ʻಬಿಗ್ ಬಾಸ್ʼ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ; ಎಲ್ಲರ ಮುಖವಾಡ ಕಳಚಲು ಬಂದ ಈ ಹೊಸ ಕಿಲಾಡಿಗಳ ಹಿಸ್ಟರಿ ಇಲ್ಲಿದೆ
Bigg Boss Kannada 13: ಬಿಗ್ ಬಾಸ್ ಮನೆಗೆ ಮೂವರು ಪ್ರಬಲ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಅನಿರೀಕ್ಷಿತ ಪ್ರವೇಶ ಪಡೆದಿದ್ದಾರೆ. ಘಾಟಿ ಗಾನವಿ, ನಟ ಪ್ರಶಾಂತ್ ಹಾಗೂ ಸೋನಿಕಾ ಗೌಡ ಮನೆಯೊಳಗೆ ಕಾಲಿಡುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇವರು ಹಾಲಿ ಸ್ಪರ್ಧಿಗಳ ಮುಖವಾಡ ಕಳಚುವ ಶಪಥ ಮಾಡಿದ್ದಾರಂತೆ!
-
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ಬಿಗ್ ಮನೆಗೆ ಮೂವರು ಪ್ರಬಲ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಪ್ರವೇಶ ಪಡೆಯುತ್ತಿದ್ದಾರೆ. ಸುದೀಪ್ ಅವರು ಇಂದಿನ ಭಾನುವಾರದ ಸಂಚಿಕೆಯಲ್ಲಿ ಅವರನ್ನು ಮನೆಯೊಳಗೆ ಕಳುಹಿಸುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲೂ ಕೂಡ ಅವರು ಯಾರು ಅನ್ನೋದು ರಿವೀಲ್ ಆಗಿಲ್ಲ. ಈ ಮಧ್ಯೆ ಆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಮೂಲಗಳ ಪ್ರಕಾರ, ಹಳ್ಳಿ ಪವರ್ ಶೋ ಮೂಲಕ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರಾದ ಘಾಟಿ ಗಾನವಿ, ನಟ ಪ್ರಶಾಂತ್ ಹಾಗೂ ನಟಿ ಸೋನಿಕಾ ಗೌಡ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆಯೊಳಗೆ ಕಾಲಿಡುತ್ತಿದ್ದಾರೆ. ಈ ಮೂವರ ದಿಢೀರ್ ಎಂಟ್ರಿಯಿಂದಾಗಿ ಮನೆಯೊಳಗಿನ ಆಟದ ಲೆಕ್ಕಾಚಾರಗಳು ಸಂಪೂರ್ಣವಾಗಿ ತಲೆಕೆಳಗಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಈ ಮೂವರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ
ಪ್ರವೇಶ ಪಡೆದಿರುವ ಮೂವರೂ ಸ್ಪರ್ಧಿಗಳು ಈಗಾಗಲೇ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರತಿಭೆಗಳಾಗಿದ್ದಾರೆ. ಝೀ ಕನ್ನಡ ವಾಹಿನಿಯ ಜನಪ್ರಿಯ ‘ಹಳ್ಳಿ ಪವರ್’ ಮೊದಲ ಆವೃತ್ತಿಯ ರನ್ನರ್ ಅಪ್ ಆಗಿ ಗುರುತಿಸಿಕೊಂಡಿದ್ದ ಘಾಟಿ ಗಾನವಿ, ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ.
ಇನ್ನೊಂದೆಡೆ, ‘ಗಿಚ್ಚಿ ಗಿಲಿಗಿಲಿ’ಯ ಸತತ ಮೂರು ಸೀಸನ್‌ಗಳಲ್ಲಿ ಸಕ್ರಿಯರಾಗಿದ್ದು, ‘ಕ್ವಾಟ್ಲೆ ಕಿಚನ್’ ಶೋನ ವಿನ್ನರ್ ಆಗಿ, ‘ಬಾಯ್ಸ್ ವರ್ಸಸ್ ಗರ್ಲ್ಸ್’ ಸೇರಿದಂತೆ ಹಲವು ಶೋಗಳಲ್ಲಿ ಮನರಂಜನೆ ನೀಡಿದ್ದ ‘ಟ್ಯಾಲೆಂಟೆಡ್ ಕಲಾವಿದ ಪ್ರಶಾಂತ್’ ಎಂದೇ ಗುರುತಿಸಿಕೊಂಡಿರುವ ನಟ ಪ್ರಶಾಂತ್ ಗೌಡ ಕೂಡ ಬಿಗ್ ಅಖಾಡಕ್ಕೆ ಧುಮುಕಿದ್ದಾರೆ.
ಇವರ ಜೊತೆಗೆ ‘ಶತಾಯ ಗತಾಯ’, ‘ನಾನೇ ರಾಜ’, ‘ಖುಷಿ ಖುಷಿಯಾಗಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ, ಮಾಡಲಿಂಗ್ ಜಗತ್ತಿನಲ್ಲಿ ಮಿಂಚುತ್ತಿರುವ ನಟಿ ಸೋನಿಕಾ ಗೌಡ ಕೂಡ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿರಿಸಿದ್ದಾರೆ.
ಗಗನ್, ಆಸಿಯಾಗೆ ಟಾಂಗ್
ಬಿಗ್ ಮನೆ ಪ್ರವೇಶಿಸುವ ಮುನ್ನವೇ ವೇದಿಕೆಯಲ್ಲೇ ಅಬ್ಬರಿಸಿದ ಈ ಹೊಸ ಸ್ಪರ್ಧಿಗಳು, ಮನೆಯೊಳಗಿರುವ ಹಾಲಿ ಸ್ಪರ್ಧಿಗಳ ಮುಖವಾಡ ಕಳಚುವುದಾಗಿ ಬಹಿರಂಗ ಸವಾಲು ಹಾಕಿದ್ದಾರೆ. ಪ್ರತಿಯೊಬ್ಬರ ಆಟದ ವೈಖರಿಯನ್ನು ನೇರವಾಗಿ ಪ್ರಶ್ನಿಸಿದ ಘಾಟಿ ಗಾನವಿ, "ನನಗೆ ಮಂಜನನ್ನು ಕಂಡರೆ ಆಗುವುದೇ ಇಲ್ಲ, ಅವರೇ ನನ್ನ ಮೊದಲ ಟಾರ್ಗೆಟ್" ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ಸೋನಿಕಾ ಗೌಡ, "ಸೌಂದರ್ಯ ಶೆಟ್ಟಿ ಅವರ ಆರಂಭದ 'ಡಾನ್' ಶೈಲಿ ಈಗ ಎಲ್ಲಿದೆ? ಗಗನ್ ಅವರಲ್ಲಿದ್ದ 'ರಾವಣ'ನಂತಹ ಅಬ್ಬರದ ಶಕ್ತಿ ಎಲ್ಲಿ ಕಳೆದುಹೋಯಿತು?" ಎಂದು ಪ್ರಶ್ನಿಸಿದ್ದಲ್ಲದೆ, ಸೋತಾಗಲೆಲ್ಲ ಆಸಿಯಾ ‘ವಿಕ್ಟಿಮ್ ಕಾರ್ಡ್’ ಪ್ಲೇ ಮಾಡುತ್ತಾರೆ ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.
ವೇದಿಕೆಯಲ್ಲೇ ಎದುರಾಳಿಗಳಿಗೆ ಬಿಸಿ ಮುಟ್ಟಿಸಿ ಮನೆ ಹೊಕ್ಕಿರುವ ಈ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಂದಾಗಿ ಬಿಗ್ ಬಾಸ್ ಮನೆಯೊಳಗಿನ ಆಟ ಮತ್ತಷ್ಟು ಕಾವೇರುವುದಂತೂ ಖಚಿತವಾಗಿದೆ.