BBK 13: ‘ಕುಮಾರಿಗೆ ಬಿಗ್ ಬಾಸ್‌ಗೆ ಹೋಗುವ ಯೋಗ್ಯತೆಯೇ ಇಲ್ಲ, ಆಕೆ ಸೇಫ್ ಆಗಿದ್ದು ಸಿಂಪಥಿಯಿಂದ’; ಎಲಿಮಿನೇಟ್ ಆದ ಲಕ್ಷ್ಮೀ ಗೌಡ ಆಕ್ರೋಶ!
Bigg Boss 13: ಲಕ್ಷ್ಮೀ ಗೌಡ ಅವರು ದೊಡ್ಮನೆಯಿಂದ ಕೇವಲ 15 ದಿನಗಳಲ್ಲಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಮತ್ತೋರ್ವ ಸ್ಪರ್ಧಿ ಲಾವಣ್ಯ ಕುಮಾರಿ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. "ಕುಮಾರಿಗೆ ಮನೆಯಲ್ಲಿರಲು ಸ್ವಲ್ಪವೂ ಅರ್ಹತೆಯಿಲ್ಲ" ಎಂದು ಕಿಡಿಕಾರಿದ್ದಾರೆ.
-
‘ಬಿಗ್ ಬಾಸ್’ ಮನೆಯಿಂದ ಎಲಿಮಿನೇಟ್ ಆಗಿರುವ ಮಂಡ್ಯದ ಲಕ್ಷ್ಮೀ ಗೌಡ, ಸಹ-ಸ್ಪರ್ಧಿ ಲಾವಣ್ಯ ಕುಮಾರಿ ವಿರುದ್ಧ ಗುಡುಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ದೊಡ್ಮನೆ ಪ್ರವೇಶಿಸಿ ಕೇವಲ 15 ದಿನಗಳಲ್ಲೇ ಎಲಿಮಿನೇಟ್ ಆಗಿರುವ ಅವರು, ತಮಗೆ ಸಿಕ್ಕ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಂಡಿರುವುದಾಗಿ ಹೇಳಿಕೊಂಡಿದ್ದು, ಕುಮಾರಿ ಕೇವಲ ಜನರ ‘ಸಿಂಪಥಿ’ಯಿಂದ ಮಾತ್ರ ಮನೆಯೊಳಗೆ ಉಳಿದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಲಿಮಿನೇಟ್ ಆಗಿದ್ದಕ್ಕೆ ಕಿಂಚಿತ್ತೂ ಬೇಸರ ಇಲ್ಲ!
ಬಿಗ್ ಬಾಸ್ ಜರ್ನಿ ಮುಗಿಸಿ ಹೊರಬಂದ ಬಳಿಕ ಮಾಧ್ಯಮಗಳ ಎದುರು ತಮ್ಮ ಮನದಾಳ ಹಂಚಿಕೊಂಡಿರುವ ಲಕ್ಷ್ಮೀ ಗೌಡ, "ನನಗೆ ಕನಿಷ್ಠ ಇನ್ನೂ 2-3 ವಾರಗಳು ಇರಬೇಕೆಂಬ ಆಸೆ ಇತ್ತು ನಿಜ. ಆದರೆ ನಾನು ಕಳೆದ 15 ದಿನಗಳಲ್ಲಿ ಪ್ರತಿಯೊಬ್ಬರೊಂದಿಗೂ ಉತ್ತಮ ಒಡನಾಟ ಹಾಗೂ ಬಾಂಧವ್ಯ ಬೆಳೆಸಿಕೊಂಡಿದ್ದೇನೆ. ನಾನೇನೂ ತಪ್ಪು ಮಾಡಿಲ್ಲ, ಅದಕ್ಕೆ ಹೊರಗಡೆ ಇರುವ ಜನರು ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೊರಗಿನವರನ್ನು ಟಾಸ್ಕ್ ಆಡಿ ಗೆಲ್ಲಬಹುದು, ಆದರೆ ಬಿಗ್ ಬಾಸ್ ಮನೆಯೊಳಗೆ ಇರುವವರ ಪ್ರೀತಿ ಗೆಲ್ಲುವುದು ಸುಲಭದ ಮಾತಲ್ಲ. ಸೌಂದರ್ಯ, ಪ್ರಶಾಂತ್, ಸೋನಿಕಾ ಹಾಗೂ ತಾಂಡವ್ ಅವರಂತಹ ಸ್ಪರ್ಧಿಗಳು ನಾನು ಹೊರಬಂದಾಗ ಎಷ್ಟು ಮಿಸ್ ಮಾಡಿಕೊಂಡರು ಎಂಬುದನ್ನು ನೋಡಿದಾಗ ನನ್ನ ಪಯಣದ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ" ಎಂದಿದ್ದಾರೆ.
ನನ್ನ ಬದಲು ಕುಮಾರಿ ಎಲಿಮಿನೇಟ್ ಆಗಬೇಕಿತ್ತು
ಈ ಬಾರಿಯ ಸೀಸನ್‌ನಲ್ಲಿ ಮನರಂಜನೆ ಹಾಗೂ ಮಜಾ ಕೊರತೆಯಿತ್ತು ಎಂದು ಅಭಿಪ್ರಾಯಪಟ್ಟ ಲಕ್ಷ್ಮೀ ಗೌಡ, "ನಾನು ಮನೆಯೊಳಗಿದ್ದ ಪ್ರತಿಯೊಂದು ಕ್ಷಣವನ್ನೂ ಜೀವಿಸಿದ್ದೇನೆ. ಎಲ್ಲರೊಂದಿಗೆ ಬೆರೆತು, ಟಾಸ್ಕ್ ಬಂದಾಗ ನಿಷ್ಠೆಯಿಂದ ಆಡಿ ಗೆದ್ದಿದ್ದೇನೆ. ಇಷ್ಟೆಲ್ಲಾ ಸಕ್ರಿಯವಾಗಿದ್ದರೂ ನಾನು ಹೊರಬಂದಿರುವುದು ನನಗೇ ಆಘಾತ ತಂದಿದೆ. ನಿಜ ಹೇಳಬೇಕೆಂದರೆ ನಾನು ಎಲಿಮಿನೇಟ್ ಆಗಬೇಕಾದ ಸ್ಪರ್ಧಿಯೇ ಅಲ್ಲ, ನನ್ನ ಜಾಗದಲ್ಲಿ ಹೊರಬರಬೇಕಾಗಿದ್ದು ಕುಮಾರಿ. ಟಾಸ್ಕ್, ಒಡನಾಟ, ಮನರಂಜನೆ ಯಾವುದೇ ಮಾನದಂಡದಲ್ಲೂ ನನ್ನ ಮತ್ತು ಸೋನಿಕಾಗೆ ಹೋಲಿಸಿದರೆ ಕುಮಾರಿ ಕೊನೆಯ ಸ್ಥಾನದಲ್ಲಿದ್ದಾಳೆ. ಆಕೆ ಆಟದಿಂದ ಅಲ್ಲ, ಶುದ್ಧ ಸಿಂಪಥಿಯಿಂದ ಮಾತ್ರ ಮನೆಯೊಳಗಿದ್ದಾಳೆ" ಎಂದು ಕುಮಾರಿ ಮೇಲೆ ಕಿಡಿಕಾರಿದ್ದಾರೆ.
ಕುಮಾರಿಗೆ ಆ ಸಾಮರ್ಥ್ಯವೇ ಇರಲಿಲ್ಲ
ಕುಮಾರಿ ಅವರ ಅರ್ಹತೆಯನ್ನೇ ಪ್ರಶ್ನಿಸಿರುವ ಲಕ್ಷ್ಮೀ, "ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳಿರುತ್ತವೆ. ಕೆಲವರು ಹೇಳಿಕೊಳ್ಳುತ್ತಾರೆ, ಕೆಲವರು ಹೇಳಿಕೊಳ್ಳುವುದಿಲ್ಲ. ನಾವು ಧರಿಸುವ ಬಟ್ಟೆಯಿಂದ ನಮಗೆ ಕಷ್ಟವಿಲ್ಲ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ‘ಅಗ್ನಿ ಪರೀಕ್ಷೆ’ಯಲ್ಲೇ ಒತ್ತಡ ತಾಳಲಾರದೆ ಎರಡೇ ದಿನಕ್ಕೆ ಹೊರಬಂದಿದ್ದ ಕುಮಾರಿಗೆ ಬಿಗ್ ಬಾಸ್ ಮನೆ ಪ್ರವೇಶಿಸುವ ಎಲಿಜಿಬಿಲಿಟಿಯೇ ಇರಲಿಲ್ಲ. ನಾವೆಲ್ಲರೂ ಕಷ್ಟಪಟ್ಟು ಆಡಿ, ವೈಲ್ಡ್ ಕಾರ್ಡ್ ಮೂಲಕ ಒಳಗೆ ಬಂದವರು. ಆದರೆ ಕುಮಾರಿ ಕೇವಲ ಅದೃಷ್ಟದಿಂದ ಒಳಗೆ ಹೋದರು, ಅಲ್ಲಿಯೂ ಆ ಅವಕಾಶವನ್ನು ಬಳಸಿಕೊಳ್ಳುತ್ತಿಲ್ಲ. ಜಗ್ಗಿ ಮತ್ತು ಕಿರಣ್ ತಲೆಗೆ ಏನು ತುಂಬುತ್ತಾರೋ ಅಷ್ಟಕ್ಕೇ ಸೀಮಿತವಾಗಿದ್ದು, ಆಗೊಮ್ಮೆ ಈಗೊಮ್ಮೆ ಬಂದು ಒಂದೆರಡು ಡೈಲಾಗ್ ಹೊಡೆದು ಹೋಗುವುದಷ್ಟೇ ಆಕೆಯ ಕೆಲಸ" ಎಂದು ಹೇಳಿದ್ದಾರೆ.
ಕುಮಾರಿ ಟಾಸ್ಕ್ ಅಂದರೆ ಭಯಪಡುತ್ತಾಳೆ!
ಕುಮಾರಿ ಅವರ ವರ್ತನೆ ನಾಟಕೀಯವಾಗಿದೆ ಎಂದು ಆರೋಪಿಸಿದ ಲಕ್ಷ್ಮೀ ಗೌಡ, "ಕುಮಾರಿ ಇದ್ದಕ್ಕಿದ್ದಂತೆ ಓವರ್ ಡ್ರಾಮಾ ಮಾಡುತ್ತಿರುವುದು ನೋಡುವ ಪ್ರೇಕ್ಷಕರಿಗೂ ಸ್ಪಷ್ಟವಾಗಿ ತಿಳಿಯುತ್ತಿದೆ. ಈ ಬಗ್ಗೆ ನಾನು ಮತ್ತು ಸೌಂದರ್ಯ ಒಳಗಡೆಯೂ ಸಾಕಷ್ಟು ಚರ್ಚಿಸಿದ್ದೇವೆ. ಕುಮಾರಿ ಟಾಸ್ಕ್ ಅಂದರೆ ಭಯಪಡುತ್ತಾಳೆ, ಮನರಂಜನೆ ನೀಡಲ್ಲ, ಮನೆಯವರ ಜೊತೆ ಬೆರೆಯಲ್ಲ. ತನ್ನ ಬಗ್ಗೆ ಯಾರಾದರೂ ನಕಾರಾತ್ಮಕವಾಗಿ ಮಾತನಾಡಿದರೆ ಗೌರವವಿಲ್ಲದೆ ವರ್ತಿಸಿ ಹೊರಟುಹೋಗುತ್ತಾಳೆ. ಅಂಥ ಸ್ಪರ್ಧಿ ಬಿಗ್ ಬಾಸ್ ಮನೆಯಲ್ಲಿ ಮುಂದುವರಿಯಲು ಕಿಂಚಿತ್ತೂ ಅರ್ಹತೆ ಇಲ್ಲ" ಎಂದು ಹೇಳಿದ್ದಾರೆ.