ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರವಿಚಂದ್ರನ್ ಪುತ್ರ ಮನೋರಂಜನ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಪರ್ಣ ದಾಸ್: ‘ಸರ್ವೇ ಜನಾಃ ಸುಖಿನೋ ಭವಂತು’ ಶೂಟಿಂಗ್ ಕಂಪ್ಲೀಟ್!

Aparna Das: ಮನೋರಂಜನ್ ರವಿಚಂದ್ರನ್ ಅಭಿನಯದ ‘ಸರ್ವೇ ಜನಾಃ ಸುಖಿನೋ ಭವಂತು’ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈ ಸಿನಿಮಾದ ಮೂಲಕ ತಮಿಳಿನ ಖ್ಯಾತ ನಟಿ ಅಪರ್ಣ ದಾಸ್‌ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದಂದೇ ಈ ಸುದ್ದಿಯನ್ನು ಚಿತ್ರತಂಡ ಬಹಿರಂಗಪಡಿಸಿದೆ. ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ರವಿಚಂದ್ರನ್‌ ಮಗನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಅಪರ್ಣ ದಾಸ್‌ ಎಂಟ್ರಿ

-

Avinash GR
Avinash GR Sep 10, 2026 1:05 PM

`ಕ್ರೇಜಿ ಸ್ಟಾರ್' ವಿ. ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ, ಬಹುನಿರೀಕ್ಷಿತ ‘ಸರ್ವೇ ಜನಾಃ ಸುಖಿನೋ ಭವಂತು’ ಸಿನಿಮಾದ ಮೂಲಕ ಬಹುಭಾಷಾ ನಟಿ ಅಪರ್ಣ ದಾಸ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಯಾವುದೇ ಸುಳಿವಿಲ್ಲದೇ, ಚಿತ್ರತಂಡ ಈಗಾಗಲೇ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಚಿತ್ರದಲ್ಲಿ ಪ್ರತಿಭಾವಂತ ನಟ ಪೃಥ್ವಿ ಅಂಬಾರ್ ಖಳನಾಯಕನಾಗಿ ಅಖಾಡಕ್ಕಿಳಿದಿದ್ದು, ಇಬ್ಬರು ಯುವ ನಾಯಕರ ಮುಖಾಮುಖಿ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ನಾಯಕಿಗೆ ಅಪರ್ಣಗೆ ಹುಟ್ಟುಹಬ್ಬ

ಮೂಲತಃ ಕೇರಳದ ಪಾಲಕ್ಕಾಡ್‌ನವರಾದ ಅಪರ್ಣ ದಾಸ್, ತಮಿಳಿನಲ್ಲಿ ದಳಪತಿ ವಿಜಯ್ ಅಭಿನಯದ ‘ಬೀಸ್ಟ್’, ಕವಿನ್ ಜೊತೆಗಿನ ಸೂಪರ್ ಹಿಟ್ ‘ಡಾಡ’ ಚಿತ್ರ ಹಾಗೂ ಬಹುಮೆಚ್ಚುಗೆ ಗಳಿಸಿದ ‘ವದಂತಿ’ ವೆಬ್ ಸರಣಿಯಲ್ಲಿನ ಮನೋಜ್ಞ ಅಭಿನಯದ ಮೂಲಕ ದಕ್ಷಿಣ ಭಾರತದಲ್ಲಿ ಗಮನಸೆಳೆದ ಪ್ರತಿಭೆ. ಇದೀಗ ಅವರು ಈ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇಂದು (ಸೆಪ್ಟೆಂಬರ್ 10) ಜನ್ಮದಿನದ ಸಂಭ್ರಮದಲ್ಲಿರುವ ನಾಯಕಿ ಅಪರ್ಣ ದಾಸ್ ಅವರಿಗೆ ‘ಸರ್ವೇ ಜನಾಃ ಸುಖಿನೋ ಭವಂತು’ ಚಿತ್ರತಂಡ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ.

ಮೊದಲ ಬಾರಿಗೆ ಖಳನಾಯಕನಾದ ರವಿಚಂದ್ರನ್‌ ಪುತ್ರ ಮನೋರಂಜನ್: 'ಕೌಂತೇಯ' ಚಿತ್ರದಲ್ಲಿ ವಿಭಿನ್ನ ಪ್ರಯೋಗ!

ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ

ಈ ಹಿಂದೆ ‘ಅಟೆಂಪ್ಟ್ ಟು ಮರ್ಡರ್’ ಹಾಗೂ ‘ರಂಗನಾಯಕಿ’ಯಂತಹ ವಿಭಿನ್ನ ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದ ಎಸ್.ವಿ. ನಾರಾಯಣ್ ಹಾಗೂ ಎಸ್.ವಿ. ಕೃಷ್ಣಮೂರ್ತಿ ‘ಎಸ್.ವಿ. ಎಂಟರ್‌ಟೈನ್‌ಮೆಂಟ್’ ಬ್ಯಾನರ್‌ನಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದು ಈ ಸಂಸ್ಥೆಯ ನಾಲ್ಕನೇ ಕಾಣಿಕೆಯಾಗಿದೆ. ನಿರ್ದೇಶಕ ಸುನೀಲ್ ರುದ್ರಪ್ರಭಾ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪರಿಚಿತರಾಗುತ್ತಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆ, ಕಾರ್ತಿಕ್ ಎಸ್. ಅವರ ಛಾಯಾಗ್ರಹಣ ಹಾಗೂ ಖ್ಯಾತ ಸಂಕಲನಕಾರ ಕೆ.ಎಂ. ಪ್ರಕಾಶ್ ಅವರ ಎಡಿಟಿಂಗ್ ಜವಾಬ್ದಾರಿ ಇರಲಿದೆ.

Kounteya: ನೆಗೆಟಿವ್‌ ರೋಲ್‌ನಲ್ಲಿ ಮಿಂಚಲು ರೆಡಿಯಾದ ರವಿಚಂದ್ರನ್‌ ಪುತ್ರ ಮನೋರಂಜನ್;‌ ಸದ್ದಿಲ್ಲದೇ ನಿರ್ಮಾಣವಾಗ್ತಿದೆ ಡಿಫರೆಂಟ್‌ ಸಿನಿಮಾ!

ಶೂಟಿಂಗ್ ಮುಗಿಸಿರುವ ಚಿತ್ರತಂಡ

ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸಿದ್ಲಿಂಗು ಶ್ರೀಧರ್, ದೀಕ್ಷಿತ್ ಗೌಡ, ಮನಮೋಹನ್ ರೈ ಹಾಗೂ ದಶಾವರ ಚಂದ್ರು ಸೇರಿದಂತೆ ಕನ್ನಡದ ಹಲವು ಹಿರಿಯ ಮತ್ತು ಯುವ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು 55 ದಿನಗಳ ಕಾಲ ಬೆಂಗಳೂರು, ಮಂಡ್ಯ, ಮೈಸೂರು, ಮೇಲುಕೋಟೆ, ದೊಡ್ಡಬಳ್ಳಾಪುರ, ಗದಗ, ಬೆಳಗಾವಿ, ಹುಬ್ಬಳ್ಳಿ ಹಾಗೂ ಧಾರವಾಡ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ.

ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದ್ದು, ಶೀಘ್ರದಲ್ಲೇ ‘ಸರ್ವೇ ಜನಾಃ ಸುಖಿನೋ ಭವಂತು’ ಸಿನಿಮಾವನ್ನು ತೆರೆಕಾಣಿಸಲು ಚಿತ್ರತಂಡ ಸಜ್ಜಾಗಿದೆ.