ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Surendra Pai Column: ದಿಮಾಗಿ ನಕ್ಸಲ್:‌ ವಿವೇಚನೆ V/s ವಿಧ್ವಂಸಕತೆ ಮೂಲವೇ ಮಿದುಳು

ಪ್ರಸ್ತುತ ಸಮಾಜದಲ್ಲಿ ಬಳಕೆಯಾಗುತ್ತಿರುವ ಶಬ್ದಪ್ರಯೋಗಗಳು ಮತ್ತು ರಾಜಕೀಯ ವಾಗ್ದಾಳಿಗಳು ವೈಚಾರಿಕ ಸಂವಾದದ ದಿಕ್ಕನ್ನೇ ಬದಲಿಸುತ್ತಿವೆ. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯ ಪ್ರತಿಯೊಂದು ನಡೆನುಡಿಯಲ್ಲೂ ಕೊಂಕು ಹುಡುಕುವ ಕೆಲಸ ನಡೆಯುತ್ತಲೇ ಇರುತ್ತವೆ. ಇದರ ಸಾಲಿಗೆ ಮೊನ್ನೆ ಬಳಸಿದ ‘ದಿಮಾಗಿ ನಕ್ಸಲ್’ (ಮಾನಸಿಕ ಅಥವಾ ವೈಚಾರಿಕ ನಕ್ಸಲ್) ಎಂಬ ಶಬ್ದಪ್ರಯೋಗವು ತೀವ್ರ ಚರ್ಚೆಗೆ ಗ್ರಾಸವಾಗಿರುವುದು ಹೊಸತೇನಲ್ಲ. ‌

ದಿಮಾಗಿ ನಕ್ಸಲ್:‌ ವಿವೇಚನೆ V/s ವಿಧ್ವಂಸಕತೆ ಮೂಲವೇ ಮಿದುಳು

-

Profile
Ashok Nayak Aug 19, 2026 6:01 AM

ಅಭಿಮತ

ಸುರೇಂದ್ರ ಪೈ, ಭಟ್ಕಳ

ಮಹಾಭಾರತದ ಸೌಪ್ತಿಕ ಪರ್ವದಲ್ಲಿ ಒಂದು ಅತ್ಯಂತ ಡೋಲಾಯಮಾನವಾದ ಹಾಗೂ ಚಿಂತನಾ ರ್ಹ ಘಟನೆ ಬರುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನ ತೊಡೆ ಮುರಿದು ಮರಣಶಯ್ಯೆ ಯಲ್ಲಿ ಬಿದ್ದಾಗ, ಆತನ ತೀವ್ರ ಕ್ರೋಧ ಮತ್ತು ಹತಾಶೆ ಅಶ್ವತ್ಥಾಮನನ್ನು ಆವರಿಸುತ್ತದೆ. ಅಶ್ವತ್ಥಾಮ ಹುಟ್ಟಿನಿಂದಲೇ ತನ್ನ ತಂದೆ ದ್ರೋಣರಿಂದ ಅಪಾರ ಜ್ಞಾನ, ತಪಸ್ಸು ಮತ್ತು ಧನುರ್ವಿದ್ಯೆಯನ್ನು (ದಿವ್ಯಾಸಗಳ ಜ್ಞಾನ) ಕರಗತ ಮಾಡಿಕೊಂಡಿದ್ದ ಶಕ್ತಿಶಾಲಿ ಮಹಾರಥಿ. ಆದರೆ, ಆ ಕ್ಷಣದಲ್ಲಿ ಅವನಲ್ಲಿದ್ದ ಧರ್ಮ ಮತ್ತು ಬ್ರಹ್ಮಚರ್ಯದ ತಪೋಶಕ್ತಿ (ಮಾನಸಿಕ ನಿಗ್ರಹ ಹಾಗೂ ವಿವೇಚನೆ) ನಾಶವಾಗಿ, ಮಿದುಳಿನಲ್ಲಿ ಕೇವಲ ಪ್ರತಿಕಾರದ ಜ್ವಾಲೆ ಮತ್ತು ವಿನಾಶದ ಆಲೋಚನೆ ಗಳು ಮಾತ್ರ ಶೇಷವಾಗುತ್ತವೆ.

ಪರಿಣಾಮವಾಗಿ, ರಾತ್ರೋರಾತ್ರಿ ಪಾಂಡವರ ಶಿಬಿರಕ್ಕೆ ನುಗ್ಗಿ ನಿದ್ರಿಸುತ್ತಿದ್ದ ಉಪಪಾಂಡವರನ್ನು ಬಲಿ ತೆಗೆದುಕೊಂಡು, ಅಂತಿಮವಾಗಿ ಉತ್ತರೆಯ ಗರ್ಭದಲ್ಲಿದ್ದ ಪರೀಕ್ಷಿತನ ಮೇಲೆಯೇ ಪರಮ ವಿಧ್ವಂಸಕ ಅಸ್ತ್ರವಾದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಈ ಚಿಕ್ಕ ಘಟನೆಯು ಜೀವನದ ಬಹುದೊಡ್ಡ ಪಾಠವನ್ನು ಎಲ್ಲಾ ಕಾಲಕ್ಕೂ ತೆರೆದಿಡುತ್ತದೆ.

ಇಲ್ಲಿ ಅಶ್ವತ್ಥಾಮನಲ್ಲಿದ್ದ ಜ್ಞಾನವಾಗಲಿ, ಆತನ ವಿದ್ಯಾ ಕೌಶಲವಾಗಲಿ ಕಡಿಮೆಯಾಗಿರಲಿಲ್ಲ. ಆದರೆ, ಆತನ ಮಿದುಳಿನ ಸಂಸ್ಕಾರ ಹಾಗೂ ವಿವೇಚನಾಶಕ್ತಿ ದಾರಿತಪ್ಪಿದಾಗ, ಆ ಉನ್ನತ ಜ್ಞಾನವೇ ಮಾನವಕುಲದ ಅಪಾರ ವಿನಾಶಕ್ಕೆ ಕಾರಣವಾಯಿತು. ಕೇವಲ ಶಬ್ದ ಅಥವಾ ಜ್ಞಾನದ ಬಾಹ್ಯ ರೂಪವನ್ನು ಅರಿತರೆ ಸಾಲದು; ಆ ಶಬ್ದದ ಮತ್ತು ವಿದ್ಯೆಯ ‘ಅಂತರಾತ್ಮ’ವನ್ನು (ವಿವೇಚನೆ ಹಾಗೂ ಸದ್ಭಾವನೆ) ಗ್ರಹಿಸುವುದು ಅತ್ಯಗತ್ಯ ಎಂಬುವುದಕ್ಕೆ ಅಶ್ವತ್ಥಾಮನ ಈ ದುರಂತವೇ ಶ್ರೇಷ್ಠ ನಿದರ್ಶನ.

ಈ ಘಟನೆಯನ್ನು ಹೇಳಲು ಕಾರಣ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಷಣದಲ್ಲಿ ಬಳಸಿದ ‘ದಿಮಾಗಿ ನಕ್ಸಲ್’ (ಮಾನಸಿಕ/ವೈಚಾರಿಕ ನಕ್ಸಲ್) ಎಂಬ ಶಬ್ದ ಪ್ರಯೋಗವನ್ನು ಪ್ರಸ್ತುತ ದೇಶದ ರಾಜಕೀಯ ಮತ್ತು ವೈಚಾರಿಕ ವಲಯ‌ ದಲ್ಲಿ ಕೆಲವರು ತೀವ್ರ ವಿವಾದಾತ್ಮಕ ನೆಲೆಗಟ್ಟಿನಲ್ಲಿ ಬಳಸುತ್ತಿದ್ದಾರೆ.

ಇದನ್ನೂ ಓದಿ: Surendra Pai Column: 6ನೇ ತರಗತಿಯಿಂದಲೇ ನೀಟ್‌ʼಗೆ ತಯಾರಿ, ಅಯ್ಯೋ...

ಪ್ರಸ್ತುತ ಸಮಾಜದಲ್ಲಿ ಬಳಕೆಯಾಗುತ್ತಿರುವ ಶಬ್ದಪ್ರಯೋಗಗಳು ಮತ್ತು ರಾಜಕೀಯ ವಾಗ್ದಾಳಿಗಳು ವೈಚಾರಿಕ ಸಂವಾದದ ದಿಕ್ಕನ್ನೇ ಬದಲಿಸುತ್ತಿವೆ. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿಯ ಪ್ರತಿಯೊಂದು ನಡೆನುಡಿಯಲ್ಲೂ ಕೊಂಕು ಹುಡುಕುವ ಕೆಲಸ ನಡೆಯುತ್ತಲೇ ಇರುತ್ತವೆ. ಇದರ ಸಾಲಿಗೆ ಮೊನ್ನೆ ಬಳಸಿದ ‘ದಿಮಾಗಿ ನಕ್ಸಲ್’ (ಮಾನಸಿಕ ಅಥವಾ ವೈಚಾರಿಕ ನಕ್ಸಲ್) ಎಂಬ ಶಬ್ದಪ್ರಯೋಗವು ತೀವ್ರ ಚರ್ಚೆಗೆ ಗ್ರಾಸವಾಗಿರುವುದು ಹೊಸತೇನಲ್ಲ. ‌

ವಾಸ್ತವದಲ್ಲಿ ಕಾಡುಗಳಲ್ಲಿ ಸಶಸ್ತ್ರ ನಕ್ಸಲಿಸಂ ಮತ್ತು ಮಾವೋವಾದಿ ಹಿಂಸೆಯನ್ನು ಸರ್ಕಾರವು ನಿಯಂತ್ರಣಕ್ಕೆ ತಂದಿದೆ. ಆದರೆ, ಅಸ್ತ್ರ ಹಿಡಿಯದಿದ್ದರೂ ಮಿದುಳಿನಲ್ಲಿ ಮತ್ತು ಸಿದ್ಧಾಂತದಲ್ಲಿ ಮಾವೋವಾದಿ ಹಾಗೂ ವಿಧ್ವಂಸಕ ಆಲೋಚನೆಗಳನ್ನು ಇಟ್ಟುಕೊಂಡಿರುವ ‘ದಿಮಾಗಿ ನಕ್ಸಲರು’ ಇನ್ನೂ ಇದ್ದಾರೆ.

ಇಂತಹ ವ್ಯಕ್ತಿಗಳು ಸಮಾಜದಲ್ಲಿ ಅಶಾಂತಿ, ಆರಾಜಕತೆ ಮತ್ತು ವಿಧ್ವಂಸಕ ವಾತಾವರಣ ಸೃಷ್ಟಿಸಲು ಕಾಯುತ್ತಿರುತ್ತಾರೆ. ಇವರನ್ನು ಗುರುತಿಸಿ ಸಮಾಜದಿಂದ ಪ್ರತ್ಯೇಕಿಸಬೇಕು ಎಂಬುದು ಪ್ರಧಾನಿಯವರ ಕರೆ. ಅರ್ಥಾತ್ ಹಿಂಸಾತ್ಮಕ ನಕ್ಸಲಿಸಂಗಿಂತಲೂ ಹೆಚ್ಚಾಗಿ, ಸಮಾಜದಲ್ಲಿ ಸಿದ್ಧಾಂತ ಅಥವಾ ವಿಧ್ವಂಸಕ ಆಲೋಚನೆಗಳ ಮೂಲಕ ಸೃಷ್ಟಿಯಾಗುವ ಅಸ್ಥಿರತೆಯನ್ನು ಸೂಚಿಸಲು ಈ ಪದ ಬಳಸಲಾಗಿದೆ.

ಯಾವುದೇ ಒಂದು ಪದವನ್ನು ಕೇವಲ ಅದರ ಶಬ್ದಾರ್ಥದಿಂದ (Literal meaning) ಅಳೆದರೆ ಸಾಲದು, ಆ ಶಬ್ದದ ಅಂತರಾತ್ಮವನ್ನು ( Inner intent and spirit ) ಗ್ರಹಿಸುವುದು ಅತ್ಯಂತ ಮುಖ್ಯ. ಶಬ್ದಕ್ಕೆ ಕೇವಲ ಅಕ್ಷರಗಳ ರೂಪವಷ್ಟೇ ಇರುವುದಿಲ್ಲ, ಅದರ ಹಿಂದೆ ಧ್ವನಿಸುವ ವೈಚಾರಿಕ ಆಶಯ ಮತ್ತು ಪರಿಣಾಮಗಳಿರುತ್ತವೆ.

N Modi

ವಿಜ್ಞಾನ ಮತ್ತು ನರವಿಜ್ಞಾನದ (Neuroscience) ದೃಷ್ಟಿಕೋನದಿಂದ ಈ ಪರಿಕಲ್ಪನೆಯನ್ನು ನೋಡಿದಾಗ, ಮಾನವನ ನಡವಳಿಕೆ, ಸಿದ್ಧಾಂತ ಮತ್ತು ಕ್ರಿಯೆಗಳ ಮೂಲ ನೆಲೆ ಮಿದುಳೇ ಆಗಿದೆ ಎಂಬ ಸತ್ಯ ಸ್ಪಷ್ಟವಾಗುತ್ತದೆ. ಸಂಸ್ಕೃತದ ಪ್ರಾಚೀನ ಉಕ್ತಿಯೊಂದು ಮನುಷ್ಯನ ಮನಸ್ಸು, ಶಬ್ದ ಮತ್ತು ಸಮಾಜದ ನಡುವಿನ ಈ ಸೂಕ್ಷ್ಮ ಸಂಬಂಧವನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸುತ್ತದೆ. ಅದುವೇ ಯದ್ಭಾವಂ ತದ್ಭವತಿ- ಅರ್ಥಾತ್ ಮನುಷ್ಯನು ಅಂತರಂಗದಲ್ಲಿ ಏನನ್ನು ಭಾವಿಸು ತ್ತಾನೋ, ಬಹಿರಂಗದಲ್ಲಿ ಅದೇ ಆಗಿರುತ್ತಾನೆ.

ಮಿದುಳಿನ ಕ್ರಿಯೆಯ ಬಗ್ಗೆ ಒಂದು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡುವಾಗ ಸೃಜನ ಶೀಲತೆ ಮತ್ತು ಮಾನಸಿಕ ವಿಧ್ವಂಸಕತೆಯ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗುತ್ತದೆ. ನರವಿಜ್ಞಾನ ದ ಪ್ರಕಾರ, ಮಾನವ ದೇಹದ ಪ್ರತಿಯೊಂದು ಯೋಚನೆ, ಭಾವನೆ ಹಾಗೂ ನಿರ್ಧಾರಗಳ ಉಗಮ ಸ್ಥಾನ ಮಿದುಳು. ಮಿದುಳಿನಲ್ಲಿ ನಡೆಯುವ ‘ಸಿನಾಪ್ಟಿಕ್ ಸಂಪರ್ಕಗಳು’ ವ್ಯಕ್ತಿಯೊಬ್ಬನ ಆಲೋಚನಾ ಸರಪಳಿಯನ್ನು ನಿರ್ಧರಿಸುತ್ತವೆ.

ಮನುಷ್ಯನ ಪ್ರಿಫ್ರಂಟಲ್ ಕಾರ್ಟೆಕ್ಸ್ ಭಾಗವು ವಿವೇಚನೆ ಹಾಗೂ ತಾರ್ಕಿಕ ಚಿಂತನೆಯನ್ನು ನಿಯಂತ್ರಿಸಿದರೆ, ಅಮಿಗ್ಡಾಲಾ ಭಾಗವು ಕೋಪ, ಭಯ ಮತ್ತು ಆವೇಶಗಳನ್ನು ನಿಯಂತ್ರಿಸುವ ಕಾರ್ಯಮಾಡುತ್ತದೆ. ಬುದ್ಧಿಮತ್ತೆ ಅಥವಾ ಯೋಚನಾಶಕ್ತಿ ಎಂಬುದು ಧನಾತ್ಮಕವಾಗಿಯೂ ಕೆಲಸ ಮಾಡಬಹುದು, ಅಥವಾ ಋಣಾತ್ಮಕವಾಗಿಯೂ ದಾರಿತಪ್ಪಬಹುದು.

ಉದಾಹರಣೆಗೆ, ಪರಮಾಣು ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಮಿದುಳಿನಲ್ಲಿ ಉದಯಿಸಿದ ಸಾಪೇಕ್ಷತಾ ಸಿದ್ಧಾಂತವು ಭೌತವಿಜ್ಞಾನದ ಚಿತ್ರಣವನ್ನೇ ಬದಲಿಸಿತು. ಆದರೆ ಅದೇ ಜ್ಞಾನವು ಅಣು ಬಾಂಬ್ ತಯಾರಿಕೆಗೆ ಬಳಕೆಯಾದಾಗ ಅಪಾರ ನಾಶಕ್ಕೆ ಕಾರಣವಾಯಿತು. ಅಂದರೆ, ಅಶ್ವತ್ಥಾಮನ ಅಸಪ್ರಯೋಗದಂತೆ, ಶಕ್ತಿಯುತವಾದ ಮಿದುಳು ವಿವೇಚನೆಯಿಂದ ಚಿಂತಿಸದಿದ್ದಾಗ, ಅದು ಭೌತಿಕ ಹಿಂಸೆಗಿಂತಲೂ ಅಪಾಯಕಾರಿಯಾದ ಮಾನಸಿಕ ವಿಧ್ವಂಸಕತೆಗೆ ಜನ್ಮ ನೀಡುತ್ತದೆ.

ಮಿದುಳಿನ ‘ನ್ಯೂರೋಪ್ಲಾಸ್ಟಿಸಿಟಿ’ ಗುಣವು ಮನುಷ್ಯ ಕಲಿಯುವ ಹಾಗೂ ಅಭ್ಯಾಸ ಮಾಡುವ ಆಲೋಚನೆಗಳಿಗೆ ತಕ್ಕಂತೆ ಮಿದುಳಿನ ರಚನೆಯನ್ನು ಬದಲಾಯಿಸುತ್ತದೆ. ‘ದಿಮಾಗಿ ನಕ್ಸಲ್’ ಎಂಬ ಪದದ ವೈಜ್ಞಾನಿಕ ಸಾರಾಂಶವೂ ಇದೇ-ಹಿಂಸಾತ್ಮಕ ಅ‌ಸ್ತ್ರಗಳನ್ನು ಹಿಡಿಯುವ ಮುನ್ನ, ವ್ಯಕ್ತಿಯ ಮಿದುಳಿನಲ್ಲಿ ಅಂತಹ ವಿಧ್ವಂಸಕ ಆಲೋಚನೆಗಳು ಬೇರೂರುತ್ತವೆ.

ಇದನ್ನೇ ಅಮೃತ ಬಿಂದೂಪನಿಷತ್ತಿನ ಪ್ರಸಿದ್ಧ ವಾಕ್ಯವೂ ಸ್ಪಷ್ಟಪಡಿಸುತ್ತದೆ: ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ’ | ಅರ್ಥಾತ್ ಮನುಷ್ಯನ ಬಂಧನಕ್ಕೂ (ನಾಶಕ್ಕೂ) ಮತ್ತು ಮುಕ್ತಿಗೂ (ಉದ್ಧಾರಕ್ಕೂ) ಅವನ ಮನಸ್ಸೇ ಅಂದರೆ ಆಲೋಚನೆಗಳೇ ಮುಖ್ಯ ಕಾರಣ.

ಮನುಷ್ಯನ ಆಲೋಚನೆಗಳು ಕೇವಲ ಸಮಾಜದ ಮೇಲಷ್ಟೇ ಅಲ್ಲ, ಆತನ ಕರ್ಮ ಮತ್ತು ಭವಿಷ್ಯದ ಮೇಲೆಯೂ ಪ್ರಭಾವ ಬೀರುತ್ತವೆ. ಈ ಕುರಿತು ಭಗವದ್ಗೀತೆಯಲ್ಲೂ ಉಲ್ಲೇಖವಿದೆ: ಉದ್ಧರೇದಾ ತ್ಮನಾತ್ಮಾನಂ ನಾತ್ಮಾನಮವಸಾದಯೇತ್ | ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ || ಅರ್ಥಾತ್ ಮನುಷ್ಯನು ತನ್ನ ಮಿದುಳು ಮತ್ತು ಮನಸ್ಸಿನ ಒಳ್ಳೆಯ ಆಲೋಚನೆಗಳಿಂದ ತನ್ನನ್ನು ತಾನು ಉದ್ಧರಿಸಿಕೊಳ್ಳಬೇಕು. ತನ್ನ ಮನಸ್ಸೇ ತನಗೆ ಮಿತ್ರ, ಅದೇ ಮನಸ್ಸು ದಾರಿತಪ್ಪಿದರೆ ತನಗೆ ತಾನೇ ಶತ್ರು ಎಂದರ್ಥ. ಹಾಗಾಗಿ ಶ್ರೇಷ್ಠ ಆಲೋಚನೆಗಳೇ ಸಮಾಜದ ನೈಜ ಶಕ್ತಿ. ಮಿದುಳಿನಲ್ಲಿ ಹುಟ್ಟುವ ಆಲೋಚನೆಗಳು ಎಷ್ಟು ಶ್ರೇಷ್ಠವಾಗಿರುತ್ತವೆಯೋ, ವ್ಯಕ್ತಿ ಮತ್ತು ಸಮಾಜದ ಸ್ಥಿತಿಯೂ ಅಷ್ಟೇ ಉನ್ನತವಾಗಿರುತ್ತದೆ.

ಸದ್ಭಾವನೆಯಿಂದ ಕೂಡಿದ ಆಲೋಚನೆಗಳು ನಾಗರಿಕತೆಯ ಬೆಳವಣಿಗೆಗೆ ನಾಂದಿ ಹಾಡುತ್ತವೆ. ಆದರೆ, ಈ ವೈಜ್ಞಾನಿಕ ಮತ್ತು ಸಂಸ್ಕೃತಿಯ ಸತ್ಯದ ನಡುವೆ, ಇತ್ತೀಚಿನ ದಿನಗಳಲ್ಲಿ ‘ದಿಮಾಗಿ ನಕ್ಸಲ್’ ನಂತಹ ಶಬ್ದಪ್ರಯೋಗಗಳನ್ನು ರಾಜಕೀಯ ಲಾಭಕ್ಕಾಗಿ ಹಾಗೂ ಸಮಾಜದಲ್ಲಿ ಧ್ರುವೀ ಕರಣ ಸೃಷ್ಟಿಸಲು ಬಳಕೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ‌

ಶಬ್ದದ ಕೇವಲ ವಾಚ್ಯಾರ್ಥವನ್ನು (ಶಬ್ದಾರ್ಥವನ್ನು) ಇಟ್ಟುಕೊಂಡು ಯಾರನ್ನಾದರೂ ಹಳಿಯು ವುದು ಅಥವಾ ಅಂತರಾತ್ಮವನ್ನು ಗ್ರಹಿಸದೇ ಪ್ರತಿಯೊಂದು ವಿಮರ್ಶಾತ್ಮಕ ಚಿಂತನೆಯನ್ನೂ ದೇಶದ್ರೋಹ ವೆಂದು ಮುದ್ರೆ ಒತ್ತುವುದು ಅಪಾಯಕಾರಿ. ಋಗ್ವೇದದ ಪ್ರಸಿದ್ಧ ಮಂತ್ರವು ಸಮಾಜ ದಲ್ಲಿ ಮುಕ್ತ ಮತ್ತು ಸೃಜನಶೀಲ ಆಲೋಚನೆಗಳಿಗೆ ನೀಡಬೇಕಾದ ಸ್ವಾತಂತ್ರ್ಯವನ್ನು ಹೀಗೆ ಸಾರುತ್ತದೆ: ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ | ಎಲ್ಲಾ ದಿಕ್ಕುಗಳಿಂದಲೂ ಒಳ್ಳೆಯ ಮತ್ತು ಶ್ರೇಷ್ಠ ಆಲೋಚನೆಗಳು ನಮ್ಮತ್ತ ಬರಲಿ ಎಂದರ್ಥ.

ವೈಚಾರಿಕ ಭಿನ್ನಾಭಿಪ್ರಾಯ, ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳು ಅಥವಾ ಸರ್ಕಾರವನ್ನು ಪ್ರಶ್ನಿಸುವ ಧ್ವನಿಗಳನ್ನೇ ‘ದಿಮಾಗಿ ನಕ್ಸಲ್’ ಎಂದು ಕರೆದು ಸಮಾಜದಲ್ಲಿ ಸಂಶಯ ಮತ್ತು ದ್ವೇಷ ವನ್ನು ಬಿತ್ತುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುತ್ತದೆ. ‌

ಚಾಣಕ್ಯ ನೀತಿಯಲ್ಲೂ ಆಲೋಚನೆಗಳ ಶಕ್ತಿಯ ಕುರಿತು ಹೀಗೆ ಹೇಳಲಾಗಿದೆ: ಆತ್ಮವಶಂ ಭವೇತ್ ಸರ್ವಂ ಪರವಶಂ ದುಃಖಮೇವ ಚ | ತನ್ನ ಆಲೋಚನೆಗಳು ಸ್ವಯಂ ನಿಯಂತ್ರಣದಲ್ಲಿದ್ದು ಸ್ವತಂತ್ರವಾಗಿದ್ದರೆ ಸುಖ, ಇತರರ ದ್ವೇಷದ ಸಿದ್ಧಾಂತಕ್ಕೆ ಬಲಿಯಾದರೆ ದುಃಖವೇ ಸಿದ್ಧ ಎಂದರ್ಥ.

ಭಿನ್ನಾಭಿಪ್ರಾಯಗಳನ್ನು ಸ್ವೀಕರಿಸುವ ಸಹಿಷ್ಣುತೆ ಸಮಾಜಕ್ಕಿರಬೇಕು. ಪ್ರತಿಯೊಂದು ವಿಮರ್ಶಾತ್ಮಕ ಚಿಂತನೆಯನ್ನೂ ಸಮಾಜವಿರೋಧಿ ಎಂದು ಬ್ರಾಂಡ್ ಮಾಡಿ ಜನರ ನಡುವೆ ಧ್ರುವೀಕರಣ ಸೃಷ್ಟಿಸುವುದು ಖಂಡನೀಯ. ಸಮಾಜದಲ್ಲಿ ವೈವಿಧ್ಯಮಯ ಆಲೋಚನೆಗಳಿದ್ದರೂ ಒಗ್ಗಟ್ಟು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ಋಗ್ವೇದದ ಸಂಘಟನ ಸೂಕ್ತ ಸ್ಪಷ್ಟ ಮಾರ್ಗದರ್ಶನ ನೀಡುತ್ತದೆ: ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಮ್ | ನಾವೆಲ್ಲರೂ ಒಟ್ಟಾಗಿ ನಡೆಯೋಣ, ಒಟ್ಟಾಗಿ ಸಂವಾದ ಮಾಡೋಣ, ನಮ್ಮ ಮಿದುಳು ಮತ್ತು ಮನಸ್ಸುಗಳು ಸದ್ಭಾವನೆಯಿಂದ ಒಂದಾಗಲಿ.

ಇಷ್ಟಾದರೂ ಸಹ ವಿವಾದ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತಿತರ ನಾಯಕರು ಈ ಪದದ ಕುರಿತು ಸ್ಪಷ್ಟನೆ ನೀಡಿದ್ದಾರೆ. ‘ದಿಮಾಗಿ ನಕ್ಸಲ’ ಎಂದರೆ ರಾಜಕೀಯ ವಿರೋಧ ಪಕ್ಷದ ನಾಯಕರಲ್ಲ. ಭಾರತದ ಸಂವಿಧಾನವನ್ನು ನಿರಾಕರಿಸುವವರು, ಪ್ರತ್ಯೇಕತಾವಾದವನ್ನು ಬೆಂಬಲಿಸುವವರು, ಮತ್ತು ದೇಶದ ಅಖಂಡತೆಗೆ (ಉದಾ: ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸುವ ಚಿಕನ್ಸ್ ನೆಕ್ ಕಾರಿಡಾರ್ ತುಂಡರಿಸಲು ಯತ್ನಿಸುವವರು) ಬೆಂಬಲ ನೀಡುವವರನ್ನು ಉದ್ದೇಶಿಸಿ ಈ ಪದ ಬಳಸಲಾಗಿದೆ ಹೇಳಿದ್ದಾರೆ.

ಈ ಶಬ್ದಾರ್ಥದ ಹಿಂದಿರುವ ಉದ್ದೇಶದ ಬಗ್ಗೆ ಸ್ಪಷ್ಟ ಅರಿವಿದ್ದರೂ ಸಹ ವಿರೋಧ ಪಕ್ಷಗಳು ಮತ್ತು ವಿಮರ್ಶಕರ ಆಕ್ಷೇಪಣೆಗಳು ಬೌದ್ಧಿಕ ದಾರಿದ್ರ್ಯವನ್ನು ಪ್ರದರ್ಶಿಸುವಂತಿದೆ. ಅವರ ಪ್ರಕಾರ ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಸರ್ಕಾರವನ್ನು ಪ್ರಶ್ನಿಸುವ ಬುದ್ಧಿಜೀವಿಗಳು, ವಿದ್ಯಾರ್ಥಿ ಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ‘ಅರ್ಬನ್ ನಕ್ಸಲ್’, ‘ತುಕ್ಡೇ ತುಕ್ಡೇ ಗ್ಯಾಂಗ್’ ಎಂಬಂತೆ ಬ್ರಾಂಡ್ ಮಾಡಲು ಹೆಣೆದ ಹೊಸ ಪದ ಇದು. ಜೊತೆಗೆ ವೈಚಾರಿಕ ಭಿನ್ನಾಭಿಪ್ರಾಯ ಮತ್ತು ಪ್ರಜಾಸತ್ತಾತ್ಮಕ ವಿಮರ್ಶೆಯನ್ನು ‘ದೇಶದ್ರೋಹ’ ಅಥವಾ ‘ನಕ್ಸಲಿಸಂ’ ಎಂದು ಬಿಂಬಿಸಿ ಜನರ ಧ್ವನಿಯನ್ನು ಅಡಗಿಸುವ ಯತ್ನ ಎಂದು ವಿರೋಧಿಸುತ್ತಿದ್ದಾರೆ.

ಪ್ರಜಾಪ್ರಭುತ್ವ ಚೌಕಟ್ಟಿನೊಳಗೆ ಎಲ್ಲರಿಗೂ ಸ್ವತಂತ್ರವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುವ ಹಕ್ಕಿದೆ. ಆದರೆ ಪ್ರಧಾನಿ ಅವರ ಮಾತಿನ ವಾಚ್ಯಾರ್ಥವನ್ನು ಅರಿಯುವತ್ತ ನಾವು ಹೆಚ್ಚು ಗಮನ ಹರಿಸಬೇಕಿದೆ. ಸದ್ಯ ವಿರೋಧ ಪಕ್ಷ ಹಾಗೂ ವಿಮರ್ಶಕರು ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತೆ ಎಲ್ಲದಕ್ಕೂ ತಮ್ಮದೊಂದು ವಿರೋಧ ಇರಲಿ ಎಂದು ಟೀಕಿಸುವುದು ತರವಲ್ಲ.

ವಾಸ್ತವದಲ್ಲಿ ಮನುಷ್ಯನ ಯೋಚನೆಯ ಮೂಲವೇ ಮಿದುಳು. ಕೇವಲ ಶಬ್ದಾರ್ಥವನ್ನು ಗ್ರಹಿಸುವು ದಕ್ಕಿಂತ ಶಬ್ದದ ಅಂತರಾತ್ಮವನ್ನು ಗ್ರಹಿಸಿ ನಡೆದುಕೊಂಡಾಗ ಮಾತ್ರ ವೈಚಾರಿಕ ಪರಿಪಕ್ವತೆ ಸಾಧ್ಯ. ಸಮಾಜವನ್ನು ಕಟ್ಟುವುದು ಅಥವಾ ಕೆಡವುವುದು ನಮ್ಮ ಆಲೋಚನೆಗಳ ಮೇಲೆ ಆಧಾರಿತ ವಾಗಿದೆ. ಆಲೋಚನೆಗಳು ಸದ್ಭಾವನೆಯಿಂದ ಕೂಡಿದ್ದಾಗ ಮಾತ್ರ ಸಮಾಜವು ಶಾಂತಿ ಮತ್ತು ಸಮೃದ್ಧಿಯತ್ತ ಸಾಗುತ್ತದೆ.

ನಮಗಿಂದು ಬೇಕಾಗಿರುವುದು ರಾಜಕೀಯ ಪ್ರಚೋದನೆಯ ದ್ವೇಷವನ್ನು ತೊರೆದು, ತಾರ್ಕಿಕ ಚಿಂತನೆ, ಮುಕ್ತ ಸಂವಾದ ಹಾಗೂ ಮಾನವೀಯತೆಯನ್ನು ಎತ್ತಿ ಹಿಡಿಯುವ ಶ್ರೇಷ್ಠ ಆಲೋಚನಾ ಸರಣಿ.