಶ ನೀಡಿರುವ ಶಿವು, ತನ್ನ ಅಂಗಡಿಯಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ವ್ಯವಸ್ಥೆ ಮಾಡಿದ್ದಾನೆ.
ತಂಡಕ್ಕೆ ಸಿಕ್ಕಿದೆ ಭರಪೂರ ಶ್ಲಾಘನೆ
ತನ್ನಂತೆಯೇ ಇತರರು ಕೂಡಾ ತಮ್ಮ ಕೈಲಾದಂತೆ ತಮ್ಮ ತಮ್ಮ ಊರುಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದ್ದಾನೆ. ಮಾರಿಗುಡಿ ಮನೆಮಗನಂತಿರುವ ಶಿವಣ್ಣನಿಗೆ ಊರ ಜನರಿಂದ ಮೆಚ್ಚುಗೆ ಸಿಕ್ಕಿದೆ. ಈ ವಿಷಯದ ಪ್ರೊಮೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು ಮನರಂಜನೆಯೊಂದಿಗೆ ಇಂತಹ ಪ್ರಮುಖ ವಿಚಾರಗಳ ಬಗ್ಗೆ ಗಮನ ಸೆಳೆಯುತ್ತಿರುವುದಕ್ಕೆ ಭರಪೂರ ಶ್ಲಾಘನೆ ವ್ಯಕ್ತವಾಗಿದೆ.
ಈ ಸೀರಿಯಲ್‌ನಲ್ಲಿ ಅಣ್ಣಯ್ಯ ಶಿವು ಪಾತ್ರದಲ್ಲಿ ವಿಕಾಶ್ ಉತ್ತಯ್ಯ ಕಾಣಿಸಿಕೊಂಡಿದ್ದು, ನಾಯಕಿ ಪಾರ್ವತಿ ಪಾತ್ರದಲ್ಲಿ ನಿಶಾ ರವಿಕೃಷ್ಣನ್ ಕಾಣಿಸಿಕೊಂಡಿದ್ದಾರೆ. ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ʻಅಣ್ಣಯ್ಯʼ ಟಾಪ್ 5 ಕನ್ನಡ ಧಾರಾವಾಹಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.