ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀಟ್‌ ಪ್ರತಿಭಟನೆ ಬಗ್ಗೆ ಪೋಸ್ಟ್‌ ಹಾಕಿ 3 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಪರ್ಲೆ ಮಾಣಿ; ಅಷ್ಟಕ್ಕೂ ಅದರಲ್ಲೇನಿತ್ತು?

ದೆಹಲಿಯಲ್ಲಿ ನಡೆದ ನೀಟ್ ಪೇಪರ್ ಲೀಕ್ ವಿರೋಧಿ ವಿದ್ಯಾರ್ಥಿ ಪ್ರತಿಭಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ 'ಬಿಗ್ ಬಾಸ್' ಖ್ಯಾತಿಯ ಪರ್ಲೆ ಮಾಣಿ ತೀವ್ರ ವಿವಾದಕ್ಕೆ ಈಡಾಗಿದ್ದಾರೆ. ಪ್ರತಿಭಟನೆಗಿಂತ ಜೀವ ಮುಖ್ಯ ಎಂದು ಸಲಹೆ ನೀಡಿದ್ದಕ್ಕೆ ಅವರು ಎರಡೇ ದಿನಗಳಲ್ಲಿ 3 ಲಕ್ಷ ಫಾಲೋವರ್ಸ್‌ಗಳನ್ನು ಕಳೆದುಕೊಂಡಿದ್ದಾರೆ.

ನೀಟ್ ಬಗ್ಗೆ ಪೋಸ್ಟ್; 3 ಲಕ್ಷ ಫಾಲೋವರ್ಸ್ ಕಳೆದುಕೊಂಡ ನಿರೂಪಕಿ ಪರ್ಲೆ ಮಾಣಿ

-

Avinash GR
Avinash GR Jul 26, 2026 6:37 PM

ದೆಹಲಿಯಲ್ಲಿ ನಡೆದ ನೀಟ್‌ ಪೇಪರ್‌ ಲೀಕ್‌ ವಿರೋಧಿ ವಿದ್ಯಾರ್ಥಿ ಪ್ರತಿಭಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ನಿರೂಪಕಿ ಹಾಗೂ 'ಬಿಗ್ ಬಾಸ್ ಮಲಯಾಳಂ-1' ರನ್ನರ್‌ ಅಪ್ ಪರ್ಲೆ ಮಾಣಿ‌ (Pearle Maaney) ತೀವ್ರ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಜುಲೈ 24 ರಂದು ಅವರು ಹಂಚಿಕೊಂಡಿದ್ದ ಸುದೀರ್ಘ ಅಭಿಪ್ರಾಯವು ವಿವಾದಕ್ಕೆ ಕಾರಣವಾಗಿದ್ದು, ಕೇವಲ ಎರಡೇ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಕಳೆದುಕೊಂಡಿದ್ದಾರೆ.

ಈ ಹಿಂದೆ 57 ಲಕ್ಷ (5.7 ಮಿಲಿಯನ್) ಫಾಲೋವರ್ಸ್‌ಗಳನ್ನು ಹೊಂದಿದ್ದ ನಟಿಯ ಖಾತೆಯಲ್ಲಿ ಈಗ ಫಾಲೋವರ್ಸ್ ಸಂಖ್ಯೆ 54 ಲಕ್ಷಕ್ಕೆ ಇಳಿಕೆಯಾಗಿದೆ. ಜೊತೆಗೆ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲೂ ಫಾಲೋವರ್ಸ್ ಸಂಖ್ಯೆ ಕುಸಿಯುತ್ತಿದೆ ಎನ್ನಲಾಗಿದೆ.

ಪರ್ಲೆ ಮಾಣಿ ಪೋಸ್ಟ್‌ನಲ್ಲಿ ಏನಿತ್ತು?

ವಿದ್ಯಾರ್ಥಿ ಪ್ರತಿಭಟನೆಯನ್ನು 'ವೇದನಾದಾಯಕ' ಮತ್ತು 'ಹೃದಯವಿದ್ರಾವಕ' ಎಂದು ಕರೆದಿದ್ದ ಪರ್ಲೆ, "ದಯವಿಟ್ಟು ಯಾರಿಗೂ ಗಾಯವಾಗದಿರಲಿ, ಸುರಕ್ಷಿತವಾಗಿರಿ. ನಿಮ್ಮ ಜೀವಕ್ಕೆ ಅಪಾಯವಿದ್ದರೆ ಮನೆಗೆ ಹಿಂತಿರುಗಿ. ಯಾವುದೇ ಉದ್ದೇಶವೂ ಜೀವ ಕಳೆದುಕೊಳ್ಳುವಷ್ಟು ದೊಡ್ಡದಲ್ಲ" ಎಂದು ಬರೆದುಕೊಂಡಿದ್ದರು. ಅಲ್ಲದೆ, ಚಳವಳಿಯ ಮೂಲ ಉದ್ದೇಶ ದಾರಿ ತಪ್ಪಬಾರದು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯಯುತ ಶಿಕ್ಷಣ ಸಿಗಲಿ ಎಂದು ಆಶಿಸಿದ್ದರು. ಪೋಸ್ಟ್ ಬೆನ್ನಲ್ಲೇ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, "ಕಾಮೆಂಟ್ ಸೆಕ್ಷನ್ ನನ್ನ ವಾಕ್ ಸ್ವಾತಂತ್ರ್ಯದ ಪ್ರತಿಫಲನ" ಎಂದು ಬರೆದು ಕಾಮೆಂಟ್ ಸೆಕ್ಷನ್ ಡಿಸೇಬಲ್ ಮಾಡಿದ್ದರು.‌

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆವರೆಗೆ; ಯಾವಾಗ, ಏನೇನಾಯ್ತು? ಇಲ್ಲಿದೆ ಟೈಮ್‌ಲೈನ್‌

ನೆಟ್ಟಿಗರಿಂದ ತೀವ್ರ ಟೀಕೆ

ಪರ್ಲೆ ಅವರ ಈ ನಿಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. "ನೀವು ಬಾಯಿಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಹುಟ್ಟಿದವರು, ಸಾಮಾನ್ಯ ವಿದ್ಯಾರ್ಥಿಗಳ ಒತ್ತಡ ನಿಮಗೆ ಅರ್ಥವಾಗುವುದಿಲ್ಲ. ನಮಗೆ ಪ್ರತಿಯೊಂದು ಅಂಕವೂ ಮುಖ್ಯ" ಎಂದು ಬಳಕೆದಾರರೊಬ್ಬರು ಟೀಕಿಸಿದ್ದಾರೆ. ಇನ್ನು ಕೆಲವರು ಅವರ ಇತರ ಪೋಸ್ಟ್‌ಗಳ ಕೆಳಗೆ ಕಾಮೆಂಟ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ.

ನಿರ್ದೇಶಕ ಸಿಬಿ ಮಲಯಿಲ್ ಕುಟುಂಬದ ಜೊತೆ ವಾರ್!

ವಿವಾದ ಹೆಚ್ಚಾಗುತ್ತಿದ್ದಂತೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದ ಪರ್ಲೆ, "ನಾನು ಶಾಂತಿ ಬಯಸಿದ್ದಕ್ಕೆ ಕೆಲವರು ಉರಿದುಕೊಂಡಿದ್ದಾರೆ. ಒಬ್ಬ ವಿಫಲ ನಿರ್ದೇಶಕ ನನ್ನ ಪೋಸ್ಟ್‌ ಅನ್ನು ಇಟ್ಟುಕೊಂಡು 10 ಪುಟಗಳ ಸ್ಕ್ರಿಪ್ಟ್ ಬರೆಯುತ್ತಿದ್ದಾನೆ" ಎಂದು ಹರಿಹಾಯ್ದಿದ್ದರು.

ಪರ್ಲೆ ಮಾಣಿ ಹಂಚಿಕೊಂಡ ಪೋಸ್ಟ್‌

ಇದಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ ನಿರ್ದೇಶಕ ಸಿಬಿ ಮಲಯಿಲ್ ಅವರ ಪುತ್ರ ಜೋ ಮಲಯಿಲ್, "ಆ ವಿಫಲ ನಿರ್ದೇಶಕ ಬೇರೆ ಯಾರೂ ಅಲ್ಲ, ನನ್ನ ತಂದೆ ಸಿಬಿ ಮಲಯಿಲ್. ಯಾರ ಜೊತೆ ವ್ಯವಹರಿಸುತ್ತಿದ್ದೀರಿ ಎಂದು ಸರಿಯಾಗಿ ಚೆಕ್ ಮಾಡಿಕೊಳ್ಳಿ. ಆ ವಿಫಲ ನಿರ್ದೇಶಕ ಬೆನ್ನೆಲುಬಿಲ್ಲದ ಮಗನನ್ನು ಬೆಳೆಸಿಲ್ಲ. ನಿಮ್ಮ ಅರ್ಧಂಬರ್ಧ ರಾಜತಾಂತ್ರಿಕತೆಯನ್ನು ಜನ ಒಪ್ಪುವುದಿಲ್ಲ" ಎಂದು ಬಹಿರಂಗವಾಗಿ ಸವಾಲು ಎಸೆದಿದ್ದಾರೆ.