ಮೊದಲ ಬಾರಿಗೆ ಖಳನಾಯಕನಾದ ರವಿಚಂದ್ರನ್ ಪುತ್ರ ಮನೋರಂಜನ್: 'ಕೌಂತೇಯ' ಚಿತ್ರದಲ್ಲಿ ವಿಭಿನ್ನ ಪ್ರಯೋಗ!
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ʻಕೌಂತೇಯʼ ಚಿತ್ರದಲ್ಲಿ ಇದೇ ಮೊದಲ ಸಲ ಖಳನಾಯಕನಾಗಿ ನಟಿಸಿ ಅಚ್ಚರಿ ಮೂಡಿಸಿದ್ದಾರೆ. ಬಿ.ಕೆ. ಚಂದ್ರಹಾಸ್ ಸಾರಥ್ಯದ ಈ ಕ್ರೈಮ್ ಥ್ರಿಲ್ಲರ್‌ನಲ್ಲಿ ಅಚ್ಯುತ್ ಕುಮಾರ್, ಪ್ರಿಯಾಂಕಾ ತಿಮ್ಮೇಶ್ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್ ಈಚೆಗೆ ರಿಲೀಸ್ ಆಗಿದೆ.
-
ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ನಾಲ್ಕೈದು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಗಮನ ಸೆಳೆದಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್, ಇದೀಗ ಮೊದಲ ಬಾರಿಗೆ ನೆಗೆಟಿವ್ ಶೇಡ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. 'ಕುಂಭರಾಶಿ' ಖ್ಯಾತಿಯ ಬಿ.ಕೆ. ಚಂದ್ರಹಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನೂತನ ಚಿತ್ರ 'ಕೌಂತೇಯ'ದಲ್ಲಿ ಅವರು ಈ ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದಾರೆ.
ಮನೋರಂಜನ್ ರವಿಚಂದ್ರನ್ ಏನಂದ್ರು?
ಈ ಚಿತ್ರದಲ್ಲಿ ಖಳನಾಯಕನ ಛಾಯೆಯಿರುವ ವಿಶೇಷ ಪಾತ್ರದಲ್ಲಿ ನಟಿಸಿರುವ ಮನೋರಂಜನ್ ರವಿಚಂದ್ರನ್ ಅವರು, "ಇದು ಸಂಪೂರ್ಣ ನೆಗೆಟಿವ್ ಶೇಡ್ ಇರುವ ಪಾತ್ರ. ಇಡೀ ಸಿನಿಮಾದಲ್ಲಿ ಇರದಿದ್ದರೂ, ಒಂದು ಪ್ರಯೋಗವಾಗಿ ನಾನು ಇದನ್ನ ಒಪ್ಪಿಕೊಂಡೆ. ನಾನು ಈವರೆಗೆ ಮಾಡಿರುವ ಪಾತ್ರಗಳಿಗಿಂತ ಇದು ಸಂಪೂರ್ಣ ವಿಭಿನ್ನವಾಗಿದ್ದು, ಪೊಲೀಸ್ ಮತ್ತು ಖಳನಾಯಕನ ನಡುವಿನ ಸಂಘರ್ಷದ ಸುತ್ತ ಸಾಗುತ್ತದೆ" ಎಂದು ಹೇಳುತ್ತಾರೆ.
ಅಚ್ಯುತ್ ಕುಮಾರ್ ಅವರು ನಿವೃತ್ತಿಯ ಅಂಚಿನಲ್ಲಿರುವ ಸಬ್-ಇನ್ಸ್‌ಪೆಕ್ಟರ್ ರಂಗನಾಥನಾಗಿ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕಥೆಯ ಬಲವಾದ ತಿರುಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಅವರು ಎಸಿಪಿ ಅಧಿಕಾರಿಯಾಗಿ ಖಡಕ್ ಪಾತ್ರದಲ್ಲಿ ನಟಿಸಿದ್ದರೆ, 'ಬಿಗ್ ಬಾಸ್' ಖ್ಯಾತಿಯ ನೀತು ವನಜಾಕ್ಷಿ ಕೂಡ ಪೊಲೀಸ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
"ರಕ್ತಪಾತ ಒಳ್ಳೆಯದಲ್ಲ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ನೀಡುತ್ತಿದ್ದೇವೆ" ಎಂದು ನಿರ್ದೇಶಕ ಬಿ.ಕೆ. ಚಂದ್ರಹಾಸ್ ತಿಳಿಸಿದ್ದಾರೆ. ಬೆಂಗಳೂರು, ಮೈಸೂರು ಸುತ್ತಮುತ್ತ ಮೂರು ಹಂತಗಳಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಚಿತ್ರಕ್ಕೆ ರಾಘವೇಂದ್ರ ಅವರ ಸಂಗೀತ ನಿರ್ದೇಶನವಿದ್ದು, ಪಿ.ಎಲ್. ರವಿ ಛಾಯಾಗ್ರಹಣ ಹಾಗೂ ಅನುರಂಜನ್ ಸಂಕಲನ ಮತ್ತು ಸಂಭಾಷಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ.
ಸದ್ಯ ಚಿತ್ರದ ರೀ-ರೆಕಾರ್ಡಿಂಗ್ ಕಾರ್ಯ ಭರದಿಂದ ಸಾಗುತ್ತಿದ್ದು, ಚಿತ್ರತಂಡವು ನವೆಂಬರ್ ವೇಳೆಗೆ 'ಕೌಂತೇಯ' ಸಿನಿಮಾವನ್ನು ತೆರೆಗೆ ತರಲು ಸಿದ್ಧತೆ ನಡೆಸಿದೆ. ಶ್ರೀ ಮಹಾಂಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸುರೇಶ್ ಕುಮಾರ್ ನಿರ್ಮಿಸಿರುವ ಈ ಚಿತ್ರವು ಮರ್ಡರ್ ಮಿಸ್ಟ್ರಿ ಆಧಾರಿತ ಎಮೋಷನಲ್ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ.