ʻಭೂರಮೆʼ ವಿಡಿಯೋ ಸಾಂಗ್ ರಿಲೀಸ್ ಮಾಡಿದ ʻಬಘೀರʼ ಖ್ಯಾತಿಯ ಎ. ಜೆ. ಶೆಟ್ಟಿ; ಸಾಥ್ ನೀಡಿದ ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕರು!
'ಕಬ್ಜ' ಹಾಗೂ 'ಬಘೀರ' ಚಿತ್ರಗಳ ಪ್ರಸಿದ್ಧ ಛಾಯಾಗ್ರಾಹಕ ಎ. ಜೆ. ಶೆಟ್ಟಿ ನಿರ್ದೇಶಿಸಿರುವ ಚೊಚ್ಚಲ ಆಲ್ಬಂ ಸಾಂಗ್ 'ಭೂರಮೆ' ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸ್ಟಾರ್ ನಿರ್ದೇಶಕರುಗಳಾದ ಎ. ಪಿ. ಅರ್ಜುನ್, ಚೇತನ್ ಕುಮಾರ್ ಮತ್ತು ಪವನ್ ಒಡೆಯರ್ ಹೊಸಬರ ಈ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ.
-
`ಕಿಸ್’, ‘ಕಬ್ಜ’ ಹಾಗೂ ‘ಬಘೀರ’ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಗಮನಸೆಳೆದಿರುವ ಎ. ಜೆ. ಶೆಟ್ಟಿ ಅವರು ಇದೀಗ ನಿರ್ದೇಶಕನ ಕ್ಯಾಪ್ ತೊಟ್ಟು, ತಮ್ಮ ಚೊಚ್ಚಲ ಆಲ್ಬಂ ಸಾಂಗ್ ʻಭೂರಮೆʼ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಯುವ ಪ್ರತಿಭೆಗಳಾದ ಅಥರ್ವ ವಿಶ್ವನಾಥ್ ಮತ್ತು ಸುಷ್ಮಿತಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ವಿಶೇಷ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು.
ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕರುಗಳಾದ ಎ. ಪಿ. ಅರ್ಜುನ್, ಚೇತನ್ ಕುಮಾರ್ ಹಾಗೂ ಪವನ್ ಒಡೆಯರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಹೊಸಬರ ಪ್ರಯತ್ನಕ್ಕೆ ಸಾಥ್ ನೀಡಿದ್ದು ವಿಶೇಷವಾಗಿತ್ತು.
ಇದು ನಮ್ಮ ಸಿನಿಮಾದ ಮೊದಲ ಹೆಜ್ಜೆ- ನಟ ಅಥರ್ವ ವಿಶ್ವನಾಥ್
ಹಾಡಿನ ಬಿಡುಗಡೆ ಬಳಿಕ ಮಾತನಾಡಿದ ಯುವ ನಟ ಅಥರ್ವ ವಿಶ್ವನಾಥ್, "ಎ. ಪಿ. ಅರ್ಜುನ್ ಸರ್, ಪವನ್ ಸರ್ ಹಾಗೂ ಚೇತನ್ ಸರ್ ಅವರಂತಹ ಸ್ಟಾರ್ ನಿರ್ದೇಶಕರು ಹೊಸಬರಿಗೆ ಈ ರೀತಿ ಬೆಂಬಲ ನೀಡುತ್ತಿರುವುದು ತುಂಬಾ ಖುಷಿ ತಂದಿದೆ. 'ಭೂರಮೆ' ಹಾಡು ಇಷ್ಟು ಅದ್ಭುತ ಕ್ವಾಲಿಟಿಯಲ್ಲಿ ಮೂಡಿಬರಲು ನನ್ನ ಸ್ನೇಹಿತರ ಶ್ರಮ ಕಾರಣ. ನಾನು ಕಲಾ ಜಗತ್ತಿಗೆ ಹೆಜ್ಜೆ ಇಟ್ಟಾಗ ನನ್ನ ತಂದೆ-ತಾಯಿ ಬೆನ್ನೆಲುಬಾಗಿ ನಿಂತರು. ಸಿನಿಮಾ ಮಾಡುವ ದೊಡ್ಡ ಕನಸು ಹೊತ್ತಿರುವ ನಮಗೆ ಇದು ಮೊದಲ ಹೆಜ್ಜೆ. ಈ ಸಾಂಗ್‌ಗಾಗಿ ಎ. ಜೆ. ಶೆಟ್ಟಿ ಅವರು ತಾಂತ್ರಿಕವಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಈಗ ಈ ಹಾಡನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದ್ದು, ಸಿನಿರಸಿಕರು ನೋಡಿ ಹಾರೈಸಬೇಕು. ಒಂದು ವೇಳೆ ಲೋಪದೋಷಗಳಿದ್ದರೆ ಮುಕ್ತವಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳುತ್ತೇವೆ" ಎಂದರು.
ʻನಿರ್ದೇಶಕನಾಗುವ ಕನಸಿನ ಮೊದಲ ಹೆಜ್ಜೆʼ- ಎ. ಜೆ. ಶೆಟ್ಟಿ
ನಿರ್ದೇಶಕ ಎ. ಜೆ. ಶೆಟ್ಟಿ ಮಾತನಾಡಿ, "ನಾನು ಮೂಲತಃ ನಿರ್ದೇಶಕನಾಗಬೇಕೆಂಬ ದೊಡ್ಡ ಕನಸಿನೊಂದಿಗೆ ಚಿತ್ರರಂಗಕ್ಕೆ ಬಂದವನು. ಆ ಕನಸಿನ ಚೊಚ್ಚಲ ಹೆಜ್ಜೆಯೇ ಈ 'ಭೂರಮೆ' ಹಾಡು. ನನಗೆ 'ಪಲ್ಲವಿ ಅನುಪಲ್ಲವಿ' ಸಿನಿಮಾ ಮಾದರಿಯ ಫೀಲಿಂಗ್‌ನಲ್ಲಿ ಒಂದು ಕಥೆ ಆಧರಿತ ಸಾಂಗ್ ಮಾಡಬೇಕೆಂಬ ಆಸೆ ಇತ್ತು. ಅದಕ್ಕೆ ತಕ್ಕಂತೆ ಪ್ರಿಯಾ ಮಾಲಿ ಅವರು ಕೇವಲ ಎರಡು ನಿಮಿಷಗಳಲ್ಲಿ ಅದ್ಭುತವಾಗಿ ಮ್ಯೂಸಿಕ್ ಕಂಪೋಸ್ ಮಾಡಿಕೊಟ್ಟರು. ಅವರು ಮ್ಯೂಸಿಕ್‌ನಲ್ಲಿ ಸೂಪರ್ ಫಾಸ್ಟ್. ಕೇವಲ ಆರು ನಿಮಿಷಗಳ ಅವಧಿಯಲ್ಲಿ ಒಂದು ಸುಂದರ ಪ್ರೇಮಕಥೆಯನ್ನು ಹೇಗೆ ಹೇಳಬಹುದು ಎಂಬುದನ್ನು ಈ ಹಾಡಿನ ಮೂಲಕ ಪ್ರಯತ್ನಿಸಿದ್ದೇವೆ" ಎಂದು ಮಾಹಿತಿ ಹಂಚಿಕೊಂಡರು. ಪ್ರೀತಿ, ಕನಸುಗಳು ಹಾಗೂ ನೆನಪುಗಳ ಭಾವನಾತ್ಮಕ ಪ್ರಯಾಣವನ್ನು ಎ. ಜೆ. ಶೆಟ್ಟಿ ಅವರು ಈ ಹಾಡಿನ ಮೂಲಕ ಸೊಗಸಾಗಿ ದೃಶ್ಯೀಕರಿಸಿದ್ದಾರೆ.
ಸರಳವಾಗಿ ವೈವಾಹಿಕ ಜೀವನಕ್ಕೆೆ ಕಾಲಿಟ್ಟ ಅದ್ದೂರಿ ನಿರ್ದೇಶಕ ಎ.ಪಿ.ಅರ್ಜುನ್
ʻಪೆನ್ ಮತ್ತು ಪೇಪರ್ ಸ್ಟುಡಿಯೋಸ್ʼ ಬ್ಯಾನರ್ ಅಡಿಯಲ್ಲಿ ಈ ವಿಡಿಯೋ ಸಾಂಗ್ ನಿರ್ಮಾಣಗೊಂಡಿದೆ. ನಾಗಾರ್ಜುನ್ ಶರ್ಮಾ ಅವರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಪ್ರಿಯಾ ಮಾಲಿ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಹರ್ಷ ಅವರೊಂದಿಗೆ ಧ್ವನಿಗೂಡಿಸಿದ್ದಾರೆ. ಚಿತ್ರಕ್ಕೆ ಅಜಯ್ ಕುಮಾರ್ ಅವರ ಸಂಕಲನ ಇದೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿಬಂದಿರುವ 'ಭೂರಮೆ' ಸದ್ಯ ಜಾಲತಾಣಗಳಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.