ʻಬಾಸ್ ಸಿನಿಮಾಗೆ ಸೆನ್ಸಾರ್ ಸೆರ್ಟಿಫಿಕೇಟ್ ಕೊಡಬಾರದು..ʼ; ನಟ ದರ್ಶನ್ ಲಾಯರ್ ಕಡೆಯಿಂದ ನೋಟಿಸ್! ನಿರ್ದೇಶಕರು ಹೇಳಿದ್ದೇನು?
ತನುಷ್ ಶಿವಣ್ಣ ನಟನೆಯ ʻಬಾಸ್ʼ ಚಿತ್ರಕ್ಕೆ ನಟ ದರ್ಶನ್ ಪರ ವಕೀಲರು ನೋಟಿಸ್ ನೀಡುವ ಮೂಲಕ ತಡೆ ಒಡ್ಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಚಿತ್ರವು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೋಲುತ್ತಿದೆ ಎಂದು ಆರೋಪಿಸಿ ಸೆನ್ಸಾರ್ ಮಂಡಳಿಗೆ ದೂರು ನೀಡಲಾಗಿದೆ. ಆದರೆ, ಇದು ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಮಾಡಿದ ಸಿನಿಮಾ ಅಲ್ಲ ಎಂದು ನಿರ್ದೇಶಕ ಲವ ಸ್ಪಷ್ಟಪಡಿಸಿದ್ದಾರೆ.
-
ನಟ ತನುಷ್ ಶಿವಣ್ಣ ಅಭಿನಯದ ʻಬಾಸ್ʼ ಸಿನಿಮಾದ ಟೀಸರ್ ರಿಲೀಸ್ ಆದಾಗಿನಿಂದಲೂ ಸಾಕಷ್ಟು ಸದ್ದು ಮಾಡುತ್ತಿತ್ತು. ಇದೀಗ ಈ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಹೌದು, ಸಿನಿಮಾದ ಟೀಸರ್‌ನಲ್ಲಿರುವ ಕೆಲವು ಅಂಶಗಳು ನಟ ದರ್ಶನ್ ಅವರ ಬದುಕಿನ ಕಲೆ ಘಟನೆಗೆ ತಾಳೆ ಆಗುತ್ತಿದ್ದು, ದರ್ಶನ್ ಕಾನೂನಿನ ಮೊರೆಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ನೋಟಿಸ್ ನೀಡಿದ ದರ್ಶನ್ ಲಾಯರ್
ಈ ಸಂಬಂಧ ದರ್ಶನ್ ಪರ ವಕೀಲರು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ʻಬಾಸ್ʼ ಸಿನಿಮಾಗೆ ಸೆನ್ಸಾರ್ ಮಾಡಬಾರದು" ಎಂದು ಸೆನ್ಸಾರ್ ಮಂಡಳಿಗೆ ದರ್ಶನ್ ಲಾಯರ್ ನೋಟಿಸ್ ನೀಡಿದ್ದಾರೆ. ʻಬಾಸ್ʼ ಸಿನಿಮಾವು ರೇಣುಕಾಸ್ವಾಮಿ ಕೊಲೆ ಪ್ರಕರಣದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಮಾಡಲಾಗಿದೆ. ಈಚೆಗೆ ರಿಲೀಸ್ ಆಗಿರೋ ಟೀಸರ್‌ನಲ್ಲಿಯೂ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಹೋಲುವಂತಹ ದೃಶ್ಯಗಳು ಇರುವ ಕಾರಣ ನೋಟೀಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡ ಎಲ್ಲಿಯೂ "ನಮ್ಮದು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದ ಸಿನಿಮಾ" ಎಂದು ಹೇಳಿಕೊಂಡಿಲ್ಲ.
Kannada New Movie: ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ತನುಷ್ ಶಿವಣ್ಣ ಅಭಿನಯದ ʼಬಾಸ್ʼ ಚಿತ್ರದ ಮುಹೂರ್ತ
ಚಿತ್ರತಂಡ ಹೇಳಿದ್ದೇನು?
"ನಮ್ಮ ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಣೆ ಮಾಡಿದೆ ಮತ್ತು 12 ರಿಂದ 15 ಕಟ್ಸ್ ಕೊಟ್ಟಿದೆ. ಈ ಚಿತ್ರಕ್ಕೆ ಯು/ಎ ಸೆರ್ಟಿಫಿಕೇಟ್ ಕೊಡುವುದಾಗಿ ನಮ್ಮಿಂದ ಸಹಿಯನ್ನು ಕೂಡ ಹಾಕಿಸಿಕೊಂಡಿದ್ದಾರೆ. ಈಗ ನೋಟೀಸ್ ಬಂದಿದೆ, ಆದ್ರೆ ಮತ್ತೆ ಚೆಕ್ ಮಾಡ್ತೀವಿ ಎಂದು ನಮಗೆ ಹೇಳಿದ್ದಾರೆ. ನಮ್ಮ ತಂಡ, ʻಇದು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ಸಿನಿಮಾ ಅಲ್ಲʼ ಎಂದು ಸ್ಪಷ್ಟವಾಗಿ ಹೇಳಿದೆ. ಇದು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ಸಿನಿಮಾ" ಎಂದು ʻಬಾಸ್ʼ ಚಿತ್ರತಂಡ ಹೇಳಿಕೊಂಡಿದೆ.
ನಟ್ವರ್‌ಲಾಲ್‌ನ ರೋಚಕತೆ - ತನುಷ್ ಹೇಳಿದ ರಿಯಲ್ ಕಥೆ
ನಮಗೆ ಬೆದರಿಕೆ ಕರೆಗಳು ಹೊಸದೇನಲ್ಲ!
"ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅಥವಾ ದರ್ಶನ್ ಕಡೆಯವರಿಂದ ನಮಗೆ ಯಾವುದೇ ಕರೆಗಳು ಬಂದಿಲ್ಲ. ಆದರೆ ಆದ್ರೆ ಕೆಲವರು ನಿಮ್ ವಿಳಾಸ ತಿಳಿಸಿ, ಇಂಟರ್‌ವ್ಯೂ ಮಾಡ್ತೀವಿ ಅಂತ ಕಾಲ್ ಮಾಡಿದ್ದಾರೆ. ನಾನು ವಕೀಲ. ನನಗೆ ಈ ಬೆದರಿಕೆ ಕರೆಗಳು ಹೊಸದೇನಲ್ಲ. ಜೊತೆಗೆ ನಾನು ಲಾಯರ್ ಆಗಿರುವುದರಿಂದ ಇನ್ನೂ ಇನ್ನು ಟ್ರಯಲ್‌ನಲ್ಲಿ ವಿಚಾರದ ಬಗ್ಗೆ ಸಿನಿಮಾ ಮಾಡಬಾರದು ಅನ್ನೋದು ನನಗೂ ಗೊತ್ತು. ಆ ಥರ ಮಾಡಿದರೆ, ಅದು ನ್ಯಾಯಾಂಗ ನಿಂದನೆಯೂ ಆಗುತ್ತದೆ. ಸದ್ಯ ನಮಗೆ ಬಂದಿರುವ ನೋಟಿಸ್ ಬಗ್ಗೆ ನಾವು ಹೋರಾಟ ಮಾಡುತ್ತೇವೆ" ಎಂದು ನಿರ್ದೇಶಕ ಲವ ಹೇಳಿದ್ದಾರೆ.
"ನಮ್ಮ ಸಿನಿಮಾವನ್ನು ನೋಡಿ ಮಾತನಾಡಲಿ. ನಾನು ಅನೇಕ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಿದ್ದೇವೆ. ಬಾಸ್ ಸಿನಿಮಾವು ದರ್ಶನ್ ಸರ್ ಕೇಸ್‌ಗೆ ಸಂಬಂಧಿಸಿದ ಸಿನಿಮಾ ಅಲ್ಲ. ನಮ್ಮ ಕಡೆಯಿಂದಲೂ ಇದಕ್ಕೆ ಕಾನೂನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತೇವೆ. ಇದು ಯಾವುದೇ ಗಿಮಿಕ್ ಅಲ್ಲ. ಮಾತನಾಡಿಕೊಳ್ಳುವವರಿಗೆ ನಾವು ಉತ್ತರ ಕೋಡೋದಿಲ್ಲ. ಸೆನ್ಸಾರ್ ಮಂಡಳಿಗೆ ನಾವು ಪ್ರಶ್ನೆ ಮಾಡಲಿದ್ದಾರೆ. ನಮ್ಮ ಸಿನಿಮಾಗೆ ಈಗಾಗಲೇ ಪ್ರಮಾಣ ಪತ್ರವನ್ನು ಕೊಡಬೇಕಿತ್ತು. ಕಾನೂನು ಎಲ್ಲರಿಗೂ ಒಂದೇ. ಸದ್ಯ ಸೆನ್ಸಾರ್ ಮಂಡಳಿಯಿಂದ ನನಗೆ ಪ್ರಮಾಣ ಪತ್ರ ಸಿಕ್ಕೇ ಸಿಗಲಿದೆ ಎಂಬ ನಂಬಿಕೆ ಇದೆ" ಎಂದು ಲವ ಹೇಳಿದ್ದಾರೆ.
ಇನ್ನು, ಸೆನ್ಸಾರ್ ಬೋರ್ಡ್‌ಗೆ ಕಾನೂನಾತ್ಮಕವಾಗಿ ಪ್ರತಿಕ್ರಿಯೆ ನೀಡಿರುವ ʻಬಾಸ್ʼ ಸಿನಿಮಾ ನಿರ್ಮಾಣ ಸಂಸ್ಥೆಯಾದ ಸಿರಿ ಪ್ರೊಡಕ್ಷನ್ಸ್, "ನೋಟೀಸ್‌ನಲ್ಲಿ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು. ಇದೊಂದು ಕಾಲ್ಪನಿಕ ಕಥೆ, ಇಮ್ಯಾಜಿನೇರಿ ಸ್ಟೋರಿ ಆಗಿದೆ. ದರ್ಶನ್ ಅವರಿಗೂ ನಮ್ಮ ಸಿನಿಮಾಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ದರ್ಶನ್ ಬಗೆಗಿನ ಸ್ಟೋರಿ ಎಂದು ನಮ್ಮ ತಂಡ ಎಲ್ಲಿಯೂ ಹೇಳಿಕೊಂಡಿಲ್ಲ" ಎಂದು ಸೆನ್ಸಾರ್ ಮಂಡಳಿಗೆ ಪತ್ರದ ಮೂಲಕ ತಿಳಿಸಲಾಗಿದೆ.