BBK 13: ‘ಬಿಗ್ ಬಾಸ್’ ಮನೆಗೆ ಬಂತು ದಸರಾ ಹಬ್ಬದ ಗಿಫ್ಟ್; 4ನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ನಂಜನಗೂಡಿನ ಪ್ರತಿಭೆ ಕುಮಾರಿ ಎಂಟ್ರಿ!
BBK 13: ಬಿಗ್ ಬಾಸ್ ವೇದಿಕೆಗೆ ನಂಜನಗೂಡಿನ ಗ್ರಾಮೀಣ ಪ್ರತಿಭೆ ಲಾವಣ್ಯ ಕುಮಾರಿ ನಾಲ್ಕನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಅಗ್ನಿಪರೀಕ್ಷೆಯಲ್ಲಿ ಅನಾರೋಗ್ಯದಿಂದ ಅರ್ಧಕ್ಕೇ ನಿರ್ಗಮಿಸಿದ್ದ ಈ ಪ್ರತಿಭೆ, ಇದೀಗ ಸಂಪೂರ್ಣ ಗುಣಮುಖರಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
-
ನಾಡಿನಲ್ಲಿ ಆಗಲೇ ದಸರಾ ಹಬ್ಬದ ಸಂಭ್ರಮ ಶುರುವಾಗಿದೆ. ಈ ನಡುವೆ ‘ಬಿಗ್ ಬಾಸ್’ ಮನೆಯಲ್ಲೂ ಒಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಇದನ್ನು ದಸರಾ ಹಬ್ಬದ ಸ್ಪೆಷಲ್ ಅಂತಲೂ ಹೇಳಬಹುದು. ಈಗಾಗಲೇ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯೊಳಗೆ ತಮ್ಮ ಆಟ ಆರಂಭಿಸಿರುವ ಬೆನ್ನಲ್ಲೇ, ಇದೀಗ 4ನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ನಂಜನಗೂಡಿನ ಲಾವಣ್ಯ ಕುಮಾರಿ ದೊಡ್ಮನೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ಅಗ್ನಿಪರೀಕ್ಷೆಯ ‘ಸ್ಟಾರ್ ಕಂಟೆಂಡರ್’ ಈಗ ದೊಡ್ಮನೆ ಸ್ಪರ್ಧಿ
ಬಿಗ್ ಬಾಸ್ ಕನ್ನಡ 13ರ ಆರಂಭಕ್ಕೂ ಮುನ್ನ ನಡೆದ ‘ಅಗ್ನಿಪರೀಕ್ಷೆ’ ಸ್ಪರ್ಧೆಯಲ್ಲಿ 18 ಜನ ಆಕಾಂಕ್ಷಿಗಳಲ್ಲಿ ಲಾವಣ್ಯ ಕುಮಾರಿ ಕೂಡ ಒಬ್ಬರಾಗಿದ್ದರು. ತಮ್ಮ ಮುಗ್ಧ ಮಾತುಗಳು, ಹಾವಭಾವ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರ ಮೇಲಿನ ಪ್ರಾಸಬದ್ಧ ಜೋಕ್‌ಗಳ ಮೂಲಕ ಇವರು ತೀರ್ಪುಗಾರರಷ್ಟೇ ಅಲ್ಲದೆ ವೀಕ್ಷಕರ ಮನಗೆದ್ದಿದ್ದರು. ಇವರ ಆಕರ್ಷಕ ವ್ಯಕ್ತಿತ್ವವನ್ನು ಮೆಚ್ಚಿದ ತೀರ್ಪುಗಾರರಾದ ನಟಿ ಶ್ರುತಿ, ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಅವರು ‘ಸ್ಟಾರ್ ಕಂಟೆಂಡರ್’ ಬ್ಯಾಡ್ಜ್ ನೀಡಿ ಪ್ರಶಂಸಿಸಿದ್ದರು.
ಆದರೆ, ದುರದೃಷ್ಟವಶಾತ್ ಟಾಸ್ಕ್ ಮಾಡುವ ಸಂದರ್ಭದಲ್ಲಿ ಕುಮಾರಿ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರಿಂದ, ವೈದ್ಯರ ಕಟ್ಟುನಿಟ್ಟಿನ ಸಲಹೆಯ ಮೇರೆಗೆ ಅನಾರೋಗ್ಯದ ಕಾರಣದಿಂದ ಅರ್ಧದಲ್ಲೇ ಶೋನಿಂದ ಹೊರಬರಬೇಕಾಯಿತು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅವರು, ವೈಲ್ಡ್ ಕಾರ್ಡ್ ಮೂಲಕ ನೇರವಾಗಿ ಮುಖ್ಯ ಮನೆಗೆ ಪ್ರವೇಶ ಪಡೆದಿದ್ದಾರೆ.
ಬಡತನದ ನಡುವೆ ಅರಳಿದ ಪ್ರತಿಭೆ
ಮೂಲತಃ ಮೈಸೂರು ಜಿಲ್ಲೆಯ ನಂಜನಗೂಡಿನ ಗ್ರಾಮೀಣ ಭಾಗದವರಾದ 20 ವರ್ಷದ ಲಾವಣ್ಯ ಕುಮಾರಿ, ಅತ್ಯಂತ ಕಡುಬಡತನದ ಕುಟುಂಬದಿಂದ ಬಂದವರು. ತಂದೆಯ ಆಸರೆಯಿಲ್ಲದ ಇವರ ಕುಟುಂಬದಲ್ಲಿ, ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ತಾಯಿಯ ಆರೋಗ್ಯದ ಜವಾಬ್ದಾರಿ ಮತ್ತು ಬದುಕಿನ ನೂರೆಂಟು ಸಂಕಷ್ಟಗಳ ನಡುವೆಯೂ ಛಲಬಿಡದೆ ಬಿಗ್ ಬಾಸ್ ವೇದಿಕೆಗೆ ಬಂದಿದ್ದ ಇವರ ವ್ಯಕ್ತಿತ್ವ ಎಲ್ಲರ ಕಣ್ತುಂಬಿಸಿತ್ತು. ‘ಜೆನ್ ಝೀ’ ಕೆಟಗರಿಯಲ್ಲಿ ಆಯ್ಕೆಯಾಗಿದ್ದ ಇವರಿಗೆ ಆ ಪದದ ಅರ್ಥವೇ ಗೊತ್ತಿರಲಿಲ್ಲ. ಆ ಮುಗ್ಧತೆಯನ್ನು ಕಂಡ ನಟಿ ಶ್ರುತಿ, "ಇದೇ ನಿನ್ನ ಅತಿದೊಡ್ಡ ಪ್ಲಸ್ ಪಾಯಿಂಟ್" ಎಂದು ಮೆಚ್ಚುಗೆ ಸೂಚಿಸಿದ್ದರು.
ಕುಮಾರಿಗೆ ಸಿಕ್ಕಿತ್ತು ಕೆಲಸದ ಆಫರ್
ಅಗ್ನಿಪರೀಕ್ಷೆಯಿಂದ ಅರ್ಧಕ್ಕೇ ಹೊರಬಂದಾಗ ಕುಮಾರಿ ಅವರ ಕುಟುಂಬದ ಕಷ್ಟದ ಪರಿಸ್ಥಿತಿಯನ್ನು ಅರಿತ ಶೋನ ಪ್ರಾಯೋಜಕ ಸಂಸ್ಥೆ ‘ಇಕೋ ಪ್ಲ್ಯಾನೆಟ್ ಎಲಿವೇಟರ್ಸ್’, ತಾಯಿಯ ಚಿಕಿತ್ಸೆಗಾಗಿ 5 ಲಕ್ಷ ನಗದು ನೆರವು, ಕುಮಾರಿ ಅವರ ಕಾಲೇಜು ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಹಾಗೂ ವ್ಯಾಸಂಗ ಮುಗಿದ ನಂತರ ದುಬೈ ಅಥವಾ ಕರ್ನಾಟಕದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಜೊತೆಗೆ ನಟ ವಿನಯ್ ಗೌಡ ಕೂಡ ವೈಯಕ್ತಿಕವಾಗಿ ಬೆಂಬಲ ಸೂಚಿಸಿದ್ದರು. ಶೋಗೆ ಬರುವ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಸಣ್ಣಪುಟ್ಟ ರೀಲ್ಸ್ ಮಾಡುತ್ತಿದ್ದ ಇವರಿಗೆ, ಅಗ್ನಿಪರೀಕ್ಷೆಯ ನಂತರ ಅಪಾರ ಜನಪ್ರಿಯತೆ ದೊರೆತು ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 2.50 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಸೃಷ್ಟಿಯಾಗಿದ್ದಾರೆ.
‘ನಾನೂ ಜಗಳ ಆಡ್ತೀನಿ..’
ದೊಡ್ಮನೆ ಪ್ರವೇಶಿಸುವ ಮುನ್ನ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು, “ಮನೆಯೊಳಗೆ ಜಗಳ ಮಾಡಲು ಬರುತ್ತಾ?” ಎಂದು ಕಾಲೆಳೆದಾಗ, ಕುಮಾರಿ ಅವರು ಕಿಂಚಿತ್ತೂ ಹಿಂಜರಿಯದೆ, “ನಾನೂ ತಿರುಗಿಸಿ ಮಾತನಾಡುತ್ತೇನೆ, ಜಗಳ ಬಂದಾಗ ಜಗಳ ಮಾಡುತ್ತೇನೆ” ಎಂದು ಪೂರ್ಣ ಆತ್ಮವಿಶ್ವಾಸದಿಂದಲೇ ಉತ್ತರಿಸಿದ್ದಾರೆ. ಸದ್ಯ ನಾಲ್ಕನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿರುವ ಈ ಮುಗ್ಧ ಹುಡುಗಿಯ ಆಗಮನದಿಂದಾಗಿ ದೊಡ್ಮನೆಯ ಲೆಕ್ಕಾಚಾರಗಳು, ಆಟದ ಗತಿ ಹೇಗೆ ಬದಲಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.